"ಖ್ಯಾತ ವ್ಯಂಗ ಚಿತ್ರಕಾರ ಆರ್.ಕೆ.ಲಕ್ಷ್ಮಣ್"

"ಖ್ಯಾತ ವ್ಯಂಗ ಚಿತ್ರಕಾರ ಆರ್.ಕೆ.ಲಕ್ಷ್ಮಣ್"

ಚಿತ್ರ

    

             ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ ಮೈಸೂರಿನಲ್ಲಿ ಜನಿಸಿ ಭವ್ಯ ನಗರಿ ಮುಂಬೈನಲ್ಲಿ ವ್ಯಂಗ್ಯ ಚಿತ್ರಕಾರನಾಗಿ  ಬದುಕು ಕಟ್ಟಿಕೊಂಡು ಜಗದ್ವಿಖ್ಯಾತಿ ಪಡೆದು ಭಾರತ ಕೊಡಮಾಡುವ ಪದ್ಮ ಪ್ರಶಸ್ತಿ ಅಲ್ಲದೆ ಅಂತರಾಷ್ಟ್ರೀಯ ಮ್ಯಾಗ್ಸೆಸೆ ಪ್ರಶಸ್ತಿ ಪಡೆದು ಸುಮಾರು ಆರು ದಶಕಗಳ ಕಾಲ ವ್ಯಂಗ್ಯ ಚಿತ್ರಕಾರನಾಗಿ ಸ್ವಾಭಿಮಾನದಿಂದ ಬದುಕಿ ವೃದ್ಧಾಪ್ಯದ ಕಾಯಿಲೆಗಳಿಂದಾಗಿ ಪುಣೆಯ ದೀನಾನಾಥ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಈ ವರ್ಷದ ಗಣ ರಾಜ್ಯೋತ್ಸವದ ದಿನದ ಸಾಯಂಕಾಲದಂದು ತಮ್ಮ ಸುಧೀರ್ಘ ಜೀವನ ಯಾತ್ರೆಗೆ ಕೊನೆ ಹಾಡಿದ್ದಾರೆ. ಅವರೆ ತಮಿಳು ಮೂಲದವರಾದ ಮೈಸೂರಿನಲ್ಲಿ ಜನಿಸಿ ಮುಂಬೈಯನ್ನು ಕಾರ್ಯ ಕ್ಷೇತ್ರವನ್ನಾಗಿಸಿಕೊಂಡು ಜೀವಿಸಿದ ವ್ಯಕ್ತಿ ಆರ್.ಕೆ.ಲಕ್ಷ್ಮಣ್. ಇನ್ನೂ ಸುಲಭವಾಗಿ ಹೇಳ ಬೇಕೆಂದರೆ ಮಾಲ್ಗುಡಿ ಖ್ಯಾತಿಯ ಭಾರತೀಯ ಆಂಗ್ಲ ಕಾದಂಬರಿಕಾರ ಆರ್.ಕೆ.ನಾರಾಯಣರ ಕಿರಿಯ ತಮ್ಮ ವ್ಯಂಗ್ಯ ಚಿತ್ರ ಲೋಕದಲ್ಲಿ ಅವರು ಸೃಷ್ಟಿಸಿ ಹೋದ ಶೂನ್ಯ ಅಷ್ಟು ಸುಲಭಕ್ಕೆ ತುಂಬುವಂತಹುದಲ್ಲ. ಅನೇಕ ಶತಮಾನಗಳ ಕಾಲದಲ್ಲಿ ಒಮ್ಮೆ ಮಾತ್ರ ಹುಟ್ಟಿ ಬರಬಹುದಾದ ಅಪರೂಪದ ವ್ಯುಕ್ತಿತ್ವ ಅದು.

 

     ಕಳೆದ ಶತಮಾನದ ನಾಲ್ಕನೆ ದಶಕದ ಪ್ರಾರಂಭಿಕ ವರ್ಷಗಳಲ್ಲಿ ಬ್ರಿಟೀಶ್ ಅಡಳಿತದ ಕೊನೆಯ ಕಾಲದಿಂದ ಮೊದಲ್ಗೊಂಡು ಸ್ವತಂತ್ರ ಭಾರತದ ನೆಹರೂ ಕಾಲದಿಂದ ಹಿಡಿದು 2005 ರಲ್ಲಿ ತನ್ನ ವೃತ್ತಿ ಬದುಕಿಗೆ ಕೊನೆ ಹೇಳುವ ವರೆಗೂ ಘನತೆ ಗೌರವಗಳೊಂದಿಗೆ ಸುಮಾರು ಆರು ದಶಕಗಳ ಕಾಲ ಭಾರತೀಯ ರಾಜಕಾರಣ ಸಾಗಿದ ದಿಕ್ಕು ಜನ ಸಾಮಾನ್ಯರ ಬವಣೆಗಳನ್ನು ಕುರಿತು ನಮ್ಮ ದೇಶದ ಜನ ಜೀವನ ಸಾಗಿ ಬಂದ ದಾರಿ ಕುರಿತು ಪುಟಗಳಲ್ಲಿ ಹೇಳ ಬಹುದಾದುದನ್ನು ಒಂದು ಕಾರ್ಟೂನ್ ಚಿತ್ರದ ಮೂಲಕ ವಿಡಂಬನೆಯ ಮೂಲಕ ಪರಿಣಾಮಕಾರಿಯಾಗಿ ಹೇಳುತ್ತಿದ್ದ ಅವರ ಜಾಗ ತುಂಬುವುದು ಕಷ್ಟ. ಇಷ್ಟೆಲ್ಲ ಘನ ವ್ಯಕ್ತಿತ್ವ ಇವರದಾಗಿದ್ದರೂ ಇವರ ನಿಧನದ ಸುದ್ದಿಯನ್ನು ನಾವು ಕೇಳುವವರೆಗೂ ಅವರು ಬದುಕಿದ್ದರು ಎನ್ನುವುದು ವಾಸ್ತವ. ಇದು ಜಗದ  ಅಸಡ್ಡೆಯ ಕುರಿತು ವ್ಯಕ್ತ ಪಡಿಸಬಹುದಾದ ನೋವಿನ ಸಂಗತಿ.

