ಮನಸು ಹೇಳಬಯಸಿದೆ......

ಮನಸು ಹೇಳಬಯಸಿದೆ......

ಮನಸು ಹೇಳಬಯಸಿದೆ ನೂರೊಂದು,
ತುಟಿಯ ಮೇಲೆ ಬಾರದಿದೆ ಮಾತೊಂದು,
ವಿದಾಯ ಗೆಳಯನೆ, ವಿದಾಯ ಗೆಳತಿಯೆ
ವಿದಾಯ ಹೇಳಬಂದಿರುವೆ ನಾನಿಂದು!

ಮತ್ತೊಮ್ಮೆ ಈ ಹಾಡು ಪದೇ ಪದೇ ನೆನಪಾಗುತ್ತಿದೆ. ಮೊದಲ ಬಾರಿಗೆ ಶಾಲೆಯಲ್ಲಿ
ಕೇಳಿದ್ದೆ, ಅವತ್ತು ನಮಗೆ ಅಂದರೆ ಆ ವರ್ಶದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸೆಂಡ್
ಆಫ್ ಕಾರ್ಯಕ್ರಮವಿತ್ತು. ಶಾಲೆಯ ಜೀವನ ಮುಗಿಯ ಹೊರಟಿತ್ತು, ಕಾಲೇಜಿನ ಬಣ್ಣಬಣ್ಣದ
ಬದುಕು ಆ ಕಡೆ ನಿಂತು ಕೈ ಬೀಸಿ ಕರೆಯುತಿತ್ತು. ಎಷ್ಟೇ ಪ್ರಭುದ್ದವಾಗಿ ಆಲೋಚಿಸಿದರೂ,
ಸ್ಕೂಲ್ ಯುನಿಫಾರಂನಲ್ಲಿದ್ದರೆ ನಾವು ಚಿಕ್ಕವರೆಂದೇ ದೊಡ್ಡವರ (?) ಅಭಿಪ್ರಾಯ.
ದಿನಕ್ಕೊಂದು ಬಣ್ಣದ ಬಟ್ಟೆ, ಶಾಲೆಯ ಪ್ರಾರ್ಥನೆ, ಎಕ್ಸರ್ಸೈಸ್ ಗಳಿಂದ ಮುಕ್ತಿ,
ಬೇಕಿದ್ದ ಕ್ಲಾಸಿಗೆ ಹೋಗುವ ಸ್ವಾತಂತ್ರ್ಯ, ನಿಜಕ್ಕೂ ಕಾಲೇಜೊಂದು ಕಿನ್ನರ ಲೋಕ ಎಂಬ
ಭ್ರಮೆ. ಸಂಭ್ರಮ, ಭಯ, ಬೇಸರಗಳ ಮಿಶ್ರಭಾವದಿಂದ ದಿಗ್ಮೂಢರಾಗಿ, ಒಬ್ಬರಿಗೊಬ್ಬರು ಏನು
ಮಾತಾಡಿಕೊಳ್ಳಬೇಕು ಎಂಬುದೂ ಹೊಳೆಯುತ್ತಿರಲಿಲ್ಲ. ತಮ್ಮ ಕಡೆಯ ಕರ್ತವ್ಯವೆಂಬಂತೆ
ಉಪಧ್ಯಾಯರೆಲ್ಲ, ’ಯಾವ ಕಾಲೇಜ್ ಸೇರ್ತಿ?’ ’ಸೈನ್ಸಾ ಕಾಮರ್ಸಾ?’ ಎಂದು
ಕೇಳುತ್ತಿದ್ದರೆ, ಪಕ್ಕದವಳು ಕಾಮರ್ಸ್ ಅಂದಿದ್ದನ್ನೇ ನಿಷ್ಠೆ ಇಂದ
ಪುನರುಚ್ಚರಿಸಿದ್ದು, ಆಗಿನ್ನು ಸ್ಲಾಮ್ ಬುಕ್ ಗಳ ಅಭ್ಯಾಸವಾಗಿರಲಿಲ್ಲವಾದ್ದರಿಂದ,
ಕಡೆಯ ದಿನದ ಗ್ರೂಪ್ ಫೋಟೋಗೆ ಫೋಸ್ ಕೊಟ್ಟು, ಗುಂಪು ಗುಂಪಾಗಿ ಸಹಪಾಠಿಗಳ ಜೊತೆ
ಶಾಲೆಯಿಂದ ಹೊರಹೊರಟ ಚಿತ್ರ ಮೊನ್ನೆ ಮೊನ್ನೆಯಷ್ಟೇ ನಡೆಯಿತೇನೋ ಎಂಬಂತೆ ಹಸಿಯಾಗಿದೆ.

ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ, ಕಾಲೇಜಲ್ಲಿ ನಾವಂದುಕೊಂಡದ್ದೆಲ್ಲ ಇತ್ತು, ಆದರೆ
ಕೆಲವೇ ದಿನಗಳಲ್ಲಿ ಇಷ್ಟೇನೆ ಅನ್ನಿಸಹತ್ತಿತ್ತು. ಶಾಲೆಯ ಸಹಪಾಠಿಗಳ ನೆನಪು
ಮಾಸತೊಡಗಿತ್ತು. ಹೊಸ ಗೆಳತಿ/ಗೆಳೆಯರು ಅದಾಗಲೇ ಹಳಬರಾಗ ತೊಡಗಿದ್ದರು. ಕ್ಲಾಸ್ ಬಂಕ್
ಮಾಡುವುದು, ಸಿನಿಮಾ ನೋಡುವುದು, ದುಡ್ಡಿಗಾಗಿ ಮನೆಯಲ್ಲಿ ಸುಳ್ಳು ಹೇಳುವುದು ಯಾವುದೂ
ತಪ್ಪೆನಿಸದ ಮಟ್ಟಿಗೆ ಒಗ್ಗಿ ಹೋಗಿತ್ತು. ಕನ್ನಡ ಟೀಚರ್ ಹೇಳಿದ್ದ ಪದ್ಯವನ್ನು ಕಂಠಪಾಠ
ಮಾಡಿ, ರಾಗವಾಗಿ ಒಪ್ಪಿಸುತ್ತಿದ್ದಾಗಿನ ಮುಗ್ಧತೆ ಅದೆಲ್ಲೋ ಕಾಣದಂತೆ ಕಳೆದು
ಹೋಗಿತ್ತು. ಗೆಳತಿಯರ ಗುಂಪಲ್ಲಿನ ತರಲೆಗಳು, ಇಷ್ಟಿಷ್ಟೇ ಮಾತಿಗೂ ಇಷ್ಟಗಲ ನಗು,
ಕ್ಯಾಂಪಸ್ಸಿನಲ್ಲಿ ಹಾದು ಹೋಗುತ್ತಿದ್ದರೆ ಬೆನ್ನಿಗೇ ಅಂಟಿಕೊಂಡಂತೆನಿಸುತ್ತಿದ್ದವನ
ಕಣ್ಣುಗಳು, ಕಾಲೇಜಿನ ಪುಸ್ತಕಗಳಲ್ಲಿನ ಪಾತ್ರಗಳು, ರಂಗು ರಂಗೆನಿಸಿದ್ದ ಕಾಲೇಜ್ ಡೇ,
ಕಡೆಗೂ ಸೀರೆ ಉಡಿಸಿದ ಎತ್ನಿಕ್ ಡೇ, ಬಹುಮಾನ ತಂದುಕೊಟ್ಟ ಪ್ರಬಂಧ ಸ್ಪರ್ಧೆ,
ಅರ್ಧಕ್ಕೆ ಓಡಿ ವಾಪಸ್ ಬಂದ ರನ್ನಿಂಗ್ ರೈಸ್ ಕಾಂಪಿಟೇಶನ್ನು, ಹಹ್! ಮುಗಿಯದ
ನೆನಪುಗಳು. ಅಷ್ಟೇ, ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಅಂತಾರಲ್ಲ ಹಾಗೆ ಮುಗಿದು
ಹೋಗಿತ್ತು ಪಿ.ಯು.ಸಿ ಯ ಎರಡು ವರ್ಷ.

ಮತ್ತೊಂದು ಫೇರ್ ವೆಲ್. ಇಡೀ ವರ್ಷದ ತರಲೆಗಳನ್ನು ನೆನಪಿಸಿಕೊಳ್ಳುತ್ತ,
ದೂರವಾಗುತ್ತಿರುವುದಕ್ಕೆ ಬೇಸರಿಸಿಕೊಳ್ಳುತ್ತಾ, ಮತ್ತೆ ಸಿಗಬೇಕೆಂದು ಒಬ್ಬರಿಗೊಬ್ಬರು
ಆಜ್ಞಾಪಿಸುತ್ತಾ. ಚಿತ್ರ ವಿಚಿತ್ರವಾಗಿ ಸ್ಲಾಮ್ ಬುಕ್ ಗಳನ್ನು ತುಂಬಿಸುತ್ತಾ
ಸಂಭ್ರಮಿಸುತ್ತಿದ್ದೆವು. ಪದವಿ ಓದಲು ಹೊರಟಿದ್ದವರು, ಮದುವೆಯಾಗ ಹೊರಟಿದ್ದವರು,
ಮತ್ತಿತರ ಕೋರ್ಸ್ ಗಳಿಗೆ ಸೇರಬೇಕೆಂದಿದ್ದವರು, ಕೆಲಸ ಮಾಡುತ್ತೇನೆನ್ನುತ್ತಿದ್ದವರು,
ಹೀಗೆ ಪ್ರತಿಯೊಬ್ಬರ ಅಭಿಪ್ರಾಯವೂ ಕೇಳಿ, ಹಿಂದಿನ ಹಾಗೇ ಅದರಲ್ಲೊಂದು ಪುನರುಚ್ಚರಿಸಿ
ಪಿ.ಯು.ಸಿ. ಮುಗಿಸಿದ್ದಾಯ್ತು.

