ಮಗನಿಗೊಂದು ಬುದ್ದಿಮಾತು

ಮಗನಿಗೊಂದು ಬುದ್ದಿಮಾತು

Polonius advice to Laertes -- ಶೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕದಿಂದ ಆಯ್ದದ್ದು. ವಿಶ್ವ ತಂದೆಯರ ದಿನಕ್ಕೆ ನನ್ನ ಈ ಕಾಣಿಕೆ.

ಮನದ ಮಾತುಗಳು ಇರಲಿ ಮೌನದಲಿ.
ಗುರಿಯಿರದೆ ಚಿಂತನೆಗಳು ಕೃತಿಯಾಗದಿರಲಿ.
ಒಂದಾಗು ಎಲ್ಲರಲಿ, ಅತಿರೇಕವಿರದಿರಲಿ.
ಒರೆ ಹಚ್ಚಿ ನೋಡಲುಬೇಕು ,
ಗೆಳೆತನವ ಬೆಳೆಸುವ ಮುನ್ನ
ಹೃದಯ ಬಂಧಿಸಿರಬೇಕು ,
ಸ್ನೇಹ ಸಂಕೋಲೆಗಳಲಿ,ಬೇಕಿಲ್ಲ ಚಿನ್ನ.
ಸಿಕ್ಕಸಿಕ್ಕವರೆಲ್ಲ ಸ್ನೇಹಕರ್ ಹರೇನಲ್ಲ,
ಎಲ್ಲರನು ನೀನನಸುರಿಸಬೇಕಿಲ್ಲ.
ಬೇಡ ಕಾದಾಟ ಯಾರೊಡನೆಯೂ,
ಕಾದಿದರೆ ಅರಿಗಿರಲಿ ನಿನ್ನರಿವು ಕಾಳಗದಮುನ್ನ.
ಸಹನೆಯಲಿ ನೀ ಕೇಳು ಸರ್ವರ ನುಡಿಯ.
ನುಡಿದಾರೆ ನುಡಿ ಯೋಗ್ಯರಲಿ ಮುತ್ತಿನ ಹಾರ
ನಡತೆಯಲಿ ಸಿರಿತನವಿರಲಿ,
ಉಡುಗೆ ತೊಡುಗೆಗಳಿಗೂ ಉಂಟು ಬೆಲೆಯು,
ಲೆಕ್ಕದಾ ಅರಿವಿರಲಿ , ಅಳತೆ ಮೀರದೆ ಇರಲಿ.
ತರದು ಘನತೆಯ ಬರಿಯಬ್ಬರವು,
ಸಾಲದ ಹಂಗಿಲ್ಲದಿರಲಿ ,
ತರುವುದೇ ಬೇಡ,ಇನ್ನು ಕೊಡುವುದೇಕೆ?
ನೀನು ಸಾಲಿಗನಾದರೆ ಕಳೆಯಬಹುದು
ಕೆಳೆಯನನೂ ಸಾಲದ ಜೊತೆಗೆ
ಸಾಲದ ಹೊರೆ ನಿನಗಾದರೆ ,
ನಿನಗಿರದು ಆತ್ಮಗೌರವದ ರಕ್ಷೆ
ಎಲ್ಲಕ್ಕೂ ಮಿಗಿಲಾಗಿ ,
ಜೀವನವಿರಲಿ ಆತ್ಮಸಾಕ್ಷಿಗನುಗುಣವಾಗಿ
ಭಯವಿರದು ದೇವನಿಗೆ ಉತ್ತರಿಸಲು,
ಮನುಜರ ಲೆಕ್ಕವಿನ್ನೇನು..?
ಹೋಗಿ ಬಾ ಮಗು.. ಕಾಯಲಿ ನಿನ್ನನೀ ಹರಕೆಯು.

Rating
No votes yet

Comments