ನಮ್ಮಕ್ಕ ಇದ್ಧಾಗೇ ಇದ್ದಾರಲ್ಲಾ!

ನಮ್ಮಕ್ಕ ಇದ್ಧಾಗೇ ಇದ್ದಾರಲ್ಲಾ!

ಇವತ್ತು ನನ್ನ ವಂಶವೃಕ್ಷದ ಬಗ್ಗೆ ಒಂದು ಬರಹ ಇಲ್ಲೇ ಸಂಪದದಲ್ಲಿ ಹಾಕಿದೆ. ಬಹುಶ: ಅದನ್ನು ಓದಿದ ಮಿತ್ರ ಶ್ರೀಕಾಂತ್  "ವಂಶ ವೃಕ್ಷ?" ಕುಟುಕು ಬರಹ ಹಾಕಿದ್ರು. ಪರವಾಗಿಲ್ಲ.ನಾವೆಲ್ಲಾ ಮೂಲದಲ್ಲಿ ಮಂಗನಿಂದ ಮಾನವ ರಾಗಿದ್ದೇವೆಂದು ಓದಿದ್ದೇವೆ. ಕೆಲವರು ಇನ್ನೂ ಹಾಗೆಯೇ ಉಳಿದಿದ್ದೇವೆ. ಇರಲಿ....

ನಾನೇಕೆ  ವಂಶವೃಕ್ಷ ಬರೆಯಲು ಹೊರಟಿರುವೆ? ಅದರ ಹಿನ್ನೆಲೆ ಸ್ವಲ್ಪ ತಿಳಿಸಿದರೆ ಉತ್ತಮ ಅಲ್ವಾ?

ಘಟನೆ-೧:-

೧೯೭೪ ಇರಬಹುದು. ನಾನು ಬೆಂಗಳೂರಿನ ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ತರಬೇತಿ ಪಡೆಯತ್ತಿದ್ದೆ. ಆರ್.ಎಸ್.ಎಸ್. ನಿಂದಾಗಿ ಹಲವರ ಪರಿಚಯವಾಗಿತ್ತು. ಅದರಲ್ಲಿ ಒಬ್ಬರು ವೆಂಕಟರಾಮ್.ಐ.ಟಿ.ಐ. ಕಲೊನಿಯಲ್ಲಿದ್ದ  ಅವರ ಮನೆ ನನಗೆ ತುಂಬಾ ಹತ್ತಿರದ ಮನೆಯಾಯ್ತು. ಅವರ ಅಮ್ಮ ನನಗೂ ಅಮ್ಮ ಆದರು. ಅವರ ಚಿಕ್ಕಮ್ಮ ನನಗೂ ಚಿಕ್ಕಮ್ಮ ಆದರು. ಒಂದು ದಿನ ಅವರ ಮನೆಯಲ್ಲಿದ್ದೆ. ಅವರ ಮನೆಗೆ ಅವರ ಬಂಧುಗಳೊಬ್ಬರು ಬಂದರು. ಅವರ ಮಗನ ಉಪನಯನಕ್ಕಾಗಿ ಅವರನ್ನುಆಮಂತ್ರಿಸಿ ಹೋದರು. ಅವರನ್ನು ನೋಡಿದರೆ ತೇಟ್ ನಮ್ಮಕ್ಕ ನಂತೆ ಇದ್ದರು. ಇದ್ಯಾರು ಹೀಗೆ ನಮ್ಮಕ್ನಂತೆ ಇದ್ದಾರಲ್ಲಾ! ಹಾಗೇ ಯೋಚಿಸುತ್ತಾ ಕುಳಿತೆ. ಕೇಳುವಷ್ಟು ಧೈರ್ಯವಿರಲಿಲ್ಲ. ಅವರು ಆಮಂತ್ರಣ ಕೊಟ್ಟು ಹೋಗುತ್ತಲೇ ಕುತೂಹಲ ತಡೆಯಲಾರದೆ ಟೇಬಲ್ ಮೇಲಿದ್ದ ಆಮಂತ್ರಣ ಪತ್ರಿಕೆ ತೆಗೆದು ನೋಡುತ್ತೇನೆ. " ಶ್ರೀಕಂಠಯ್ಯ ಮತ್ತು ಮಕ್ಕಳು, ಗಾಂಧೀ ಬಜಾರ್ ಬೆಂಗಳೂರು" ಎಂದು ವಿಳಾಸವಿದೆ.ಈ ಹೆಸರು ನಾನೆಲ್ಲೋ ಕೇಳಿದ್ದೆನಲ್ಲಾ! ಹೂ ನೆನಪಾಯ್ತು, ಅದು ನಮ್ಮತ್ತೆ ಮಗಳುಶಾರದೆಯ ಮಾವನ ಅಂಗಡಿ ವಿಳಾಸ.ಬಂದಿದ್ದವಳು ಶಾರೆದೆಯೇ. ನಾನು ನೋಡಿಯೇ ಇಲ್ಲ. ಪರಿಚಯವಿಲ್ಲ.

