ಎಲೆ ಮರೆಯಲ್ಲಿ

ಎಲೆ ಮರೆಯಲ್ಲಿ

ಇವತ್ತು ಬೆಳಿಗ್ಗೆ ಎದ್ದವನೇ ಯಾವುದೋ ಹಳೇ ಪುಸ್ತಕ ಓದುತ್ತಾ ಇದ್ದೆ. ಅದರಲ್ಲೊಂದು ಚೀಟಿ,  ನಾಲ್ಕೈದು ವರ್ಷಗಳ ಹಿಂದೆ ಬರೆದಿದ್ದು ಸಿಕ್ಕಿತು. ಒಬ್ಬ ಅಪರೂಪದ ವ್ಯಕ್ತಿಯ ಒಂದು ಪುಟ್ಟ ಪರಿಚಯ ಅದರಲ್ಲಿತ್ತು. ಆಚೀಟಿ ಕೈಗೆತ್ತಿಕೊಂಡಾಗ ನನ್ನ ಕಣ್ಣಮುಂದೆ ಆ ಪುಣ್ಯಾತ್ಮನೇ ನಿಂತಂತಾಯ್ತು. ಅಂದು ಶರ್ಟ್ ಕಳಚಿ ಒಂದು ಶಲ್ಯಹೊದ್ದುಕೊಂಡು ಊಟದ ಚಾಪೆಯಮೇಲೆ ಕುಳಿತು ನಮ್ಮ ಮನೆಯ ಅತೀ ಸರಳ ಅಡುಗೆಯನ್ನೇ ಅಮೃತವೆಂದು ಭಾವಿಸಿ ಅತ್ಯಂತ ಸಂತೋಷವಾಗಿ ಉಂಡು ಚಾಪೆಯ ಮೇಲೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದ ಅವರು ಸರಳ ವ್ಯಕ್ತಿಗಳಲ್ಲಿ ಅತ್ಯಂತ ಸರಳ ವ್ಯಕ್ತಿಯಾಗಿ ಕಂಡರು. ಸಂಜೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರ ಪರಿಚಯವನ್ನು ನಾನು ಮಾಡಿಕೊಡಬೇಕಾದ್ದರಿಂದ ಅವರ ಒಂದು ಪರಿಚಯ ವಿರುವ ಏನಾದರೂ ಸಾಹಿತ್ಯ ಇದೆಯೇ? ಎಂದು ಕೇಳಿದೆ. ಅಂತಾದ್ದೇನಿಲ್ಲ. ನನ್ನ ಘನಂದಾರಿ ಪರಿಚಯವನ್ನು ಎರಡು ಮಾತಿನಲ್ಲಿ ಬರೆದುಕೊಟ್ಟು ಬಿಡ್ತೀನಿ, ಆಯ್ತಾ? ಎಂದರು. ಅಲ್ಲೇ ಒಂದು ಯಾವುದೋ ಪುಟ್ಟ ಲೆಟರ್ ಹೆಡ್ ಪೇಪರ್ [ಅವರದ್ದಲ್ಲ] ಸಿಕ್ಕಿತು. ಬರೆಯಲು ಶುರುಮಾಡಿ ಎರಡು ನಿಮಿಷದಲ್ಲಿ ಚೀಟಿ ಕೈಲಿತ್ತರು. ನೋಡುತ್ತೇನೆ. ಐದು ಚಿನ್ನದ ಫಲಕ! ನಾಲ್ಕು ಪರೀಕ್ಷೆಗಳಲ್ಲಿ ಪ್ರಥಮ/ದ್ವಿತೀಯ Rank!!
ನೀವೂ ಒಮ್ಮೆ ನೋಡಿಬಿಡಿ

*ಸಂಸ್ಕೃತ ಎಂ.ಎ.-ಪ್ರಥಮ Rank-ಎರಡು ಚಿನ್ನದ ಪದಕ

*ಸಂಸ್ಕೃತದಲ್ಲಿ ಪಿ.ಹೆಚ್.ಡಿ- ಒಂದು ಚಿನ್ನದ ಪದಕ

*ಬಿ.ಏ- ಎರಡನೇ Rank

*ಅಲಂಕಾರ ಶಾಸ್ತ್ರ ವಿದ್ಯುದುತ್ತಮ ಪರೀಕ್ಷೆ- ಮೊದಲ Rank,ಒಂದು ಚಿನ್ನದ ಪದಕ

*ವ್ಯಾಕರಣ ಶಾಸ್ತ್ರ ವಿದ್ಯುದುತ್ತಮ ಪರೀಕ್ಷೆ- ಮೊದಲ Rank,ಒಂದು ಚಿನ್ನದ ಪದಕ

* ಸಂಸ್ಕೃತ ಕೋವಿದ- ಪ್ರಥಮ ಶ್ರೇಣಿ-ವಿಶೇಷ ಬಹುಮಾನ.

