ಹಿಮಾಚಲ ಪರ್ಯಟನೆ - ಯಾಕೂ (ಝಾಕೂ) ದೇಗುಲ, ಶಿಮ್ಲಾ

ಹಿಮಾಚಲ ಪರ್ಯಟನೆ - ಯಾಕೂ (ಝಾಕೂ) ದೇಗುಲ, ಶಿಮ್ಲಾ

 

ಶಿಮ್ಲಾ ನಗರದಲ್ಲಿನ ಪೂರ್ವಕ್ಕಿರುವ ಎತ್ತರದ ಬೆಟ್ಟ  - ಝಾಕೂ(ಯಾಕೂ). ಸಮುದ್ರ ಮಟ್ಟದಿಂದ, ಸುಮಾರು ೮೫೦೦ ಅಡಿಗಳ ಮೇಲೆ ಇರುವ ಈ ಬೆಟ್ಟದ ಮೇಲೆ, ಹನುಮಂತನ ದೇಗುಲವೊಂದಿದೆ.
ಈ ದೇಗುಲವನ್ನು ತಲುಪಲು, ಬೆಟ್ಟದ ಬುಡದಿಂದ ೨ ಕಿ.ಮೀ. ಕಡಿದಾದ ದಾರಿ ಇದ್ದು, ಇದನ್ನು ಹತ್ತಿ ತಲುಪಬಹುದು ಇಲ್ಲವೇ ಬೆಟ್ಟಗಳನ್ನು ಸುಲುಭವಾಗಿ ಹತ್ತುವ(೪-wheel drive) ಕಾರಿನಲ್ಲಿ  ತಲುಪಬಹುದು.

ಈ ಝಾಕು ಬೆಟ್ಟಕ್ಕೆ ಹನುಮಂತನು ಭೇಟಿ ಕೊಟ್ಟಿದ್ದನೆಂಬ ಪ್ರತೀತಿ. ಈ ದೇಗುಲದಲ್ಲಿ ಕೆಳಕಂಡ ಇತಿಹಾಸ(ನಂಬಿಕೆ)ಯನ್ನು ದಾಖಲಿಸಿದ್ದಾರೆ:

ರಾಮಾಯಣದಲ್ಲಿ, ಲಕ್ಷ್ಮಣನು ಇಂದ್ರಜಿತುವಿನ ಬಾಣದಿಂದ ಪ್ರಜ್ಞಾಹೀನನಾದಾಗ, ಹನುಮಂತನು ವಾನರ ಸಹಚರರೊಂದಿಗೆ ಹಿಮಾಲಯಕ್ಕೆ ಧಾವಿಸುತ್ತಾನೆ.
ಸಂಜೀವಿನಿಯನ್ನು ಹುಡುಕುತ್ತಾ ಹಿಮಾಲಯದಲ್ಲಿ ಸಂಚರಿಸುತ್ತಿರುವಾಗ, ಝಾಕೂ ಎಂಬ ಋಷಿಯು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿರುವುದು ಹನುಮನ ಕಣ್ಣಿಗೆ ಬೀಳುತ್ತದೆ.
ಆಗ ಹನುಮನು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ಹೆಚ್ಚು ತಿಳಿಯಲು, ಝಾಕೂ ಋಷಿಯ ಸಹಾಯವನ್ನು ಕೋರುತ್ತಾನೆ.
ಝಾಕೂ ಋಷಿಯು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ತಿಳಿಸಿ, ಅದು ದ್ರೋಣ ಪರ್ವತದಲ್ಲಿ ಸಿಗುವುದಾಗಿ ವಿವರಿಸುತ್ತಾನೆ.
’ಸಂಜೀವಿನಿ ಮೂಲಿಕೆ ಸಿಕ್ಕ ಮೇಲೆ, ಈ ಬೆಟ್ಟಕ್ಕೆ ಬಂದು, ತನ್ನನ್ನು ಭೇಟಿ ನೀಡಿ ಲಂಕೆಗೆ ಹೋಗು’ ಎಂದು ಹನುಮನ ಬಳಿ ವಚನ ತೆಗೆದುಕೊಳ್ಳುತ್ತಾನೆ.

ಹನುಮನು ದ್ರೋಣ ಪರ್ವತದ ಕಡೆಗೆ ಹೊರಡಲು ಅನುವಾದಾಗ, ತನ್ನ ಸಹಚರರು ನಿದ್ರೆಯಲ್ಲಿರುದುವುದನ್ನರಿತು, ಅವರನ್ನು ಅಲ್ಲೇ ಬಿಟ್ಟು ದ್ರೋಣ ಪರ್ವತಕ್ಕೆ ಹೊರಟು ಹೋಗುತ್ತಾನೆ.
ಹನುಮಂತನಿಗೆ ಸಂಜೀವಿನಿ ದೊರಕುವ ವೇಳೆಗೆ, ಹೆಚ್ಚು ಕಾಲ ಕಳೆದಿದ್ದು, ಹನುಮನು ಝಾಕೂ ಋಷಿಯನ್ನು ಭೇಟಿ ಮಾಡದೆ ಲಕ್ಷ್ಮಣನನ್ನು ಉಳಿಸಲು ಲಂಕೆಗೆ ಹೊರಡುತ್ತಾನೆ.
ಲಕ್ಷ್ಮಣನು ಲಂಕೆಯಲ್ಲಿ ಸಂಜೀವಿನಿ ಮೂಲಿಕೆಯಿಂದ ಚೇತರಿಸುಕೊಳ್ಳುತ್ತಾನೆ.

