ಆಂತರ್ಯವನ್ನು ಬೆತ್ತಲಾಗಿಸುವ ಆತ್ಮಕತೆಗಳು!

ಆಂತರ್ಯವನ್ನು ಬೆತ್ತಲಾಗಿಸುವ ಆತ್ಮಕತೆಗಳು!

ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು
ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ
ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ?
ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ ಬರೆಯುತ್ತಿರುವವರಿಗೆ ತಮ್ಮ ಬಗ್ಗೆ
ಎಲ್ಲವನ್ನೂ ಹೇಳಿಕೊಳ್ಳಲೇಬೇಕೆಂಬ ಉಮೇದು ಉಂಟಾಗುತ್ತದೆ ಹಾಗು ಹೇಳದೆ ಹೋದರೆ ಅದೊಂದು
ತರಹದ ಚಡಪಡಿಕೆ ಮತ್ತು ಕೃತಿ ಅಪೂರ್ಣವೆಂಬ ಭಾವ ಮತ್ತೆ ಮತ್ತೆ ಕಾಡುತ್ತದೆ ಎಂಬುದು
ಆತ್ಮಕತೆಗಳ ಓದಿನಲ್ಲಿ ನಾನು ಕಂಡುಕೊಂಡ ಸತ್ಯ. ಒಬ್ಬ ವ್ಯಕ್ತಿಯ ಜೀವನದ ಘಟನೆಗಳು,
ಅದಕ್ಕೆ ಆತನು ಸ್ಪಂದಿಸಿದ ರೀತಿ, ಆ ಕ್ಷಣದಲ್ಲಿ ಆತನಿಗೆ ಕಾಡಿದ ಯೋಚನೆಗಳು
ಎಲ್ಲವನ್ನು ಪ್ರಾಮಾಣಿಕವಾಗಿ ಬರಹದಲ್ಲಿ ಮೂಡಿಸುವುದು ಅಷ್ಟು ಸುಲಭವಲ್ಲ ಅದಕ್ಕೂ
ಕಲೆಗಾರಿಕೆ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮುಚ್ಚುಮರೆಯಿಲ್ಲದೆ ಎಲ್ಲವನ್ನು
ಬಿಚ್ಚಿಡುವ ಮನಸಿರಬೇಕು. ಸಾರ್ವಜನಿಕವಾಗಿ ಬೆತ್ತಲಾಗುವ ಧೈರ್ಯವಿರಬೇಕು. ಬಹುಶಃ
ಇದರಿಂದಾಗಿಯೇ ನನಗೆ ಆತ್ಮಕತೆಗಳು ಹೆಚ್ಚು ಹಿಡಿಸುತ್ತಿವೆ. ಈ ಸರಣಿಯಲ್ಲಿ ನಾನು ಓದಿದ
ಆತ್ಮಕತೆಗಳ ಬಗ್ಗೆ ಬರೆಯಬೇಕೆಂದಿದ್ದೇನೆ. ಎಂದಿನಂತೆ ಓದುವ ಕಷ್ಟ ನಿಮ್ಮದು!

