ಆದದ್ದೆಲ್ಲಾ ಒಳಿತೇ ಆಯಿತು

ಆದದ್ದೆಲ್ಲಾ ಒಳಿತೇ ಆಯಿತು

“ಆದದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ, ಮುಂದಾಗುವುದೂ ಒಳ್ಳೆಯದೇ” ಇದು ಭಗವದ್ಗೀತೆಯ ಒಂದು ಭಾಗದ ಕನ್ನಡಾನುವಾದವಂತೆ. ಈ ಕುರಿತು ಚಿಕ್ಕಂದಿನಲ್ಲಿ ನಾನೋದಿದ “ರಾಜ ಮಂತ್ರಿಯ” ಕಥೆ ನನ್ನಲ್ಲಿ ಎಷ್ಟು ಗಾಢವಾದ ಪರಿಣಾಮ ಬೀರಿತ್ತೆಂದರೆ ದಿನನಿತ್ಯ ನಡೆಯುತ್ತಿದ್ದ ಘಟನೆಗಳಿಗೆ ಈ ಒಳಿತಿನ ಮುಖವಾಡ ತೊಡಿಸುತ್ತಿದ್ದೆ. ಕಥೆಯ ಸಾರಾಂಶ ಇಂತಿದೆ. “ಒಂದು ರಾಜ್ಯದ ಮಹಾರಾಜ ಅವನಿಗೊಬ್ಬ ಚಾಣಾಕ್ಷ ಮಂತ್ರಿ. ಭೇಟೆಗೆಂದು ಇಬ್ಬರೂ ಒಮ್ಮೆ ಕಾಡಿಗೆ ಹೋಗಿದ್ದಾಗ ಅರಸನ ಕೈ ಕತ್ತಿಯಿಂದ ಗಾಯವಾಗುತ್ತದೆ. ಮಂತ್ರಿ ಅರಸನ ಗಾಯಗೊಂಡ ಕೈಯನ್ನು ನೋಡುತ್ತಾ, ’ಆದದ್ದೆಲ್ಲಾ ಒಳ್ಳೆಯದಕ್ಕೇ’ ಎಂದುಲಿಯುತ್ತಾನೆ. ಕೋಪಗೊಂಡ ಅರಸ, ’ನನ್ನ ಕೈ ಗಾಯವಾದರೆ ಅದರಲ್ಲಿ ಒಳ್ಳೆಯದೇನು ಬಂತು’ ಎಂದು ಪ್ರತಿಕ್ರಿಯಿಸಿ, ಮಂತ್ರಿಯ ಪದವಿಯನ್ನು ಕಸಿದು ದಟ್ಟಾರಣ್ಯದಲ್ಲಿ ಮಂತ್ರಿಯನ್ನು ಬಿಟ್ಟು ಒಬ್ಬನೇ ಮುಂದುವರಿಯುತ್ತಾನೆ. ಮಂತ್ರಿ ಮುಗುಳ್ನಕ್ಕು, ’ಆದದ್ದೆಲ್ಲಾ ಒಳ್ಳೆಯದಕ್ಕೇ’ ಎಂದು ಹೇಳಿ ರಾಜನಿಂದ ಬೀಳ್ಕೊಡುತ್ತಾನೆ. ಅರಣ್ಯದ ನಡುವೆ ಕಾಡು ಮನುಷ್ಯರ ಸೆರೆಗೆ ಸಿಕ್ಕ ರಾಜನನ್ನು ಬಲಿಕೊಡಲು ಅವನ ದೇಹ ಪರೀಕ್ಷೆ ನಡೆಸುತ್ತಾರೆ. ಗಾಯ ಮಾಡಿಕೊಂಡು ಅಂಗ ಊನವಾದ್ದರಿಂದ ಆತನನ್ನು ಬಲಿ ಕೊಡದೆ ಬಿಡುತ್ತಾರೆ. ರಾಜ ಅರಮನೆಗೆ ಮರಳಿ ಮಂತ್ರಿ ಹೇಳಿದ ಮಾತನ್ನು ನೆನೆದು ಆತ ಸರಿಯಾಗಿಯೇ ಹೇಳಿದ್ದಾನೆಂದು