ಮೈಸೂರು ಮಲ್ಲಿಗೆ----ಕೆಲ ಪ್ರಶ್ನೆಗಳು

ಮೈಸೂರು ಮಲ್ಲಿಗೆ----ಕೆಲ ಪ್ರಶ್ನೆಗಳು

ಬಹಳ ಹಿಂದೆ ನೋಡಿದ ಸಿನೇಮ "ನಮಕ್ ಹರಾಮ್.." ಅದರಲ್ಲಿ ರಜಾ ಮುರಾದ ಓರ್ವ ಕವಿ..ಪ್ರತಿಭಾವಂತ ನಿಜ ಆದರೂ ದುರ್ದೈವಿ..ತನ್ನ ಕೇರಿಯ ಹುಡುಗರಿಗೆ ಗಾಳಿಪಟ ಮಾಡಿಕೊಡುತ್ತಿರುತ್ತಾನೆ...ಆತ ಸಾಯುವ
ಸನ್ನಿವೇಶ --ರಾಜೇಶಖನ್ನಾ ಹಾಡುತ್ತಾನೆ .ಕಿಶೋರ್ ಹಾಡಿದ ಒಂದು ಅದ್ಭುತ ಹಾಡು "ಮೈ ಶಾಯರ್ ಬದನಾಮ್..."ಹಾಡು
ಎಂತಹವರನ್ನೂ ಕರಗಿಸುತ್ತದೆ..ಆನಂದ ಬಕ್ಷಿ ಬರೆದ ಸಾಲು..."ಮೇರೆ ಘರ್ ಮೆ ತುಮಕೊ ಏಕ್ ಸಾಮಾನ್ ಮಿಲೇಗಿ ದೀವಾನೆ
ಶಾಯರ್ ಕಿ ಏಕ್ ದೀವಾನ್ ಮಿಲೇಗಿ ಔರ್ ಏಕ್ ಚೀಜ್ ಮಿಲೇಗಿ ಟೂಟಾ ಖಾಲಿ ಜಾಮ್..." ಎಂತಹ ಅದ್ಭುತ ಸಾಲು...ಸ್ವತಃ
ಆನಂದ ಬಕ್ಷಿ ಸೇನೆಯಿಂದ ನಿವೃತ್ತ ಜನಪ್ರಿಯ ಲೇಖಕ..ವ್ಯವಹಾರಿಕವಾಗಿ ಚಾಣಾಕ್ಷ....ಆದರೆ ತನ್ನ ಸಹವರ್ತಿಗಳ ಅಳಲು ತೋಡಿಕೊಂಡ ...ಗೀತೆ ಅಮರವಾಯಿತು...

ಮೇಲಿನ ಪೀಠಿಕೆ ಯಾಕೆ ಹಾಗೂ ಅದಕ್ಕೂ ಮೈಸೂರು ಮಲ್ಲಿಗೆಗೆ ಏನು ಸಂಬಂಧ ಪ್ರಶ್ನೆ ಬರುವುದು ಸಹಜೀಕವೆ... ಮೈಸೂರು ಮಲ್ಲಿಗೆ ಮೊನ್ನೆ ರಂಗಶಂಕರದಲ್ಲಿ ನೋಡಿದಾಗಿಂದ ಈ ವಿಷಯ ತಲೆಯಲ್ಲಿ ಕೊರ‍ೆಯುತ್ತಿತ್ತು....
