ಕೈ ತುತ್ತು

ಕೈ ತುತ್ತು

ಅಲ್ಲ ನಾವು ಬದುಕುವುದಕ್ಕೋಸ್ಕರ ತಾನೆ ಊಟ ಮಾಡೋದು…… ಆ ಊಟದ ಬಗ್ಗೆ ಪ್ರೀತಿ ಇರಲೇಬೇಕು ಅಲ್ವ……. ಅದೇ ಊಟಾನ ನಾವು ಪ್ರೀತಿಸುವವರು ತಿನ್ನಿಸಿದರೆ…… ಆಹಾ ಏನು ಸಂತೋಷ….. ನಮ್ಮ ಮನಸು ನಿಂತಲ್ಲೇ ಕುಣಿಯೋಕೆ ಆರಂಭಿಸುತ್ತೆ……..

ನಾನು ಒಂಥರಾ ವಿಚಿತ್ರ ಹುಡುಗಿ…ಚಿಕ್ಕವಳಿದ್ದಾಗ ಏನು ಮಾಡಿದರು ಕೈತುತ್ತು ತಿನ್ನದೇ ನಾನೇ ತಿನ್ನಬೇಕು ಅಂತ ಹಠ ಮಾಡ್ತಿದ್ದೆ. ಆದ್ರೆ ಈಗ ಕೈತುತ್ತು ತಿನ್ನಬೇಕು ಅಂತ ಇಷ್ಟ ಪಡ್ತಾ ಇದ್ದೀನಿ. ಹೌದಲ್ವಾ ನಮಗೆ ಅನಾಯಾಸವಾಗಿ ಏನಾದ್ರೂ ಸಿಕ್ಕರೆ ಅದರಲ್ಲಿ ನಮಗೆ ಆಸಕ್ತಿ ಇರೋಲ್ಲ. ಅದೇ ಅದು ನಮ್ಮಿಂದ ದೂರ ಆದಾಗ ಅದು ಬೇಕು ಅಂತ ಚಡಪಡಿಸ್ತೀವಿ……

ಸರಿ ಸರಿ ತುತ್ತಿನ ಬಗ್ಗೆ ಮಾತಾಡೋದು ಬಿಟ್ಟು ಏನೇನೋ ಬರೀತಾ ಇದ್ದೀನಿ. ಕೈತುತ್ತಲ್ಲಿ ಏನೋ ಒಂದು ವಿವರಿಸಲಾಗದಂಥ ಬಂಧ ಬೆಸೆಯುವ ತಾಕತ್ತಿದೆ. ಅದಕ್ಕೆ ಚಿಕ್ಕವರಿದ್ದಾಗ ನಾವು ಅಮ್ಮನ ಕೈತುತ್ತು ತಿನ್ನೋಕೆ ಹಾತೊರೆಯುತ್ತೇವೆ. ಒಂದೊಂದು ಸಲ ಅಂತು ನನಗೆ ನಾನು ಯಾಕಾದ್ರೂ ಊಟ ಮಾಡೋದು ಕಲಿತೆನೋ ಅಂತ ಅನಿಸುತ್ತೆ. ಊಟ ಮಾಡೋದೇ ಕಲಿತಿರಲಿಲ್ಲ ಅಂದ್ರೆ ಪ್ರತಿ ದಿನ ಅಪ್ಪ ಅಥವಾ ಅಮ್ಮ ತಿನ್ನಿಸ್ತಾ ಇರ್ತಿದ್ರು…….ಅಲ್ವ……..

ಕಳೆದ ವರ್ಷ ನಾನು ಒಂದು ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಹೋಗಿದ್ದೆ. ೪ ದಿನ ಹರಪನಹಳ್ಳಿಯಲ್ಲಿ( ದಾವಣಗೆರೆ) ಶಿಬಿರ. ಅಲ್ಲಿದ್ದ ಇನ್ನು ಅನೇಕ ಸ್ವಯಂ ಸೇವಕರಲ್ಲಿ ಒಬ್ಬರು ನನಗೆ ಎರಡು ದಿನ ಕೈತುತ್ತು ತಿನಿಸಿದ್ದರು…… ನಮ್ಮ ನಡುವೆ ನಾವಿಬ್ಬರೂ ಸ್ವಯಂ ಸೇವಕರು ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಸಂಬಂಧ ಇರಲಿಲ್ಲ……. ಅವರ ಹೆಸರು ಬಿಟ್ಟರೆ ಅವರ ಬಗ್ಗೆ ನನಗೇನು ಗೊತ್ತಿಲ್ಲ.. ಆದರು ಅವರ ಕೈತುತ್ತೇ ನಮ್ಮ ನಡುವೆ ಒಂದು ಮರೆಯಲಾಗದ ಬಂಧವನ್ನು ನಿರ್ಮಿಸಿತ್ತು…..ಕೈತುತ್ತಿಗೆ ಇರುವ ಶಕ್ತಿ ಅಂಥದ್ದು……