 

     ಆರ್.ಕೆ.ಲಕ್ಷ್ಮಣ್ ಎಂದೊಡನೆ ನನ್ನ ಸ್ಮೃತಿ ಪಟಲದ ಮುಂದೆ ಕಾಣಿಸಿ ಕೊಳ್ಳುವುದು 1966 ರಿಂದ 1969 ರ ವರೆಗಿನ ಕಾಲದ ನಮ್ಮ ದೇಶದ ಪ್ರತಿಷ್ಟಿತ ವಾರ ಪತ್ರಿಕೆಯಾಗಿದ್ದ ಕರಾಂಜಿಯಾ ಸಂಪಾದಕತ್ವದ ಬ್ಲಿಟ್ಜ. ಆ ಪತ್ರಿಕೆಯ ನೂತನ ಆವೃತ್ತಿ ವಾಚನಾಲಯಕ್ಕೆ ಬಂತೆಂದರೆ ನಾವು ಮೊದಲು ಪತ್ರಿಕೆಯನ್ನು ತಿರುವಿ ಹಾಕಿ ಗಮನಿಸುತ್ತಿದ್ದುದು ಲಕ್ಷ್ಮಣ ಅವರು ಬರೆದ ಕಾರ್ಟೂನು ಚಿತ್ರಗಳು ಜೊತೆಗೆ ಅವರು ಅವುಗಳಿಗೆ ನೀಡುತ್ತಿದ್ದ ಶೀರ್ಷಿಕೆಗಳು. ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರದಂತೆ ನೇರವಾಗಿ ಸಂಬಂಧಪಟ್ಟ ವ್ಯಕ್ತಿಯ ಸಾರ್ವಜನಿಕ ಜನ ನಾಯಕರ, ಅಧಿಕಾರ ವರ್ಗ ಮತ್ತು ಆಡಳಿತ ವೈಖರಿಗೆ ಕನ್ನಡಿ ಹಿಡಿಯುತ್ತಿದ್ದ ತೀಕ್ಷ್ಣ ಒಳ ನೋಟಗಳನ್ನುಳ್ಳ ಚಿತ್ರಗಳು ಒಂದು ರೀತಿಯಲ್ಲಿ ನೈಜ ರೂಪವನ್ನು ಬಿಚ್ಚಿ ತೋರಿಸುವಷ್ಟು ಪ್ರಭಾವಶಾಲಿಯಾಗಿರುತ್ತಿದ್ದವು. ಅವರು ಪ್ರಧಾನಿ ನೆಹರೂ ಕಾಲದಿಂದ ಹಿಡಿದು ವಾಜಪೇಯಿ ಕಾಲದ ವರೆಗೂ ಯಾವ ಪ್ರಭಾವಿ ರಾಷ್ಟ್ರ ನಾಯಕರಿಗೂ ಸೊಪ್ಪು ಹಾಕದೆ ನೇರಾನೇರ ನಡವಳಿಕೆಯ ಆತ್ಮನಿಷ್ಟ ಬದುಕಿನ ವ್ಯಕ್ತಿ ಅವರಾಗಿದ್ದರು.