ಆತನನ್ನು ಕರೆಸಿ ಮತ್ತೆ ತನ್ನ ಮಂತ್ರಿಯನ್ನಾಗಿ ನೇಮಿಸಿಕೊಳ್ಳುತ್ತಾನೆ. ’ನೀವು ಹೇಳಿದಂತೆ ನನ್ನ ಕೈ ಗಾಯವಾಗಿದ್ದೇನೋ ಒಳಿತೇ ಆಯಿತು ನಿಜ, ಆದರೆ ತಮ್ಮನ್ನು ಮಂತ್ರಿ ಪದವಿಯಿಂದ ಕಿತ್ತೊಗೆದುದರಿಂದ ಒಳಿತು ಹೇಗಾಯಿತು?’ ಎಂದು ಮುಗ್ಧ ಭಾವದಿಂದ ರಾಜ, ಮಂತ್ರಿಯನ್ನು ಪ್ರಶ್ನಿಸುತ್ತಾನೆ. ಅದಕ್ಕುತ್ತರವಾಗಿ ಮಂತ್ರಿ ’ಜೊತೆಯಲ್ಲಿ ಇದ್ದಲ್ಲಿ ನಾವಿಬ್ಬರೂ ಕಾಡು ಮನುಷ್ಯರ ಸೆರೆಗೆ ಸಿಗುತ್ತಾ ಇದ್ದೆವು, ನನ್ನಂಗ ಊನವಾಗಿಲ್ಲವಾದ್ದರಿಂದ ಅವರು ನನ್ನನ್ನು ಬಲಿ ಕೊಡುತ್ತಿದ್ದರು’ ಎಂದು ಮಾರುತ್ತರ ನೀಡುತ್ತಾನೆ”.

ನನ್ನ ಜೀವನದಲ್ಲಿ ಇಂತಹ ಮಹತ್ತರ ಘಟನೆಗಳ್ಯಾವುವೂ ಘಟಿಸಿಲ್ಲವಾದರೂ ಒಂದೆರಡು ಚಿಕ್ಕ ಘಟನೆಗಳನ್ನು ನೆನಪಿಸಿಕೊಳ್ಳಬಲ್ಲೆ. ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯ. ವಾರದ ಆರಂಭ, ವಾರಾಂತ್ಯದಲ್ಲಿ ಕನ್ನಡದ ಅಧ್ಯಾಪಕರು ಪ್ರಬಂಧವೊಂದನ್ನು ಬರೆದು ಒಪ್ಪಿಸಲು ಸೂಚಿಸಿದ್ದರು. ಮನೆಯಿಂದ ಶಾಲೆ ಸುಮಾರು ೨ ಕಿ.ಮೀ.ಗಳಷ್ಟು ದೂರ. ಸೋಮವಾರ ಶಾಲೆ ಇನ್ನೇನು ತಲುಪಬೇಕು ಎನ್ನುವಷ್ಟರಲ್ಲಿ ಪ್ರಬಂಧ ಪುಸ್ತಕ ಬಿಟ್ಟು ಬಂದಿರುವುದು ನನ್ನ ಗಮನಕ್ಕೆ ಬಂತು. ವಾರದ ಆರಂಭದ ದಿನವೇ ಅಧ್ಯಾಪಕರಿಂದ ಬೈಗುಳ ಕೇಳುವುದು ಬೇಡವೆಂದು ಮತ್ತೆ ಮನೆಯ ಕಡೆ ಸೈಕಲ್ ತಿರುಗಿಸಿದೆ. ವೇಗವಾಗಿ ಮನೆ ತಲುಪಿ, ಮತ್ತೆ ಶಾಲೆಯ ಕಡೆ ಹೊರಟಾಗ ದಾರಿಯಲ್ಲಿ ೧೦೦ರೂಪಾಯಿ ನೋಟು! ಸುತ್ತ ಮುತ್ತ ಯಾರೂ ಇರಲಿಲ್ಲವಾದ್ದರಿಂದ ಆ ನೋಟಿನ ಮಾಲೀಕತ್ವ ವಹಿಸಿ ಶಾಲೆ ತಲುಪಿದೆ.