ಅಲ್ಲಿಂದ ಮನೆಗೆ ಬಂದ ಮೇಲೆ ಅಪ್ಪನ ಕೈಗೆ ತಿಂಡಿ ತಟ್ಟೆ ಕೊಟ್ಟು ಅವರ ಮುಂದೆ ಕುಳಿತೆ…ಒಂದೊಂದೇ ತುತ್ತು ನನ್ನ ಬಾಯೊಳಗೆ ಪ್ರವೇಶ ಪಡೀತಾ ಇತ್ತು……ಆಹಾ ಅದರ ರುಚಿ ವರ್ಣಿಸಲಸದಳ. ಅಮ್ಮನ ಕೈರುಚಿಯ ಜೊತೆ ಅಪ್ಪನ ಪ್ರೀತಿ ತುಂಬಿದ ಆ ಕೈತುತ್ತು ನಾಲಿಗೆ ಮೇಲೆ ಇಟ್ಟರೆ ಏನೋ ಒಂಥರಾ ಸಂತಸ…..ಇನ್ನೊಂದು ವಿಷಯ ಕೈತುತ್ತು ತಿನ್ನುವಾಗ ನಮಗೆ ಗೊತ್ತಿಲ್ಲದೆ ಸ್ವಲ್ಪ ಜಾಸ್ತಿ ತಿಂದಿರ್ತೀವಿ….. ಕೊನೆ ಕೊನೆಗೆ “ಇನ್ನೊಂದು ತುತ್ತು” ಅಂತ ಹೇಳ್ಕೊಂಡೇ ಅಪ್ಪ ಎಷ್ಟೊಂದು ತುತ್ತು ತಿನ್ನಿಸಿಬಿಟ್ಟಿದ್ದರು…… ಅವರು ಹಾಗೆ ಹೇಳಿದಾಗ ಬೇಡ ಅನ್ನೋಕೆ ಯಾಕೋ ನನಗೆ ಮನಸೇ ಬರಲಿಲ್ಲ…..ನಾನು ತಿಂದು ಬಿಟ್ಟೆ…..ಮೊನ್ನೆ ಅಪ್ಪಾಜಿ ಕರೆದರು ಬಾ ತಿನ್ನಿಸ್ತೀನಿ ಅಂತ……ಮತ್ತೆ ಅವರ ಕೈಯಿಂದ ಒಂದೊಂದೇ ತುತ್ತು……..

ಇತೀಚೆಗೆ ಯಾವಾಗಲಾದ್ರು ನೀವು ಕೈತುತ್ತು ತಿಂದಿದ್ದೀರಾ??? ಇಲ್ಲ ಅಂದ್ರೆ ಈಗಲೇ ಅಡುಗೆ ಮನೆಗೆ ನೀವೇ ಹೋಗಿ ಮಾಡಿರೋ ಅಡುಗೆ ಬಡಿಸಿಕೊಂಡು ತಂದು ಆ ತಟ್ಟೆಯನ್ನ ನೀವು ತುಂಬ ಪ್ರೀತಿಸುವವರ ಕೈಗೆ ಕೊಟ್ಟು ಅವರ ಮುಂದೆ ಕುಳಿತುಕೊಳ್ಳಿ…… ಒಂದೊಂದು ತುತ್ತು ತಿನ್ನುವಾಗಲೂ ನಿಮಗೊಂದು ವಿಶೇಷ ಅನುಭವ ಆಗ್ಲಿಲ್ಲ ಅಂದ್ರೆ ಕೇಳಿ…… ನನಗಂತೂ ಎಷ್ಟೋ ವರ್ಷಗಳ ನಂತರ ಕೈತುತ್ತು ತಿನ್ನಿಸಿಕೊಂಡ ಆ ಕ್ಷಣ…… ನೆನಪಿಸಿಕೊಂಡರೆ ಕಣ್ಣು ತೇವವಾಗುತ್ತೆ….. ಅಲ್ಲ ಪ್ರೀತಿ ವ್ಯಕ್ತ ಪಡಿಸೋಕೆ ಇದಕ್ಕಿಂತ ಒಳ್ಳೆ ಮಾರ್ಗ ಬೇಕಾ?????

ಅದಕ್ಕೆ ಹೇಳ್ತಾ ಇದ್ದೀನಿ ನೀವು ಕೈತುತ್ತು ತಿಂದು ಒಂದು ವರ್ಷಕ್ಕಿಂತ ಜಾಸ್ತಿಯಾಗಿದ್ರೆ ದಯವಿಟ್ಟು ಹೋಗಿ ನೀವು ತುಂಬಾ ಪ್ರೀತಿಸುವವರ ಕೈಯಿಂದ ತಿನ್ನಿಸಿಕೊಳ್ಳಿ. ಅದರ ಹಿತ ಅನುಭವಿಸಿ….ಆಗ ಗೊತ್ತಾಗುತ್ತೆ ಕೈತುತ್ತಿನ ಗಮ್ಮತ್ತು….. ಸರಿ ಹೋಗಿ ಕೈತುತ್ತು ತಿಂತೀರಾ ತಾನೆ…….

Rating
No votes yet

Comments