ಅಪ್ಪ ಮಾಡುತ್ತಿದ್ದ ಒಕ್ಕಲುತನ

ಅಪ್ಪ ಮಾಡುವ ಒಕ್ಕಲುತನ ಪ್ರಯೋಜನವಿಲ್ಲದ್ದು. ಅಪ್ಪನ ಸಂಪ್ರದಾಯವನ್ನು 'ಮೂಢನಂಬಿಕೆ' ಎಂದೆವು . ಒಂದೇ ಬೆಳೆಯನ್ನು ಬೆಳೆದು ಹೆಚ್ಚು ಹಣ ಗಳಿಸಿ ದಿಡೀರನೆ ಶ್ರೀಮಂತರಾಗುವ ಕನಸು ಕಂಡೆವು. ಕಬ್ಬು, ಹತ್ತಿ, ತಂಬಾಕು ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯತೊಡಗಿದೆವು, ಪರ್ಯಾಯ ಬೆಳೆ ಮಾಡುತಿದ್ದ ಅಪ್ಪನ ಹೊಲದಲ್ಲಿ ಒಂದೇ ಬೆಳೆಯನ್ನು ಹತ್ತಾರು ವರುಷ ಬೆಳೆಯತೊಡಗಿದೆವು. ಕಾಲಗೈಯಂತಹ ಪದ್ದತಿ ಅನುಸರಿಸುವುದನ್ನೇ ಬಿಟ್ಟೆವು. ಹೆಚ್ಚು ಹೆಚ್ಚು ನೀರು ಹಾಯಿಸಿ, ಹೆಚ್ಚು ರಾಸಾಯನಿಕ ಗೊಬ್ಬರ ಬಳಸಿ, ರಾಸಾಯನಿಕ ಕೀಟನಾಶಕ ಬಳಸಿ, ಹೆಚ್ಚು ಬೆಳೆ ತೆಗೆಯುವ ಗುರಿ ಸಾಧಿಸಿದೆವು. ಆದರೆ ಸಮೃದ್ಧಿಯ ಬಸಿರಲ್ಲಿ ಸಾವಿರಾರು ಸಮಸ್ಯೆಗಳು ಹುಟ್ಟಿಕೊಂಡಿದ್ದರಿಂದ ನಾವೆಲ್ಲ ಹತಾಶೆಗೊಂಡಿದ್ದೇವೆ. ಹೈಬ್ರಿಡ್ ಬೀಜಗಳ ಇಳುವರಿ ಎರಡು ಮೂರು ವರ್ಷಗಳಲ್ಲಿ ಕಡಿಮೆಯಾಯಿತು. ಅತಿಯಾದ ರಸಗೊಬ್ಬರ ಹಾಗೂ ರಾಸಾಯನಿಕ ಕೀಟನಾಶಕಗಳ ಬಳಕೆಯಿಂದಾಗಿ ಹೊಲದ ಮಣ್ಣು ಕೆಟ್ಟಿತ್ತು. ಹೊಲ ಮತ್ತು ರೈತನ ನಡುವೆ ಅನ್ಯೋನ್ಯ ಸಂಬಂಧ ಇತ್ತು. ಅಪ್ಪ 'ಹೊತ್ತೇರಿ ಹೊಲಕ್ಕೆ ಹೋದವ ರೈತನೇ ಅಲ್ಲ' ಎಂದು ತನ್ನ ದಿನಚರಿಯನ್ನು ಹೊಲದ ಮುಖ ನೋಡಿಯೇ ಆರಂಭಿಸುತ್ತಿದ್ದ. ಬೆಳಗಾಗುವಷ್ಟರಲ್ಲಿ ಹೊಲಕ್ಕೆ ಹೋಗಿ, ಇಂದು ಯಾವ ಕೆಲಸ ಮಾಡಲು ಹದ ಬಂದಿದೆ ಎಂಬುದನ್ನು ನಿರ್ಧರಿಸಿ ಆ ರೀತಿ ಹೊಲದ ಕೆಲಸ ಕಾರ್ಯ ಮಾಡುತ್ತಿದ್ದ ಅವ್ವ ಮತ್ತು ಅಮ್ಮ ಸಹಿತ 'ಬೆಳಗಾಗುತ ಎದ್ದು ಯಾರಾ್ಯರ ನೆನೆಯಲಿ, ಎಳ್ಳು ಜೀರಿಗೆ ಬೆಳೆವಂತ ಭೂಮಿ ತಾಯಿಯ ಎದ್ದೊಂದು ಗಳಿಗೆ ನೆನೆದೇನ'ಎಂದು ಭೂಮಿತಾಯಿಯನ್ನ ನೆನೆಯುತ್ತ, ಪ್ರಾರ್ಥನೆ ಮಾಡುತ್ತ ತನ್ನ ದಿನದ ಕೆಲಸಕ್ಕೆ ತೊಡಗುತ್ತಿದ್ದಳು. ಹೊಲ ಎಂದರೆ ಸಸ್ಯಗಳನ್ನು ಬೆಳೆಸುವ ಯಂತ್ರವಲ್ಲ. ಅದು ಸಕಲ ಜೀವರಾಶಿಗಳಿಗೆ ಆಶ್ರಯಸ್ಥಾನ ಎನಿಸಿತ್ತು. ಅಂತೆಯೆ ಅವರಿಗೆ ಹೊಲದ ಬಗ್ಗೆ ಗೌರವ ಇತ್ತು ಹೊಲದ ಮೇಲೆ ನಂಬಿಕೆ ಇತ್ತು ಪೂಜ್ಯ ಭಾವನೆ ಇತ್ತು. ಹೀಗಾಗಿ ಯಾರು ಹೊಲದ ಕೆಲಸ ಕಾರ್ಯ ಮಾಡುವಾಗ ಹೊಲದಲ್ಲಿ ಚಪ್ಪಲಿ ಹಾಕಿಕೊಂಡು ಹೋಗುತ್ತಿರಲಿಲ್ಲ. ಹೊಲದಲ್ಲಿರುವ ಸೂಕ್ಷ್ಮ ಜೀವಾಣುಗಳು ನಾಶವಾದವು ಅಥವಾ ಹೊಲದ ಮಣ್ಣು ಗಟ್ಟಿಯಾದೀತೆಂಬ ಭಾವನೆಯೂ ಅವರಲ್ಲಿತ್ತು. ಕೊಯ್ಲು ಮಾಡಿದ ಹೊಲದಲ್ಲಿ ಹಕ್ಕಲು ತೆನೆಗಳನ್ನೋ, ಸಾಸಿವೆಯನ್ನೋ ಬೆಳೆದ ಗುರೆಳ್ಳನ್ನೋ ಆರಿಸುವದರ ಬದಲಾಗಿ ಪ್ಲಾಸ್ಟಿಕ್ ಹಾಳೆಗಳನ್ನೋ ಔಷಧಿ ಸಿಂಪಡಿಸಿದ ಪ್ಲಾಸ್ಟಿಕ್ ಡಬ್ಬಿಗಳನ್ನು ಆರಿಸಿ ತೆಗೆಯುವ ಕೆಲಸ ನನ್ನ ಪಾಲಿಗೆ ಬಂದಿದೆ. ಹೊಲದೊಡನೆ ನಮಗೆ ಯಾವ ಸಂಬಂಧವೂ ಇಲ್ಲದಾಗಿದೆ. ಒಡನಾಟವೂ ಇಲ್ಲದಾಗಿದೆ. ಹೊಲ ಎಂದರೆ ಅದೊಂದು ನೀರ್ಜಿವ ಯಂತ್ರ ಎಂದು ಭಾವಿಸಿದ್ದೇವೆ. ನಮಗೆ ಯಾವ ಸ್ವಾತಂತ್ರ್ಯವೂ ಇಲ್ಲದಾಗಿದೆ. ಟ್ರಾಕ್ಟರಿನಿಂದ ಗಳೆ ಹೊಡೆಯಲು ಡಿಸಾಯಿಲ್ ತರಲು ಪಟ್ಟಣಕ್ಕೆ ಹೋಗಬೇಕು. ಬೀಜ ತರಲು ಕಂಪನಿಯ ಅಂಗಡಿಗೆ ಹೋಗಬೇಕು. ಗೊಬ್ಬರದ ಚೀಲ ತರಲು ಗೊಬ್ಬರದ  ಅಂಗಡಿಗೆ ಹೋಗಬೇಕು. ಬೆಳೆಗಳಿಗೆ ರೋಗ ಮತ್ತು ಕೀಟದ  ಬಾಧೆ ಆದರೆ ರಾಸಾಯನಿಕ ಕೀಟನಾಶಕ ಮತ್ತು ಔಷಧಿ ತರಲು ಕಂಪನಿಗಳ  ಅಂಗಡಿಗೆ ಹೋಗಬೇಕಾಗಿದೆ. ಒಕ್ಕಿದ ಕಾಳನ್ನು ಹಗೇವು ಮತ್ತು ಕಣಜಗಳಲ್ಲಿ ಸಂಗ್ರಹಿಸಿಡದೆ, ಒಕ್ಕಿದ ಕೊಡಲೇ ಹೊಲದಿಂದ ನೇರವಾಗಿ ಮಾರ್ಕೆಟ್ಟಿಗೆ ಹೋಗಿ ಮಾರಾಟ ಮಾಡುತ್ತೇವೆ. ಗಡಿಗೆಯಲ್ಲಿಟ್ಟ ಬೀಜ ಬಿತ್ತಿ, ಹಿತ್ತಲಿನ ತಿಪ್ಪೆಯ ಗೊಬ್ಬರ ಹಾಕಿ, ಎತ್ತಿಲೆ ಗಳೆ ಹೊಡೆದು ಬೆಳೆ ಮಾಡುತ್ತಿದ್ದ ನನ್ನಪ್ಪನಿಗಿದ್ದ ಯಾವ ಸ್ವಾತಂತ್ರ್ಯವೂ ನನಗಿಲ್ಲದಾಗಿದೆ. ಎಲ್ಲವನ್ನು ಕೊಂಡು ತಂದು ಕೊಂಡು ತರಲು ಸಾಲ  ಮಾಡಿ, ಬ್ಯಾಂಕಿನ ಬೋಜಾ ಹೊಲದ ಮೇಲೆ ಕೂಡ್ರಿಸಲಾಗಿದೆ.' ಹಾಗೆ ನೋಡಿದರೆ ಹೊಲದ ಮೇಲೆ ನನ್ನ ಅಧಿಕಾರವೂ ಇಲ್ಲ. ಉತಾರದಲ್ಲಿ ಮಾತ್ರ ನನ್ನ ಹೆಸರು ಉಳಿದಿದೆ. ನನಗರಿವಿಲ್ಲದಂತೆ ಮತ್ತೊಬ್ಬರ ನಿಯಂತ್ರಣಕ್ಕೊಳಪಟ್ಟಿರುವೆ. ನನ್ನ ಹೊಲವೂ ಸಹಿತ ಬೇರೆಯವರ ಅಧಿಪತ್ಯದಲ್ಲಿದೆ. ಹೊಲ - ಎತ್ತು - ಗಳೆ -ಬೆಳೆ -ರೈತ, ಮತ್ತು ಗೊಬ್ಬರ ಇವುಗಳದ್ದೇ ಆದ ಒಂದು ಸಾವಯವ ಚಕ್ರ ಹಾಗೂ ಇವುಗಳ ನಡುವೆ ಸಾವಯವ ಸಂಬಂಧವಿತ್ತು. ಎತ್ತು, ಎಮ್ಮೆ, ಆಕಳುಗಳು ಉತ್ಕೃಷ್ಟವಾದ ಸೆಗಣಿ ಗೊಬ್ಬರ ಕೊಡುತ್ತವೆ. ಎತ್ತುಗಳು ಹೊಲದಲ್ಲಿ ಗಳೆ ಹೊಡೆಯಲು ಬಳಕೆಯಾಗುತ್ತವೆ.  