ಇಂದು ಕೂಡ ಆಗದೆ, ಕನ್ನಡವೊಂದಾಗದೆ?

ಇಂದು ಕೂಡ ಆಗದೆ, ಕನ್ನಡವೊಂದಾಗದೆ?

ಮತ್ತೆ ಬಂದಿತು ನವೆಂಬರ್ 1. ಮತ್ತೆ ನಾಡಿನೆಲ್ಲೆಡೆ "ನವೆಂಬರ್ ಕನ್ನಡಿಗರ" ಸಂಭ್ರಮ, ಸಡಗರ. ಆದರೆ, ಕನ್ನಡ ಎನ್ನುವುದು ನಮ್ಮೆಲ್ಲ ಹಬ್ಬಗಳಂತೆ ಮತ್ತೊಂದು ಹಬ್ಬವಾಗದೆ, ಕವಿ ನಿಸಾರ್ ಅಹ್ಮದ್ ಹಾಡುವ ಹಾಗೆ, "ನಿತ್ಯೋತ್ಸವ" ಆಗಬೇಕು. ನಮ್ಮ ಕನ್ನಡ, ಕನ್ನಡತನದ ಬಗ್ಗೆ ನಮ್ಮೆಲ್ಲ ಶ್ರೇಶ್ಟ ಕವಿಗಳು ಬರೆದಿದ್ದಾರೆ, ಹಾಡಿದ್ದಾರೆ. ಕೆಲವರು ಸಂಭ್ರಮದಿಂದ, ಮತ್ತೆ ಕೆಲವರು ವಿಶಾದದಿಂದ. ಬೇಂದ್ರೆ ನಂತರದ ಕನ್ನಡದ ಶ್ರೇಶ್ಟ ಕವಿ ಎಂದೇ ಪರಿಗಣಿಸಲ್ಪಡುವ ಶ್ರೀ ಗೋಪಾಲಕೃಷ್ಣ ಅಡಿಗರು ಕಳೆದ ಶತಮಾನದ ಹಿಂದೆಯೇ ಬಹುಶಹ "ನವ್ಯ ಚಳವಳಿ"ಯ ಆರಂಭದಲ್ಲಿ "ಹೊಸಗನ್ನಡದ ಹಾಡು" ಎಂಬ ಪದ್ಯರಚಿಸಿದ್ದರು. ಈ ಪದ್ಯ  "ನಡೆದುಬಂದ ದಾರಿ" ಕವನಸಂಕಲನದಲ್ಲಿದೆ. ನಾವು  ಅಂದರೆ ಕನ್ನಡಿಗರು "ನಡೆದು ಬಂದ ದಾರಿ" ಹೇಗಿತ್ತು, "ಮುಂದೆ ನಡೆವ ದಾರಿ" ಹೇಗಿರಬೇಕು ಎಂಬುದನ್ನು ಕವಿ ಅಡಿಗರು ಈ ಪದ್ಯದಲ್ಲಿ ಮುನ್ನೋಡಿದ್ದಾರೆ. "ಕನ್ನಡ ರಾಜ್ಯೋತ್ಸವ"ದ ದಿನ ಕನ್ನಡದ ಮಹಾನ್ ಕವಿಯೊಬ್ಬ ಕಂಡ, ನೀಡಿದ "ಕನ್ನಡ ದರ್ಶನ"ವನ್ನು ನಾವೂ ಪಡೆಯೋಣ ಬನ್ನಿ.

ಇಂದು ಕೂಡ ಆಗದೆ,
ಕನ್ನಡವೊಂದಾಗದೆ?
ಭೇದದ ಹುಳಿ ನೀಗದೇ,
ಕಾಯಿಮನ ಮಾಗದೇ,
ಒಮ್ಮತದೊಗ್ಗಟ್ಟಿನ ಫಲ
ನಮ್ಮ ಬಾಳ್ವೆ ಬಾಗದೆ?
ಆಗದೇ, ಹೋಗದೇ?
ಕನ್ನಡವೊಂದಾಗದೆ?


