ಮದುವೆ

ಮದುವೆ

ಸುಮಾರು 4-5 ತಿಂಗಳುಗಳಿಂದ ಈ ಪದ ಎಷ್ಟು ಸಲ ಕಿವಿಗೆ ಬಿದ್ದಿದೆಯೋ ದೇವ್ರೇ ಬಲ್ಲ. ರೂಮಿಗೆ ಹೋದ್ರೆ ಹುಡುಗ್ರ ಜೊತೆ, ಅಕ್ಕನ ಮನೆಗೆ (ಬೆಂಗ್ಳೂರಲ್ಲಿ) ಹೋದ್ರೆ, ಇನ್ನೊಬ್ರು ಅಕ್ಕನ ಮನೆಗೆ ಹೋದ್ರೆ, ಊರಿಗೆ ಹೋದ್ರೆ, ಅಕ್ಕನ ಮನೆಗೆ (ಶಿವಮೊಗ್ಗದಲ್ಲಿ) ಹೋದ್ರೆ, ಕಂಪನಿಯಲ್ಲಿ, ಅತ್ತೆ ಮನೆಗೆ ಹೋದ್ರೆ, ಅತ್ತೆ ಮಕ್ಕಳ ಹತ್ರ ಫೋನಿನಲ್ಲಿ ಮಾತಾಡಿದ್ರೆ, ಮನೆಯಲ್ಲಿ ಫೋನ್ ಎತ್ತಿದ್ರೆ, ನ‌ಮ್ಮ ಎಲ್ಲಾ ಹುಡುಗ್ರು ಬ‌ಂದಾಗ‌.........

............ಎಲ್ಲಾ ಕಡೆ ಒಂದೇ ಸುದ್ದಿ ಮದುವೆ, ಮದುವೆ, ಮದುವೆ, ಮದುವೆ..............

ನ‌ಮ್ಮ ರೂಮಿನ‌ಲ್ಲಿರೋ 4 ಜನ ಸ್ವಲ್ಪ ದೂರ ಇರೋ ವೆಂಕನೂ ಇನ್ನೇನು ಯುದ್ಧಕ್ಕೆ ಶುರುವಾಗಿದ್ದಾರೆ ಅಂದ್ರೆ ಎಲ್ಲರೂ ಹುಡುಗಿ ಹುಡುಕ್ತಾ ಇದ್ದಾರೆ, ಹಾಗಾಗಿ ರೂಮಿನ‌ಲ್ಲಿ ಪ್ರತಿದಿನ‌ ಮ‌ದುವೆಯ‌ದ್ದೇ ಸುದ್ದಿ, ಮೀಟರ್, ಬಾಬು, ನಾನು ಆಗಾಗ ವೆಂಕ. ಉಲ್ಲ ಇದ‌ಕ್ಕೆಲ್ಲಾ ಬ‌ರ‌ಲ್ಲ ಯಾಕ‌ಂದ್ರೆ ಅವ್ನಿಗೆ ಹುಡುಗಿ ಪ‌ಕ್ಕಾ ಆಗಿದ್ದಾಳೆ. ಸೌಜಂಗೆ ಈ ತರದ ತೊಂದ್ರೆಗಳೇ ಇಲ್ಲ ಯಾಕಂದ್ರೆ ಅವ್ನು ಪ್ರೇಮ ವಿವಾಹವಾಗಿದ್ದಾನೆ.

ಊರಿನ‌ಲ್ಲಿ ಮ‌ನೆ ಕ‌ಟ್ಟಿ ಆದ್ಮೇಲೆ ಮ‌ದುವೆ ಅಂತ‌ ನ‌ಮ್ಮಪ್ಪನ‌ ಲೆಕ್ಕಾಚಾರ‌, ಮ‌ನೆ ಶುರು ಮಾಡೋಕಿಂತ‌ ಮುಂಚೆನೇ ಆಫ‌ರ್ಗ‌ಳು ಬ‌ರೋದ‌ಕ್ಕೆ ಶುರುವಾಯ್ತು, ಅಪ್ಪ ಅಮ್ಮ ಮ‌ನೆ ಕ‌ಟ್ಟಿ ಆದ್ಮೇಲೆ ಮ‌ದುವೆ ಅಂತ‌ ಅವ್ರೆಲ್ಲರಿಗೂ ಹೇಳೋದೇ ಆಯ್ತು.

