ಸಂಪದ - ನೀನಿಲ್ಲದೆ

ಸಂಪದ - ನೀನಿಲ್ಲದೆ

ಸಂಪದವಿಲ್ಲದ ದಿನಗಳು ಹೇಗೆ ಕಳೆದಿರಿ ಎಂಬ ಅಶೋಕ್ ರವರ ಪ್ರಶ್ನೆಗೆ ನನ್ನ ಉತ್ತರವಿದು. 

ಸಂಪದದ ಸಂಪರ್ಕಕ್ಕೆ ಬರುವ ಮುಂಚೆ ನಾನು ನನ್ನ ಸಮಯವನ್ನು ಹೇಗೆ ಕಳೆಯುತ್ತಿದ್ದೆ ಎಂಬ ನೆನಪೇ ಇಲ್ಲ.  ಓದುತ್ತಾ, ಓದುತ್ತಾ ಅದು ಯಾವಾಗ ಸಂಪದಕ್ಕೆ ಅಡಿಕ್ಟ್ ಆದೆ ಅನ್ನುವುದು ಕೂಡ ಹೊಳೆಯುತ್ತಿಲ್ಲ.  ತಿಂಡಿ, ಊಟ, ಕೆಲಸ, ನಿದ್ದೆಯ ಹಾಗೆ ಸಂಪದ ಓದುವುದು ಕೂಡ ದಿನಚರಿಯ ಒಂದು ಪ್ರಮುಖ ಭಾಗವಾಗಿತ್ತು. ಬೇಕಿದ್ರೆ ತಿಂಡಿ ಬಿಟ್ಟೇನು, ನಿದ್ದೆ ಬಿಟ್ಟೇನು, ಸಂಪದ ಓದುವುದನ್ನು ಬಿಡೆನು ಎಂಬಂತಹ ಪರಿಸ್ಥಿತಿಯಲ್ಲಿ ಹಠಾತ್ತನೆ ಸಂಪದ ನಿಂತು ಹೋಗಿತ್ತು!  ನನ್ನ ಭಾವನೆಗಳನ್ನು ಬರೆಯಲು ಕಲಿತಿದ್ದೇ ಸಂಪದದಿಂದಾಗಿ. ನನ್ನದು ಎಂಬ ಬ್ಲಾಗ್ ಯಾವುದೂ ಇಲ್ಲ.  ಸಂಪದದಲ್ಲಿ ನಾ ಬರೆದ ಯಾವುದನ್ನೂ ನಾನು ನನ್ನ ಹತ್ತಿರ ಕಾಪಿ ಮಾಡಿಟ್ಟುಕೊಂಡಿಲ್ಲ.  ಅಲ್ಪ ಸ್ವಲ್ಪ ಕಲಿತಿದ್ದ ಬರವಣಿಗೆ, ಸಂಪದ ನಿಂತ ದಿವಸವೇ ನಿಂತೇ ಹೋಯಿತು.  ಹೀಗಾಗಿ ಸ್ವಲ್ಪ ಮಟ್ಟಿಗೆ ಪೆಚ್ಚಾಗಿದ್ದೂ ಕೂಡ ನಿಜ. ೧-೨ ದಿನಗಳನ್ನು ಕಳೆಯುವುದರಲ್ಲಿ ಸಾಕು ಸಾಕಾಯಿತು.  ಇರುವ ಕನ್ನಡದ ಬ್ಲಾಗ್ ಗಳನ್ನು ಎಲ್ಲವನ್ನೂ ಸರ್ಚ್ ಮಾಡಿ, ಮಾಡಿ ಓದುತ್ತಿದ್ದರೂ ನನ್ನ ಬಳಿ ಅದೆಷ್ಟು ಸಮಯ ಉಳಿಯುತ್ತಿತ್ತು.  ಇಷ್ಟೊಂದು ಸಮಯವಿತ್ತೇ ನನ್ನ ಬಳಿಯಲ್ಲಿ!  ಮಧ್ಯೆ ಮಧ್ಯೆ ಸಂಪದಕ್ಕೆ ಭೇಟಿ ನೀಡುವುದು, ಅಯ್ಯೋ! ಇನ್ನೂ ಬಂದಿಲ್ಲವಲ್ಲ ಅಂತಾ ಪೇಚಾಡುವುದು ನಡೆದೇ ಇತ್ತು.  ೮-೧೦ ದಿವಸಗಳಾದ ಮೇಲೆ ಮನಸ್ಸಿಗೆ ನಿರಾಸೆಯಾಯಿತು. ಇನ್ನು ಮುಂದೆ ಸಂಪದ ಬರುವುದೇ ಇಲ್ಲವೇನೋ ಎನ್ನುವ ಅನುಮಾನ ಕಾಡತೊಡಗಿತು. ಆದರೂ ಪ್ರತಿ ಹಬ್ಬದ ದಿವಸವೂ ಇವತ್ತು ಬರಬಹುದೇನೋ ಎಂದು ನೋಡುತ್ತಿದ್ದೆ.  ನಿಧಾನವಾಗಿ ಅಡಿಕ್ಷನ್ ಕರಗಿ ಹೋಯಿತು. (ಭ್ರಮೆ) ಆದರೆ ನಿನ್ನೆ ಕನ್ನಡ ರಾಜ್ಯೋತ್ಸವದ ದಿವಸ ಊರಿನಲ್ಲಿಲ್ಲದ ಕಾರಣ ನೋಡಿರಲಿಲ್ಲ. ಇಂದು ಬೆಳಿಗ್ಗೆ ಸಂಪದಕ್ಕೆ ಭೇಟಿಯಿತ್ತರೂ, ಮತ್ತೆ ಅಡಿಕ್ಷನ್ ಉಂಟಾಗುವುದೇನೋ ಎಂಬ ಕಾರಣದಿಂದ ಪ್ರತಿಕ್ರಿಯಿಸಲೇ ಇಲ್ಲ.  ಕೊನೆಗೂ ಸಂಪದವೇ ಗೆದ್ದಿದ್ದು. ಪ್ರತಿಕ್ರಿಯಿಸದೇ ಇರಲಾಗಲಿಲ್ಲ ನನಗೆ :-)

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. 

 

 

 

Rating
No votes yet

Comments