*ಹಿಂದೀ ಪ್ರವೇಶ-ವಿಶೇಷ ಬಹುಮಾನ.

ಹಿರಿಯ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಸಂಪಾದಿಸಿ ಪ್ರಕಟಿಸಿದ ಕೃತಿಗಳು ನಾಲ್ಕು ಸಂಸ್ಕೃತ ಭಾಷೆಯಲ್ಲಿ ಪ್ರಕಟವಾಗಿದ್ದು, ಎರಡು ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಮತ್ತೊಂದನ್ನು ಕನ್ನಡ ಹಾಗೂ ಇಂಗ್ಳೀಶಿಗೆ ಅನುವಾದ ಮಾಡಿದ್ದಾರೆ.

ಅನುವಾದಿತ ಕೃತಿಗಳು:

* ಡಾ|| ಕೆ.ಶಿವರಾಮ ಕಾರಂತರ ಗರ್ಭಗುಡಿ ಕನ್ನಡ ನಾಟಕವನ್ನು ಸಂಸ್ಕೃತಕ್ಕೆ

*ವೀರಕೇಸರಿ ಸೀತಾರಾಮ ಶಾಸ್ತ್ರಿಗಳ "ಪರಶುರಾಮ" ಕನ್ನಡ ನಾಟಕವನ್ನು ಸಂಸ್ಕೃತಕ್ಕೆ
.

ಇವಲ್ಲದೆ ಕನ್ನಡದಲ್ಲಿ ನಾಲ್ಕು ಪುಸ್ತಕಗಳು, ೧೫೦ ಲೇಖನಗಳು, ಸಂಸ್ಕೃತದಲ್ಲಿ ೧೦ ಲೇಖನಗಳು, ಇಂಗ್ಳೀಶಿನಲ್ಲಿ ಐದು ಲೇಖನಗಳು, ಹಲವಾರು ಸಮ್ಮೇಳನಗಳಲ್ಲಿ ಸಂಸ್ಕೃತ ಪ್ರಬಂಧ ಮಂಡನೆ, ವಿಚಾರ ಗೋಷ್ಠಿಗಳಲ್ಲಿ ಪಾಲುಗೊಳ್ಳುವಿಕೆ, ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡುವುದು, ಇವೆಲ್ಲಾ ಇವರ ಕಾರ್ಯ ಚಟುವಟಿಕೆ.
ಪ್ರತಿಭಾಪಟು,ವೇದಸೂಕ್ತವಿದ್ಯಾಸಾಗರ,ವೇದವಿದ್ಯಾನಿಧಿ ಎಂದೆಲ್ಲಾ ಪ್ರಶಸ್ತಿಗೆ ಪಾತ್ರರಾಗಿರುವ ಈ ವ್ಯಕ್ತಿ ಮೈಸೂರಿನಲ್ಲಿರುವ ತಲಕಾಡಿನ ವಿದ್ವಾನ್ ಡಾ|| ಟಿ.ವಿ.ಸತ್ಯನಾರಾಯಣ.
ನಾಲ್ಕೈದು ವರ್ಷಗಳಿಂದೀಚೆಗೆ ಅವರನ್ನು ಪುನ: ಭೇಟಿಯಾಗಿಲ್ಲ. ಇನ್ನೂ ಎಷ್ಟು ಕೃತಿಗಳನ್ನು ರಚಿಸಿದ್ದಾರೋ ಗೊತ್ತಿಲ್ಲ. ಅಂತೂ ಎಲೆಮರೆಕಾಯಿಯಂತಿರುವ ಸತ್ಯನಾರಾಯಣ ನನಗಿಷ್ಟವಾದರು.

Rating
No votes yet

Comments