ಸ‌ರಿ ಮ‌ನೆ ಕ‌ಟ್ಟಿ ಆಯ್ತು, ಗೃಹಪ್ರವೇಶನೂ ಆಯ್ತು, ಆ ದಿನ ಬಂದವರಲ್ಲಿ ಒಂದೆರಡು ಜನ (ಅವ್ರು ನಂಗೆ ಅಷ್ಟಾಗಿ ಪರಿಚಯವಿರಲಿಲ್ಲ) ನನ್ನನ್ನು ಏನು ಮಾಡ್ತಿದೀಯಾ, ಯಾವ ಕಂಪನಿ, ಎಲ್ಲಿ ಹೀಗೆಲ್ಲಾ ವಿಚಾರಿಸಿದ್ರು, ನಾನು ಹೀಗೆ ಸುಮ್ನೆ ವಿಚಾರಿಸ್ತಿದ್ದಾರೆ ಅಂತ ಅಂದ್ಕೊಂಡೆ.

ಗೃಹಪ್ರವೇಶ, ಆಯ್ತು..........................

ಸ್ವಲ್ಪ ದಿನ ಆದ್ಮೇಲೆ, ನಮ್ಮ ಊರಿನವರೇ ಒಬ್ರು ಅವ್ರ ಹೆಂಡ್ತಿ ಕಡೆ ಒಂದು ಒಳ್ಳೆ ಕುಟುಂಬ ಇದೆ, ಹುಡುಗಿ ಚೆನ್ನಾಗಿದ್ದಾಳೆ ನೋಡಿ ಅಂದ್ರು. ಸ‌ರಿ, ನ‌ಮ್ಮಪ್ಪ ಅವ್ರಿಗೆ ಹುಡುಗಿ ಜಾತ‌ಕ‌ ಕೊಡೋದ‌ಕ್ಕೆ ಹೇಳಿ ಕುಟುಂಬದ‌ ಬ‌ಗ್ಗೆ ತಿಳಿದುಕೊಳ್ಳೋ ಪ್ರಯ‌ತ್ನ ಶುರು ಮಾಡಿದ್ರು.

ನ‌ನ್ನ ಬ‌ಗ್ಗೆ ತಿಳಿದುಕೊಳ್ಳೋದ‌ಕ್ಕೆ ಹುಡುಗಿ ಕ‌ಡೆಯ‌ವ‌ರು ನ‌ನ್ನ ಕ‌ಸಿನ್ ಮುಖಾಂತ‌ರ‌ ನ‌ನ್ನ ಆಫೀಸ್ ವಿಳಾಸ‌ ಮ‌ತ್ತೆ ನ‌ನ್ನ ಮೊಬೈಲ್ ನಂಬ‌ರ್ ಇಸ್ಕೊಂಡ್ರು. ನೋಡ‌ ಮಾರಾಯ‌, ಅವ್ರು ನಿನ್ನ ಆಫೀಸ್ಗೆ ಬ‌ಂದು ನಿನ್ನನ್ನು ಮಾತಾಡಿಸಬ‌ಹುದು ಕ‌ಣ‌ ಮಾರಾಯ‌ ಅಂತ‌ ನ‌ನ್ನ ಕ‌ಸಿನ್ ಅಂದ‌, ಆಯ್ತು ಕ‌ಣ‌ಪ್ಪ ಹಾಗೆ ಆಗ್ಲಿ ಅಂದೆ.

ಅದಾದ ಮೇಲೆ ನನಗೆ ಪ್ರತಿದಿನನೂ ಯಾರೋ ನನ್ನನ್ನು ಫಾಲೋ ಮಾಡ್ತಿದ್ದಾರೇನೋ ಅನ್ನಿಸೋಕೆ ಶುರುವಾಯ್ತು.
ಒಂದಿನ, ನನ್ನ ಆಫೀಸಲ್ಲಿ ಆಫೀಸ್ ಬಾಯ್ ಬಂದಿರ್ಲಿಲ್ಲ, ರಿಸಪ್ಶನಿಷ್ಟ್ ಊಟಕ್ಕೆ ಹೋಗಬೇಕಾಗಿತ್ತು ನನ್ನ ಕಲೀಗ್ಸ್ ಎಲ್ಲಾ ಊಟಕ್ಕೆ ಹೋದ ಕಾರಣ ಅನಿವಾರ್ಯವಾಗಿ ನಾನು ಅಲ್ಲಿ ಕೂರಬೇಕಾಯ್ತು, ಆಗ ನಮ್ಮ ಕಸಿನ್ ಗೆ ಫೋನ್ ಮಾಡಿ ಅಕಸ್ಮಾತ್ ಈಗೇನಾದ್ರೂ ಹುಡುಗಿ ಕಡೆಯವರು ನನ್ನನ್ನು ನೋಡೋದಕ್ಕೆ ಬಂದ್ರೆ ನೋಡಿದ ತಕ್ಷಣ ರಿಜೆಕ್ಟ್ ಮಾಡ್ತಾರೆ ಕಣೋ ಅಂದೆ, ಅವ್ನು ನಿಂಗ್ಯಾಕೋ ಈ ಪರಿಸ್ಥಿತಿ ಬಂತು ಅಂತ ಹೇಳಿ ಕಿತ್ಕೊಂಡು ನಗೋಕೆ ಶುರು ಮಾಡಿದ.