ಲಂಕೇಶರ ’ಅಕ್ಕ’ ಓದುವುದಕ್ಕೆ ತುಂಬ ಹಿಂದೆ ದೇವೀರಿ ಸಿನೆಮಾ ನೋಡಿದ್ದೆ. ಅದಾಗ ಅಷ್ಟು
ಹಿಡಿಸಿರಲಿಲ್ಲ. ’ಅಕ್ಕ’ ಕಾದಂಬರಿ ಓದುವಾಗ ಅದರಲ್ಲಿನ ಕ್ಯಾತನ ಪಾತ್ರ ತುಂಬಾ
ಸೆಳೆದಿತ್ತು. ಲೇಖಕನು ಅದ್ಯಾವ ಮನಸ್ಥಿತಿಯಲ್ಲಿ ಈ ಪಾತ್ರ ಸೃಷ್ಟಿಸಿರಬಹುದೆಂದು
ತಲೆಕೆಡಿಸಿಕೊಂಡು ಸುಮ್ಮನಾಗಿದ್ದೆ. ಲಂಕೇಶರು ನನಗೆ ಯಾವತ್ತು ಅತಿ ದೊಡ್ಡ
ವಿಚಿತ್ರವೆನಿಸಿದ್ದಾರೆ. ಅವರ ಮುಸ್ಸಂಜೆಯ ಕಥಾಪ್ರಸಂಗದ ಪಾತ್ರಗಳು ನನ್ನನ್ನು
ಎಡಬಿಡದೇ ಕಾಡಿವೆ. ಏನನ್ನು ಸಮರ್ಥಿಸದ, ತೀರ್ಮಾನಗಳಿಲ್ಲದ, ಪ್ರೀತಿ-ಪ್ರೇಮ ಮುಂತಾದ
ಸಿನಿಕ ಭಾವನೆಗಳಿಗೆ ಒಂದು ಚೌಕಟ್ಟನ್ನು ಹಾಕಿ ಎಲ್ಲವೂ ವಾಸ್ತವಿಕವಾಗಿ ಕಾಮಕ್ಕೆ
ಸಂಬಂಧಿಸಿರುವಂತದ್ದಾಗಿರುತ್ತವೆ ಅದನ್ನು ಮೀರಿದ್ದು ಬೇರೇನು ಇಲ್ಲವೆಂಬಂತೆ
ನಿರೂಪಿಸಿರುವ ಕಾದಂಬರಿ ಮುಸ್ಸಂಜೆಯ ಕಥಾಪ್ರಸಂಗ. ಇಂತಹ ಭಾವನೆಯ ಅರ್ಥವಿಷ್ಟೇ,
ಇದಕ್ಕೆ ಮೀರಿದ್ದೆಲ್ಲ ನಮ್ಮ ಕಲ್ಪನೆಯಲ್ಲಿ ಕಟ್ಟಿಕೊಳ್ಳುವ ರೆಕ್ಕೆಪುಕ್ಕ,
ಆಂತರ್ಯದಲ್ಲಿ ಅದರ ಉದ್ದೇಶವು ತೋರಿಕೆಗೆ ಕಾಣುವಷ್ಟು ಆಳವಾಗಿರುವುದಿಲ್ಲ ಎಂಬ ಗಂಭೀರ
ವಿಷಯಗಳನ್ನು ಅವರ ಪಾತ್ರಗಳ ಮೂಲಕ ಬಿಂಬಿಸಿದ್ದಾರೆ. ಇನ್ನು ನೀಲು ಕವಿತೆಗಳ ಬಗ್ಗೆ
ಹೇಳುವ ಹಾಗೇ ಇಲ್ಲ. ಪ್ರತೀ ಕವಿತೆಯೂ ತನ್ನ ಶಾರ್ಪ್ ನೆಸ್ ನಿಂದಲೇ
ಮನಸೂರೆಗೊಂಡುಬಿಡುತ್ತವೆ. ಕಾದಂಬರಿ, ಕವಿತೆ ಎರಡರಲ್ಲು ಇಣುಕುವ ಗತ್ತಿನ ಅವರ
ಬರವಣಿಗೆಯ ಶೈಲಿ ಇಷ್ಟವಾಯ್ತು. ಹೀಗೆ ಅವರ ಬರಹಗಳನ್ನು ಓದಿ ಬೆರಗಾಗುತ್ತಿದ್ದಾಗಲೇ
ನನ್ನ ಕೈಗೆ ಸಿಕ್ಕಿದ್ದು ’ಹುಳಿಮಾವಿನ ಮರ’. ಇದು ಲಂಕೇಶರ ಆತ್ಮ ಕಥನ. ಹೆಸರೇ
ವಿಶಿಷ್ಟವಾಗಿದೆ. ಅವರ ಚಿಕ್ಕಪ್ಪನ ಗದ್ದೆಯಲ್ಲಿನ ಮಾವಿನ ಮರದ ಬಗ್ಗೆ ಚಿಕ್ಕಂದಿನಿಂದ
ಆಕರ್ಷಿತನಾಗಿದ್ದರಿಂದ ಆ ಹೆಸರಿಟ್ಟೆ ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಮತ್ತು
ಪುಸ್ತಕವನ್ನು ’ವಾಟೆ’, ’ಸಸಿ’ , ’ಗಿಡ’, ’ಮರ’ ಎಂದು ವಿಂಗಡಿಸುತ್ತಾರೆ.

