ಕಂಪ್ಯೂಟರ್ ವೈರಸ್ ಪೀಡಿತ ಮೊದಲ ಮಾನವ
ಕಂಪ್ಯೂಟರ್ ವೈರಸ್ ಪೀಡಿತ ಮೊದಲ ಮಾನವ
ಮನುಷ್ಯನಿಗೆ ನೆಗಡಿಯಿಂದ ಹಿಡಿದು ಏಡ್ಸ್ ವರೆಗೆ ಹಲವಾರು ಕಾಯಿಲೆಗಳು ವೈರಸ್ ಮೂಲಕವೇ ಬರುತ್ತದೆ.ಆದರೆ ಕಂಪ್ಯೂಟರ್ ವೈರಸ್ ಕೂಡಾ ಮನುಷ್ಯನನ್ನು ಕಾಡಬಹುದೇ?ಹೌದು,ಇದು ಸಾಧ್ಯ.ಮನುಷ್ಯನ ದೇಹದಲ್ಲಿ ಐಸಿ ಚಿಪ್ ಅನ್ನು ಹುದುಗಿಸಿಟ್ಟು,ಆ ಚಿಪ್ ಮೂಲಕ,ಆತನನ್ನು ಕಂಪ್ಯೂಟರುಗಳು "ಗುರುತಿಸಲು" ಮತ್ತು ಮೊಬೈಲ್ ಸಾಧನ ಚಾಲೂ ಆಗಲು ಸಾಧ್ಯವಾಗಿಸಿದ ವ್ಯಕ್ತಿಯಲ್ಲಿ,ಈ ಚಿಪ್ ಕಂಪ್ಯೂಟರ್ ವೈರಸ್ ತಂತ್ರಾಂಶದಿಂದ ಬಾಧಿತವಾಯಿತು.ಇದನ್ನೇ ಮನುಷ್ಯನನ್ನು ಕಾಡಿದ ಮೊದಲ ಕಂಪ್ಯೂಟರ್ ವೈರಸ್ ಎಂದದ್ದು.ಹಾಗೆ ಚಿಪ್ ಧರಿಸಿದ ವ್ಯಕ್ತಿ ರೀಡಿಂಗ್ ವಿಶ್ವವಿದ್ಯಾಲಯದ ಮಾರ್ಕ್ ಗೇಸನ್.ಈ ಚಿಪ್ ಮೂಲಕ ಕಂಪ್ಯೂಟರ್ ನಿಯಂತ್ರಿತ ಬಾಗಿಲುಗಳನ್ನು ದಾಟಲು ಇವರಿಗೆ ಸುಲಭ ಸಾಧ್ಯ.ಮುಂದೆಯೂ ಇಂತಹ ಚಿಪ್‌ಗಳ ಬಳಕೆ ಹೆಚ್ಚಲಿರುವುದು ಖಾತರಿ.ವೈದ್ಯಕೀಯ ಉದ್ದೇಶಗಳಿಗಾಗಿಯೂ,ಇಂತಹ ಚಿಪ್‌ಗಳ ಬಳಕೆ ನಡೆಯಬಹುದು.ಪೇಸ್‌ಮೇಕರ್,ಕಿವಿಯೊಳಗೆ ಕೃತಕ ತಮ್ಮಟೆಯಂತೆ ಕಾರ್ಯನಿರ್ವಹಿಸುವ ಕೋಕ್ಲಿಯರ್ ಮುಂತಾದ ಚಿಪ್‌ಗಳಿವಕ್ಕೆ ಉದಾಹರಣೆ.ಈ ಚಿಪ್‌ಗಳು ವೈರಸ್ ಬಾಧಿತವಾಗಿ ಸಮಸ್ಯೆ ಉಂಟು ಮಾಡಬಹುದೆಂಬ ಈ ಹೊಸ ತಿಳುವಳಿಕೆ ಹೊಸ ಆತಂಕಗಳಿಗೆ ಕಾರಣವಾಗಿದೆ.
