ಮಾವು ಬೇಕೆ...

ಮಾವು ಬೇಕೆ...

ಹೌದು ಈಗ ನೋಡ್ರಿ ಎಲ್ಲಿ ನೋಡಿದ್ರೂ ಮಾವಿನ ಹಣ್ಣಿನ ಮಾತೇ ಮಾತು. ಈ ಬೆಂಗಳೂರಿನಲ್ಲಿ ಆ ಲಾಲಬಾಗ್ ದಾಗ ಮಾವಿನಮೇಳಾವ್ ಮಾಡತಾರ...ಆದ್ರ ಇಲ್ಲಿ ಸಿಗುವ ಹಣ್ಣು ಅದರ ರುಚಿ ಅಷ್ಟೇನೂ ಖಾಸ್ ಇಲ್ಲ. ಇದು ನನ್ನ ಅಭಿಪ್ರಾಯ ಹಂಗ ನೋಡಿದ್ರ ನಮ್ಮ ಹುಬ್ಬಳ್ಳಿ ಧಾರವಾಡದ ಕಡೆಯಿಂದ ಬಹಳ ಮಂದಿದೂ ಇದ ಅಭಿಪ್ರಾಯ ಆಗಿರ್ತದ. ನೀವು ಅನ್ನಬಹುದು ಅಂತಾದ್ದೇನದ ಆ ಕಡಿ ಹಣ್ಣಿನಾಗ.... ಬೇಕಾದ್ರ ಒಂದು ಕಾದಂಬರೀನ ಬರೀಬಹುದು ಇರಲಿ...೨೦-೨೦ ಸ್ಟೈಲಿನ್ಯಾಗ ಹೇಳಲಿಕ್ಕೆ ಪ್ರಯತ್ನ ಮಾಡತೇನಿ.
ಮಾವಿನ ಹಣ್ಣ ಬಂದಾವ ಈ ಸುದ್ದಿ ಕೇಳಿನ ನಾವು ಸಣ್ಣಾವರಿದ್ದಾಗ ಜೊಲ್ಲು ಸುರಿಸಿಕೊಳ್ಳುತ್ತಿದ್ದೆವು. ಇನ್ನು ಮನ್ಯಾಗ ಶೀಕರಿಣಿ ಮಾಡಿದ್ರಂತೂ ಎಂದು ತಿಂದೆವೋ ಅಂತ ಹಪಾಪಿಸುತ್ತಿದ್ದೆವು. ಶೀಕರಿಣಿ ಮಾಡೂದು ಒಂದು ಕಲಾ ಅದ ಹಂಗ ಮಾವಿನ ಹಣ್ಣು ಹಿಂಡೂದು ಸಹ. ನಮ್ಮ ಹುಬ್ಬಳ್ಳ್ಯಾಗ ಶೀಕರಿಣಿಗೆ ಅಂತ ಸ್ಪೇಶಲಾಗಿ ’ಈಶಾಡಿ’ ಮಾವಿನಹಣ್ಣು ಸಿಗತಾವ. ದುರ್ಗದ ಬೈಲಿನ್ಯಾಗ
ಮಾರಾವ್ರು ಸಹ ಕೇಳೇ ಕೊಡ್ತಾರ..’ಹಣ್ಣು ಹಿಂಡೂದಕ್ಕೋ ಅಥವಾತಿನ್ನಲಿಕ್ಕೊ?’...ಇರಲಿ. ಈಶಾಡಿ ಹಣ್ಣು ಬಲೇ ಕಿಲಾಡಿ "ಇಳದಿದ್ದ" ಹಣ್ಣು ತಿನ್ನಬಾರದು ಅದು ಅಷ್ಟು ರುಚಿ ಇರೂದಿಲ್ಲ. ನೋಡಿ,ವಾಸನಿ ನೋಡಿ ಸರಿಯಾದ ಹಣ್ಣು ತರಬೇಕು. ಮಟಮಟ
ಮಧ್ಯಾಹ್ನ ಅವ್ವ ಹಂಚು ಕಾಸಿ ಚಪಾತಿ ಮಾಡಲಿಕ್ಕೆ ಶುರು ಮಾಡಿದ್ಲು ಅಂದ್ರ ಈಕಡೆ ಒಂದು ಪಾತೇಲಿ ಮುಂದ ಇಟಗೊಂಡು
ಹಣ್ಣು ಹಿಂಡಲಿಕ್ಕೆ ನಾ ಕೂಡತಿದ್ದೆ.... ತುಂಬು ಬಿಚ್ಚಿ ಮೊದಲ ಅದರೊಳಗ ಇದ್ದ ಕಹಿ ಹೊರಗೆ ಒಗೆದು ಸಿಪ್ಪಿ ಸೀಳಿ ಗೊಟ್ಟ ಪಾತೇಲಿಯೊಳಗ ಇಳಿಬಿಟ್ಟು ಸಿಪ್ಪಿಗ ಅಂಟಿದ ರಸ ಎಲ್ಲ ತೆಗೆದು ಆಮ್ಯಾಲ ಗೊಟ್ಟಕ್ಕ ಅಂಟಿಕೊಂಡ ಕರಣಿ ಎಲ್ಲಾ ಹಿಂಡಬೇಕು. ಛಲೋ ಜಾತೀದು ಹಣ್ಣಿತ್ತಂದ್ರ ಒಂದು ಹಣ್ಣು=ಒಂದು ಬಟ್ಟಲ. ಈ ಅಳತಿ ಸಾಮಾನ್ಯದ್ದು. ನಮ್ಮ ಕಡೆ ಹಣ್ಣಿನ ಬುಟ್ಟಿ ಲೆಕ್ಕ ಒಂದು
ಬುಟ್ಟಿಯೊಳಗ ಎರಡೂವರೆ ಡಜನ್ ಹಣ್ಣು... ಅಂದ್ರ ಮನ್ಯಾಗ ಮಂದಿ ಬಹಳ ಇದ್ರ ಬುಟ್ಟಿ ಒಂದ ದಿನದಾಗ ಖಾಲಿ ಆಗಬೇಕು...ಮಂದಿ ಕಮಿ ಇದ್ರ ಎರಡು ದಿನದಾಗ. ಶೀಕರಿಣಿಗೆ ಹೆರದ ಬೆಲ್ಲ (ಎಲ್ಲ ಮಾವಿನ ಹಣ್ಣು ಸಿಹಿ ಎಲ್ಲಿ ಇರ್ತಾವ?),
ಯಾಲಕ್ಕಿ ಪುಡಿ , ಮೆಣಸಿನ ಪುಡಿ(ಮಾವಿನ ಹಣ್ಣು ಬಹಳ ಹೀಟು) ಎಲ್ಲಾ ಸೇರಿ ಕಲೆಸಿ ವಾಗರೂಳಿಲೇ ಕೈ ಆಡಿಸಿದ್ರ ಮುಗೀತು
ಶೀಕರಿಣಿ ರೆಡಿ ತಿನ್ನಲಿಕ್ಕೆ...! ಬಟ್ಟಲ ತುಂಬಾ ಕೇಸರಿ ಬಣ್ಣದ ಶೀಕರಿಣಿ ಮ್ಯಾಲ ಕಾಯಿಸಿದ ತುಪ್ಪ ಇದ್ರ ಬಟ್ಟಲದ ಲೆಕ್ಕ ಯಾರು ಇಟ್ಟಾರು ಹಂಗ ಚಪಾತಿ ಲೆಕ್ಕರೇ ಯಾರಿಗೆ ಬೇಕು....?

ಅದ ಈ ಊರಾಗ ಮಾವಿನ ಹಣ್ಣ ಮಾರತಾರ ಕಿಲೊ ಲೆಕ್ಕದ ಮ್ಯಾಲ....ಸುಡ್ಲಿ ಒಂದು ರುಚೀನ ಒಂದು ಅಳತ್ಯ ಏನೂ ಇಲ್ಲ.
ಏನು ಮಾಡೂದು ಊರು ಬಿಟ್ಟು ಬಂದಾಗೆದ ನೆನಪು ತಕ್ಕೊತ ಕೂಡಬೇಕಾಗೇದ.....!

Rating
No votes yet

Comments