 ಅವರ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸುತ್ತಿದ್ದ ‘ಬ್ಲಿಟ್ಜ’, ‘ಫ್ರೀ ಪ್ರೆಸ್  ಜರ್ನಲ್’, ‘ಶಂಕರ್ಸ್ ವೀಕ್ಲೀ’ ಮತ್ತು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗಳಿಗೂ ಅವರ ವ್ಯಂಗ್ಯ ಚಿತ್ರಗಳ ಕಾರಣದಿಂದ ಒಂದು ರೀತಿಯ ಘನತೆ ಇರುತ್ತಿತ್ತು. ಅವರು ಸೃಷ್ಟಿಸಿದ ಒಂದು ಪಾತ್ರ ಮಾತ್ರ ಎಂದಿಗೂ ಮರೆಯದಂತಹದು. ಮುಗ್ಧತೆಯೆ ಮೈವೆತ್ತ ಮಾತನಾಡದ ಬೋಳುತಲೆಯ ಕನ್ನಡಕಧಾರಿ, ಧೋತಿ ಕುರ್ತಾ ಮೇಲೋಂದು ಕೋಟು ಧರಿಸಿದ ಕಾಲಿಗೆ ಭೂಟುಗಳನ್ನು ಮೆಟ್ಟಿಕೊಂಡ ವೃದ್ಧಾಪ್ಯದಂಚಿಗೆ ಸಾಗುತ್ತಿರುವ ವ್ಯಕ್ತಿ ಚೂಪಾಗಿ ನೇರಕ್ಕೆ ಚಾಚಿಕೊಂಡ ಟ್ರಿಮ್ ಮಾಡಿದ ಬಿಳಿ ಮೀಸೆ ಬೋಳು ತಲೆಯ ಮೇಲೆ ಹಿಂಬದಿಯಲ್ಲಿ ಹಾರಾಡುತ್ತಿರುವ ಬೆರಳೆಣಿಕೆಯ ಕೆದರಿದ ಕೆಲ ಕೂದಲಿನ ಸಾಮಾನ್ಯ ವ್ಯಕ್ತಿಯನ್ನ ಪ್ರತ್ಯಕ್ಷದರ್ಶಿಯಾಗಿಸಿಕೊಂಡು ದೇಶದಲ್ಲಿ ಸಂಭವಿಸುವ ಜನ ವಿರೋಧಿ ನಿಲುವುಗಳಿಗೆ, ರಾಜಕಾರಣಿಗಳ ರೂಕ್ಷತನಕ್ಕೆ ಧರ್ಮಾಂಧರ ಕುಚ್ಯೋದ್ಯಗಳಿಗೆ ಮುಖಾಮುಖಿಯಾಗಿಸಿ ಒಂದು ಮಾತನ್ನೂ ಆಡದ ಆದರೆ ಎಲ್ಲವನ್ನು ಹೇಳುವ ಆ ಚಿತ್ರ ಅರ್ಧ ಶತಮಾನಕ್ಕೂ ಮೀರಿ ಭಾರತದಲ್ಲಿ ವ್ಯಂಗ್ಯ ಚಿತ್ರಲೋಕವನ್ನಾಳಿದ್ದು ಒಂದು ಅಸಾಮಾನ್ಯ ಸಾಧನೆ. ಅಷ್ಟು ಧೀರ್ಘಕಾಲ ಪ್ರಕಟಗೊಂಡ ಅವರ ಚಿತ್ರಗಳು ಯಾವುದೆ ವಿವಾದಗಳನ್ನು ಹುಟ್ಟು ಹಾಕಲಿಲ್ಲ, ರಾದ್ಧಾಂತ ಮಾಡಿಕೊಳ್ಳಲಿಲ್ಲ ಅಷ್ಟು ಸೂಕ್ಷ್ಮ ಮನದ ತೀಕ್ಷ್ಣ ಪ್ರಜ್ಞೆಯ ಕಾರ್ಟೂನಿಸ್ಟ್ ಅವರಾಗಿದ್ದರು.

 

     ರಾಶಿಯವರ ‘ಕೊರವಂಜಿ’ ಕನ್ನಡ ಪತ್ರಿಕೆ ಬಿಟ್ಟರೆ ಬೇರೆ ಯಾವುದೆ ಕನ್ನಡ ಪತ್ರಿಕೆಗಳಿಗೆ ಅವರು ಚಿತ್ರಗಳನ್ನು ಬರೆಯಲಿಲ್ಲ. ಆದರು ಅವರು ರಚಿಸಿದ ಕಾರ್ಟೂನ್ ಗಳ ಸಂಕಲನಗಳನ್ನು ಒಮ್ಮೆ ಹಾಗೆಯೆ ತಿರುಗಿಸುತ್ತ ಹೋದರೆ ಸ್ವಾತಂತ್ರೋತ್ತರ ಭಾರತಸಾಗಿ ಬಂದ ದಾರಿಯನ್ನು ಢಾಳಾಗಿ ತೆರೆದು ತೋರಿಸುತ್ತ ಹೋಗುತ್ತವೆ. ಅವರ ಅಜರಾಮರ ಸೃಷ್ಟಿಯಾದ ಶ್ರೀ ಸಾಮಾನ್ಯನನ್ನು ಬಿಟ್ಟರೆ ಅವರ ಗಮನ ಸೆಳೆದದ್ದು ಸಾಮಾನ್ಯ ಪಕ್ಷಿ ಕಾಗೆ. ಎಲ್ಲಡೆ ಕಾಣ ಸೀಗುವ ಕಾಗೆ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಒಂದು ಅನಿಷ್ಟದ ಸಂಕೇತವಾಗಿ ಅದನ್ನು ಪರಿಗನೀಸುತ್ತ ಬಂದಿದ್ದಾರೆ. ಸಂಪ್ರದಾಯಸ್ಥ ಹಿಂದೂ ಪರಂಪರೆಯಲ್ಲಿ ಕರ್ಮಾಂತರ, ಶ್ರಾದ್ಧ ಮತ್ತು ಪಿತೃ ಪಕ್ಷಗಳ ಸಂಧರ್ಭಗಳನ್ನು ಹೊರತು ಪಡಿಸಿದರೆ ಮತ್ತೆಂದೂ ನಮಗೆ ಅದು ಬೇಡ. ಒಂದಗುಳ ಕಂಡರೆ ತನ್ನ ಬಳಗವನ್ನೆ ಕರೆಯುವ ಮಾನವತಾವಾದಿ ಕಾಗೆ ನಮ್ಮ ಪರಿಸರದ ಶ್ರೇಷ್ಟ ಜಾಡಮಾಲಿ. ಈ ಕಾಗೆಯನ್ನೆ ಮತ್ತು ಅವುಗಳ ಹಿಂಡನ್ನೆ ಪ್ರತ್ಯಕ್ಷದರ್ಶಿಗಳನ್ನಾಗಿಸಿಕೊಂಡು ಅನೇಕ ಕಾರ್ಟೂನ್ ಗಳನ್ನು ಆರ.ಕೆ.ಲಕ್ಞ್ಮಣ ಚಿತ್ರಿಸಿದ್ದಾರೆ. ಅವರು ಚಿತ್ರಿಸಿದ ಕಾಗೆಗಳು ಎಷ್ಟು ನೈಜವಾಗಿರುವವೆಂದರೆ ಅದಕ್ಕೂ ಚೆನ್ನಾಗಿ ಇನ್ನು ಯಾರೂ ಬಿಡಿಸಲಾರರು ಎನ್ನುವಷ್ಟು ಅವು ಪರಿಪೂರ್ಣ ಚಿತ್ರಣಗಳಾಗಿವೆ. ಕಾಗೆಗಳು ಅವರಿಗೆ ಇಷ್ಟದ ಪಕ್ಷಿಯಾಗಿದ್ದುದರ ಜೊತೆಗೆ ತಮ್ಮ ಮನೆಯ ಹತ್ತಿರ ಬರುವ ಕಾಗೆಗಳ ಹಿಂಡನ್ನು ಗಮನಿಸುವುದು ಅವುಗಳಿಗೆ ಆಹಾರ ಕೊಡುವುದು ಅವುಗಳ ಜೊತೆಗೆ ತಾದಾತ್ಮ್ಯತೆಯನ್ನು ಬೆಳೆಸಿಕೊಂಡುದುದರ ಕುರಿತು ಎಲ್ಲಿಯೋ ಕೇಳಿದ ಇಲ್ಲ ಓದಿದ ನೆನಪು.