----------------------------------------------------
ನಿಮ್ಮ ಬಗ್ಗೆಯೇ ಹುಡುಕಾಡಿ
ಸುಮ್ಮನೆ ತಮ್ಮ ಹೆಸರನ್ನು ಗೂಗಲ್‌ನಲ್ಲಿ ನೀಡಿ ಶೋಧ ಕಾರ್ಯ ಕೈಗೊಳ್ಳುವ ಅಭ್ಯಾಸ ಹಲವರಿಗಿದೆ.ತಮ್ಮ ಹೆಸರಿನ ಶೋಧ ಅಂತರ್ಜಾಲದಲ್ಲಿ ಏನು ತೋರಿಸುತ್ತದೆ ಎಂಬ ಕುತೂಹಲ ಒಂದು ಕಡೆಗಾದರೆ,ತಾವೆಷ್ಟು ಜನಪ್ರಿಯರು ಎಂದರಿಯುವ ಕೆಟ್ಟ ಕುತೂಹಲ ಇನ್ನೊಂದೆಡೆ.ನಮ್ಮ ಅಹಂ ಹೀಗೆಲ್ಲಾ ಮಾಡಿಸುತ್ತದೆ ಎನ್ನುವುದು ನಿಜವಾದರೂ,ಇದರಿಂದ ಪ್ರಯೋಜನಗಳೂ ಇವೆ.ಶೋಧವು ನಮ್ಮ ಬಗ್ಗೆ ನಾವು ಇಷ್ಟ ಪಡದ ಪುಟವನ್ನು ಅಥವ ವಿಷಯವನ್ನು ಬಹಿರಂಗ ಪಡಿಸುತ್ತಿದ್ದರೆ,ಅದನ್ನು ಸರಿಪಡಿಸಲು ಪ್ರಯತ್ನಿಸಬಹುದು.ಉದಾಹರಣೆಗೆ,ಪಿಕಾಸಾ ಚಿತ್ರಗಳನ್ನು ಅರಿವಿಗೆ ಬಾರದೆ,ಸಾರ್ವಜನಿಕಗೊಳಿಸಿಟ್ಟಿದ್ದರೆ,ನಿಮ್ಮ ಖಾಸಗಿ ಚಿತ್ರಗಳು ಅಂತರ್ಜಾಲದಲ್ಲಿ ಎಲ್ಲರಿಗೂ ಸಿಗುವಂತಿರುತ್ತದೆ.ನೀವೀಗ ಪಿಕಾಸ ಚಿತ್ರಗಳ ಸೆಟಿಂಗನ್ನು ಖಾಸಗಿ ಮಾಡಿ,ಹೀಗಾಗುವುದನ್ನು ತಪ್ಪಿಸಬಹುದು.ಸಾಮಾಜಿಕ ಜಾಲತಾಣಗಳು ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿದ್ದರೆ,ಅದು ಕೂಡಾ ಈ ಶೋಧದ ವೇಳೆ ನಿಮ್ಮ ಗಮನಕ್ಕೆ ಬರಬಹುದು.ಅಂತಹ ಜಾಲತಾಣಗಳಿಗೆ ಬೈ ಹೇಳಲೂ ನೀವು ನಿರ್ಧರಿಸುವುದೂ ನಿಮ್ಮ ಕೈಯಲ್ಲಿದೆ.ಕಂಪೆನಿಗಳು ತಮ್ಮ ಉದ್ಯೋಗಿಗಳು ಆನ್‌ಲೈನಿನಲ್ಲಿ ಒಂದು ನಿಗದಿತ ಇಮೇಜ್ ಕಾಪಾಡಿಕೊಳ್ಳುವುದನ್ನು ಬಯಸುತ್ತವೆ.ತಮ್ಮ ಬಗ್ಗೆಯೇ ಶೋಧ ಕಾರ್ಯ ಕೈಗೊಳ್ಳುವವರು,ಇದರ ಬಗ್ಗೆಯೂ ಖಚಿತ ಪಡಿಸಿಕೊಳ್ಳಬಹುದು.
----------------------------------------------------------------
4ಜಿ ಆಂಡ್ರಾಯಿಡ್ ಫೋನ್ ಸೂಪರ್!
