ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ?

ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ?

“ಕಾಳುಮೆಣಸು ಬಳ್ಳಿಯನ್ನು ಆಧಾರ ಮರಕ್ಕೆ ಹಬ್ಬಿಸುತ್ತೀರಲ್ಲಾ. ಒಂದೂವರೆಯಿಂದ ಎರಡು ಮೀಟರ್ ಎತ್ತರ ಬೆಳೆಯಲಿ. ನಂತರ ಮೇಲ್ಭಾಗದಿಂದ ಬಳ್ಳಿಯನ್ನು ಬಿಡಿಸುತ್ತಾ ಬನ್ನಿ. ಇದನ್ನು ನೆಲಮಟ್ಟದಿಂದ ಒಂದಡಿ ಎತ್ತರದ ವರೆಗೆ ಆಧಾರ ಮರಕ್ಕೆ ಸುತ್ತಿ. ಜಾರದಂತೆ ಬಳ್ಳಿಗಳನ್ನು ಹಗ್ಗದಿಂದ ಸಡಿಲವಾಗಿ ಕಟ್ಟಿ. ಕೊನೆಗೆ ತುದಿ ಭಾಗವನ್ನು ಮೇಲ್ಮುಖವಾಗಿ ದಾರದಿಂದ ಕಟ್ಟಿ. ಇದರಿಂದಾಗಿ ಕಾಳುಮೆಣಸಿನ ಬಳ್ಳಿಯ ಗಂಟುಗಳು ಬೇರುಬಿಟ್ಟು ನೆಲಕ್ಕಿಳಿಯುತ್ತವೆ. ಭೂಮಿಯಿಂದ ಹೆಚ್ಚು ಪೋಷಕಾಂಶ ಹೀರಲು ಸಹಾಯ ಮಾಡುತ್ತದೆ. ಪ್ರತಿ ಗಂಟುಗಳು ಚಿಗುರಿ ಆಧಾರ ಮರದ ಸುತ್ತ ಮೇಲೇರುತ್ತವೆ. ಬಳ್ಳಿಯು ವಿಶಾಲವಾಗಿ ಹಬ್ಬುತ್ತದೆ. ಇದರಿಂದ ಇಳುವರಿ ಹೆಚ್ಚು.” ಪುತ್ತೂರು (ದ.ಕ.) ತಾಲೂಕಿನ ಕೃಷಿಕ ನರಿಮೊಗ್ರು ಎಂ. ಮೋಹನ ರೈವರು ತನ್ನ ಅನುಭವವನ್ನು ಕೃಷಿಕರೊಂದಿಗೆ ಹಂಚಿಕೊಂಡರು. ಸಾಧಕ ಬಾಧಕಗಳನ್ನು ವಿನಿಮಯ ಮಾಡಿಕೊಂಡರು. ತನ್ನ ತೋಟಕ್ಕೆ ಆಹ್ವಾನಿಸಿದರು. “ಹೆಚ್ಚು ಇಳುವರಿ ಪಡೆಯಲು ಕಾಳುಮೆಣಸಿನ ಬಳ್ಳಿಯನ್ನು ಆಧಾರ ಮರದ ಸುತ್ತಲೂ ನೆಡಬೇಕಾಗಿಲ್ಲ. ನಾನು ಮಾಡುವ ವಿಧಾನದಲ್ಲಿ ನೆಟ್ಟರೆ ಹೆಚ್ಚು ಇಳುವರಿ ಪಡೆಯಬಹುದು. ನಾನು ಪಡೆಯುತ್ತಿದ್ದೇನೆ,” ಎನ್ನುವ ಸ್ವಾನುಭವಕ್ಕೆ ಕಿವಿಯಾದ ಕೃಷಿಕರು ಹತ್ತಾರು. ಕೃಷಿಕರೊಂದಿಗೆ ವಿಜ್ಞಾನಿಗಳು ಕೂಡಾ ಮೋಹನ ರೈಯವರ ಯಶವನ್ನು ಆಲಿಸಿದರು. ವೈಜ್ಞಾನಿಕವಾಗಿ ಸರಿಯೋ, ತಪ್ಪೋ ಎನ್ನುವುದು