 

     ಆರ್.ಕೆ.ಲಕ್ಷ್ಮಣರ ಇದೇ ಸ್ವಭಾವವನ್ನು ಹೊಂದಿದ್ದ ಘನತೆವೆತ್ತ ಬಾಳನ್ನು ಬದುಕಿ ಹೋದ ಕೆಲ ವರ್ಷಗಳ ಹಿಂದೆ ತೀರಿ ಹೋದ ನಿರ್ವ್ಯಾಮೋಹಿ ಹಿರಿಯ ಜೀವಿಯೊಬ್ಬರ ಆಪ್ತ ಚಿತ್ರ ನನ್ನ ಕಣ್ಮುಂದೆ ತೇಲಿ ಬರುತ್ತದೆ. ಅವರೂ ಸಹ ತಮ್ಮ ಇಳಿ ವಯದ ದಿನಗಳಲ್ಲಿ ಮನೆಯ ಮುಂದುಗಡೆ ಹೊರ ಹಜಾರದಲ್ಲಿ ಖುರ್ಚಿಯಲ್ಲಿ ಆಸೀನರಾಗಿ ಕುಳಿತು ಮನೆಯ ಮುಂದಿನ ವಿಶಾಲ ಅಂಗಳದಲ್ಲಿ ನೆರೆಯುತ್ತಿದ ಕಾಗೆಗಳ ಮೇಳ, ಅವುಗಳ ಸಂಗೀತ ಗೋಷ್ಟಿಗಳನ್ನು ತಾದ್ಯಾತ್ಮತೆಯಿಂದ ಗಮನಿಸುತ್ತ ಕುಳಿತು ಕೊಳ್ಳುತ್ತಿದ್ದ ಅವರನ್ನು ಲೆಕ್ಕಿಸದೆ ಅವರ ಸುತ್ತ ನೆರೆಯುತ್ತಿದ್ದ ಅವುಗಳ ವರ್ತನೆಯಿಂದ ಮುಜುಗರ ಪಟ್ಟುಕೊಳ್ಲದೆ ಅವುಗಳ ಮೇಲೆ ಸಿಟ್ಟಾಗದೆ ಅವುಗಳ ಜೊತೆ ನಡೆಉಸತ್ತಿದ್ದ ಉಭಯ ಕುಶಲೋಪರಿ ಅವರ ಪರಿಚಿತ ಸಂಬಂಧಿಕ ಮತ್ತು ಸ್ನೇಹಿತರ ವರ್ಗಕ್ಕೆ ಅಚ್ಚರಿ ಮೂಡಿಸುತ್ತಿತ್ತು. ಇವರ ಬಾಂಧವ್ಯ ಇಷ್ಟಕ್ಕೆ ಮಾತ್ರ ಸೀಮಿತ ವಾಗಿರಲಿಲ್ಲ. ಆ ಹಿರಿಯರು ತಿಂಡಿ ಊಟಗಳಿಗಾಗಿ ಡೈನಿಂಗ್ ಟೇಬಲ್ ಬಳಿ ಬರುವ ಸಮಯಕ್ಕೆ ಸರಿಯಾಗಿ ಎದುರಿನ ಕಿಟಕಿಯಲ್ಲಿ ಕಲೆ ಆಪ್ತ ಕಾಗೆಗಳು ಹಾಜರಾಗುತ್ತಿದ್ದವು. ತಮ್ಮ ತಿಂಡಿಯಲ್ಲಿಯೆ ಅವುಗಳಿಗೆ ಪಾಲು ಸಲ್ಲಿಸಿ ತಮ್ಮ ಊಟ ತಿಂಡಿಗಳನ್ನು ಮುಗಿಸುವ ಪರಿಪಾಠ ಅವರ ದೈನಂದಿನದ್ದಾಗಿತ್ತು. ಕಿಟಕಿಗಳ ಸರಳುಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದ ಕಾಗೆಗಳಲ್ಲದೆ ನಾಚಿಕೆಯಿಂದಲೋ ಹೆದರಿಕೆಯಿಂದಲೋ ಸ್ವಲ್ಪ ದೂರದಲಿರುತ್ತಿದ್ದ ಕೆಲ ಕಾಗೆಗಳನ್ನು ಕರೆದು ರಮಿಸಿ ಅವುಗಳಿಗೆ ಉಪಚಾರ ಮಾಡಿ ಕಳಿಸುತ್ತಿದ್ದರು. ಅವರ ಗುಣ ಸ್ವಭಾವಗಳ ಪರಿಚಯವಿಲ್ಲದವರಿಗೆ ಇದೊಂದು ವಿಕ್ಷಿಪ್ತ ನಡವಳಿಕೆಯಾಗಿ ಕಂಡು ಬರಬಹುದಾದರೂ, ಆ ಹಿರಿಯ ಜೀವಗಳ ಈ ಕ್ಷುದ್ರ  ಪ ಸಂಕುಲಗಳೊಂದಿಗಿನ ಅವರ ಒಡನಾಟ ಮೆಚ್ಚುವಂತಹದು. ಆ ಹಿರಿಯರ ಕಾಗೆಗಳ ಹಿಂಡಿನೊಂದಿಗಿನ ಒಡನಾಟ ನನಗೆ ಆರ್.ಕೆ.ಲಕ್ಷ್ಮಣರ ಕಾಗೆಯೆಡೆಗಿನ ಪ್ರೀತಿ ನನ್ನ ಮನದ ಮುಂದೆ ಸುಳಿದು ಹೋಗುತ್ತಿತ್ತು.. ಆರ್.ಕೆ.ಲಕ್ಷ್ಮಣ ಇಂದು ನಮ್ಮೊಂದಿಗೆ ಇಲ್ಲವಾದರೂ ಅವರು ಚಿತ್ರಿಸಿದ ಕಾಗೆಗಳು ಮತ್ತು ಶ್ರೀಸಾಮಾನ್ಯನ ಕಾರ್ಟೂನುಗಳು ಮನದಂಗಳದಲ್ಲಿ ಸುಳಿದು ಹೋಗುತ್ತವೆ ಜೊತೆಗೆ ಅವರನ್ನು ನೆನಪಿಸಿ ಕೊಳ್ಳುವಂತೆ ಮಾಡುತ್ತವೆ. ಚಿತ್ರಕಾರ ಅಮರವಲ್ಲವಾದರೂ ಅವರು ಚಿತ್ರಿಸಿ ಹೋದ ಚಿತ್ರಗಳು ಬದುಕಿನುದ್ದಕ್ಕೂ ನಮ್ಮನ್ನು ಕಾಡುತ್ತಲೆ ಇರುತ್ತವೆ. ಅದು ಚಿತ್ರ ಕಲಾವಿದನ ಗೈರತ್ತು, ಆ ಸಾರ್ಥಕ ಜೀವಕ್ಕೊಂದು ನಮನ.