ಈ ಪದ್ಯದ ಸಾಲುಗಳು ಸೂಚಿಸುವ ಹಾಗೆಯೇ ಒಡಕು ಮೂಡಿರುವ ಕನ್ನಡದಲ್ಲಿ ಒಮ್ಮತ ಮೂಡುವುದಾವಾಗ ಎಂದು ಅಡಿಗರು ಪ್ರಶ್ನಿಸಿದ್ದಾರೆ. ಈ ಪದ್ಯವನ್ನು ಬರೆದು ಆಗಲೇ 50-60 ವರುಶಗಳೇ ಕಳೆದಿವೆ. ಅಂದಿನ ಪರಿಸ್ಥಿತಿಯೂ ಇಂದಿನ ಪರಿಸ್ಥಿತಿಗಿಂತ ಭಿನ್ನವಾಗಿರಲಿಲ್ಲ ಎಂಬುದನ್ನು ನಾವು ಮನಗಾಣಬಹುದು.

ಈ ಕವನ ಬಹಳ ದೊಡ್ಡದಾಗಿದ್ದು, ಪ್ರತಿಸಾಲಿನಲ್ಲಿಯೂ ಅಡಿಗರಿಗಿದ್ದ ಕನ್ನಡಪರ ಕಾಳಜಿ ವ್ಯಕ್ತವಾಗುತ್ತದೆ. ಅಡಿಗರು ಒಬ್ಬ  ಇಂಗ್ಲಿಶ್ ಪ್ರಾಧ್ಯಾಪಕರಾಗಿದ್ದರು. ಅವರು ರವೀಂದ್ರರ ಬಗ್ಗೆ ಇಂಗ್ಲಿಶ್ ನಲ್ಲಿ ಬರೆದ ಕವನ ಓದಿದಾಗ, ಅವರೇನಾದರೂ ಕನ್ನಡ ಬಿಟ್ಟು ಇಂಗ್ಲಿಶ್ ನಲ್ಲಿ ಬರೆಯುತ್ತಾ ಹೋಗಿದ್ದರೆ ಕನ್ನಡಕ್ಕೆ ಎಶ್ಟು
ನಶ್ಟವಾಗ್ತಿತ್ತು ಅನ್ನಿಸ್ತದೆ.

ನಾಯಕಕಪಿಗಣದ ಕುಚೇಷ್ಟೆಗಳ ಮೂಕ ಗುದ್ದು
ಸಹಿಸೆವಿನ್ನು, ನಮ್ಮೊಳಗಿದೆ ಎನ್ನಿ ಅದಕ್ಕೆ ಮದ್ದು;
ಸಮಭಾವದ ನೇಗಿಲ ಹಿಡಿದುತ್ತ ಹರಗಿ ಬನ್ನಿ,
ಪಂಪರನ್ನರೆದೆಯ ಸುಧೆಯನೆತ್ತಿಮೊಗೆದು ತನ್ನಿ;
ಕನ್ನಡ ನವತರುಣಗಣದ ಕಂಠ ಕೋಟಿ ಕೋಟಿ -
ಕನ್ನಡ ನವಧರ್ಮವಾಣಿ ಎದೆತಳಕ್ಕೆ ನಾಟಿ -
ಮೊಳಗಲಿ ಹೊಸಗನ್ನಡತನ ವೀರಧೀರ ಧಾಟಿ;


ಎಂದು "ಕನ್ನಡ ನವಧರ್ಮವಾಣಿ"ಯನು ಮೊಳಗಿಸಲು ಕರೆ ನೀಡುತ್ತಾರೆ. ಆದರೆ, ಕುವೆಂಪುರವರು "ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಎಂದು ಹಾಡಿದ್ದು ಮರೆತು ನಾವೆಲ್ಲ ಅಮೆರಿಗನ್ನಡ, ಬ್ರಿಟಿಶಗನ್ನಡಗಳ ಮಾತಾಡುತ್ತ "ಕನ್ನಡ ಕಂಪು"
ಬೇಡವೆಂದು ದೂರತಳ್ಳಿ "ಕಂಗ್ಲಿಶ್" ನಾತವನ್ನು ಸವಿಯುತ್ತ ಬದುಕುತ್ತಿದ್ದೇವೆ.