ಬೇರೆ ವಿಚಾರ. ಪುತ್ತೂರು ಸನಿಹದ ಕರಿಯಾಲ ರಾಮಪ್ರಸಾದ್ ಅವರ ಮನೆಯಂಗಳದಲ್ಲಿ ವಿಟ್ಲ-ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು (ಸಿಪಿಸಿಆರ್‍ಐ) ಕೃಷಿಕರೊಂದಿಗೆ ಮಾತುಕತೆ ಏರ್ಪಡಿಸಿತ್ತು. ಕೃಷಿಕರು, ವಿಜ್ಞಾನಿಗಳು ಭಾಗವಹಿಸಿದ್ದರು. ಅಡಿಕೆ ತೋಟದೊಳಗೆ ಕೊಕ್ಕೋ, ಕಾಳುಮೆಣಸು, ಬಾಳೆ.. ಮೊದಲಾದ ಮಿಶ್ರಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶ. ಅಖಿಲ ಭಾರತ ಮಟ್ಟದ ರಾಷ್ಟ್ರೀಯ ತೋಟಗಾರಿಕಾ ಮಿಶನ್ ಸೂಚಿತ ಕಾರ್ಯಸೂಚಿಯನ್ನು ಸಿಪಿಸಿಆರ್‍ಐ ಅನುಷ್ಠಾನಿಸುತ್ತಿದೆ. ಒಂದು ತಾಲೂಕಿನಲ್ಲಿ ಮಿಶ್ರಕೃಷಿಯ ಮೂರು ಮಾದರಿ ತೋಟಗಳನ್ನು ಎಬ್ಬಿಸುವುದು ಯೋಜನೆಯ ಗುರಿ. ಆರ್ಥಿಕ ಸಹಕಾರದೊಂದಿಗೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸುವ ಮಾರ್ಗಸೂಚಿಯನ್ನು ವಿಜ್ಞಾನಿಗಳು ಸೂಚಿಸುತ್ತಾರೆ. ಈಗಾಗಲೇ ಹಲವೆಡೆ ಮಿಶ್ರಕೃಷಿಯ ತೋಟಗಳು ಅಭಿವೃದ್ಧಿಯಾಗುತ್ತವೆಯಷ್ಟೇ. “ಅಡಿಕೆ ತೋಟದೊಳಗೆ ನೆಟ್ಟ ಕೊಕ್ಕೋ, ಕಾಳುಮೆಣಸು ಇನ್ನಷ್ಟೇ ಇಳುವರಿ ನೀಡಬೇಕಾಗಿದೆ. ಹಾಗಾಗಿ ನಿರೀಕ್ಷಿತ ಇಳುವರಿಗೆ ಕಾಯಬೇಕಷ್ಟೇ. ಅಡಿಕೆ ಒಂದೇ ನೆಚ್ಚಿಕೊಳ್ಳುವ ಪರಂಪರೆಗೆ ಪರ್ಯಾಯವಾಗಿ ಇಂತಹ ಯೋಜನೆಗಳು ಕೃಷಿಕ ಸ್ವೀಕಾರಕ್ಕೆ ಅರ್ಹ. ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಆಧರಿಸಬಹುದು” ಎನ್ನುತ್ತಾರೆ ರಾಮ್‍ಪ್ರಸಾದ್. ಕೃಷಿಕ ಮತ್ತು ವಿಜ್ಞಾನಿಗಳು ಒಂದೇ ಸೂರಿನಡಿ ಕುಳಿತು ಚರ್ಚಿಸುವ ಉಪಕ್ರಮ ಭವಿಷ್ಯ ಭಾರತದ ಅನಿವಾರ್ಯತೆ. ವಿಷ ತಿಂದು ಹೈರಾಣಾದ ಭೂಮಿಯನ್ನು ಮತ್ತೆ ಫಲವಂತಿಕೆಯತ್ತ ಒಯ್ಯುವುದು ಕೂಡಾ ಜತೆಜತೆಗೆ ಆಗಬೇಕಾದ ಕೆಲಸ. “ಕೃಷಿಕರು ತಮ್ಮ ಅಹಂಭಾವ ಬಿಟ್ಟು ವಿಜ್ಞಾನಿಗಳೊಂದಿಗೆ ಸ್ಪಂದಿಸಿ. ಹಾಗೆಯೇ ವಿಜ್ಞಾನಿಗಳು ಕೂಡಾ ಕೃಷಿಕರೊಂದಿಗೆ ಬೆರೆಯಲಿ. ರಾಸಾಯನಿಕ ಶಿಫಾರಸ್ಸುಗಳ ಬದಲಿಗೆ ಸಾವಯವ ಗೊಬ್ಬರ, ಸಾವಯವ ಸಿಂಪಡಣೆಗಳು ಸಂಶೋಧನೆಯಾಗಬೇಕು.”-ಕೃಷಿಕ ಸದಾಶಿವ ಎ.ಪಿ. ಅವರ ಮಾತುಗಳು ವಿಚಾರಸಂಕಿರಣದ ದಿಕ್ಸೂಚಿ. ಎಷ್ಟೋ ಕಡೆ ಗಮನಿಸಿದ್ದೇನೆ. ಕೃಷಿಕರ ಮಾತು ವಿಜ್ಞಾನಿಗಳಿಗೆ ಅರ್ಥವಾಗುವುದಿಲ್ಲ. ಅರ್ಥವಾದರೂ ತಮ್ಮೊಂದಿಗೆ ಹೊಸೆದ ‘ಡಾಕ್ಟರೇಟ್’ ಪದವಿ ಇದೆಯಲ್ಲಾ, ಅದು ಫಕ್ಕನೆ ಒಪ್ಪಲು ಬಿಡುತ್ತಿಲ್ಲ! ಅಂತೆಯೇ ವಿಜ್ಞಾನಿಗಳ ಮಾತು ಕೃಷಿಕರಿಗೆ ಏನೇನೂ ಅರ್ಥವಾಗುವುದಿಲ್ಲ. ಇವರೆಡು ಮಿಳಿತವಾದಾಗ ಕೃಷಿ ಕ್ಷೇತ್ರಕ್ಕೆ ಒಳ್ಳೆಯ ದಿವಸಗಳು ನಿಶ್ಚಿತ. ಸಂಶೋಧಿತ ವಿಚಾರಗಳು ‘ಲ್ಯಾಬ್ ಟು ಲ್ಯಾಂಡ್’ ಆಗುವುದು ಯಾವಾಗ? ಎಲ್ಲಾ ವಿಚಾರ ಸಂಕಿರಣಗಳಲ್ಲಿ ಮಾತಿನ ಡಿಕ್ಕಿಗಳು ಹಾಯುತ್ತಲೇ ಇರುತ್ತವೆ. ರಾಸಾಯನಿಕ, ಸಾವಯವ ಸಂಘರ್ಷಗಳಿಗೆ ಕೊನೆಯಿಲ್ಲ. ‘ಕೊಕ್ಕೋಗೆ ಬಾಧಿಸುವ ಟೀಸೊಳ್ಳೆ ನಿಯಂತ್ರಣವು ಸಾವಯವ ಸಿಂಪಡಣೆಯಿಂದ ಕಷ್ಟ. ‘ಕರಾಟೆ’ಯಂತಹ ಕೀಟನಾಶಕಗಳನ್ನು (ಘೋರ ವಿಷ) ನಿರ್ದೇಶಿತ ಪ್ರಮಾಣದಲ್ಲಿ ಸಿಂಪಡಿಸಿದರೆ ನಿಯಂತ್ರಣ ಮಾಡಬಹುದು,” ಎಂದ ವಿಜ್ಞಾನಿಯೋರ್ವರ ಮಾತು ಕೃಷಿಕರನ್ನು ಕೆರಳಿಸಿತು. ಇಲ್ಲಿ ಯಾರ ತಪ್ಪನ್ನು ಎತ್ತಿ ಹೇಳೋಣ? ವಿಷವನ್ನು ತಿಂದು, ಸೇವಿಸಿ ಉಂಟಾದ ಅನಾರೋಗ್ಯಗಳ ದೃಷ್ಟಾಂತಗಳು ಕಣ್ಣೆದುರಿಗಿದೆ. ಕೀಟನಾಶಕ ಸಿಂಪಡಿಸಿ ನಾಶನಷ್ಟ ಹೊಂದಿದ ಕತೆಗಳು ಕೃಷಿಕರಲ್ಲಿ ನೂರಾರಿವೆ. ವಿಜ್ಞಾನಿಗಳು ಹೇಳುವುದು ತಪ್ಪೇ? ಅವರ ಶೈಕ್ಷಣಿಕ ‘ಸಿಲೆಬಲ್’ನಲ್ಲಿ ಸಾವಯವ ಇಲ್ಲವಲ್ಲಾ! ಇಂತಹ ವಿಚಾರಗಳಲ್ಲಿ ಸಾಮರಸ್ಯವನ್ನು ಕಾಪಾಡುವುದು ಮುಖ್ಯವಾಗುತ್ತದೆ. ಇಂದು ವಿಜ್ಞಾನ ಕ್ಷೇತ್ರ ಮುಂದುವರಿಯುತ್ತಿದೆ. ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಕೃಷಿಕಪರವಾಗಿ ದನಿ ಎತ್ತುವ, ಸಂಶೋಧನೆ ಮಾಡುವ ಸಾಕಷ್ಟು ವಿಜ್ಞಾನಿಗಳಿದ್ದಾರೆ. ಅವರು ಮತ್ತು ಅವರ ಸಂಶೋಧನೆಗಳು ಸರಕಾರಿ ಪೋಶಿತ ವ್ಯವಸ್ಥೆಯಡಿಯಲ್ಲಿ ನಲುಗಿ ಹೋಗಿವೆ. ಒಂದು ಹೆಜ್ಜೆ ಇಡಬೇಕಾದರೂ ಹಿರಿಯ ಅಧಿಕಾರಿಗಳ ಆದೇಶ ಬೇಕು! ಹಾಗಾಗಿ ಎಷ್ಟೋ ಕೃಷಿಕಪರ ವಿಜ್ಞಾನಿಗಳ ಮಾತು ಮೌನವಾಗಿದೆ. ಸೇವೆಗೆ ಬಂದಂದಿನಿಂದ ಮಾತನ್ನು ಶಾಶ್ವತವಾಗಿ ಮೌನದ ಕೂಪದÀಲ್ಲಿಟ್ಟ ಮಹಾನುಭಾವರನ್ನು ಬದಲಿಸಲು ಅಸಾಧ್ಯ. ಪಾರಂಪರಿಕ ವಿಧಾನಕ್ಕೆ ವೈಜ್ಞಾನಿಕವೂ ಮಿಳಿತಗೊಳ್ಳಬೇಕು. ವಿಜ್ಞಾನಿಗಳು ರೈತರ ತೋಟಕ್ಕೆ ಬರುವ ಪ್ರಕ್ರಿಯೆ ಆರಂಭವಾದುದು ಬೆಳ್ಳಿ ಬೆಳಕು. ಯೋಜನೆ ಯಾವುದೇ ಇರಲಿ, ರೈತರ ಮಾತಿಗೆ ಮನ್ನಣೆ ಕೊಡುವ ಸಣ್ಣ ಹೆಜ್ಜೆಯನ್ನು ಕೇಂದ್ರ ಸರಕಾರದ ಅಧೀನ ಸಂಸ್ಥೆಯೊಂದು ಮುಂದಿಟ್ಟಿದೆ ಎನ್ನುವುದು ಖುಷಿ. ಒಂದು ಕಾಲಘಟ್ಟದಲ್ಲಿ ಸಂಶೋಧನಾಲಯಕ್ಕೆ ರೈತರು ಹೋದಾಗ ಅವರು ಪಟ್ಟ ಪಾಡು ಇದೆಯಲ್ಲಾ, ಅದು ಈಗಿಲ್ಲ. ಚಿತ್ರ ಬದಲಾಗಿದೆ. ಇನ್ನಷ್ಟು ಬದಲಾಗಬೇಕಾಗಿದೆ. ರೈತಾನುಭವದ ಎದುರಿಗೆ ಯಾವ ವಿಜ್ಞಾನವೂ ದೊಡ್ಡದಲ್ಲ. ಕೃಷಿಕರ ಸ್ವೀಕಾರ ಪಡೆದ ‘ಮಂಗಳ’ ತಳಿಯ ಅಡಿಕೆಯನ್ನು ಕೃಷಿಲೋಕಕ್ಕೆ ನೀಡಿದ ಸಿಪಿಸಿಆರ್‍ಐ ಶತಮಾನೋತ್ಸವದ ಸಂಭ್ರಮಕ್ಕೆ ಹತ್ತಿರಲ್ಲಿದೆ.
 
ಮಾಂಬಳ / 9-3-2016 ನಾ. ಕಾರಂತ ಪೆರಾಜೆ