ಕನ್ಯಾನದ ಕುಟುಂಬದ ಕೃಷಿಕಾಯಕ

ಕನ್ಯಾನದ ಕುಟುಂಬದ ಕೃಷಿಕಾಯಕ

ಜೂನ್ ೨೬, ೨೦೧೬ರಂದು ನಾವು ಹೊರಟದ್ದು ಕನ್ಯಾನದ ಗೋಪಾಲಕೃಷ್ಣ ಶರ್ಮರ ಮನೆಗೆ. ಮಂಗಳೂರಿನಿಂದ ಕಾರಿನಲ್ಲಿ ಮುಡಿಪು, ಬಾಕ್ರಬೈಲು ಹಾದಿಯಲ್ಲಿ ಸಾಗಿ ಒಡಿಯೂರು ಸಂಸ್ಥಾನದ ಪ್ರವೇಶದ್ವಾರದಲ್ಲಿ ಎಡಕ್ಕೆ ತಿರುಗಿ ಕನ್ಯಾನ ತಲಪಿದೆವು. ಅಲ್ಲಿಂದ ಅರ್ಧ ಕಿಲೋಮೀಟರ್ ಮುಂದಕ್ಕೆ ಹೋಗಿ, ವಿಷ್ಣುಮೂರ್ತಿ ದೇವಸ್ಥಾನದ ರಸ್ತೆಗೆ ಬಲಕ್ಕೆ ತಿರುಗಿದೆವು. ಅನಂತರ ಎಡಕ್ಕೆ ತಿರುಗಿ ಇಳಿಜಾರಿನ ಕಚ್ಚಾ ಹಾದಿಯಲ್ಲಿ ಸಾಗಿ ಶರ್ಮರ ಮನೆ ಮುಟ್ಟಿದೆವು. ಅವರ ತಂದೆ ಕಟ್ಟಿಸಿದ ೮೦ ವರುಷಗಳ ಹಳೆಯ ಮನೆ. ಹಂಚಿನ ಚಾವಣಿ. ಮನೆಯ ಎಡಪಕ್ಕದಲ್ಲಿ ಹಟ್ಟಿ – ದನಗಳು. ಹಟ್ಟಿಯ ಹಿಂಭಾಗದಲ್ಲಿ ಒಂದು ದೇಸಿ ಹೋರಿ ಮತ್ತು ಗೋಬರ್ ಗ್ಯಾಸ ಘಟಕ. ಪಕ್ಕದಲ್ಲಿ ಸ್ಲರಿ ಟ್ಯಾಂಕ್. ಮನೆಯೆದುರು ಎತ್ತರಿಸಿದ ಮಣ್ಣಿನ ಗುಪ್ಪೆಗಳಲ್ಲಿ ಚಿಗುರುತ್ತಿದ್ದ ಬೆಂಡೆಕಾಯಿ ಸಸಿಗಳು ಹಾಗೂ ತರಕಾರಿ ಬಳ್ಳಿ ಹಬ್ಬಿಸಲು ಕಟ್ಟಿದ್ದ ಚಪ್ಪರ. ಮೂಲೆಯಲ್ಲಿ ತುಳಸಿಕಟ್ಟೆ ಹಾಗೂ ಬೇಸಿಗೆಯಲ್ಲೂ ನೀರಿರುವ ಹಳೆಯ ಬಾವಿ. ಶರ್ಮರ ಮನೆಯ ಎಡಭಾಗದಲ್ಲಿ, ಮನೆಗಿಂತ ಕೆಳಮಟ್ಟದಲ್ಲಿ ಅಡಿಕೆ ತೋಟ. “ತೋಟದ ಕೆಲಸಕ್ಕೆ ಕೆಲಸದವರೇ ಸಿಗದಿರುವ ಈಗಿನ ಕಾಲದಲ್ಲಿ ನೀವು ಹ್ಯಾಗೆ ಅಡಿಕೆತೋಟ ಸಂಭಾಳಿಸಿಕೊಂಡು ಹೋಗ್ತಾ ಇದ್ದೀರಿ?” ಎಂದು ಅವರನ್ನು ಕೇಳಿದೆ. ಶರ್ಮರು ನಿಧಾನವಾಗಿ ತಮ್ಮ ಕತೆ ಬಿಚ್ಚಿದರು. “ನನ್ನ ಪಾಲಿಗೆ ಬಂದದ್ದು ಮೂರೂವರೆ ಎಕರೆ ತೋಟ. ಇದರಲ್ಲಿ ಹೆಚ್ಚಿನ ಕೆಲಸ ನಾನೇ ಮಾಡುವುದು. ಕೆಲಸದವರಿಂದ ಕೆಲಸ ಮಾಡಿಸುವುದನ್ನು ಕಡಿಮೆ ಮಾಡ್ತಾ ಬರಬೇಕು. ಹಾಗೆ ಮಾಡಿದರೆ ಮಾತ್ರ ಅಡಿಕೆ ತೋಟದಿಂದ ಲಾಭ ಮಾಡಿಕೊಳ್ಳಬಹುದು.” “ತೋಟಕ್ಕೆ ನೀರು ಬಿಡುವುದು ದೊಡ್ಡ ಕೆಲಸ. ನಾನು ಅದಕ್ಕಾಗಿ ಸ್ಪ್ರಿಂಕ್ಲರ್ ಹಾಕಿಸಿದ್ದೆ. ಅದರಿಂದ ಪ್ರಯೋಜನ ಇಲ್ಲ. ಯಾಕೆಂದರೆ, ಸ್ಪ್ರಿಂಕ್ಲರಿನ ನೀರು ಮಣ್ಣನ್ನು ಎರಡಿಂಚು ಮಾತ್ರ ಒದ್ದೆ ಮಾಡ್ತದೆ. ಅದು ಅಡಿಕೆ ಮರಗಳಿಗೆ ಸಾಕಾಗುವುದಿಲ್ಲ. ಹಾಗಾಗಿ ಸ್ಪ್ರಿಂಕ್ಲರ್ ತೆಗೆಸಿ, ಡ್ರಿಪ್ ಪೈಪುಗಳನ್ನು ಹಾಕಿಸಿದೆ. ಇದರಿಂದ ಜಿನುಗುವ ನೀರು ಅಡಿಕೆ ಮರಗಳಿಗೆ ಸಾಕಾಗ್ತದೆ. ಅಡಿಕೆ ತೋಟಕ್ಕೆ ಗೊಬ್ಬರ ಹಾಕುವುದು ಇನ್ನೊಂದು ದೊಡ್ಡ ಕೆಲಸ. ನನ್ನ ತಂದೆಯವರ ಕಾಲದಲ್ಲಿ ತೋಟದ ಹೊಂಡದಲ್ಲಿ ಕಂಪೋಸ್ಟ್ ಮಾಡಿ, ಅನಂತರ ಅದನ್ನು ಬುಟ್ಟಿಗಳಲ್ಲಿ ತಂದು ಅಡಿಕೆ ಮರಗಳಿಗೆ ಹಾಕ್ತಾ ಇದ್ದೆವು. ಈಗ ಅದೆಲ್ಲ ಸಾಧ್ಯವಿಲ್ಲ; ಅದಕ್ಕೆಲ್ಲ ಕೆಲಸದವರು ಸಿಗುವುದಿಲ್ಲ. ಈಗ ಸ್ಲರಿ ಟ್ಯಾಂಕ್ ನೋಡಿದ್ರಲ್ಲಾ? ಅದರಿಂದ ಅಡಿಕೆ ಮರಗಳಿಗೆ ನಾನೇ ಪೈಪ್ ಹಿಡಿದು ಸ್ಲರಿ ಬಿಡುತ್ತೇನೆ. ಒಂದೊಂದು ಅಡಿಕೆ ಮರಕ್ಕೆ ವರುಷಕ್ಕೆ ಒಂದು ಸಲ ೫ – ೬ ಲೀಟರ್ ಸ್ಲರಿ ಹಾಕುವುದು. ಅಡಿಕೆ ಮರಗಳಿಗೆ ರಾಸಾಯಕ ಗೊಬ್ಬರ ಕೂಡಾ ಹಾಕ್ತೇನೆ; ಎನ್ಪಿಕೆ ಮಿಶ್ರಣ ಮತ್ತು ಪೊಟಾಷ್ ಹಾಕ್ತೇನೆ.” “ಮಳೆಗಾಲದಲ್ಲಿ ಬೋರ್ಡೋ ದ್ರಾವಣ ಅಡಿಕೆ ಮರಗಳಿಗೆ ಸ್ಪ್ರೇ ಮಾಡಲೇ ಬೇಕು. ನಮಗೆ ಬೇಕಾದಾಗ ಕೆಲಸದವರು ಸಿಗುವುದಿಲ್ಲ. ನಾಲ್ಕೈದು ವರುಷ ನಾನೇ ಸ್ಪ್ರೇ ಮಾಡಿದ್ದೆ – ೩೫ ಅಡಿ ಎತ್ತರದ ಏಣಿ ಹತ್ತಿ, ಉದ್ದದ ಕೋಲು ಹಿಡಿದು ಆ ಕೆಲಸ ಮಾಡಿದ್ದೆ. ಇನ್ನೆರಡು ಕೆಲಸ ಉಂಟು – ಅಡಿಕೆ ಕೊಯ್ಯುವುದು ಮತ್ತು ಸುಲಿಯುವುದು. ಕೊಯ್ಲಿಗೆ ಇಲ್ಲಿಯ ವರೆಗೆ ಕೆಲಸದವರು ಬಂದಿದ್ದಾರೆ – ಸಮಸ್ಯೆ ಆಗಿಲ್ಲ. ಅಡಿಕೆ ಸುಲಿಯುವುದನ್ನು ನನ್ನ ಮನೆಯವಳೇ ಮಾಡ್ತಿದ್ದಾಳೆ.” ಶರ್ಮರ ಮನೆಯಾಕೆ ಡಿ. ಸವಿತಾ. ಗ್ರಾಮೀಣ ಮಹಿಳೆಯೊಬ್ಬಳು ಏನು ಸಾಧಿಸಬಹುದು ಎಂಬುದಕ್ಕೆ ಅವರು ಮಾದರಿ. ಸವಿತಾ ತಯಾರಿಸುವ ಹಲಸಿನ ಹಪ್ಪಳ, ಹಲಸಿನ ಚಿಪ್ಸ್, ಉಂಡ್ಲಕ (ಗೋಲಿಯಾಕಾರದ ತಿನಿಸು), ಅತಿರಸ (ಸಿಹಿ ತಿಂಡಿ) ಇತ್ಯಾದಿ ತಿಂಡಿತಿನಿಸುಗಳಿಗೆ ಬಹುಬೇಡಿಕೆ. ಬಹುಪಾಲು ಗ್ರಾಹಕರು ಅವರ ಮನೆಗೇ ಬಂದು ಖರೀದಿಸುತ್ತಾರೆ – ಅವು ಅಷ್ಟು ರುಚಿಯಾಗಿವೆ. ಅವರು ತಯಾರಿಸಿದ ಹಲಸಿನ ಹಪ್ಪಳ ಒಂದು ವರುಷವಾದರೂ ಕೆಡುವುದಿಲ್ಲ. ಇದಕ್ಕೆ ಕಾರಣ: ಹಪ್ಪಳವನ್ನು ಡ್ರೈಯರಿನಲ್ಲಿ ಒಣಗಿಸುತ್ತಾರೆ. ಅವರ ಮನೆಯ ಎಡಪಕ್ಕದಲ್ಲಿದೆ ಭುಜದೆತ್ತರದ ಡ್ರೈಯರ್. ಅದರಲ್ಲಿ ಒಮ್ಮೆಗೆ ೨೫ ಕಿಗ್ರಾ. ಕೊಬ್ಬರಿ ಒಣಗಿಸ ಬಹುದು. ಅದರ ಒಳಗೆ ನಾಲ್ಕು ಕಬ್ಬಿಣದ ಜಾಲರಿಗಳು – ಹಪ್ಪಳ, ಸಂಡಿಗೆ, ಜಾಯಿಕಾಯಿ ಇತ್ಯಾದಿ ಒಣಗಿಸಲು ಅನುಕೂಲ. ಡ್ರೈಯರಿನ ಕೆಳಭಾಗದಲ್ಲಿ ಸೌದೆ ಉರಿಸಿ ಬೆಂಕಿ ಹಾಕಲು ಜಾಲರಿ ಒಲೆ. ಆ ಒಲೆಯ ಹೊಗೆ ಹೊರಹೋಗಲು ವಿರುದ್ಧ ಬದಿಯಲ್ಲಿ ಕೊಳವೆ. ಹಾಗಂತ ಡ್ರೈಯರಿನಲ್ಲಿ ಒಣಗಿಸುವುದು ಸುಲಭವಲ್ಲ. ಅದರೊಳಗೆ ಹಪ್ಪಳ ಸಂಡಿಗೆ ಇಟ್ಟು, ಬೆಂಕಿ ಹಾಕಿದರೆ ಕೆಲಸವಾಯಿತು ಅಂತಲ್ಲ. ಬೆಂಕಿ ಒದಗಿಸುವ ಶಾಖವನ್ನು ಗಮನಿಸುತ್ತಲೇ ಇರಬೇಕು – ಶಾಖ ಹೆಚ್ಚಾದರೆ ಎಲ್ಲವೂ ಕರಟಿ ಹೋದೀತು, ಶಾಖ ಕಡಿಮೆಯಾದರೆ ಎಲ್ಲವೂ ಹಾಳಾದೀತು. ಸವಿತಾ ಅವರು ಹಪ್ಪಳ ಮಾಡುತ್ತಾಮಾಡುತ್ತಾ ಕಲಿತದ್ದು ಬಹಳ. ಹಪ್ಪಳ ಪ್ಯಾಕ್ ಮಾಡುವಾಗಲೂ ಎಚ್ಚರ ಅವಶ್ಯ. ಅವನ್ನು ಬಿಗಿಯಾಗಿ ಕಟ್ಟಿ ಇಟ್ಟರೆ, ಬೂಸ್ಟು ಬಂದು ಹಾಳಾಗುತ್ತದೆ. ಒಂದು ವರುಷ ಅವರು ಮಾರಾಟ ಮಾಡಿದ್ದ ಹಲಸಿನ ಹಪ್ಪಳ ಹಾಗೆ ಹಾಳಾಯಿತು. ಎಲ್ಲವನ್ನೂ ಹಿಂದಕ್ಕೆ ಪಡೆದು, ರೂಪಾಯಿ ೧೧,೦೦೦ ವಾಪಾಸು ಕೊಟ್ಟರು. ಡ್ರೈಯರಿಗೆ ಸಬ್ಸಿಡಿ ಸಿಕ್ಕಿತಾ ಎಂಬ ಪ್ರಶ್ನೆಗೆ ಶರ್ಮರ ಉತ್ತರ, “ಇಲ್ಲ. ಸರಕಾರಿ ಇಲಾಖೆಯ ಸಬ್ಸಿಡಿಗೆ ಅರ್ಜಿ ಕೊಟ್ಟರೆ ನಮ್ಮ ಸಮಯ ಹಾಳು, ಹಣವೂ ಕೈಬಿಡುತ್ತದೆ. ಇಲ್ಲಿಯ ವರೆಗೆ ನಾನು ಯಾವುದಕ್ಕೂ ಸಬ್ಸಿಡಿ ತಗೊಂಡಿಲ್ಲ. ಒಮ್ಮೆ ನಾನು ಸಬ್ಸಿಡಿಗೆ ಅರ್ಜಿ ಕೊಟ್ಟಿದ್ದೆ. ಒಂದು ತಿಂಗಳ ನಂತರ ಅಧಿಕಾರಿಗಳನ್ನು ಕಂಡಾಗ ಅವರು ಹೇಳಿದ್ದು, “ನಾವು ನಿಮ್ಮ ತೋಟಕ್ಕೆ ಬಂದು ನೋಡಬೇಕು. ನಮ್ಮನ್ನು ನೀವು ಜೀಪಿನಲ್ಲಿ ಕರೆದುಕೊಂಡು ಹೋಗಬೇಕು. ಅಲ್ಲಿ ಫೋಟೋ ತೆಗೆಸಬೇಕು.” ಅದಕ್ಕೆಲ್ಲ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಇದರ ಉಸಾಬರಿಯೇ ಬೇಡ ಅಂತ ನಾನು ವಾಪಾಸು ಬಂದೆ.” ಗೋಪಾಲಕೃಷ್ಣ ಶರ್ಮ – ಸವಿತಾ ಅವರ ಮಗಳು ಮದುವೆಯಾಗಿ ಹೋಗಿದ್ದಾಳೆ. ಅವರ ಮಗ ಬೆಂಗಳೂರಿನಲ್ಲಿ ಉದ್ಯೋಗಿ. ಅಡಿಕೆ ತೋಟದ ಆದಾಯ ಹಾಗೂ ಸವಿತಾ ಅವರ ತಿಂಡಿತಿನಿಸಿನ ಮಾರಾಟದ ಆದಾಯದಿಂದ ಹಳ್ಳಿಮನೆಯ ಬದುಕು ಮುನ್ನಡೆದಿದೆ. ಅಲ್ಲಿಂದ ಹೊರಟಾಗ ನೆನಪಾದದ್ದು ಗೋಪಾಲಕೃಷ್ಣ ಶರ್ಮರು ಹೇಳಿದ ಒಂದು ಮಾತು, “ಇನ್ನು ಹತ್ತು – ಇಪ್ಪತ್ತು ವರುಷದ ನಂತರ ಇಲ್ಲಿ ಭತ್ತ ಬೆಳೆಸುವವರು ಯಾರೂ ಇರುವುದಿಲ್ಲ.”