ನನ್ನ ನಿನ್ನ ಕನ್ನಡ,
ಎಲ್ಲ ಜನದ ಕನ್ನಡ;
ಈರ, ಬೋರ, ಭಟ್ಟ
ಕೂಲಿಗಾರ, ರೈತರ;
ಸುಸಂಸ್ಕೃತರ, ಅಸಂಸ್ಕೃತರ,
ಮಾನ್ಯರ, ಸಾಮಾನ್ಯರ;
ಈ ನೆಲ ಈ ನುಡಿ ನುಡಿಸುವ
ಎಲ್ಲ ಎಲ್ಲ ಬಾಯಿಯೂ;
ಮಾಗಲೆಂದು ಕಾದಿರುವೀ
ಎಲ್ಲ ಎಲ್ಲ ಕಾಯಿಯೂ ಕನ್ನಡವೋ ಕನ್ನಡ.


ಎಂದು ಹಾಡುತ್ತ ಜಾತಿ, ಮತ, ಧರ್ಮ, ಬಡವಬಲ್ಲಿದ, ಮೇಲುಕೀಳುಗಳೆಲ್ಲವನ್ನೂ ಮೀರಿದ "ಸೆಕ್ಯುಲರ್ ಕನ್ನಡ"ಕ್ಕಾಗಿ ಹಂಬಲಿಸಿದ್ದರು ಅಡಿಗರು.

ನಮ್ಮ ಉಸುರು, ನಮ್ಮ ಕಸುವು ಕನ್ನಡ;
ನಮ್ಮ ಹೆಸರು, ನಮ್ಮ ಕಸುಬು ಕನ್ನಡ -
ಕನ್ನಡವಿದು ಕನ್ನಡ, -
ಬನ್ನಿ ನಮ್ಮ ಸಂಗಡ
ಒಂದಾಗುವ ಎಂದೆದ್ದರೆ ತಡೆವ ಬಂಟರೆಲ್ಲಿ?
ಕನ್ನಡ ಜನ ಕವಿದೆದ್ದರೆ ನಿಲುವ ಗಂಡರೆಲ್ಲಿ?


ಈ ಸಾಲುಗಳಲ್ಲಿ ನೋಡಿ ಕನ್ನಡಿಗರ ಬದುಕಿನ ಪ್ರತಿಯೊಂದೂ "ಕನ್ನಡ"ವೇ ಆಗಬೇಕು ಎಂಬ ಆಶಯವನ್ನ ಅಡಿಗರು ವ್ಯಕ್ತಪಡಿಸುತ್ತಾರೆ. ನಮ್ಮ "ಕಸುಬು" ಕೂಡ ಕನ್ನಡವೇ ಆಗಬೇಕು ಎಂದು. ಇದಕ್ಕೆ ನಮ್ಮ ಸಂಪದವೇ ಸಾಕ್ಶಿ. ಸಂಪದಿಗರಲ್ಲೂ ಬಹಳಶ್ಚು ಜನ ಹೊಟ್ಟೆಪಾಡಿಗಾಗಿ ಏನೇ ಮಾಡಿದರೂ ಕನ್ನಡವನ್ನು ಉಸುರಾಗಿ ಮಾಡಿಕೊಂಡಿದ್ದಾರೆ. ಆದರೆ, ನಮ್ಮಲ್ಲಿ ಕೊರತೆಯಿರುವುದು "ಹೋರಾಟ"ಕ್ಕೆ. ಬೇರೆ ಭಾಶೆಯ ಜನರ ಹಾಗೆ ನ್ನಡ ಜನ ಒಂದಾಗುವುದು ಕಡಿಮೆ. ಬೇರೆ ಭಾಶೆಯ ಜನರು ಜಾತಿ ಮತ ಎಲ್ಲವ ಮರೆತು ಭಾಶೆಯ ಮೂಲಕ ಒಂದಾದರೆ, ನಾವು ಕನ್ನಡಿಗರು ಜಾತಿ ಮತಗಳನ್ನು ನೋಡುತ್ತ ದೂರಾಗುತ್ತೇವೆ. ಹಾಗಾಗಿ, "ಕನ್ನಡ ಜನ ಕವಿದೆದ್ದರೆ ನಿಲುವ ಗಂಡರೆಲ್ಲಿ?" ಎನ್ನುವುದು ನಿಜವಾದರೂ ಹಾಗೆ ನಿಲ್ಲುವ ಒಗ್ಗಟ್ಟು ತೋರಬೇಕು. ಧೈರ್ಯ ಮಾಡಬೇಕು. ನಿರಭಿಮಾನ ಬಿಟ್ಟು ಅಭಿಮಾನ ಬೆಳೆಸಿಕೊಳ್ಳಬೇಕು.