ನಾಲ್ಕನೇ ತಲೆಮಾರಿನ ಸೆಲ್‌ಪೋನ್ ಜಾಲಗಳಲ್ಲಿ ಬಳಸಬಹುದಾದ ಆಂಡ್ರಾಯಿಡ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಬಳಸುವ ಸ್ಪ್ರಿಂಟ್ ಕಂಪೆನಿಯ ಹ್ಯಾಂಡ್‌ಸೆಟ್ ಸಿದ್ಧವಾಗಿದೆ.ಇದನ್ನು ಪರೀಕ್ಷಾರ್ಥ ಬಳಸಿದವರು,ಇದರ ಕಾರ್ಯನಿರ್ವಹಣೆ ಮೂರನೇ ತಲೆಮಾರಿನ ಜಾಲದಲ್ಲಿ ಬಳಸಿದಾಗಲೂ,ಐಫೋನ್ ಸಾಧನಕ್ಕಿಂತ ಉತ್ತಮವಾಗಿರುವುದನ್ನು ಸಿದ್ಧ ಪಡಿಸಿವೆ.ಐಫೋನ್ ಮೂಲಕ ಕರೆ ಮಾಡಲಾಗದಷ್ಟು ದುರ್ಬಲ ಸಂಕೇತ ಹೊಂದಿರುವೆಡೆ ಕೂಡಾ ಸ್ಪ್ರಿಂಟ್ ಫೋನ್ ಮೂಲಕ ದತ್ತಾಂಶಗಳನ್ನು ಇಳಿಸಿಕೊಳ್ಳಲೂ ಸಾಧ್ಯವಾಯಿತು.ಸ್ಪರ್ಶಸಂವೇದಿ ತೆರೆ,ಹಗುರ,ಬಳಸಲು ಸುಲಭವಾಗಿದೆಯೆನ್ನುವುದು ಇತರ ಹೈಲೈಟ್ಸ್.ಬ್ಯಾಟರಿ ಬಾಳಿಕೆ ತುಸು ಕಡಿಮೆ ಎನ್ನುವುದಷ್ಟೇ ಹೇಳಿಕೊಳ್ಳಬಹುದಾದ ದೂರು.
------------------------------------------------------
ಆಪಲ್ ಈಗ ಬಲು ದುಬಾರಿ!!
ಜಗತ್ತಿನ ಅತ್ಯಂತ ಬೆಲೆಬಾಳುವ ತಂತ್ರಜ್ಞಾನ ಕಂಪೆನಿ ಆಪಲ್ ಆಗಿ ಹೊರಹೊಮ್ಮಿದೆ.ಮೈಕ್ರೋಸಾಫ್ಟ್ ಕಂಪೆನಿಯನ್ನದು ಹಿಂದೆ ತಳ್ಳಿ,ಈ ಸ್ಥಾನಗಿಟ್ಟಿಸಿಕೊಂಡಿದೆ.ಆಪಲ್ ಕಂಪೆನಿಯ ಶೇರು ಮಾರುಕಟ್ಟೆಯಲ್ಲಿ ಏರಿದ ಕಾರಣ,ಅದರ ಒಟ್ಟು ಮೌಲ್ಯ ಇನ್ನೂರಿಪ್ಪತ್ತೆರಡು ಬಿಲಿಯನ್ ಡಾಲರಿಗೇರಿತು.ಅದೇ ವೇಳೆ ಮೈಕ್ರೋಸಾಫ್ಟ್ ಕಂಪೆನಿಯ ಶೇರುಗಳ ಒಟ್ಟು ಮೌಲ್ಯ,ಇನ್ನೂರಹದಿನೊಂಭತ್ತು ಬಿಲಿಯನ್ ಡಾಲರುಗಳಾಗಿತ್ತು.ಆದರೆ ಕಂಪೆನಿಯ ಆದಾಯ,ಲಾಭಗಳನ್ನು ಪರಿಗಣಿಸಿದರೆ,ಮೈಕ್ರೋಸಾಫ್ಟ್ ಆಪಲ್‍ಗಿಂತ ಬಹುಮುಂದಿದೆ.ಐಫೋನ್,ಐಪಾಡ್ ಜತೆಗೀಗ ಐಪ್ಯಾಡನ್ನೂ ಮರುಕಟ್ಟೆಗಿಳಿಸಿದ್ದು,ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು,ಕಂಪೆನಿಯ ಶೇರು ಬೆಲೆ ಮಾರುಕಟ್ತೆಯಲ್ಲಿ ಏರಲು ಕಾರಣವಾಗಿದೆ.ಮೈಕ್ರೋಸಾಫ್ಟ್ ಆದರೋ,ತನ್ನ ಹೆಚ್ಚಿನ ವ್ಯವಹಾರವನ್ನು ಆಪರೇಟಿಂಗ್ ವ್ಯವಸ್ಥೆ ಮತ್ತು ತಂತ್ರಾಂಶ ಮಾರಾಟದಿಂದ ಪಡೆಯುತ್ತಿದೆ.ಆಫೀಸ್ 2010 ಎನ್ನುವ ಹೊಸ ಆಫೀಸ್ ತಂತ್ರಾಂಶ,ವಿಂಡೋಸ್7ಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಮೈಕ್ರೋಸಾಫ್ಟ್ ಕಂಪೆನಿಗೆ ಆಶಾದಾಯಕವಾಗಿರುವ ಅಂಶಗಳು.ಅಂದಹಾಗೆ,ಈ ದೊಡ್ಡ ಐಟಿ ಕಂಪೆನಿ ಎನ್ನುವ ಪಟ್ಟ,ಶೇರು ಬೆಲೆ ಏರಿಳಿದೊಡನೆ,ಅತ್ತಿಂದಿತ್ತ ಬದಲಾಗುತ್ತಿರುತ್ತದೆ.