ಓದುತ್ತಾ ಹೋದಂತೆ ಲಂಕೇಶ್ ಗಿಡದಿಂದ ಮರವಾಗಿ ನಮ್ಮಲ್ಲಿ ಬೆಳೆಯತೊಡಗುತ್ತಾರೆ.
ಮರೆಮಾಚಬಹುದಾದಂತಹ ವಿಷಯಗಳನ್ನೂ ಕೂಡ ಎಳ್ಳಷ್ಟು ಮುಜುಗರವಿಲ್ಲದೇ ಬಿಚ್ಚಿಡುವ ಅವರ
ರೀತಿ, ಸಂಬಂಧಗಳನ್ನೆಲ್ಲ ಒಂದು ಪರದೆ ಇಟ್ಟುಕೊಂಡೇ ನೋಡಿರುವ ಅವರ ಪ್ರವೃತ್ತಿ, ಅವರ
ಸ್ವಾಭಿಮಾನ, ಬೇರೆಯವರ ಬಗ್ಗೆ ಅವರಿಗಿದ್ದ ಕೀಳರಿಮೆ, ಅವರ ಜಾಣತನದ ಬಗ್ಗೆ ಅವರಿಗಿದ್ದ
ಅಹಂಕಾರ, ಉಹೂ ಎಲ್ಲೂ ಮರೆಮಾಚುವ ಪ್ರಯತ್ನವನ್ನೇ ಮಾಡಿಲ್ಲ. ಇದ್ದದ್ದನ್ನು ಇದ್ದ ಹಾಗೇ
ಓದಿಕೊಂಡುಬಿಡಿ ನಾನು ಇಷ್ಟೇ ಎಂಬ ದರ್ಪ. ಆ ದರ್ಪದಿಂದಲೇ ಇನ್ನಷ್ಟು ಹತ್ತಿರವಾಗುವ
ಲಂಕೇಶ್. ಅವರ ಬಗ್ಗೆ ಅಷ್ಟೇ ಅಲ್ಲ, ಅವರ ಸಂಪರ್ಕದಲ್ಲಿದ್ದ ಇನ್ನು ಎಷ್ಟೋ ಜನರ ಬಗ್ಗೆ
ಬೆಚ್ಚಿ ಬೀಳುವಂತ, ತಮಾಶೆ ಎನಿಸುವಂತಹ ಘಟನೆಗಳನ್ನು ದಾಖಲಿಸುತ್ತಾ ಹೋಗಿದ್ದಾರೆ.

’ಅನುರೂಪ’, ’ಎಲ್ಲಿಂದಲೋ ಬಂದವರು’ ಮತ್ತು ’ಪಲ್ಲವಿ’ ಚಿತ್ರಗಳ ತಯಾರಿಕೆಯಲ್ಲಿ ಅವರು
ಪಟ್ಟ ಪಾಡು. ಸೆಂಟ್ರಲ್ ಕಾಲೇಜಿನ ಅಧ್ಯಾಪಕ ವೃತ್ತಿ. ಲಂಕೇಶ್ ಪತ್ರಿಕೆ
ಶುರುಮಾಡಿದ್ದು. ಬಿಡಲಾಗದ ಅವರ ಕುದುರೆ ರೇಸಿನ ಚಟ. ಪ್ರತಿ ಶುಕ್ರವಾರ ರಾತ್ರಿ
ಗೆಳೆಯರೊಂದಿಗೆ ಆಡುತ್ತಿದ್ದ ಕಾರ್ಡ್ಸ್. ದಿನವೊಂದಕ್ಕೆ ನಲವತ್ತಕ್ಕೂ ಹೆಚ್ಚು
ಸುಡುತ್ತಿದ್ದ ಸಿಗರೇಟು, ಆರೋಗ್ಯ ಕೈಕೊಡುವವರೆಗೂ ಕೈಹಿಡಿದಿದ್ದ ಕುಡಿತ, ತಮ್ಮ
ನೆಗೆಟೀವ್ ಗುಣಗಳನ್ನೂ ಪಟ್ಟಿ ಮಾಡುವುದರಲ್ಲಿ ಬೇಸರಿಸಿಕೊಂಡಿಲ್ಲ. ಚಟಗಳಿಂದಾಗಿಯೇ
ಅವರ ಕಣ್ಣೊಂದು ಕಳೆದುಕೊಳ್ಳಬೇಕಾಗಿ ಬಂದಿದ್ದು. ತೀರ ಮಿದುಳಿನ ಭಾಗಕ್ಕೆ ಲಕ್ವಾ
ಹೊಡೆದು, ಎಡಗಾಲು, ಎಡಗೈ ಶಕ್ತಿಹೀವಾಗಿ ತಾನಿನ್ನು ಬದುಕಲಾರೆ ಅಥವಾ ಬದುಕಿದರೂ
ಮೊದಲಿನಷ್ಟು ಚಟುವಟಿಕೆಯಿಂದರಲಾರೆ ಎಂದೆನಿಸಿದಾಗ ಅವರು ತಮ್ಮ ಆತ್ಮಕತೆಯನ್ನು
ಬರೆಯಬೇಕೆಂದುಕೊಂಡದ್ದರವರೆಗಿನ ವಿವರಗಳೆಲ್ಲವೂ ನಮ್ಮಲ್ಲಿ ಬೇರೂರಿ ಬೆಳೆಯ
ತೊಡಗುತ್ತವೆ. ಅವರ ಕಡೆಯ ಸಾಲುಗಳು ಹೀಗಿವೆ ’ನನ್ನ ಗಾಢ ದುಗುಡದ ವೇಳೆಯಲ್ಲಿ, ಸಾವಿನ
ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ
ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ
ರೀತಿಯೂ ಬದಲಾಯಿತು. ಸಾವು ಇನ್ನುಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ
ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ
ಛಾಯೆ ಅನ್ನಿಸತೊಡಗಿತು’, ಸಾವಿನೆಡೆಗಿನ ಭಯಕ್ಕಿಂತಲೂ ಹೆಚ್ಚಾಗಿ, ಅದರ ಅಸ್ತಿತ್ವ
ಅರಿವಾಗತೊಡಗಿದರಿಂದ ಅವರಲ್ಲುಂಟಾದ ಗೊಂದಲಗಳನ್ನು ಪದಗಳಲ್ಲಿ ಜೋಡಿಸಿಟ್ಟುರುವಂತಿದೆ ಈ
ಸಾಲುಗಳು.