ಇನ್ನೊಂದು ಘಟನೆ ಮತ್ತೆ ನನ್ನ ಶಾಲಾ ದಿನಕ್ಕೆ ಸಂಬಂಧ ಪಟ್ಟಿದ್ದೇ, ಪ್ರಥಮ ವರ್ಷದ ಪದವಿ ಪೂರ್ವ ವ್ಯಾಸಂಗದ ಸಮಯದಲ್ಲಿ ಘಟಿಸಿದ್ದು. ಜೀವಶಾಸ್ತ್ರದ ಪ್ರಯೋಗ ಪುಸ್ತಕ ಒಪ್ಪಿಸುವ ಕೊನೇಯ ದಿನ. ಭಾನುವಾರ ಸಂಜೆ ಪುಸ್ತಕ ತೆರೆದು ನೊಡಿದರೆ ನನ್ನ ಅಜಾಗರೂಕತೆಯಿಂದ ಕೆಳಗೆ ಇಟ್ಟಿದ್ದ ಪುಸ್ತಕದಲ್ಲೆಲ್ಲಾ ಪಕ್ಕದ ಮನೆಯ ಮಗುವಿನ ಚಿತ್ತಾರ. ಪುಸ್ತಕ, ಪೆನ್ಸಿಲ್ ಎರಡೂ ಜೊತೆಗೆ ಮಗುವಿಗೆಟುಕುವಂತೆ ಇಟ್ಟರೆ, ಅದರಲ್ಲಿ ಮಗುವಿನದೇನು ತಪ್ಪು. ನನ್ನನ್ನೇ ಶಪಿಸಿಕೊಳ್ಳುತ್ತಾ ಸರಿಮಾಡಬಹುದಾದಂತಹ ಪುಟಗಳನ್ನೆಲ್ಲಾ ರಬ್ಬರಿನಿಂದ ಉಜ್ಜುತ್ತಾ, ಸರಿಮಾಡಲಾಗದ ಪುಟವನ್ನು ಕಿತ್ತು ಮತ್ತೆ ಹೊಸದಾಗಿ ಬರೆಯುತ್ತಾ ಕುಳಿತುಕೊಂಡೆ. ರಾತ್ರಿ ಪೂರ್ತಿ ನಿದ್ದೆ ಬಿಟ್ಟು ಬರೆದರೂ ಸೋಮವಾರ ಬೆಳಿಗ್ಗೆ ಪೂರ್ಣಗೊಂಡಿರಲಿಲ್ಲ. ಅಪೂರ್ಣ ಪುಸ್ತಕವನ್ನೇ ಹೊತ್ತು ಎಂದಿನಂತೆ ಸೈಕಲ್ ಹತ್ತಿ ಶಾಲೆಗೆ ಹೊರಟಿದ್ದೆ. ಅದ್ಯಾವ ಗುಂಗಿನಲ್ಲೋ ಏನೋ ರಸ್ತೆಯಿಂದ ಕೆಳಗಿದ್ದ ನಾನು ಹಿಂದೆ ನೋಡದೆ ರಸ್ತೆ ಹತ್ತಿದ್ದೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್ಸಿನ ಹಿಂಬಾಗಿಲು ನನ್ನ ಬಲ ಮೊಣಕೈ ಸವರಿಕೊಂಡು ಹೋಯಿತು. ತಕ್ಷಣ ಸೈಕಲ್ ಬದಿಗಿರಿಸಿ ಮೊಣಕೈ ನೊಡಿದರೆ ಸರಿಯಾಗಿ ಬಾತಿತ್ತು. ನೋವಿನಿಂದ ತರಗತಿಗೆ ತೆರಳಿ ಪ್ರಥಮ ಚಿಕಿತ್ಸೆ ಮಾಡಿಕೊಂಡು ಕುಳಿತೆ. ಜೀವಶಾಸ್ತ್ರದ ಪ್ರಯೋಗ ತರಗತಿಯಲ್ಲಿ ಅಪೂರ್ಣವಾದ ಪುಸ್ತಕವನ್ನು ಅಧ್ಯಾಪಕರೆದುರಿಗೆ ಹಿಡಿದು, ಅದಕ್ಕೆ ಕಾರಣವಾಗಿ ಬಾತಿದ್ದ ಮೊಣಕೈ ತೋರಿಸಿದೆ. ಅಧ್ಯಾಪಕರು ಸಕಾರಣಕ್ಕೆ ಒಪ್ಪಿ, ಇನ್ನೆರಡು ದಿನಗಳ ಗಡುವನ್ನು ದಯಪಾಲಿನಿದರು. ಈ ಮೇಲಿನ ಎರಡೂ ಘಟನೆಗಳಲ್ಲಿ “ಆದದ್ದೆಲ್ಲಾ ಒಳಿತೇ ಆಯಿತು” ಎನ್ನುವ ನಂಬಿಕೆ ನನ್ನ ಜೀವನದಲ್ಲಿ ದಿಟವಾಗಿತ್ತು.