ಬಂದ ಅತಿಥಿಗಳನ್ನು ಕಳಿಸಿಕೊಟ್ಟು ಚಿಕ್ಕಮ್ಮ ಮನೆಯೊಳಗೆ ಬಂದರು        " ಶ್ರೀಧರಾ, ಅವರು ನಮ್ಮಕ್ಕನ ಸೊಸೆ........ " ಮಧ್ಯೆದಲ್ಲೇ ಅವರನ್ನು ತಡೆದು ನಾನು ಹೆಳಿದೆ..ಅವರ ಹೆಸರು ಶಾರದಾ"

-" ನಿನಗೆ ಹೇಗೆ ಅವರು ಗೊತ್ತೋ?

_" ಚಿಕ್ಕಮ್ಮ , ಅವರನ್ನು ನೋಡಿದಾಗಲೇ ಅಂದು ಕೊಂಡೆ" ಇವರು ನಮ್ಮಕ್ಕ ಇದ್ಧಾಗೇ ಇದಾರಲ್ಲಾ, ಅಂತಾ ಆಮಂತ್ರಣ ಪತ್ರಿಕೆ ತೆರೆದು ನೋಡಿದೆ, ನನ್ನ ಡೌಟ್ ಕ್ಲಿಯರ್ಆಯ್ತು. ಅವರು ನಮ್ಮತ್ತೆ ಸುಬ್ಬಲಕ್ಷ್ಮಿ ಮಗಳು ಶಾರದಾ ಎಂದು  ದೃಢವಾಯ್ತು."

- ಮತ್ತೆ ಯಾಕೆ ನೀನು ಅವರನ್ನು ಮಾತನಾಡಿಸಲಿಲ್ಲ?

- ಇಲ್ಲಿಯವರಗೆ ಅವರನ್ನು ನಾನು ನೋಡಿಯೇ ಇರಲಿಲ್ಲ.ಅವರಾದರೋ ಶ್ರೀಮಂತರು. ನಮ್ಮ ಬಡತನದ ಮನೆಯ ಸಂಪರ್ಕ ಇಟ್ಟುಕೊಂಡಿಲ್ಲ.ನಮ್ಮತ್ತೆ ನಮ್ಮ ಮನೆಗೆ ಬರ್ತಾ ಇರ್ತಾರೆ ಅಷ್ಟೆ.

[ನಿಜವಾಗಿ ನನಗೆ ಅಂದು ಅಳು ಬಂದಿತ್ತು . ಈಗ್ಗೆ ಕೆಲವು ದಿನಗಳ ಹಿಂದೆ ನಮ್ಮತ್ತೆ ವಿಧಿವಷ ರಾದರಂತೆ]