ಒಂದು ಕಡೆ ಲಂಕೇಶ್ ಹೀಗೆ ಕೇಳುತ್ತಾರೆ ’ನೀವು ಈ ಬದುಕಿನಲ್ಲಿ ಯಾವ ಯಾವ
ಆಗುಹೋಗುಗಳಿಗೆ, ಯಾವಯಾವ ವ್ಯಕ್ತಿಗಳಿಗೆ ಕೃತಜ್ಞರಾಗಿರುತ್ತೀರಿ? ಎಂದೋ ಜೊತೆ ಕೂತು
ಸಿಗರೇಟ್ ಸೇದುತ್ತಾ ಕಾಫಿ ಕುಡಿದವರು, ಒಳ್ಳೆಯ ಪುಸ್ತಕ, ಚಿತ್ರ, ಸಂಗೀತದ ಅನುಭವ
ದೊರೆಯುವಂತೆ ಮಾಡಿದವರು, ಪ್ರೀತಿಯಿಂದ ಅಪ್ಪಿಕೊಂಡವರು, ಜೀವದ ಕೆಂಡ ಆರಿ
ಬೂದಿಯಾಗುತ್ತಿದ್ದಾಗ ಕಟ್ಟಿಗೆಯನ್ನು ಹಾಕಿ ಉರಿಸಿದವರು, ನಿಮ್ಮ ಮಿತ್ರರು, ಶತ್ರುಗಳು
ಯಾವುದನ್ನು ಯಾರನ್ನು ನೆನೆಯುತ್ತೀರಿ?’ ಅಷ್ಟೇ ಅಲ್ಲಿಗೆ ಅವರ ಮೌನ. ನಮ್ಮಲ್ಲಿ
ಪ್ರಶ್ನೆಯ ಉತ್ತರದ ತಾಕಲಾಟ ನಡೆಯುತ್ತಿರುವಾಗಲೇ ಅವರು ಗಂಡು ಹೆಣ್ಣಿನ ಸಂಬಂಧದ ಬಗ್ಗೆ
ಹೇಳ ತೊಡಗುತ್ತಾರೆ. ಹೆಣ್ಣುಗಂಡಲ್ಲಿನ ವಾಂಛೆ, ಒಬ್ಬರಿಗೊಬ್ಬರು
ನಿಷ್ಠರಾಗಿರುತ್ತೇವಂಬ ವ್ಯಂಗ್ಯ, ನಿಷ್ಠೆ ಮತ್ತು ವಾಂಛಲ್ಯದೊಂದಿಗಿನ ಕಿತ್ತಾಟದಲ್ಲೇ
ವ್ಯಕ್ತಿಯೊಬ್ಬ ಬದುಕಬೇಕಾದ ಅನಿವಾರ್ಯತೆಯ ಬಗ್ಗೆ ಚರ್ಚಿಸುತ್ತಾರೆ.

'No doubt alcohol, tobacco and so forth are things that a saint must
avoid, but sainthood also a thing that human beings must avoid -
George Orwell' ಎಂದು ಆತ್ಮಕಥನದ ಶುರುವಿನಲ್ಲೇ ಇದೆ, ಇಡೀ ಪುಸ್ತಕ ಓದಾದ ಮೇಲೆ
ಬಹುಶಃ ಲಂಕೇಶರು ತಮ್ಮ ಜೀವನಕ್ಕೆ ಹೊಂದಿಸಿ ಈ ಪದಗಳ ಹುಡುಕಿದ್ದಾರೆನಿಸಿತು.
ಒಟ್ಟಿನಲ್ಲಿ ಸದಾ ನೆನಪಿನಲ್ಲುಳಿಸುವ, ಇದುವರೆಗೂ ಎಲ್ಲೂ ಕಾಣದ ಲಂಕೇಶರನ್ನು ನನಗೆ
ಪರಿಚಯಿಸಿದ್ದು ’ಹುಳಿ ಮಾವಿನ ಮರ’.

Rating
No votes yet

Comments