ಇಂತಹ ಚಿಕ್ಕ ಪುಟ್ಟ ಘಟನೆಗಳು ಸಾಕಷ್ಟಿವೆಯಾದರೂ ನಾನು ಹೇಳ ಹೊರಟ ವಿಷಯಕ್ಕೆ ಇಷ್ಟು ಸಾಕು. ಮೊದಲನೆಯ ಘಟನೆಯಲ್ಲಿ ನಾನು ಪುಸ್ತಕ ತರಲು ಮರೆತದ್ದು, ಆ ಮರೆವಿನಿಂದ ನನಗಾದ ಲಾಭ ೧೦೦ ರೂಪಾಯಿ. ಇಲ್ಲಿ ಆದದ್ದೆಲ್ಲಾ ಒಳಿತೇ ಆಯಿತು ನಿಜ, ಈ ಘಟನೆಯನ್ನೋದಿದವರಿಗೂ ಇಲ್ಲಿ ನನಗೊಳಿತಾದದ್ದು ಗಮನಕ್ಕೆ ಬಂದಿರಬಹುದು. ಆದರೆ ಆ ೧೦೦ ರೂಪಾಯಿ ಕಳೆದುಕೊಂಡವನ ಹಿನ್ನೆಲೆಯಲ್ಲಿ ಯೋಚಿಸಿದರೆ, ಅವನು ಕಳೆದುಕೊಂಡಿದ್ದು ಅವನಿಗೆ ಹೇಗೆ ಒಳ್ಳೆಯದಾಯಿತು? ಒಂದು ವೇಳೆ ಕಳೆದುಕೊಂಡವನು ಬಡವನಾಗಿದ್ದು, ಕಷ್ಟ ಪಟ್ಟು ಸೇರಿಸಿದ್ದ ಮೊತ್ತವಾಗಿದ್ದರೆ ಅವನಿಗದು ಒಳ್ಳೆಯದಾಗಿರಲಿಕ್ಕಿಲ್ಲ. ಕಳೆದುಕೊಂಡವನು ಧನಿಕನೂ ಇರಬಹುದು, ಸಾಮಾನ್ಯನೋ, ಬಡವನೋ ಇರಬಹುದು. ಆಗಿನ ಕಾಲದಲ್ಲಿ ೧೦೦ ರೂಪಾಯಿ ಚಿಕ್ಕ ಮೊತ್ತವೇನಾಗಿರಲಿಲ್ಲ. ಇಲ್ಲಿ ಒಳ್ಳೆಯದು ಕೆಟ್ಟದ್ದು ವ್ಯಕ್ತಿಗನುಗುಣವಾಗಿ ಬದಲಾವಣೆ ಹೊಂದುವಂತದ್ದು. ಆದದ್ದೆಲ್ಲಾ ಒಳಿತೇ ಆಯಿತು ಎಂಬ ಮಾತನ್ನು ಒಪ್ಪಬಹುದಾದರೆ, ಒಳಿತು ಎಲ್ಲರಿಗೂ ಆಗಬೇಕಲ್ಲವೇ? ನನಗೆ ಮಾತ್ರ ಒಳಿತಾದ ಘಟನೆ ಬೇರೆಯವರಿಗೆ ಕೆಡುಕಾದರೆ, “ಆದದ್ದೆಲ್ಲಾ ಒಳಿತೇ ಆಯಿತು” ಎಂಬಲ್ಲಿನ ಒಳಿತನ್ನು ನನ್ನ ಮಟ್ಟಿಗೆ ಸಂಕುಚಿತಗೊಳಿಸಿದಂತೆ ಅಲ್ಲವೇ?