ನಮ್ಮ ಕನ್ನಡದಲ್ಲಿ ಅನೇಕ ಹಿರಿಯ ಕವಿಗಳಿದ್ದಾರೆ ತಮ್ಮ ಛಾಪು ಒತ್ತಿ ಹೋಗಿದ್ದಾರೆ...ಪುಸ್ತಕ ತಲೆ ಮೇಲೆ ಹೊತ್ತು ತಿರುಗಿದ
ಶ್ರೀ ಗಳಗನಾಥರಿಂದ ಹಿಡಿದು ಈಗಿನ ಏಸಿ ಬುಕ್ ಸ್ಟೋರ್ ವರೆಗೂ ಕನ್ನಡ ಪುಸ್ತಕದ ಇತಿಹಾಸ ಹರಡಿದೆ... ಪ್ರತಿವಾರ ಸಾಪ್ತಾಹಿಕದಲ್ಲಿ ಹೊಸ ಲೇಖಕರ ಸುಗ್ಗಿ ನೋಡ್ತೇವೆ....ಆ ತೆನೆಗಳಲ್ಲಿ ಕಾಳೆಷ್ಟು...ಜೊಳ್ಳೆಷ್ಟು ಗೊತ್ತಿಲ್ಲ. ಯಾಕೆ ನಮ್ಮ ಬಹಳ
ಪ್ರಸಿದ್ದ ಕವಿಗಳು ಒಂದು ರೀತಿಯ "ಬಡತನ" ಅನುಭವಿಸಿದರು...? ಅದು ನರಸಿಂಹಸ್ವಾಮಿ ಆಗಿರಲಿ, ಕರೀಮ್ ಖಾನ್ ಆಗಿರಲಿ
ಅಥವಾ ಬೇಂದ್ರೆ ಯವರಾಗಲಿ ನಮ್ಮ ವ್ಯವಹಾರಿಕ ಜಗತ್ತಿನ ತಾಳಕ್ಕೆ ಹೆಜ್ಜೆ ಹಾಕದೇ ಸೋತವರು.
ಮೈಸೂರು ಮಲ್ಲಿಗೆಯ
ಹಾಡು ನಮ್ಮ ಹಳೆ ಪೀಳಿಗೆ ಹಾಡುತ್ತಿತ್ತು ...ನಾವು ಹಾಡುತ್ತಿದ್ದೇವೆ ನನ್ನ ಮಗಳು ಹಾಡುತ್ತಾಳೆ ಮುಂದೆ ಅವಳ ಮಗಳೂ...!
ಒಂಥರಾ ಸಾವೇ ಇಲ್ಲ..ಅದಕ್ಕೆ...ಆದರೆ ಅದ ಬರೆದ ಕವಿ ಮಾತ್ರ ನಿತ್ಯವೂ ಯುಧ್ದ ಮಾಡಿದ....... ವ್ಯವಹಾರ ಗೊತ್ತಿಲ್ಲದ ಕವಿಗೆ
ಕವಿತೆಗಳೆ ಉಸಿರು...ಎಂಥಾ ಕವಿತೆ ಅವು...."ನಿನ್ನ ಪ್ರೇಮದ ಪರಿಯ ನಾ ಅರಿಯೆ ಕನಕಾಂಗಿ....","ಹಕ್ಕಿಯ ಹಾಡಿಗೆ ತಲೆ ದೂಗುವ ಹೂ ನಾನಾಗುವ ಆಸೆ"," ಅಕ್ಕಿ ಆರಿಸುವಾಗ ..."ಒಂದೊಂದು ಗೀತೆ ಅದ್ಭುತ....ಆದರೂ ಕವಿ ಬಡವ ಒಲವು
ಮಾತ್ರ ಅವ ಸಂಪಾದಿಸಿದ್ದು...! ಬೇರೆ ಯಾದ ಮಗ ಮನೆಗೆ ಬಂದಿದ್ದಾನೆ ತನ್ನ ತಂದೆ ಬರೆದ ಕವಿತೆಗಳ ಪೇಟೆಂಟ್ ಅನ್ನು ಅಲ್ಪಮೊತ್ತಕ್ಕೆ ಮಾರಿದ ಬಗ್ಗೆ ಅವನಿಗೆ ಬೇಸರ ಇದೆ..ಆದರೆ ಕವಿ ಅಪ್ಪನದು ಅದೇ ಎಂದಿನ ನಿರ್ಲಿಪ್ತತೆ...ಬದಲಾಗಿ ಮೊಮ್ಮಗನಿಗೆ ಒಂದು ಜೋಗುಳ ಹಾಡು ಬರೆದಿದ್ದಾಗಿ ಹೇಳುತ್ತಾರೆ..."ಅತ್ತಿತ್ತ ನೋಡದಿರು ..ಎದ್ದು ಹೊರಳಾಡದಿರು..."ಮಗ
