ಕ್ಯಾಬರೆ ಚಲನ ಚಿತ್ರಗಳ ನೆನಪು

ಕ್ಯಾಬರೆ ಚಲನ ಚಿತ್ರಗಳ ನೆನಪು

ಇತ್ತೀಚೆಗೆ ಟವಿ ಯಲ್ಲಿ ಬೆಂಗಳೂರು ಮೈಲ್ ಸಿನೆಮಾವನ್ನು ನೋಡಿದೆ. ಬೆಂಗಳೂರಿನ ಜಯನಗರದ ಹಳೆಯ ದೃಶ್ಯಗಳು ರಂಜಿಸಿದವು. ಚಿತ್ರದಲ್ಲಿ ರೈಲು ಪ್ರಯಾಣಿಕರಿಗೆ ಪ್ರಯಾಣದಲ್ಲಿ ವಹಿಸಬೇಕಾದ ಜಾಗ್ರತೆಗಳ ಕುರಿತು ಮನೋರಂಜನಯುಕ್ತವಾಗಿ ಚಿತ್ರಿಸಿದ್ದಾರೆ. ನನ್ನ ನೆನೆಪು ಚಿತ್ರದಲ್ಲಿರುವ ಕ್ಯಾಬರೆ ದೃಶ್ಯದ ಕುರಿತು. ಪ್ರೇಕ್ಷಕ ಮತ್ತು ಚಿತ್ರ ಕಥಾನಾಕ ಇಬ್ಬರೂ ಸಂಧಿಗ್ದ ಸ್ಥಿತಿಗೆ ಮುಟ್ಟಿದಾಗ ಅಲ್ಲಿಗೇ ಹೋಗುತ್ತಿದ್ದರು. ಅಲ್ಲದೆ ಚಿತ್ರಕ್ಕೆ ತಿರುವು ನೀಡುವ ಜಾಗವೆಂದರೆ ಕ್ಯಾಬರೆ ಬಾರುಗಳು. ಅವು ಅಂದಿನ ದಿನದ ರಸಿಕರ ತಾಣ. ಅಂತೆಯೇ ಅಲ್ಲಿ ನರ್ತನ ಮಾಡುವ ಬಾರಯ್ಯ ಬಾರೋ ನನ್ನ ರಸಿಕ ರಾಜನೆ ಎಂದು ಹೆಜ್ಜೆ ಇಡುವ ಕ್ಯಾಬರೆಗಾರ್ತಿಯು ಪ್ರೇಕ್ಷಕರನ್ನು ವಯೋಮಾನದ ವ್ಯತ್ಯಯವಿಲ್ಲದೆಲೆ ಮಾನಸಿಕವಾಗಿ ಸೆರೆ ಹಿಡಿದು ಬೀಡಿ ಸಿಗರೇಟು ಸೇದಲೂ ಸಹ ಹೋಗದೆ ಸೀಟಿಗೆ ಬೆಲ್ಟ ತೊಡಿಸಿದವರಂತೆ ಏಕಾಗ್ರತೆಯಲ್ಲಿ ಕಿವಿ ಕಣ್ಣುಗಳನ್ನು ಯೋಗ ಸ್ಥಿತಿಯಲ್ಲಿ ಇರಿಸಿಕೊಂಡು ಅವಳ ಹೆಜ್ಜೆಯನ್ನು ನೋಡುತ್ತಾ ಅವಳು ಹೇಳುವ (ಹಾಡುವ) ದ್ವನಿಯಲ್ಲಿಯೇ ಆಸಕ್ತನಾಗಿ ಇಡೀ ಥಿಯೇಟರ್ ಶಿಸ್ತಿನ ರೂಪಾಂತರ ಹೊಂದುತ್ತಿತ್ತು. ಬಹುಶ: ಈ ರೀತಿಯ ಸನ್ನಿವೇಶವನ್ನು ಇಡೀ ಪ್ರೇಕ್ಷಕ ವೃಂದ ಅನುಭವಿಸುವ ದೃಶ್ಯವನ್ನು ಇಂದಿನ ಸಿನೆಮಾಗಳಲ್ಲಿ ಕಾಣಲಾರೆವು. ಅವಳ ಹೆಜ್ಜೆ ಮತ್ತು ನಾದಗಳನ್ನು ಅಶ್ಲೀಲ ಎಂದು ಬರೆದ ವಿಮರ್ಶಕರು ಟೌನ್ ಹಾಲಿನಲ್ಲಿ ಅಂಗಾಂಗ ಕುಣಿಸಿ ತಣಿಸಿದಾಗ ಅದಕ್ಕೊಂದು ಚಾರಿತ್ರಿಕ ಅಥವ ಪೌರಾಣಿಕ ಹಿನ್ನಲೆ ಕೊಟ್ಟು ಅದನ್ನು ವೈಭವೀಕರಿಸುತ್ತಾರೆ. ಆದರೆ ಕ್ಯಾಬರೆಯನ್ನು ಬರೇ ದೇಹ ಕುಣಿಸುವ ಕೇವಲ ನರ್ತನವೆಂದು ಮಡಿವಂತಿಕೆ ತೋರುತ್ತಾರೆ. ಒಂದು ಸಮೂಹಕ್ಕೆ ಥಿಯೇಟರಿನಲ್ಲಿ ತನ್ಮಯರಾಗುವಂತೆ ಮಾಡಿ ಏಕಾಗ್ರತೆ ಸಾಧಿಸಿಕೊಟ್ಟು ಆನಂದ ತಂದುಕೊಡುವ ನೃತ್ಯ ಪ್ರಾಕಾರವನ್ನು ತಿರಸ್ಕಾರದಿಂದ ನೋಡಿದ್ದಾರೆಂದು ನಾನು ಬಲಿತ ಮೇಲೆ ಅರಿವಾಯಿತು. ಬಹಶ: ರಾಜಾಶ್ರಯದಲ್ಲಿ ಅನ್ನ ತಿನ್ನುತ್ತಿದ್ದ ನಾಟ್ಯ ನಿರ್ದೇಶಕರು ನೃತ್ಯವನ್ನು ನಿರ್ದೇಶಿಸಿಲ್ಲ ಎಂಬ ಚಾರಿತ್ರಿಕ ಕಾರಣದಿಂದ ಈ ಕಲೆಯ ಪ್ರಾಕಾರ ಕಲಿತವರಿಂದ ವಂಚನೆಗೆ ಒಳಪಟ್ಟಿದೆ ಎಂದು ನಮ್ಮಂತ ಕ್ಯಾಬರೆ ಅಭಿಮಾನಿಗಳ ವಾದ. ಜನಪದದಲ್ಲಿ ಆಗಿರುವಂತೆ ಮಡಿವಂತರ ಆಥವ ಕಲಿತವರೆಂದುಕೊಳ್ಳುವವರ ಮಧ್ಯೆ ನಲುಗಿರುವ ಪ್ರಾಕಾರವೆಂದೂ ಸಹ ನಮ್ಮ ಅಭಿಮತ.