ಇನ್ನು ನನ್ನ ಜೀವನದಲ್ಲಾದ ಎರಡನೆಯ ಘಟನೆಯನ್ನು ತೆಗೆದುಕೊಂಡರೆ, ಮೊಣಕೈ ನೋವಾಗಿ ನಷ್ಟವಾಗಿದ್ದೂ ನನಗೆ, ಅಧ್ಯಾಪಕರಿಂದ ಎರಡು ದಿನಗಳ ಹೆಚ್ಚಿನ ಗಡುವು ಸಿಕ್ಕಿ ಲಾಭವಾಗಿದ್ದೂ ನನಗೆ.ಅಧ್ಯಾಪಕರಿಂದ ಬೈಯಿಸಿಕೊಳ್ಳುವ ನೋವು ನನಗೆ ಮೊಣಕೈ ನೋವಿಗಿಂತ ಅಧಿಕವಾದ್ದರಿಂದ ನನ್ನ ಮಟ್ಟಿಗೆ ಇಲ್ಲಿ ಆದದ್ದೆಲ್ಲಾ ಒಳಿತೇ ಆಯಿತು. ಒಂದು ವೇಳೆ ಪರಿಸ್ಥಿತಿ ಭಿನ್ನವಾಗಿದ್ದರೆ ಅಥವಾ ನಾನು ಕೈಯನ್ನೇ ಕಳೆದುಕೊಂಡಿದ್ದರೆ, ನನ್ನನ್ನು ಬಿಟ್ಟು ಬೇರೆಯವರಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ, ಆದರೆ ನನ್ನ ಮಟ್ಟಿಗೆ ನಷ್ಟ. ಇಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ ಆದ್ದರಿಂದ ಆದದ್ದೆಲ್ಲಾ ಒಳಿತೇ ಆಯಿತು ಎಂಬ ವಾದ ಸರಿಯಲ್ಲ. ಆದದ್ದೆಲ್ಲಾ ಒಳಿತೇ ಆಗುತ್ತದೆ ಎನ್ನುವುದಾದರೆ ಮಗು ನನ್ನ ಪುಸ್ತಕದ ಮೇಲೆ ಗೀಚುತ್ತಲೇ ಇರಲಿಲ್ಲ. ಇಲ್ಲಿ ಎರಡೆರಡು ಬಾರಿ ಬರೆದು ನನಗೆ ವಿಷಯ ಹೆಚ್ಚಾಗಿ ಮನದಟ್ಟಾಯಿತು ಎಂಬ ವಾದವೂ ಅಷ್ಟೇ ಅಸಹಜ. ಅವಸರದಲ್ಲಿ ನನ್ನ ಕೆಲಸ ಮುಗಿಸುವ ಪರಿಸ್ಥಿತಿ ಬಂದಿದ್ದರಿಂದ ಮತ್ತೊಮ್ಮೆ ಗಮನವಿಟ್ಟು ಬರೆಯುವ ಅವಕಾಶ ನನಗೆ ಸಿಗಲೇ ಇಲ್ಲ. ಎರಡನೇ ಬಾರಿ ಬರೆದದ್ದರಿಂದ ತಲೆಯೊಳಗೆ ವಿಷಯ ಸ್ವಲ್ಪ ಮಟ್ಟಿಗೆ ಹೋಗಿದ್ದರೂ, ನನ್ನ ಮೊಣಕೈ ನೋವಿನೆದುರಿಗೆ ಅದು ನಗಣ್ಯ.

ನನ್ನ ಮೇಲಿನ ಎರಡು ಕ್ಷುಲ್ಲಕ ಕಾರಣಗಳು ಹಾಸ್ಯಾಸ್ಪದವಾಗಿದ್ದರೆ, ಹಿಟ್ಲರಿನ ನರ ಮೇಧ, ಯುದ್ಧಗಳು, ಈಗ ನಡೆಯುತ್ತಿರುವ ಭಯೋತ್ಪಾದನೆ ಯಾರ ಒಳಿತಿಗಾಗಿ ಎಂದು ಚಿಂತಿಸಬಹುದು. ಚಿಕ್ಕ ಮಗುವನ್ನು ಕಳೆದುಕೊಂಡ ತಾಯಿಯ ಬಳಿ ಹೋಗಿ “ಆದದ್ದೆಲ್ಲಾ ಒಳಿತೇ ಆಯಿತು” ಎಂದು, ಸಕಾರಣ ಕೊಟ್ಟು ಸಮಾಧಾನ ಪಡಿಸುವವರು ಯಾರಾದರೂ ಇದ್ದರೆ, ಈ ಮಾತನ್ನು ನಂಬಬಹುದೇನೋ! ಇಲ್ಲಿ ಕಿಸಾಗೋತಮಿಯ ಕಥೆಯನ್ನು ನೆನಪಿಸಿಕೊಂಡರೆ, ಬುದ್ಧ ಸಾವಿಲ್ಲದ ಮನೆಯಿಲ್ಲ ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಡುತ್ತಾನೆಯೇ ಹೊರತು, ಸತ್ತಿದ್ದು ಒಳ್ಳೆಯದಕ್ಕೆ ಎನ್ನಲಿಲ್ಲ. ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ ಘಟಿಸಿದೆ, ಪರಿಸ್ಥಿತಿಯನ್ನು ಒಪ್ಪಿಕೋ ಎಂಬ ಮಾತು ಸಹಜವಾಗಿ ಕಾಣಿಸುತ್ತದೆ.