ಹತಾಶೆಗೋ ನಿರಾಶೆಗೋ ಗೊತ್ತಿಲ್ಲ ಮೊಣಕಾಲೂರಿ ಅಳುತ್ತಾನೆ....ಮೈಸೂರು ಮಲ್ಲಿಗೆ ನಾಟಕದಲ್ಲಿ ಇಂತಹ ಅನೇಕ
ಮನಕಲಕುವ ದೃಶ್ಯಗಳಿವೆ. ಇನ್ನು ನಾಟಕದ ಪ್ರಧಾನ ಪಾತ್ರಧಾರಿ--ಬಳೆಗಾರ ಚೆನ್ನಯ್ಯ ಅವನೇ ಹೇಳುವಹಾಗೆ ಅವನಿಗೆ
ವಯಸ್ಸೆಷ್ಟು ಅವನಿಗೇ ಗೊತ್ತಿಲ್ಲ....ನಿನ್ನೆಯ ಸುಖ ನೋಡಿದ ,ಇಂದಿನ ಬಗ್ಗೆ ಮರುಕ ಪಡುವ ,ಅಂತೆಯೇ ನಾಳಿನ ಬಗ್ಗೆ
ಅನೇಕ ಕನಸಿರುವವ ಈತ ಒಂದು ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಣುತ್ತಾನೆ. ಅವನಿಗೆ ಸೀತಮ್ಮ, , ಸಾಹೇಬ್ರು ಅಚ್ಚು ಮೆಚ್ಚು ಅವರ ಸಂಸಾರದ ಏರಿಳಿತ ಹತ್ತಿರದಿಂದ ನೋಡಿದವ ಅವ..ಅವರ ಬಾಳು ಹಸನಾಗಿರಲಿ ಎಂದು ಆಶಿಸುವವ...
ಆಗಾಗ ಬುದ್ಧಿನೂ ಹೇಳುವವ. ಸೀತಮ್ಮಳ ಮರಿಮೊಮ್ಮಗಳು ಕೈಯಲ್ಲಿ ಬಳೆ ಹಾಕದಿದ್ದುದಕ್ಕೆ ಬೇಸರ ಪಟ್ಟವ ಅಂಗಳದಲ್ಲಿ
ಬೆಳೆದ ಮಲ್ಲಿಗೆ ಬಳ್ಳಿ ಕಡಿದುದಕ್ಕೆ ಹಲಬಿದವ. ಆದರೂ ಕೊನೆಯಲ್ಲಿ ಆ ಮರಿಮೊಮ್ಮಗಳಿಗೆ ಬಳೆ ತೊಡಿಸಿ ಅವರ ಅಂಗಳದಲ್ಲಿ ನೆಡಲು ಮಲ್ಲಿಗೆ ಬಳ್ಳಿ ಉಡುಗೊರೆ ಕೊಡುತ್ತಾನೆ.... ಈ ನಾಟಕದ ಆಶಯವೂ ಅದೇ .ನಾಟಕದಕೊನೆಯಲ್ಲಿ
ಗಣ್ಯರಿಗೆ ಸನ್ಮಾನರೂಪದಲ್ಲಿ ಮಲ್ಲಿಗೆ ಬಳ್ಳಿ ಕೊಡೋದು ಎಂತಹ ಒಳ್ಳೇ ಸಂಪ್ರದಾಯ.ಕೊನೆಯಲ್ಲಿ ನಾಟಕದ ನಿರ್ದೇಶಕ
ಶ್ರೀ ರಾಜಾರಾಂ ಅವರೂ ಬಾಗಿಲಲ್ಲಿ ನಿಂತು ಪ್ರೇಕ್ಷಕರನ್ನು ಬೀಳ್ಕೊಟ್ಟ ರೀತಿ ನಿಜಕ್ಕೂ ಅಪ್ಯಾಯಮಾನ.....!
ಇದೇ ಮೈಸೂರು ಮಲ್ಲಿಗೆ ಆಧರಿಸಿ ಸಿನೇಮ ಸಹ ಬಂದಿತ್ತು ಗೌರಿಶಂಕರ್ ರ ಅದ್ಭುತ ಛಾಯಾಗ್ರಹಣ...,ಮುದ್ದಾಗಿ ಕಾಣುವ
ಸುಧಾರಾಣಿ , ಅಶ್ವಥ ಸಂಗೀತ ಎಲ್ಲ ಇತ್ತು ಆದರೆ ನಾಟಕ ನೋಡಿದ ಮೇಲೆ ಸಿನೇಮ ಸಪ್ಪೆ ಅನಿಸಿತು.