ಆಕಳು-ಎಮ್ಮೆಗಳು ಹಾಲು-ಹೈನ ಒದಗಿಸುವುದರ ಜೊತೆಗೆ ಒಕ್ಕಲುತನ ಮಾಡಲು ಹೋರಿ ಮತ್ತು ಕೋಣಗಳಿಗೆ ಜನ್ಮ ಕೊಡುತ್ತವೆ. ಇವೆಲ್ಲ ಹೊಲದಲ್ಲಿ ಬೆಳೆದ ಕಣಿಕೆ, ಹುಲ್ಲು ತಿಂದು ಬದುಕುತ್ತವೆ. ತೆನೆ - ಕಾಳು ನಮಗಾದರೆ ಕಣಿಕೆ-ಹೊಟ್ಟು ದನಗಳಿಗೆ ಹೊಟ್ಟೆ ತುಂಬಿಸುತ್ತದೆ. ನನ್ನ ಅಜ್ಜ ಮತ್ತು ಅಪ್ಪಂದಿರು ಕೇವಲ ತಮ್ಮ ಹೊಟ್ಟೆ ಬಟ್ಟೆಯ ಯೋಚನೆಯಿಂದ  ಬೆಳೆ ಮಾಡುತ್ತಿರಲಿಲ್ಲ. ತಮ್ಮ ಉಪಜೀವನದ ಜೊತೆಗೆ ದನಕರುಗಳ ಉಪಜೀವನ ಮಾಡಲು ತಕ್ಕ ಬೆಳೆಗಳನ್ನು ಅಂದರೆ ಸತ್ವಯುತವಾದ ನವಧಾನ್ಯಗಳನ್ನು ಬೆಳೆಯುತ್ತಿದ್ದ. ಹಂಗಾಮಿಗನುಸರಿಸಿ ಬೆಳೆ ಮಾಡಿ ರೋಗ ಮತ್ತು ಕೀಟಗಳ ಬಾಧೆಯಿಂದ ಬೆಳೆಗಳನ್ನು ರಕ್ಷಿಸುವ ಜ್ಞಾನ ಅವರಲ್ಲಿತ್ತು. ಹೈಟೆಕ್ ಕೃಷಿಯ ಬೆನ್ನು ಹತ್ತಿ ಸಾಂಪ್ರದಾಯಿಕ ಜ್ಞಾನವನ್ನು ಮರೆತುಬಿಟ್ಟೆವು. ಹೊಲ ಮತ್ತು ಮಳೆಯ ಮೇಲಿನ ನಂಬಿಕೆ , ಶ್ರದ್ದೆ ಇಂದಿಲ್ಲಾಗಿದೆ. ಸಾವಯವ ಕೃಷಿ ನಮಗೆಲ್ಲ ತಿಳಿಯದ ಸಂಗತಿ, ನನ್ನಪ್ಪನಿಗೆ ಸಾವಯವ ಕೃಷಿ ರಕ್ತಗತವಾಗಿತ್ತು. ಹತ್ತಾರು ವರುಷ ಮಳೆ, ಚಳಿ, ಗಾಳಿ, ಬಿಸಿಲು ಸಹಿಸಿ ಶ್ರಮವಹಿಸಿ ಒಕ್ಕಲುತನ ಮಾಡಿದ ರೈತನಿಗೆ ಸಾವಯವ ಕೃಷಿ ಸಹಜವೆನಿಸಿತ್ತು. ಕೈಯಳತೆಯಲ್ಲೇ ಸಿಗುವ ಕೃಷಿ ಪರಿಕರಗಳಿಂದ ಒಕ್ಕಲುತನ ಮಾಡಿದವರಿಗೆ ಇದೇನು ಹೊಸತಲ್ಲ. ಸರಕಾರವೇ ಸಾವಯವ ಕೃಷಿ ನೀತಿ ರೂಪಿಸುವ ಹಂತಕ್ಕೆ ಬಂದಿದ್ದು ಸಾವಯವ ಕೃಷಿ ಅನಿವಾರ್ಯ ಎಂಬುದು ಮನದಟ್ಟಾಗಿದೆ. ಹಂಗಾಮಿಗನುಸರಿಸಿ ಬೆಳೆ ಮಾಡುವದಾಗಲಿ, ಜವಾರಿ ಬೀಜಗಳ ಮಹತ್ವವಾಗಲಿ ನನ್ನಪ್ಪನ ತಲೆಮಾರಿನ ರೈತರಿಗೆ ತಿಳಿಸಿಕೊಡುವ ಅಗತ್ಯವಿಲ್ಲ. ತರಬೇತಿ ಕೊಡುವ ಅವಶ್ಯಕೆತೆಯಿಲ್ಲ. ನಮಗೆ ಎನ್. ಪಿ. ಕೆ. ಮಾತ್ರ ಗೊತ್ತು. ಬೆಳೆಗಳಿಗೆ ೧೬ ಲಘು ಪೋಷಕಾಂಶಗಳೂ ಬೇಕೆಂಬುದು ತಿಳಿಯದ ಸಂಗತಿಯಾಗಿದೆ. ನಿಸ್ಸಾರಗೊಂಡಿರುವ ಹೊಲದ ಮಣ್ಣನ್ನು ಸುಧಾರಿಸಲು ಅಪ್ಪ ಮಾಡುತ್ತಿದ್ದ ಒಕ್ಕಲುತನ ಅಳವಡಿಸಿಕೊಳ್ಳುವುದು ಒಂದೇ ದಾರಿ. ಬೆಳೆಗಳನ್ನು ಕೀಟಗಳಿಂದ ರಕ್ಷಿಸಲು ವಿಷದ ನೀರನ್ನೆರದು ಬೆಳೆಸಿರುವ ನಮಗೆ ನಾವು ಉಣ್ಣುವ ಊಟವು ವಿಷವಾಗಿದೆ ಎಂಬುದರ ಅರಿವೂ ಇಲ್ಲ. ನಾವು ಉಣ್ಣುವ ಊಟ, ಹಣ್ಣು, ತರಕಾರಿ ಎಲ್ಲವೂ ವಿಷ ಮಿಶ್ರಿತಆಗಿರುವ ಸಂಗತಿ ನಮಗೆ ಮಹತ್ವದ್ದಾಗಿಲ್ಲ. ಮತ್ತು ನಾವು ಮಾಡುತ್ತಿರುವುದು ಕೆಡುಕೆಂಬ ಭಾವನೆಯೂ ನಮ್ಮಲಿಲ್ಲ. ಇದರಿಂದ ನಮ್ಮ ಆರೋಗ್ಯದ ಮೇಲೆ ಎಂತಹ ದುಷ್ಪರಿಣಾಮ ಆದೀತೆಂಬ ಅಳುಕೂ ಇಲ್ಲ. ಇದೆ ಸಂಗತಿ ನನ್ನ ಅಪ್ಪನ ತಲೆಮಾರಿನ ಒಕ್ಕಲಿಗರಿಗೆ ಪಾಪದ ಸಂಗತಿಯಾಗುತ್ತದೆ. ತಾನು ಕೀಟಗಳಿಂದ ಬೆಳೆ ರಕ್ಷಿಸಲು ಎಷ್ಟು ಕೀಟಗಳನ್ನು ಕೊಲ್ಲುತ್ತಿರುವೆನೆಂಬ ಪಾಪಪ್ರಜ್ಞೆ ಕಾಡುತ್ತಿತ್ತು. ಯಾವ ಜೀವಿಯನ್ನು ಕೊಲ್ಲದೆ ಅಹಿಂಸಾತ್ಮಕ ಬೇಸಾಯ ಮಾಡುತ್ತಿದ್ದ ಅಪ್ಪನಿಗೆ ವಿಷಮಿಶ್ರಿತ ಉಣ್ಣುವುದಾಗಲಿ, ಇತರರಿಗೆ ಉಣಿಸುವದಾಗಲಿ ಅಪರಾಧ ಎನಿಸುತ್ತಿತ್ತು. ನಮಗೆ ಹಣವಷ್ಟೇ ಮುಖ್ಯ ಪರಿಸರ, ಸೂಕ್ಷ್ಮ ಜೀವಾಣುಗಳಾಗಲಿ, ಉಪಕಾರಿ ಕೀಟಗಳಾಗಲಿ, ನಾಶವಾಗುವುದು ಪಾಪದ ಸಂಗತಿಯೂ ಅಲ್ಲ. ಅದಕ್ಕಾಗಿ ಪ್ರಾಯಶ್ಚಿತ್ತ ಪಟ್ಟವರೂ ಅಲ್ಲ. ಪಾಪ- ಪುಣ್ಯದ ದೃಷ್ಟಿ ನಮ್ಮಲಿಲ್ಲದಾಗಿದೆ. ಪಾಪ ಮಾಡಲು ಅಪ್ಪ ಅಂಜುತ್ತಿದ್ದ. ನಾವು ಅಂಜಲಾರೆವು. ನಾವೆಲ್ಲ ಹಣದ ರೂಪದಲ್ಲಿ ಲಾಭ - ಹಾನಿಯ ಲೆಕ್ಕಾಚಾರದಲ್ಲಿ ಮುಳುಗಿದವರು. ಪುಣ್ಯವನ್ನೇ ಮಾಡಿದ ಅಪ್ಪ ಅನ್ಯರಿಗೂ ಒಳ್ಳೆಯೆದನ್ನೇ ಬಯಸಿದ್ದಾರೆ. ಒಳ್ಳೆಯದೆನ್ನೇ ನೀಡಿದ್ದಾರೆ. ಒಕ್ಕಲುತನದ ಪರಿಭಾಷೆ ಇಂದು ಬದಲಾಗಿದೆ. ಒಕ್ಕಲುತನದ ಪರಂಪರೆಯ ಜ್ಞಾನ ಮತ್ತು ಒಕ್ಕಲುತನದ ಧರ್ಮ ಇಂದು ನಶಿಸಿಹೋಗುತ್ತಿದೆ. ಒಂದು ಬೆಳೆಗೆ, ಮೆನೆಗೆ, ಪಶುವಿಗೆ, ಎತ್ತಿಗೆ, ಯಂತ್ರಕ್ಕೆ ವಿಮೆ ಮಾಡಿಸಿ ಪರಿಹಾರ ಪಡೆಯಬಹುದಾಗಿದೆ. ಆದರೆ ರೈತರ ಒಕ್ಕಲುತನದ ಪರಂಪರೆಯ ಜ್ಞಾನ ಅತ್ಯಮೂಲ್ಯವಾಗಿದ್ದು , ರೈತರ ಪರಂಪರೆಯ ಜ್ಞಾನಕ್ಕೆ, ಒಕ್ಕಲುತನದಲ್ಲಿ ಪಡೆದ ಅನುಭವಕ್ಕೆ ವಿಮೆ ಮಾಡಿಸಿ ಪರಿಹಾರ ಪಡೆಯಲು ಬರಲಾರದು. ಪ್ರಗತಿಪರರೆನಿಸಿದ ನಾವೆಲ್ಲ ರೈತರು ನಮ್ಮ ಅಪ್ಪನಿಗಿಂತ ಬಹಳಷ್ಟು ಮುಂದುವರೆದಿದ್ದೇವೆ. ಇನ್ನು ಮುಂದೆ ಹೋಗಲಾರೆವು. ಆ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇವೆ. ಆದರೆ ಹಿಂದೆ ತಿರುಗಿ ಬರಲು ಸಾಧ್ಯವಾದೀತೇ? 
                                                                                                                                                                                                             -- ಈರಯ್ಯ ಕಿಲ್ಲೇದಾರ