ಘಟನೆ-೨:-

೧೯೮೨ ಇರಬಹುದು. ಅರಸೀಕೆರೆ ತಾಲ್ಲೂಕು ಬಾಣಾವರಕ್ಕೆ ನನ್ನ ಸ್ನೇಹಿತ ,ಆರ್ ಎಸ್.ಎಸ್.ಕಾರ್ಯಕರ್ತ ಸೇತೂರಾಮ್ ಮನೆಯಲ್ಲಿ ಯಾವುದೋ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ನನ್ನ ಮಿತ್ರ ಸೇತೂರಾಮ್ " ಇವರ್ಯಾರು ಗೊತ್ತಾ? ಅಂತಾ ಒಬ್ಬರನ್ನು ತೋರಿಸಿ ನನ್ನನ್ನು ಕೇಳಿದರು. ನನಗೆ ಗೊತ್ತಿಲ್ಲಾ ಎಂದೆ. ಅವರೇ ಹೇಳಿದರು " ಇವರು ನಿಮ್ಮ ಭಾವ ನರಸಿಂಹ ಮೂರ್ತಿ, ಬೇಲೂರಿನಲ್ಲಿ ಕೆ.ಇ.ಬಿ.ನಲ್ಲಿ ಇಂಜಿನಿಯರ್’ ಆಗ ಗೊತ್ತಾಯ್ತು. ಅವರ ಹೆಸರು ಕೇಳಿದ್ದೆ ನಮ್ಮ ದೊಡ್ದಪ್ಪ ನಾರಾಯಣಪ್ಪ ನವರ ಅಳಿಯ ನರಸಿಂಹ ಮೂರ್ತಿ. ನನಗೆ ಭಾವ. ಅಂತೂ ನಮ್ಮ ಪುನರ್ ಮಿಲನಕ್ಕೆ ಸೇತೂರಾಮ್ ಸೇತುವೆ ಯಾದರು. ಸೇತೂ ರಾಮ್ ಗೆ ಮುಂಚಿನಿಂದ ನರಸಿಂಹ ಮೂರ್ತಿ ಪರಿಚಿತರು. ಅವರ ವಿವರ ಎಲ್ಲಾ ಸೇತೂರಾಮ್ ಗೆ ಗೊತ್ತಿತ್ತು. ಘಟನೆ-೩: ಇದು ಈಗ್ಗೆ ಎರಡು ಮೂರು ವರ್ಷಗಳ ಮಾತು ಅಷ್ಟೆ. ಹಾಸನದ ಬಶೆಟ್ಟಿಕೊಪ್ಪಲ್ ರಸ್ತೆಯಲ್ಲಿ ನಾನು ನಡೆದು ಹೋಗುತ್ತಿದ್ದೆ. ಎದುರಿನಿಂದ ಒಬ್ಬ ಕಾಲೇಜು ಹುಡುಗಿ ಇನ್ನೊಬ್ಬ ಹೆಂಗಸರನ್ನು ಕೂರಿಸಿಕೊಂಡು ಸ್ಕೂಟಿಯಲ್ಲಿ ನನ್ನೆದುರು ಬಂದಳು. ಸ್ಕೂಟಿಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಹೆಂಗಸು ನನ್ನನ್ನು ಕಂಡಕೂಡ್ಲೆ ಸ್ಕೂಟಿಯನ್ನು ನಿಲ್ಲಿಸಲು ಹೇಳಿದರು. ಸ್ಕೂಟಿ ನಿಂತಿತು. ಆಶ್ಚರ್ಯ! ನಮ್ಮ ಪುಟ್ಟನಂಜತ್ತೆಯ ಮೊಮ್ಮಗಳು ಸುಶೀಲ ಎದಿರು ನಿಂತು" ಏನೋ ಶ್ರೀಧರ? ಅಂತಾಳೆ. ಸ್ಕೂಟಿ ಓಡಿಸುತ್ತಿದ್ದ ಅವಳ ಮಗಳು ಕಕ್ಕಾಬಿಕ್ಕಿ. ನನಗೇ ನನ್ನತ್ತೆಯ ಕುಡಿಯೊಂದು ಪರಿಚಯವಿಲ್ಲ. ನಮ್ಮ ಮಕ್ಕಳಿಗೆ ಇನ್ನೆಲ್ಲಿ ಸಾಧ್ಯ? ಇದೆಲ್ಲಾ ಘಟನೆಗಳು ನನ್ನ ತಲೆಯಲ್ಲಿ ಈಗಲೂ ಕೊರೆಯುತ್ತಿವೆ. ನಮ್ಮ ಕೌಟುಂಬಿಕ ಬಾಂಧವ್ಯ ಕಳಚಿ ಹೋಗುತ್ತಿದೆಯಲ್ಲಾ!! ಅದಕ್ಕಾಗಿ ನಮ್ಮಂತವರ ಉಸಿರಿರುವಾಗಲೇ ಬಾಂಧವ್ಯ ಉಳಿಸಲು ಏನಾದರೊಂದು ದಾರಿ ಮಾಡಲೇ ಬೇಕೆನಿಸಿದೆ. ಅದಕ್ಕೆ ಪೂರಕ ವಾಗಿ ಪ್ರಥಮ ಪ್ರಯತ್ನವಾಗಿ ನನ್ನ ತಮ್ಮನ ಮಗಳ ಮದುವೆಯನ್ನು ನಮ್ಮೂರಲ್ಲಿ ಮಾಡಿ ನಮ್ಮಪ್ಪ ನಮ್ಮಮ್ಮ ನ ಕಡೆಯ ನಮ್ಮೆಲ್ಲಾ ಬಂಧುಗಳನ್ನೂ ಮದುವೆಗೆ ಆಹ್ವಾನಿಸಿದ್ದೆವು. ಅನೇಕ ವರ್ಷಗಳ ನಂತರ ನಮ್ಮ ಹಳ್ಳಿಯಲ್ಲಿ ಮದುವೆಯ ನೆಪದಲ್ಲಿ ಸೇರಿದ ನಮ್ಮ ಬಂಧುಗಳಿಗಾದ ಸಂತೋಷಕ್ಕೆ ಪಾರವೇ ಇಲ್ಲ. ಮುಂದೆ ವರ್ಷಕ್ಕೊಮ್ಮೆ ಯಾದರೂ ಹಳ್ಳಿಯಲ್ಲಿ ಎಲ್ಲಾ ಬಂಧುಗಳನ್ನೂ ಆಹ್ವಾನಿಸಿ ಪರಸ್ಪರ ಸಂಬಂಧ ಉಳಿಯಲು ಕಾರ್ಯಕ್ರಮಗಳನ್ನು ರೂಪಿಸುವ ಆಸೆ ಇದೆ.

Rating
No votes yet

Comments