ಆದರೆ ನಾಟಕ ನೋಡಿದಮೇಲೆ ತಲೆಯಲ್ಲಿ ಹುಳ ಬಿಟ್ಟುಕೊಂಡ ಹಾಗಾಗಿದೆ. "ನೋವಿಲ್ಲದಿದ್ರೆ ಕವಿತೆ
ಹೇಗೆ ಹುಟ್ಟುತ್ತೆ..." ಪ್ರಮುಖಪಾತ್ರಧಾರಿ ಹೇಳಿದ ಮಾತು "ಬೆಂದ್ರ ಮಾತ್ರ ಬೇಂದ್ರೆ ಆಗತಾರ " ನೆನಪಿಗೆ ತರುತ್ತದೆ.
ನೋವು ಇದೆ ಅದು ಸರ್ವ ವ್ಯಾಪಿನೂ ಹೌದು ಆದರೆ ಲೋಕಎಲ್ಲ ಅವರು ಬರೆದ ಹಾಡು ಹಾಡುತ್ತದೆ ಸಂತೋಷ ಪಡುತ್ತದೆ
ಆದರೆ ಬರೆದ ಕವಿ ನೋಡಿ " ಬಂಗಾರ ವಿಲ್ಲದ ಬೆರಳು..." ಹಾಗೂ " ಹೊಳೆಹೊಳೆವ ಹಂಗ್ ಕಣ್ಣಿರುವ ಹೇಳ್ ನಿನ್ನವೇನು ಈ
ಕಣ್ಣು...." ಎಂದು ಪರದಾಡುತ್ತಿದ್ದಾನೆ..ಯಾಕೆ ಈ ವಿಪರ್ಯಾಸ...ಜಗತ್ತಿಗೆ ನಲಿವು ಹಂಚಿ ತಾ ಮಾತ್ರ ನೋವು ಯಾಕೆ ಉಣ್ಣಬೇಕು? ಯಾಕೆ ಕರೀಂಖಾನ್ , ಬಿಸ್ಮಿಲ್ಲಾ ಖಾನ್ ಕೊನೆಯ ದಿನಗಳಲ್ಲಿ ಈ ಪರಿ ಗೋಳಾಡಿದರು...? ಪ್ರತಿಭೆಗೆ ಅವರಲ್ಲಿ ಬರವಿರಲಿಲ್ಲ ಆದರೆ ನೋಡುವವರ ಅಳತೆಗೆ ಯಾಕೋ ಅವರ ಪ್ರತಿಭೆ ಅಳತೆಗೆ ಸಿಗಲೇ ಇಲ್ಲ. ನಮ್ಮ ಕನ್ನಡ
ಸಾಹಿತ್ಯದಲ್ಲಂತೂ ಅನೇಕ ಪ್ರಭಾವವಲಯಗಳಿವೆ ಅದು ಪ್ರಾಂತೀಯತೆ ಇರಬಹುದು ಅಥವಾ ಜಾತಿವಾದ ಇರಬಹುದು
ಏಳು ಜ್ನಾನಪೀಠ ನಮ್ಮದು ನಿಜ ಆದರೆ ಖರೆ ಪ್ರತಿಭೆ ಉಳ್ಳವರು ಅದಕ್ಕೆ ಹೊರತಾಗಿದ್ದಾರೆ. ಕಣವಿ, ಅಡಿಗ ಹೀಗೆ ಪಟ್ಟಿ
ಬೆಳೆಸಬಹುದು....ನೋವಾಗುತ್ತದೆ ನನಗೆ.ನಮ್ಮ ಕನ್ನಡ ಜನರ ಸಾಂಸ್ಕೃತಿಕ ಬಡತನ ಕಂಡು..!
ಇನ್ನು ಮುಂದಾದರೂ ಒಳ್ಳೆಯದಾದೀತು ಎಂಬ ಆಶಯ ಇದೆ....

Rating
No votes yet

Comments