ಇತ್ತ, ಝಾಕೂ ಋಷಿಯು ಹನುಮನನ್ನು ಮರು ಕಾಣದೆ ಚಡಪಡಿಸುತ್ತಿರುತ್ತಾನೆ. ಹನುಮನು ತನ್ನ ಮಾತನ್ನು ಉಳಿಸಿಕೊಳ್ಳಲು, ಮತ್ತೆ ಝಾಕೂ ಋಷಿಯನ್ನು ಭೇಟಿ ಮಾಡುತ್ತಾನೆ.
ಝಾಕೂ ಋಷಿಗೆ ಸಂಜೀವಿನಿ ದೊರಕಿದ ವಿವರವನ್ನು ತಿಳಿಸಿ, ಹೆಚ್ಚು ಕಾಲವಿಲ್ಲದ್ದರಿಂದ ಲಂಕೆಗೆ ತಮ್ಮನ್ನು ಭೇಟಿ ಮಾಡದೆ ಹಾಗೆ ಹೊರಟು ಹೋಗಬೇಕಾಯಿತೆಂದು ಅರಿಕೆ ಮಾಡಿಕೊಳ್ಳುತ್ತಾನೆ.
ಈ ಸ್ಥಳದಿಂದ ಹನುಮನು ಹೊರಟ ಮೇಲೆ, ಇಲ್ಲಿ ಹನುಮನ ಒಂದು ಉದ್ಭವ ಮೂರ್ತಿ ಕಾಣಿಸುಕೊಳ್ಳುತ್ತದೆ.

ಹನುಮಂತನ ನೆನಪಿಗಾಗಿ ಝಾಕು ಋಷಿ ಈ ಮಂದಿರವನ್ನು ಕಟ್ಟಿದ್ದರೆಂದು ಪ್ರತೀತಿ.
ಅಂದಿನಿಂದ ಈ ಮೂರ್ತಿಯನ್ನೇ ಇಲ್ಲಿ ಪೂಜಿಸುತ್ತಿದ್ದಾರಂತೆ...ಹನುಮನ ಸಹಚರರು ಅಂದಿನಿಂದ ಇಂದಿನವರೆಗೂ ಇಲ್ಲೇ ಇದ್ದಾರೆಂದು, ಹಾಗಾಗಿ ಈ ಸ್ಥಳದಲ್ಲಿ ಕೋತಿಗಳ ಸಂಖ್ಯೆ ಹೆಚ್ಚು ಎಂಬ ನಂಬಿಕೆ.

ಈ ದೇಗುಲದ  ಪರಿಸರ ರಮ್ಯವಾಗಿದ್ದು, ದೇವದಾರು, ಪೈನ್ ಮರಗಳ ಮಧ್ಯೆ ಈ ಮಂದಿರವಿದೆ.
ಇಲ್ಲಿಂದ, ಶಿಮ್ಲಾ ನಗರದ ಮನಮೋಹಕ ದೃಶ್ಯ ಕಾಣ ಸಿಗುತ್ತದೆ.
ಇಲ್ಲಿನ ಕೋತಿಗಳು, ಪ್ರವಾಸಿಗರ ಜೇಬುಗಳನ್ನು ಆಹಾರಕ್ಕಾಗಿ  ಪರೀಕ್ಷಿಸುತ್ತದೆಂದೂ, ಬ್ಯಾಗ್‍ಗಳನ್ನು ಕಸಿಯುತ್ತದೆಂದೂ ಕುಪ್ರಸಿದ್ಧಿ ಪಡೆದಿವೆ.
ಹಲವಾರು ಮಂದಿ, ಕೋತಿಗಳನ್ನು ಓಡಿಸಲು ದೊಣ್ಣೆಗಳನ್ನು ಬಳಸುತ್ತಿದ್ದುದೂ, ಕೋತಿಗಳು ಪ್ರವಾಸಿಗರ ಚಪ್ಪಲಿಗಳನ್ನು ಎತ್ತೊಯ್ದದ್ದೂ ಕಣ್ಣಾರೆ ಕಂಡೆವು.
ಇಲ್ಲಿಗೆ ಭೇಟಿ ನೀಡುವವರು ತುಸು ಎಚ್ಚರಿಕೆಯಿಂದಿದ್ದರೆ ಒಳಿತು...
ರಾಮ ಜಪದ ಮಹಿಮೆಯೋ / ನಮ್ಮ ಅದೃಷ್ಟವೋ ನಮ್ಮ ಸುತ್ತ-ಮುತ್ತ ಹತ್ತು-ಹಲವಾರು ಕೋತಿಗಳು ಬೇರೆಯವರನ್ನು ದಾಳಿ ಮಾಡಿದರೂ ಒಂದೂ ನಮ್ಮ ತಂಟೆಗೆ ಬರಲಿಲ್ಲ... :)

--ಶ್ರೀ

Rating
No votes yet