ನ‌ಮ್ಮ ಅಮ್ಮನೂ ಫೋನ್ ಮಾಡಿ ಏನ‌ ಮಾರಾಯ‌, ಫೋನ್ ಎತ್ತಿ ಎತ್ತಿ ಸಾಕಾಗಿ ಹೋಗಿದೆ ನೀನು ಬಾರೀ ಕ‌ಷ್ಟ ಕೊಡ್ತಾ (ತಮಾಷೆಗೆ) ಇದೀಯಾ ಅಂದ್ರು, ಏನು ಮಾಡೋದ‌ಮ್ಮ ನಿಮ್ಮ ಮ‌ಗ‌ ಅಲ್ವ, ನಿಮ್ಮ ಕ‌ರ್ತ‌ವ್ಯ ಮಾಡ್ಬೇಕು ಅಂದೆ. ಎಲ್ಲೋ ದೂರ‌ದ‌ಲ್ಲಿದ್ದ ನ‌ಮ್ಮಪ್ಪ ನಾನು ಮಾತಾಡ್ತಿದೀನಿ ಅನ್ನೋದು ತಿಳಿದುಕೊಂಡು ಅವ್ನಿಗೆ ಒಂದು 4-5 ಲ‌ಕ್ಷ ರೆಡಿ ಮಾಡಿಕೊಂಡಿರೋದ‌ಕ್ಕೆ ಹೇಳಿರೋದು ಅಂತ‌ ಹೇಳಿದ್ರು, ನಾನು ಅದ್ಕೆ ಅಮ್ಮ, ಸಾಮುಹಿಕ‌ ವಿವಾಹ‌ದ‌ಲ್ಲಿ ನಾನೂ ಒಬ್ಬ ಆಗ್ತೀನಿ ಬಿಡು ಅಂದೆ, ಯಾಕೆ ಧ‌ರ್ಮ‌ಸ್ಥಳ‌ಕ್ಕೆ ಹೋಗಿ ಆಗ್ಬಿಡು ಆದ್ರೆ ನಾವು ತೋರ್ಸಿದ‌ ಹುಡುಗಿನ‌ಂತೂ ಕ‌ಳ್ಸಲ್ಲ ಅಂದ್ರು!!

ಅತ್ತೆಗೆ ಫೋನ್ ಮಾಡಿದ್ದೆ, ಹಿಂಗೆ ಈ ವಿಚಾರ ಮಾತಾಡ್ತಿದ್ದೆ, ಅತ್ತೆ ಇದ್ದವರು ಹುಡುಗಿ 5.7 ಇಂಚು ಅಂತೆ ಕಣೋ ಅಂದ್ರು. ಅತ್ತೆ 1 ಇಂಚು ಜಾಸ್ತಿಯಾಯ್ತಲ್ಲ ಅಂದೆ, 1- 2 ಇಂಚು ಏನು ವ್ಯತ್ಯಾಸ ಆಗಲ್ಲ ಹುಡುಗಿ ಒಳ್ಳೆಯವಳಿದ್ದು ಚೆನ್ನಾಗಿದ್ರೆ ಅಂತ ಅಂದ್ರು, ಆಗಲಿ ಅಂದೆ.

ನಿನ್ನೆ ಅಪ್ಪ ಫೋನ್ ಮಾಡಿ ಒಂದು ಆಫರ್ ಬಂದಿದೆ M.L.A ಮಗಳು ಅಂದ್ರು, ರಾಜಕೀಯ ಅಂದ್ರೆ ನೂರು ಮಾರು ದೂರ ಹೋಗೋ ನಾನು....ಏನಪ್ಪ ಇದು, ಬೇರೆ ಯಾರನ್ನಾದ್ರೂ ನೋಡಿ ರಾಜಕೀಯದವರೆಲ್ಲಾ ಬೇಡ ಅಂದೆ.

------------------------------------------------------------------------------------------------------------------------------------------------
ಅಬ್ಬಾ, ಇದೆಕ್ಕೆಲ್ಲಾ ಪೂರ್ಣ ವಿರಾಮ ಇಡೋದಕ್ಕೆ ಇನ್ನೂ ಎಷ್ಟು ದಿನ ಕಾಯ್ಬೇಕೋ?? ಇನ್ನು 4 5 ತಿಂಗ್ಳಿಗೇ ಇಷ್ಟು ಕ‌ಥೆಗ‌ಳು....ಮುಂದೆ ಮುಂದೆ ಹೋದ್ರೆ ಇನ್ನೆಷ್ಟೋ??

ಎಲ್ಲಾ ಸೆಟ್ ಆದ್ರೆ ನೀವೆಲ್ಲಾ ಖಂಡಿತ ಬರ್ಬೇಕು ಮದುವೆಗೆ....

Rating
No votes yet

Comments