ಪದವಿ ಸೇರಿದ ಮೇಲೆ ಕ್ಲಾಸುಗಳಿಗೆ ಹಾಜರಾಗಲು ಇನ್ನಷ್ಟು ಸೋಂಬೇರಿತನ. ದಿನವೂ ತಪ್ಪದೇ
ಕಾಲೇಜಿನ ಕ್ಯಾಂಪಸ್ಸಿನಲ್ಲಿರುತ್ತಿದ್ದ ನಾವು, ಕ್ಲಾಸುಗಳಿಗಂತೂ ತೀರ ಅಪರೂಪ.
ಕ್ಯಾಂಟೀನ್ ನಲ್ಲಿ, ಥೇಟರಿನಲ್ಲಿ, ಗೆಳೆಯ ಗೆಳತಿಯರ ಮನೆಗಳಲ್ಲೇ ನಮ್ಮ ಓದು
ಸಾಗುತ್ತಿದ್ದಿದ್ದು. ಪರೀಕ್ಷೆ ಹಿಂದಿನ ದಿನ ಒಂದು ನಿಮಿಷವೂ ಹಾಳು ಮಾಡದೇ
ನಿಷ್ಠೆಯಿಂದ ಓದಿ ಅಷ್ಟೇ ನಿಷ್ಠೆಯಿಂದ ಅಲ್ಲಿ ಇಲ್ಲಿ ಕಾಪಿ ಮಾಡಿ ಬರೆದು ಅದು ಹೇಗೋ
ಪಾಸ್ ಮಾಡಿ ಮುಂದಿನ ಸೆಮಿಸ್ಟರಿಗೆ ಹಾರುತ್ತಿದ್ದೆವು. ನಮ್ಮ ಲೆಕ್ಕಾಚಾರ ಚೂರು
ತಪ್ಪಾಗಿದ್ದಲ್ಲಿ ಆಗೊಮ್ಮೆ ಈಗೊಮ್ಮೆ ಒಂದೊಂದು ಸೆಮಿಸ್ಟರ್ ನಲ್ಲಿ ಒಂದೋ ಎರೆಡೋ
ವಿಷಯಗಳು ಉಳಿದುಕೊಳ್ಳುವುದು, ಊಟ ತಿಂಡಿಯಷ್ಟೇ ಸಹಜವೆಂಬುದು ನಮ್ಮೆಲ್ಲರ ಒಮ್ಮತದ
ಅಭಿಪ್ರಾಯವಾಗಿಬಿಟ್ಟಿತ್ತು. ಹಾಗೂ ಹೀಗೂ ಕಡೆಯ ಸೆಮಿಸ್ಟರು ಮುಟ್ಟಿ, ಪರೀಕ್ಷೆಗಳನ್ನು
ಮುಗಿಸಿ ಹೊರಬಂದರೆ, ಮನಸ್ಸು ಮತ್ತೊಮ್ಮೆ ವಿದಾಯ ಹೇಳಲು ತಯಾರಾಗುತ್ತಿತ್ತು. ’ಫೋನ್
ಮಾಡ್ತಿರು, ಮೆಸೇಜ್ ಮಾಡ್ತಿರು, ಮೇಲ್ ಮಾಡ್ತಿರು, ಟಚ್ ನಲ್ಲಿರು’ ಎಲ್ಲವೂ
ಹೇಳಿಕೊಂಡಿದ್ದಾಯ್ತು, ಕಡೆಯ ಭೇಟಿಯ ಸೆಲೆಬ್ರೇಶನ್ ಎಂಬಂತೆ ಒಂದು ಸಿನಿಮಾ ನೋಡಿ
ಬಂದ್ವಿ. ಗುಂಪು ಚದುರಿತು. ಮನಸು ಹೇಳಬಯಸಿದ್ದ ನೂರೊಂದು ಮಾತೂ, ಮೌನದಲ್ಲೇ
ವ್ಯಕ್ತವಾಗುತ್ತಿತ್ತು.

Rating
No votes yet

Comments