---------------------------------------------------
ಓದುಗರ ಆಯ್ಕೆ:ಎಲ್ಲಾ ದತ್ತಾಂಶವೂ ಚಿಟಿಕೆಯಲ್ಲಿಯೇ
ಬಿಪಿ ಪರೀಕ್ಷಿಸಿದ ನಂತರ ಅದನ್ನು ಬರೆದಿಟ್ಟರೆ,ಮುಂದಿನ ಸಲ ರಕ್ತದೊತ್ತಡದಲ್ಲಿ ಎಷ್ಟು ಬದಲಾವಣೆಯಾಗಿದೆ ಎನ್ನುವುದು ತಿಳಿಯುತ್ತದೆ.ಆದರೆ ಅದನ್ನು ಎಲ್ಲಿ ಬರೆದಿಟ್ಟಿದ್ದಿರಿ ಎನ್ನುವುದೇ ನೆನಪಾಗದು ಎನ್ನುವುದೇ ಸಮಸ್ಯೆ.ಈಗದಕ್ಕೆ ಅಂತರ್ಜಾಲದ ಸಹಾಯ ಪಡೆಯಬಹುದು.http://alltrack.inಗೆ ಬಿಪಿ ಬಗ್ಗೆ ಕಿರು ಸಂದೇಶ ಕಳುಹಿಸಿಬಿಡಿ.ಬೇಕೆಂದಾಗ,ಅವನ್ನು ಒಟ್ಟುಗೂಡಿಸಿ,ಬಿಪಿ ಹೇಗೆ ಏರಿಳಿಯುತ್ತಿದೆ ಎನ್ನುವುದರ ನಕ್ಷೆ ಸಮೇತ ವಿಶ್ಲೇಷಣೆ ನಿಮ್ಮ ಕೈಸೇರುತ್ತದೆ.ಕೀಲಿಕೈಯನ್ನು ಸಿಕ್ಕಲ್ಲಿ ಬಿಡುವ ಅಭ್ಯಾಸ ನಿಮಗಿದ್ದರೆ,ಅದನ್ನು ಎಲ್ಲಿ ಇಟ್ಟಿರಿ ಎನ್ನುವುದನ್ನು http://alltrack.inಗೆ ಎಸೆಮ್ಮೆಸ್ ಮಾಡಿಬಿಡುವ ಅಭ್ಯಾಸ ಮಾಡಿ.ಸಂದೇಶದ ವಿಷಯ "ಕೀಲಿ" ಎಂದಿದ್ದರೆ,ಕೀಲಿ ಎಲ್ಲಿಟ್ಟೆ ಎಂದು ನೆನಪಾಗದಾಗ,ಅದರ ಬಗ್ಗೆ ಅವರಿವರಲ್ಲಿ ಕೇಳುವುದರ ಬದಲು,ನಿಮ್ಮ ಕಿರು ಸಂದೇಶಗಳನ್ನು ಹಿಂಬಾಲಿಸಿ,ಅದನ್ನು ಪತ್ತೆಹಚ್ಚಿ.ಇದೇ ತತ್ತ್ವವನ್ನು ನಿಮ್ಮ ಖರ್ಚುಗಳ ಬಗ್ಗೆಯೂ ಮಾಡಿದರೆ,ನಿಮ್ಮ ಹಣ ಎಲ್ಲಿ ಹೋಯಿತು ಎಂದು ಚಿಂತಿಸುವ ಅಗತ್ಯವಿಲ್ಲ.ಈ ಅಂತರ್ಜಾಲ ತಾಣದ ಉಪಯೋಗ ಪಡೆಯಲು ನೋಂದಾಯಿಸಿಕೊಳ್ಳಬೇಕು.ಉದಯವಾಣಿಯ ಓದುಗ ಅರವಿಂದ ವಿಕೆ, ಈ ತಾಣದ ಬಗ್ಗೆ ಗಮನ ಸೆಳೆದವರು.