ನನಗಾದ ಕ್ಯಾಬರೆಯ ಅನುಭವವನ್ನು ಚುಟುಕದ ರೂಪದಲ್ಲಿ ಬರೆದಿರುವೆ,ದಯಮಾಡಿ ಓದಿ.

ಮಿಂಚು

ಮಿಂಚಿನಂತೆ ಆಗುತ್ತಿತ್ತು ಕ್ಯಾಬರೆಯ ಆಗಮನ
ಆ ನೃತ್ಯಕ್ಕೆ ಎಲ್ಆರ್ ಈಶ್ವರಿಯವರ ಗಾಯನ
ನೋಡಿದವರ ಕೇಳಿದವರ ಜೀವನವೇ ಪಾವನ
ಇರಲಿಲ್ಲ ಕಣ್ರಿ ರಸಿಕನಿಗೆ ಇಂದಿನಂತೆ ಏಕತಾನ.

ಬರೇ ನೆನೆಪು

ಜ್ಯೋತಿಲಕ್ಷ್ಮಿ ಕುಣಿದರೆ ಸಾಕು ಏನೋ ಹೊಡೆದಂಗೆ
ಎಲ್ಲೆಲ್ಲೋ ಏನೇನೋ ರಸಿಕನ ಜೀವಕ್ಕೆ ಹರಿದಂಗೆ
ಕಾಮನ ಲೋಕದವರು ಮಾಡಿದಂತೆಯೇ ಸರಿ,ದಂಗೆ
ಹೇಳಿರಣ್ಣ ಪಡ್ಡೆ ಹೈಕ್ಳಗೆ ಇದ ನಂಬಿಸುವುದು ಹೆಂಗೆ.

ಆರೋಗ್ಯ ನೇತ್ರ

ಅವಳಿಂದಲೇ ಓಡುತ್ತಿತ್ತು ಅಂದಿನ ಚಲನ ಚಿತ್ರ
ಆ ಕುಣಿತವಿದ್ದರೆ ಸಿನೆಮಾಕ್ಕೆ ಬರುತ್ತಿತ್ತು ಚೈತ್ರ
ರಸಿಕನಿಗೆ ಕಚಗುಳಿಯ ಇಡುತ್ತಿತ್ತು ಚಿತ್ರ ವಿಚಿತ್ರ
ಸದಾ ಚೈತನ್ಯದಿಂದ ಇರುತ್ತಿದ್ದವು ಅವನ ನೇತ್ರ

ತಾರೆ

ಅಂದು ಸಿನೆಮಾದಲ್ಲಿ ನರ್ತಿಸುತ್ತಿದ್ದರೆ ಕ್ಯಾಬರೆ
ಅನ್ನಿಸುತ್ತಿತ್ತು ಕರೆಯಬೇಕೆನ್ನುತ ಬಾರೆ ಬಾರೆ
ಈ ನಾಯಕಿಯೇ ಬಿಚ್ಚಿದರೂ ಅನ್ನುವರಿಲ್ಲ ಕ್ಯಾರೆ
ಕಾರಣ ಅವಳಂತೆ ಇವಳಲ್ಲವಲ್ಲ ರಸಿಕರ ತಾರೆ

ಮತ್ತೊಮ್ಮೆ ಹೇಳುವುದಾದರೆ ಬೆಳ್ಳಿ ತೆರೆಯ ಮೇಲೆ ಮಿಂಚಿ ನರ್ತಿಸಿದ ಅಪಾರ ಪ್ರತಿಭೆಯ ತಾರೆಯರು ಬರೇ ಮಿಣುಕು ಹುಳಗಳಂತೆ ಮಿಂಚಿ ಮಾಯವಾದರಾದರೂ ಅವರೆಲ್ಲ ಮೂಲತ: ಕಲಾದೇವತೆಗಳು.
ಇಂದಿಗೂ ಚೇತನದ ಚಿಲುಮೆಯಂತೆ ನರ್ತಿಸುವ ಅವರಿಗಾಗಿ ಹಂಬಲಿಸಿ ನೆನೆಯುವುದು ಚಿತ್ರ ನೋಡುಗರ ಮತ್ತು ರಸಿಕರ ನಿಯತ್ತು ಅಲ್ಲವೆ ?

ಶಿವಶಶಿ

Rating
No votes yet

Comments