ಮೊದಲು ಹೇಳಿದ ಮಂತ್ರಿಯ ಕಥೆಯನ್ನು ಈ ಕೆಳಗಿನಂತೆ ಬರೆದು ನನ್ನ ಬರಹವನ್ನು ಮುಗಿಸುತ್ತೇನೆ. “ಒಂದು ರಾಜ್ಯದ ಮಹಾರಾಜ ಅವನಿಗೊಬ್ಬ ಚಾಣಾಕ್ಷ ಮಂತ್ರಿ. ಭೇಟೆಗೆಂದು ಒಮ್ಮೆ ಕಾಡಿಗೆ ಹೋಗಿದ್ದಾಗ ಕತ್ತಿಯಿಂದ ಅರಸನ ಕೈ ಗಾಯವಾಗುತ್ತದೆ. ಮಂತ್ರಿ ಅರಸನ ಗಾಯಗೊಂಡ ಕೈಯನ್ನು ನೋಡಿ, ಗಿಡ ಮೂಲಿಕೆ ತಂದು ಪ್ರಥಮ ಚಿಕಿತ್ಸೆ ಮಾಡುತ್ತಾನೆ. ಚೇತರಿಸಿಕೊಂಡ ಅರಸ ಮಂತ್ರಿಯೊಡನೆ ಮುಂದುವರಿಯುತ್ತಾನೆ. ಮುಂದೆ ಹೋದಂತೆ ಕಡಿದ ಮರದ ಗುರುತೂ, ಪ್ರಾಣಿಗಳ ಸಂಖ್ಯೆ ಕಡಿಮೆಯಾದದ್ದೂ ಗಮನಿಸಿದ ಮಂತ್ರಿ, ’ಅಪಾಯದ ಮುನ್ಸೂಚನೆ ಇರಬಹುದು’ ಎಂದರುಹಿ, ಮರಳುವ ಸೂಚನೆ ಕೊಡುತ್ತಾನೆ. ಮರಳಿ ಗುಪ್ತಚರರನ್ನು ಅರಣ್ಯಕ್ಕೆ ಅಟ್ಟಿ ಅಲ್ಲಿ ನರಭಕ್ಷಕರು ಇರುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಸೇನೆಯೊಡನೆ ಅಲ್ಲಿಗೆ ತೆರಳಿ ನರಭಕ್ಷಕರನ್ನು ಸಂಹರಿಸುತ್ತಾನೆ. ಅಪಾಯದ ಮುನ್ಸೂಚನೆಯನ್ನು ಅರಿತು ತಮ್ಮಿಬ್ಬರ ಜೀವವನ್ನೂ ಉಳಿಸಿದ ಮಂತ್ರಿಯ ಚಾಣಾಕ್ಷತೆಯನ್ನು ಮೆಚ್ಚಿದ ರಾಜ, ತನ್ನ ಒಬ್ಬಳೇ ಮಗಳನ್ನು ಆತನಿಗೆ ಧಾರೆಯೆರೆಯುತ್ತಾನೆ. ಮಾವನ ಶೌರ್ಯದಿಂದಲೂ, ಅಳಿಯನ ಬುದ್ಧಿವಂತಿಕೆಯಿಂದಲೂ ರಾಜ್ಯ ಸುಭೀಕ್ಷವಾಗುತ್ತದೆ.” ನೀತಿ: ಘಟಿಸುವುದೆಲ್ಲಾ ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ ಘಟಿಸುತ್ತದೆ. ಆದರೆ ವಿವೇಚನೆಯಿಂದ ಪರಿಣಾಮವನ್ನು ಸುಧಾರಿಸಬಹುದು.

Rating
No votes yet

Comments