ಚಿತ್ರ ಕೃಪೆ : Ashish Rao

Rating
No votes yet

Comments

Submitted by H A Patil Wed, 01/28/2015 - 17:38

ಕ್ಷಮಿಸಿ,ತಲೆಬರಹದಲ್ಲಿ ವ್ಯಂಗ ಚಿತ್ರಕಾರ ಎಂದು ಆಗಿದೆ. ವ್ವಂಗ್ಯ ಚಿತ್ರಕಾರ ಎಂದು ಓದಿ ಕೊಳ್ಳುವುದು.
ನಿರ್ವಾಹಕರು ತಲೆಬರಹವನ್ನು ಸರಿಪಡಿಸ ಬೇಕಾಗಿ ಕೋರುತ್ತೇನೆ

Submitted by venkatesh Fri, 01/30/2015 - 12:47

'ಮುಗ್ಧತೆಯೆ ಮೈವೆತ್ತ ಮಾತನಾಡದ ಬೋಳುತಲೆಯ ಕನ್ನಡಕಧಾರಿ', ಧೋತಿ ಕುರ್ತಾ ಮೇಲೋಂದು ಕೋಟು ಧರಿಸಿದ ಕಾಲಿಗೆ ಭೂಟುಗಳನ್ನು ಮೆಟ್ಟಿಕೊಂಡ ವೃದ್ಧಾಪ್ಯದಂಚಿಗೆ ಸಾಗುತ್ತಿರುವ ವ್ಯಕ್ತಿ ಚೂಪಾಗಿ ನೇರಕ್ಕೆ ಚಾಚಿಕೊಂಡ ಟ್ರಿಮ್ ಮಾಡಿದ ಬಿಳಿ ಮೀಸೆ ಬೋಳು ತಲೆಯ ಮೇಲೆ ಹಿಂಬದಿಯಲ್ಲಿ ಹಾರಾಡುತ್ತಿರುವ ಬೆರಳೆಣಿಕೆಯ ಕೆದರಿದ ಕೆಲ ಕೂದಲಿನ ಸಾಮಾನ್ಯ ವ್ಯಕ್ತಿಯನ್ನ ಪ್ರತ್ಯಕ್ಷದರ್ಶಿಯಾಗಿಸಿಕೊಂಡು ದೇಶದಲ್ಲಿ ಸಂಭವಿಸುವ ಜನ ವಿರೋಧಿ ನಿಲುವುಗಳಿಗೆ, ರಾಜಕಾರಣಿಗಳ ರೂಕ್ಷತನಕ್ಕೆ ಧರ್ಮಾಂಧರ ಕುಚ್ಯೋದ್ಯಗಳಿಗೆ ಮುಖಾಮುಖಿಯಾಗಿಸಿ ಒಂದು ಮಾತನ್ನೂ ಆಡದ ಆದರೆ ಎಲ್ಲವನ್ನು ಹೇಳುವ ಆ ಚಿತ್ರ ಅರ್ಧ ಶತಮಾನಕ್ಕೂ ಮೀರಿ ಭಾರತದಲ್ಲಿ ವ್ಯಂಗ್ಯ ಚಿತ್ರಲೋಕವನ್ನಾಳಿದ್ದು ಒಂದು ಅಸಾಮಾನ್ಯ ಸಾಧನೆ. ಅಷ್ಟು ಧೀರ್ಘಕಾಲ ಪ್ರಕಟಗೊಂಡ ಅವರ ಚಿತ್ರಗಳು ಯಾವುದೆ ವಿವಾದಗಳನ್ನು ಹುಟ್ಟು ಹಾಕಲಿಲ್ಲ, ಇದರ‌ ಬಗ್ಗೆ ಬೆಳಕು ಚೆಲ್ಲಲು ಇಚ್ಛಿಸುತ್ತೇನೆ. ಟೈಮ್ಸ್ ಆಫ್ ಇಂಡಿಯ‌ ಆಫೀಸಿನಲ್ಲಿ ಕನ್ನಡದ‌ ಒಬ್ಬ‌ 50 ರ‌ ವಯಸ್ಸಿನ‌ ಅಪ್ಪಾರಾವ್ ಎಂಬ ವ್ಯಕ್ತಿ ಟೈಪಿಸ್ಟ್ ಆಗಿ ಕೆಲಸಮಾಡುತ್ತಿದ್ದರು. ಅವರು ಮಾತಾಡುವ‌ ಸ್ಪಂದಿಸುವ, ದಿಗ್ಭ್ರಮೆಯಾಗಿ ನೋಡುವ‌ ನೋಟ‌. ತುಟಿಪಿಟಕ್ಕೆನ್ನದೆ ಎಲ್ಲವನ್ನೂ ಅವಲೋಕಿಸುವ‌ ಸರಳ‌ ಉಡುಪಿನ‌ ಸಹವರ್ತಿಯನ್ನು ನೋಡಿದ್ದೇ ತಡ, ಲಕ್ಶ್ಹ್ಮಣ್ ರವರ‌ ಸಂತಸಕ್ಕೆ ಎಣೆಯಿಲ್ಲದಾಯಿತು. ಬಹು ವರ್ಶ್ಹಗಳಿಂದ‌ ತಪಸ್ಸಿನ‌ ತರಹ‌ ಒಬ್ಬ‌ 'ಮಾಡೆಲ್'(ರೂಪದರ್ಷಿ) ಗಾಗಿ ಕಾದು ಕಾದು ಬೇಸತ್ತಿದ್ದರು. ಈಗ‌ ತಮ್ಮ‌ ಎಲ್ಲ‌ ಭಾವನೆ, ವಿಷಾದ‌, ಸಿಟ್ಟು, ಮತ್ತು ಸಂತಸವನ್ನು ಆ ವ್ಯಕ್ತಿಯ‌ ಮೂಲಕ‌ ಮಾಡಬಹುದಲ್ಲಾ ಎನ್ನಿಸಿ 'ಅಪ್ಪಾರಾಯ'ರನ್ನು ನೇಪಥ್ಯದಲ್ಲಿ ಕರೆದು ತಮ್ಮ‌ ಮನಸ್ಸಿನ ಇಂಗಿತವನ್ನು ಹೇಳಿಕೊಂಡರು. ಆತ‌ ಯಾವ‌ ಸವಾಲಿಲ್ಲದ‌ ಒಪ್ಪಿಕೊಂಡರು. ಮುಂದೆ 'ಯು ಸೆಡ್ ಇಟ್ ಪೆಟ್ಟಿಗೆ ವ್ಯಂಗ್ಯ‌ ಚಿತ್ರದ‌ ಇತಿಹಾಸ'ಕ್ಕೆ ಇದು ನಾಂದಿಯಾಯಿತು (ಇದು ಎಲ್ಲರಿಗೂ ಗೊತ್ತು. ಏನೋ ನಿಮ್ಮೊಡನೆ ಹಂಚಿಕೊಳ್ಳುವ‌ ಆಸೆಯಾಯಿತು. ನಿಮ್ಮ‌ ಲೇಖನ‌ ಸೊಗಸಾಗಿ ಮೂಡಿಬಂದಿದೆ. ನಮಸ್ಕಾರ‍‍‍ ಹೊರಂಲವೆಂ

Submitted by H A Patil Fri, 01/30/2015 - 16:11

In reply to by venkatesh

ಸಪ್ತಗಿರಿಯವರಿಗೆ ವಂದನೆಗಳು
ಈ ಲೇಖನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ, ಅರ್.ಕೆ.ಲಕ್ಷ್ಮಣರ ಕಾರ್ಟೂನಿನ ಕಾಮನ್ ಮ್ಯಾನ್ ಅವರದೆ ಆಫೀಸಿನ ಒಬ್ಬ ವ್ಯಕ್ತಿ ಎನ್ನುವ ವಿಷಯ ನನಗೆ ತಿಳಿದಿರಲಿಲ್ಲ ಅದು ತಿಳಿದು ಸಂತಸವಾಯಿತು, ಅವರ ಅಫೀಸಿನ ರಾಮರಾಯರು ಈಗ ಇರುವರೋ ಇಲ್ಲವೋ ಗೊತ್ತಿಲ್ಲ ಅದರೆ ಆರ.ಕೆ.ಲಕ್ಷ್ಮಣರ ಕಾರ್ಟೂನಿನ ಮೂಲಕ ಅಜರಾಮರರಾಗಿದ್ದಾರೆ, ತಮ್ಮ ಪ್ರತಿಕ್ರಿಯೆ ಸಂತಸ ತಂದಿದೆ ದನ್ಯವಾದಗಳು.

Submitted by H A Patil Fri, 01/30/2015 - 16:38

In reply to by H A Patil

ಹೊರಲಂ ವೆಂಕಟೇಶರವರಿಗೆ ವಂದನೆಗಳು,
ಸಪ್ತಗಿರಿಯವರ ಹೆಸರು ಮತ್ತು ತಮ್ಮ ಹೆಸರು ಒಂದೆ ಆಗಿದ್ದು ನಿಮ್ಮನ್ನು ಅವರೆಂದು ಭಾವಿಸಿ ಪ್ರತಿಕ್ರಿಯಿಸಿದ್ದೇನೆ ಆದ ಪ್ರಮಾದಕ್ಕೆ ಕ್ಷಮೆಯಿರಲಿ ಕಾಮತರು ತಿಳಿಸದೆ ಹೋಗಿದ್ದರೆ ಈ ತಪ್ಪು ನನ್ನ ಗಮನಕ್ಕೆ ಬರುತ್ತಲೆ ಇರಲಿಲ್ಲ.

Submitted by lpitnal Sat, 01/31/2015 - 08:44

ಹಿರಿಯರಾದ ಹೆಚ್ ಎ ಪಾಟೀಲ ಜಿ, ನಮಸ್ಕಾರ. ಆರ್ ಕೆ ಲಕ್ಷ್ಮಣ ಕುರಿತಾದ ನಮನ ತುಂಬ ಚನ್ನಾಗಿದೆ. ಅವರನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದೀರಿ. ತಾವಂದಂತೆ ಅವರು ಇನ್ನೂ ಇದ್ದರು ಎಂಬುದು ಅವರು ವಿಧಿವಶರಾದಾಗಲೇ ಗೊತ್ತಾಗಿದ್ದು. ನಮ್ಮ ಅಸಡ್ಡೆಗೆ ಏನನ್ನಬೇಕೋ. ..ಹಾಗೆಯೇ ಸಹೃದಯ ಮಿತ್ರರು ತಿಳಿಸಿದಂತೆ ಅಪ್ಪಾರಾಯರು ಅವರ ಮಾಡೆಲ್ ಆಗಿದ್ದು ಕೂಡ ನನಗೆ ತಿಳಿಯದಾಗಿತ್ತು.. ಸುಂದರ ಬರಹ ಹಂಚಿಕೊಂಡಿದ್ದಕ್ಕೆ ಅಭಿನಂದನೆಗಳೊಂದಿಗೆ ಧನ್ಯವಾದಗಳು ಸರ್.

Submitted by ಗಣೇಶ Sun, 02/01/2015 - 23:02

ಆರ್.ಕೆ.ಲಕ್ಷ್ಮಣ್, ಮೂರ್ತಿ,ಹುಬ್ಲೀಕರ್ ವ್ಯಂಗ್ಯಚಿತ್ರಗಳು ನನಗೆ ಇಷ್ಟ. ಶಂಕರ್ ನಾಗ್ ಮಾಲ್ಗುಡಿ ಡೇಸ್ ಟಿ.ವಿ. ಸೀರಿಯಲ್ ಶೀರ್ಷಿಕೆ ಗೀತೆ... ಲಕ್ಷ್ಮಣ್ ಅವರು ಬಿಡಿಸಿದ ಚಿತ್ರಗಳೊಂದಿಗೆ.. ಮರೆಯಲು ಸಾಧ್ಯವಿಲ್ಲ... https://www.youtube.com/watch?v=50UKChFD1Jg
ಜತೆಗೆ ಶ್ರೀಸಾಮಾನ್ಯನ ಬಗ್ಗೆ ಹಿಂದಿ ಸೀರಿಯಲ್- https://www.youtube.com/watch?v=jYLtsU9Fjzg