------------------------------------------------------------------------------------------
ಗೂಗಲ್ ಟಾಪ್‌ಟೆನ್
ಗೂಗಲ್ ಅಂಕಿ-ಅಂಶಗಳ ಪ್ರಕಾರ,ಅತ್ಯಂತ ಹೆಚ್ಚು ಜನರು ಜಾಲಾಡಿದ ತಾಣಗಳ ಪೈಕಿ facebook.com,yahoo.com,live.com,wikipedia.org,msn.com,microsoft.com,blogspot.com,baidu.com,qq.com,mozilla.comಗಳು ಮೊದಲ ಸ್ಥಾನದಲ್ಲಿವೆ.ಸಾಮಾಜಿಕ ಜಾಲತಾಣಗಳು ಹೆಚ್ಚು ಜನಾಕರ್ಷಣೆಯ ಕೇಂದ್ರಬಿಂದುವಾಗುತ್ತಿರುವುದು ಈ ಪಟ್ಟಿಯನ್ನು ನೋಡಿದಾಗ ಸ್ಪಷ್ಟವಾಗುತ್ತದೆ.ಟ್ವಿಟರ್ ಪಟ್ಟಿಯಲ್ಲಿ ಹದಿನೆಂಟನೇ ಸ್ಥಾನದಲ್ಲಿದೆ.ವಿಶ್ವಕೋಶ ವಿಕಿಪೀಡಿಯಾ,ನಾಲ್ಕನೇ ಸ್ಥಾನಕ್ಕೇರಿದೆ.ಜನರು ಯಾವುದೇ ವಿಷಯವನ್ನು ಶೋಧಿಸಿದರೂ,ವಿಕಿಪೀಡಿಯಾದಲ್ಲಿ ಬೇಕಾದ ಮಾಹಿತಿ ಲಭ್ಯವಿರುವುದು ಇದಕ್ಕೆ ಕಾರಣ.
------------------------------------
ಅನುಭವ ಮಂಟಪ ಕಟ್ಟಿ
http://palachandra.blogspot.comದಲ್ಲಿ ಪಾಲಚಂದ್ರರ "ಅನುಭವ ಮಂಟಪ" ಕಟ್ಟಿ,ತಮ್ಮ ಛಾಯಾಚಿತ್ರಗ್ರಹಣದ ಅನುಭವಗಳನ್ನು ಒದುಗರ ಜತೆ ಹಂಚಿಕೊಂಡಿದ್ದಾರೆ.ಇಂಜಿನಿಯರಿಂಗ್ ಕ್ಷೇತ್ರದಲ್ಲಿ ದುಡಿಯುತ್ತಿರುವ "ಪಾಲ"ರ ಮೆಚ್ಚಿನ ಹವ್ಯಾಸಗಳಲ್ಲಿ ಚಿತ್ರಗ್ರಹಣವೂ ಒಂದು.ಚಿತ್ರಗಳ ಬಗ್ಗೆ ಕ್ಯಾಮರಾದ ತಾಂತ್ರಿಕ ವಿವರಗಳನ್ನೂ ಹಂಚಿಕೊಂಡಿರುವುದು ಹವ್ಯಾಸಿಗಳಿಗೆ ಖುಷಿ ಕೊಡಬಹುದು.ಅಲ್ಲಲ್ಲಿ ಕತೆಗಳನ್ನೂ ಬೆರೆಸಿ,ಬ್ಲಾಗನ್ನು ವೈವಿಧ್ಯಮಯವಾಗಿಸಿದ್ದಾರೆ.
---------------------------------------------------------------------------------------
Udayavani
*ಅಶೋಕ್‌ಕುಮಾರ್ ಎ