ಆಗುತಲಿದೆ, ಆಗಿದೆ - ಅಗೊ
ಕನ್ನಡವೊಂದು;
ಬನ್ನಿರಣ್ಣ ತಮ್ಮ ಎಂದು
ಎದೆಯೆ ಕೂಗುವಂದು,
ಮಾತು ಸಾಕು, ಅರ್ಥವುಗುವ
ಮತಿಯ ಬಿಂದು ಬಿಂದು
ಬಿದ್ದರೊಂದು ಬಹರು ನೂರು
ಲಕ್ಷ ಹಿಂದು ಮುಂದು.


ನಮ್ಮ ಹಾಗೆ ಭಾಶೆಯ ಹೆಸರಲ್ಲಿ ಇಡೀ ತಿಂಗಳು ಹಬ್ಬವನ್ನು ಆಚರಿಸುವ ಬೇರೆ ನಾಡು ಎಲ್ಲಿಯಾದರೂ ಉಂಟೆ? ಆದರೆ, ನಾವೆಲ್ಲರೂ "ನವೆಂಬರ್ ಕನ್ನಡಿಗರು" ಎಂದೇ ಖ್ಯಾತರಾಗಿದ್ದೇವೆ. ಅಡಿಗರ ಆಶಯದಂತೆ "ನಮ್ಮ ಉಸುರು, ನಮ್ಮ ಕಸುವು ಕನ್ನಡ; ನಮ್ಮ ಹೆಸರು, ನಮ್ಮ ಕಸುಬು ಕನ್ನಡ" ಆಗಬೇಕು. ಆಗಶ್ಟೆ ಕನ್ನಡದ ಹೆಸರಲ್ಲಿ ನಾವು ಮಾಡುವ ಯಾವುದೇ ಹಬ್ಬ, ಆಚರಣೆಗಳು ಸಾರ್ಥಕಗೊಳ್ಳುವುದು. ಬರೀ ನಮ್ಮದು "ಶಾಸ್ತ್ರೀಯ ಕನ್ನಡ," 2000 ವರ್ಶಗಳಿಗೂ ಮೀರಿದ ಪುರಾತನ ಭಾಶೆ ಹಾಗೆ ಹೀಗೆ ಎಂದು ಬಾಯಿ ಮಾತಿಗೆ ಹೆಮ್ಮೆಪಟ್ಟರೆ  ಅದರಲ್ಲಿ ಯಾವ ಅರ್ಥವೂ ಇಲ್ಲ... ಅದರಿಂದ ಕನ್ನಡಕ್ಕೆ ಯಾವ ಲಾಭವೂ ಆಗಲಾರದು.

ಇನ್ನಾದರೂ "ಸಿರಿಗನ್ನಡಂ ಗಲ್ಗೆ, ಸಿರಿಗನ್ನಡಂ ಎಲ್ಗೆ" ಎನ್ನುವಂತಾಗದೆ, "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ" ಎಂದು ನಿಜವಾಗಿಯೂ ಹಾಡಲು ಈ "ಕನ್ನಡ ದಿನ"ದಂದು ಸಂಕಲ್ಪ ಮಾಡೋಣ!

Rating
No votes yet

Comments