Submitted by H A Patil Tue, 02/03/2015 - 20:34

In reply to by ಗಣೇಶ

ಗಣೇಶ ರವರಿಗೆ ವಬಂದನೆಗಳು
ತಮ್ಮ ಅಬಿಪ್ರಾಯ ಸರಿ ಮಅಲ್ಗುಡಿ ಡೇಸ್ ಟಿ.ವಿ.ಸೀರಿಯಲ್‌ನಲ್ಲಿ ಆರ್‌ಕೆಎಲ್‌ ಬಿಡಿಸಿದ ಕಾರ್ಟೂನ್ ಚಿತ್ರಗಳು ಬಹಳ ಸೊಗಸಾಗಿದ್ದವು ಅಲ್ಲದೆ ಅದಕ್ಕೊಂದು ಸೊಗಸು, ಮೆರಗುಗಳ ಜೊತೆಗೆ ಒಂದು ತರಹದ ಘನತೆಯೂ ಆ ಸೀರಿಯಲ್‌ಗೆ ಬಂದಿತ್ತು. ಸೀರಿಯಲ್‌ಗಳ ಇತಿಹಾಸದಲ್ಲಿ ಅದಕ್ಕೊಂದು ಶಾಶ್ವತ ಸ್ಥಾನವಿದೆ, ಅ ಮೂಲಕ ಶಂಕರ್, ಲಕ್ಷ್ಮಣ ಮತ್ತು ನಿರ್ಮಾಪಕ ಸರಸಿಂಹನ್ ಅಮರರು. ದನ್ಯವಾದಗಳು.

Submitted by Amaresh patil Fri, 02/06/2015 - 19:07

In reply to by H A Patil

ಹಿರಿಯರಾದ ಪಾಟೀಲರೇ ನಮಸ್ಕಾರ, ನಾನು ಚಿಕ್ಕಂದಿನಿಂದಲೂ ಆರ್.ಕೆ ಲಕ್ಷ್ಮಣ ಹಾಗೂ ಆ.ಕೆ,ನಾರಾಯಣರವರ ಹೆಸರಿಗೆ ತುಂಬಾ ಗೌರವ ಮತ್ತು ಅಭಿಮಾನ ನೀಡುತ್ತಿದ್ದೆ. ನಮ್ಮೂರಿನಲ್ಲಿ 1990-91 ರಲ್ಲಿ "ಇಂಡಿಯನ್ ಎಕ್ಸ ಪ್ರೆಶ್" ಪತ್ರಿಕೆಯನ್ನು ಬೀದರ ಜಿಲ್ಲೆ ಬಸವಕಲ್ಯಾಣದವರೊಬ್ಬರು ಆರೋಗ್ಯ ಇಲಾಖೆಯ ನೌಕರರು ದಿನಾಲು ಪತ್ರಿಕೆಯಲ್ಲಿ ಬರುವ ವ್ಯಂಗ ಚಿತ್ರಗಳನ್ನು ಮತ್ತು ಅವುಗಳು ಸೂಚಿಸಿವ ವರ್ತಮಾನದ ರಾಜಕಿಯ,ಸಾಮಾಜಿಕ,ಆರ್ಥಿಕತೆ ಕುರಿತಾದ ವಿಡಂಬನೆ ಮತ್ತು ಮೆಚ್ಚುಗೆಯನ್ನು ವ್ಯಂಗ ಚಿತ್ರದಲ್ಲಿ ಆರ್.ಕೆ.ಲಕ್ಷ್ಮಣ ರ ರಚಿಸುತ್ತಾರೆ ಎಂದು ಅವರು ನಮಗೆ ತಿಳಿಸುತ್ತಿದ್ದರು ನಂತರದ ದಿನಗಳಲ್ಲಿ ಆರ್.ಕೆ.ನಾರಾಯಣರವರ ಕನ್ನಡದ ಹೆಸರಾಂತ ನಟ ಹಾಗೂ ನಿರ್ದೇಶಕ ದಿವಂಗತ ಶಂಕರನಾಗರವರು ಮಾಲ್ಗುಡಿ ಡೆಸ್ ದಾರವಾಹಿಯನ್ನು ದೂರದರ್ಶನದಲ್ಲಿ ಪ್ರಸಾರದ ನೇನಪುಗಳು ಅರ್.ಕೆ,ಲಕ್ಷ್ಮಣರು ನಿದನರಾದಗ ಸುಳಿದಾಡಿದವು ಅದೆ ರಿತಿಯಾಗಿ ತಾವುಗಳೂ ಆರ್,ಕೆ,ಲಕ್ಷ್ಮಣರ ಬಗ್ಗೆ ತಾವುಗಳು ಬರೆದ ಲೇಖನ ತುಂಬಾ ಮೆಚ್ಚುಗೆಯಾಯಿತು, "ಧನ್ಯವಾದಗಳು"

Submitted by H A Patil Sat, 02/07/2015 - 17:04

In reply to by Amaresh patil

ಅಮರೇಶ ಪಾಟೀಲ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ತಾವು ಆರ್‍.ಕೆ.ನಾರಾಯಣ, ಆರ್‍.ಕೆ.ಲಕ್ಷ್ಮಣ ಮತ್ತು ಮಾಲ್ಗುಡಿ ಡೇಸ್‍ ಗಳನ್ನು ಓದಿ ಸಂತಸವಾಯಿತು, ತಮ್ಮ ಈ ಓದುವ ವರೆಯುವ ಮತ್ತು ಪ್ರತಿಕ್ರಿಯಿಸುವ ಹವ್ಯಾಸ ಮೆಚ್ಚುವಂತಹುದು, ಈ ಲೇಖನದ ಮೆಚ್ಚುಗೆಗೆ ಧನ್ಯವಾದಗಳು.