ವಸಂತಪುರಿ, ಕ್ಯಾಲಿಫೋರ್ನಿಯಾ

ವಸಂತಪುರಿ, ಕ್ಯಾಲಿಫೋರ್ನಿಯಾ

ಇದೇನಪ್ಪ ಅಂತ ಹುಬ್ಬೇರಿಸಬೇಡಿ. ಒರಿಸ್ಸಾದಲ್ಲಿರೋ ಪುರಿ ಗೊತ್ತು. ಇಲ್ಲ ಬೆಂಗಳೂರಲ್ಲೇ ಇರೋ ವಸಂತಪುರ ಗೊತ್ತು. ಹಾಗೇ ಟೆಕ್ಸಸ್ ನಲ್ಲಿ ಒಂದು Spring ಅನ್ನೋ ಹೆಸರಿನದೇ ಊರಿದೆಯಂತೆ. ವಾಷಿಂಗ್ಟನ್ ಡಿ.ಸಿ. ಬಗಲಲ್ಲೇ ಇರೋ Silver Spring ಅನ್ನೋ ಊರಿನ ಹೆಸರೂ ಕೇಳಿದ್ದೆ. ಆದ್ರೆ ಇದ್ಯಾವ್ದಿದು? ವಸಂತ ಪುರಿ, ಕ್ಯಾಲಿಫೋರ್ನಿಯಾ ಅಂದ್ರಾ?

ಊರು ಬದ್ಲಾದ್ರೂ ಮನುಷ್ಯ ಬದಲಾಗೋದು ಅಷ್ಟು ಸರಾಗ ಅಲ್ಲ ಅಲ್ಬಾ? ಹಳೇ ಪಳೇ ಅಭ್ಯಾಸಗಳನ್ನ, ಸಂಪ್ರದಾಯಗಳನ್ನ ಬಿಡೋದೂ ಸುಲಭದ ಮಾತಲ್ಲ. ಅದಕ್ಕೇ ಇರಬೇಕು ಪೂಜೆ ಪುನಸ್ಕಾರ ಅಂದ್ರೆ ಸಾವಿರಾರು ವರ್ಷದ ಹಿಂದೆ ಬರೆದ ಮಂತ್ರಗಳನ್ನೇ ಇವತ್ತೂ ನಾವು ಪಠಿಸೋದು. ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಅನ್ನೋ ಸಾಲು ಕೇಳೇ ಇರ್ತೀರಿ. ಇದರಲ್ಲಿ ಸಿಂಧು ಬಹುಪಾಲು ಪರದೇಶದ ಪಾಲಾಗಿ ಹೋಗಿದೆ. ಸರಸ್ವತಿ ಅಂತೂ ಒಣಗಿ ನಿಂತೇ ಸಾವಿರಾರು ವರ್ಷಗಳಾಗಿ ಹೋಗಿವೆ. ಆದ್ರೂ ಮಂತ್ರ ಹೇಳೋದು ತಪ್ಪಿಲ್ಲ.

ಕೆಲವರು ಮಾತ್ರ ಅಲ್ಪ ಸ್ವಲ್ಪ ಬದಲಾವಣೆ ಮಾಡಿರೋದು ನೋಡಿದೀನಿ. ಪೂಜೆ ಮಂತ್ರಗಳಲ್ಲಿ ಭಾರತ ವರ್ಷೇ ಭರತಖಂಡೇ .. ಗೋದಾವರ್ಯಾಃ ದಕ್ಷಿಣೇ ತೀರೇ ಅನ್ನೋ ಸಾಲನ್ನ ಇಲ್ಲಿ ಒಬ್ಬರು ಉತ್ತರ ಅಮೇರಿಕಾ ಖಂಡೇ ಕ್ಯಾಲಿಫೋರ್ನಿಯಾ ರಾಜ್ಯೇ ಸಾಕ್ರಮೆಂಟೋ ನದ್ಯಾಃ ಪೂರ್ವೇ ತೀರೇ ಅಂತ ಬದಲಾಯಿಸಿ ಪೂಜೆ ಮಾಡ್ತಿದ್ದಿದ್ದು ಎಷ್ಟೋ ವರ್ಷಗಳ ಹಿಂದೆಯೇ ನೋಡಿದ್ದೆ.


ಲಿವರ್ ಮೋರ್, ಕ್ಯಾಲಿಫೋರ್ನಿಯಾದಲ್ಲಿರುವ ದೇಗುಲ

ಇಲ್ಲಿ ಲಿವರ್ ಮೋರ್ ಎಂಬ ಊರಿನಲ್ಲಿ ದೇವಾಲಯವೊಂದಿದೆ. ದ್ರಾವಿಡ ವೇಸರ ಎರಡೂ ಶೈಲಿಗಳನ್ನು ಮಿಳಿತ ಮಾಡಿ ಕಟ್ಟಿರುವ ದೇವಾಲಯಕ್ಕೆ ಸುಮಾರು ಆಗಲೇ ಮೂವತ್ತು ವರ್ಷ ಆಗಿದೆ. ನಮಗೆ ಹತ್ತಿರವಾದ ದೇವಾಲಯವೆಂದು ಆಗಾಗ್ಗೆ ಹೋಗುತ್ತಿರುವುದುಂಟು.

ಒಮ್ಮೆ ಪೂಜೆಯ ಸಮಯದಲ್ಲಿ ಗಮನಿಸಿದಾಗ, ಪೂಜೆ ಮಾಡುವ ಸ್ಥಳವನ್ನು ಹೇಳುವಾಗ "ಅಸ್ಯ ವಸಂತ ಪುರಿ ಕ್ಷೇತ್ರೇ.." ಅಂತ ಹೇಳುತ್ತಿದ್ದುದ್ದು ಕೇಳಿಬಂತು. ಇದು ಹೇಗಪ್ಪ ಲಿವರ್ ಮೋರ್ ಕ್ಷೇತ್ರ ವಸಂತಪುರಿ ಕ್ಷೇತ್ರವಾಯಿತು ಅಂತ ಯೋಚಿಸುತ್ತಿದ್ದಾಗಲೇ ಹೊಳೆಯಿತು. ದೇವಾಲಯಕ್ಕೆ ಹೆದ್ದಾರಿಯಿಂದ ತೆಗೆದುಕೊಳ್ಳುವ ಎಕ್ಸಿಟ್ ಸ್ಪ್ರಿಂಗ್ ಟೌನ್ ಬುಲವಾರ್ಡ್ - ಅಂದ್ರೆ ’ವಸಂತ ಪುರಿ’ ತಾನೇ ;) ? ಭಲೇ ಅರ್ಚಕರೇ ಎಂದುಕೊಂಡೆ!

-ಹಂಸಾನಂದಿ

Rating
No votes yet

Comments