ಔಷಧೀಯ ಸಸ್ಯ -೮: ಜೀವಂತಿ

ಕನ್ನಡ ಹೆಸರು : ಜೀವಹಾಲೆ ಬಳ್ಳಿ, ಪಾಲತಿಗೆ ಬಳ್ಳಿ, ಹಾರಂದೊಡೆ
ಸಂಸ್ಕೃತ ಹೆಸರು : ಜೀವಂತಿ, ಸ್ವರ್ಣಜೀವಂತಿ
ಹಿಂದಿ ಹೆಸರು : ಜೀವಂತಿ, ಡಿದೀಶಾಕ
ಸಸ್ಯಶಾಸ್ತ್ರೀಯ ಹೆಸರು : Leptadenia reticulate
 
ಹಳ್ಳಿಗಳಲ್ಲಿ ಪೊದೆಗಳ ಮೇಲೆ ಹಬ್ಬಿ ಬೆಳೆಯುವ ಬಳ್ಳಿ ಜೀವಂತಿ. ಇದರ ಬೆಳೆದ ಬಳ್ಳಿಕಾಂಡದ ಬಣ್ಣ ಹಳದಿ ಮಿಶ್ರಿತ ಕಂದು. ಇದರ ಎಲೆಗಳು ಅಂಡ-ಹೃದಯಾಕಾರದವು. ಬಳ್ಳಿಯಲ್ಲಿ ಒಂದಕ್ಕೆದುರಾಗಿ ಇನ್ನೊಂದು ಎಲೆಗಳಿರುತ್ತವೆ. ಇದರ ಹೂಗೊಂಚಲಿನಲ್ಲಿರುವ ಹೂಗಳ ಬಣ್ಣ ಹಸುರು ಮಿಶ್ರಿತ ಹಳದಿ. ಬಳ್ಳಿಕಾಂಡದ ಹಾಲಿನ ಬಣ್ಣ ತಿಳಿಹಳದಿ.
 
ತಂಪು ಜಾಗದಲ್ಲಿ ಹುಲುಸಾಗಿ ಬೆಳೆಯುವ ಬಳ್ಳಿ ಜೀವಂತಿ. ಇದರ ಎಲೆ, ಕಾಂಡ ಮತ್ತು ಬೇರು ಔಷಧಿಯಾಗಿ ಬಳಕೆ. ಇದರ ಎಲೆ ಮತ್ತು ಕಾಂಡವನ್ನು ಸಣ್ಣದಾಗಿ ತುಂಡು ಮಾಡಿ, ಬೇಯಿಸಿ ಒಗ್ಗರಣೆ ಹಾಕಿದರೆ ಪಲ್ಯ ತಯಾರು. ಹಾಗೆಯೇ ಎಲೆಗಳನ್ನು ಜೀರಿಗೆ ಜೊತೆ ಹುರಿದು, ತೆಂಗಿನಕಾಯಿ ತುರಿ ಸೇರಿಸಿ ರುಬ್ಬಿ, ಮಜ್ಜಿಗೆ ಅಥವಾ ಮೊಸರು ಬೆರೆಸಿದರೆ ಊಟಕ್ಕೆ ರುಚಿಯಾದ ತಂಬುಳಿ ಸಿದ್ಧ. ಇದರ ಎಲೆ ಜಾನುವಾರುಗಳಿಗೆ ಒಳ್ಳೆಯ ಆಹಾರ.
 
ಔಷಧೀಯ ಬಳಕೆ (ವಿವಿಧ ಮೂಲಗಳಿಂದ):
 

  • ಮೈಯಲ್ಲಿ ಬೊಬ್ಬೆಗಳು ಎದ್ದಾಗ, ಜೀವಂತಿಯ ಬೇರನ್ನು ಅರೆದು ಲೇಪಿಸಿದರೆ ಉರಿ ಮತ್ತು ತುರಿಕೆ ಕಡಿಮೆಯಾಗುತ್ತದೆ.
  • ಮಲಬದ್ಧತೆ ಗುಣವಾಗಲು ಇದರ ಎಲೆಯ ರಸ ಅಥವಾ ಬೇರಿನ ಕಷಾಯದ ಸೇವನೆ ಉಪಯುಕ್ತ.
  • ಬಾಣಂತಿಯರಿಗೆ ಎದೆಹಾಲು ಹೆಚ್ಚಾಗಲು ಜೀವಂತಿಯ ಎಲೆಗಳನ್ನು ಆಹಾರವಾಗಿ ಸೇವಿಸುವುದು ಸಹಕಾರಿ.

                                                                                                                                                --ಅಡ್ಡೂರು ಕೃಷ್ಣ ರಾವ್