ಮನದ ಮೂಲೆಯಲ್ಲಿ ಬ್ರಿಟಿಷ್ ಪ್ರೀತಿ

ಒಮ್ಮೆ ಕಾಡಿನ ಎತ್ತರದ ಗುಡ್ಡಗಳನೆಲ್ಲ ಒಂದೊಂದಾಗಿ ಏರಲು ಹೊರಟಿದ್ದೆ. ಉತ್ತರ ಕನ್ನಡ ಜಿಲ್ಲೆಯ ಎತ್ತರದ ಗುಡ್ಡಗಳ ಪಟ್ಟಿ ಬೇಕಿತ್ತು. ಗುಡ್ಡಗಳು ಕಾಡಿನ ಭೂಮಿ, ಅರಣ್ಯ ಇಲಾಖೆಯವರಲ್ಲಿ ವಿವರ ಕೇಳಿದರೆ ಸಿಗಬೇಕಿತ್ತು. ಆದರೆ ಎಲ್ಲರೂ ಹಳೆಯ ಬ್ರಟಿಷ್ ದಾಖಲೆಯತ್ತ ಬೆರಳು ತೋರಿಸಿದರು. ಕ್ರಿ.ಶ1884ರ ಕ್ಯಾಂಬೆಲ್ ಗೆಜೆಟಿಯರ್ ಪುಟ ತಿರುವಿದರೆ ಗುಡ್ಡದ ಹೆಸರು, ಎತ್ತರದ ವಿವರ ದೊರೆಯಿತು. ಕಾಳಿ ಕಣಿವೆಯ ಎಂಡಾತೇಮ್, ದೇವತ್ತೇಮ್ ನೋಡಲು ಕರೆದೊಯ್ದು ಕುಣಬಿ ವನವಾಸಿಗ ದಟ್ಟ ಕಾಡಲ್ಲಿ ತೋರಿಸಿದ್ದು ಪುನಃ ಬ್ರಟಿಷರ ಕಸ್ಟಮ್ಸ್ ರಸ್ತೆಯನ್ನು ! ಕಾಳಿ ನದಿ ಹುಟ್ಟುವ ಕುಶಾವಳಿಯ ಮೂಲೆಯಲ್ಲಿ ಗೋವಾ ಹಾಗೂ ಕರ್ನಾಟಕದ ಘಟ್ಟ ಸಂಪರ್ಕಿಸುತ್ತಿದ್ದ ಕುದುರೆ ಮಾರ್ಗ ಅದು. ಈಗ ಬಳಕೆಯಿಲ್ಲದೇ ಕಾಡಾಗಿದೆ.
ಬ್ರಹ್ಮೂರಿನ ಕಾಡು ಗುಡ್ಡ ಏರಲು ಧೈರ್ಯ ಬೇಕು. ತುತ್ತ ತುದಿಯೇರಿ ಮತ್ತೆ ಮರ ಹತ್ತಿದರೆ ಕುಮಟಾ, ಅಂಕೋಲಾ ಕರಾವಳಿ ತೀರವನ್ನು ವಿಮಾನದಲ್ಲಿ ನೋಡಿದಂತೆ ಕಾಣುತ್ತದೆ.ನಿಸರ್ಗರಮ್ಯ ಜಾಗ, ಇಲ್ಲಿ ಬಂದವರಲ್ಲಿ ನಾವು ಮೊದಲಿಗರೆಂದು ಹೆಮ್ಮೆಪಡುವಂತಿಲ್ಲ. ಬ್ರಿಟಿಷರು ನೂರೈವತ್ತು ವರ್ಷಗಳ ಹಿಂದೆಯೇ ಗುಡ್ಡ ಏರಿದ್ದಾರೆ, ಕಲ್ಲಿನಕಟ್ಟೆ ಕಟ್ಟಿ ಸುಣ್ಣದ ಗಾರೆಯ ಗಿಲಾಯಿ ಮಾಡಿ ಶಿಸ್ತಿನ ಸರ್ವೆ ಮುಗಿಸಿದ್ದಾರೆ.
ಅತಿ ಎತ್ತರದ ಅಂಕೋಲಾ ಮೋತಿಗುಡ್ಡ ಹತ್ತಿದರೆ ಹುಣ್ಣಿಮೆಯ ರಾತ್ರಿ ಬೆಳದಿಂಗಳಲ್ಲಿ ದಿನಪತ್ರಿಕೆಗಳ ದಪ್ಪ ಅಕ್ಷರ ಓದಬಹುದು, ಅಷ್ಟು ಸ್ಪಷ್ಟ ಬೆಳಕು ದೊರೆಯುತ್ತದೆ! ಇದು ಕೆನರಾದಲ್ಲಿಯೇ ಅತ್ಯಂತ ಎತ್ತರದ ಗುಡ್ಡ. ಹೊರಳಿ ನೋಡಿದರೆ ಅಲ್ಲಿಯೂ ಪುಟ್ಟ ಸುಣ್ಣದ ಗಾರೆಯ ಬ್ರಿಟಿಷ್ ದಿಬ್ಬ. ಅಬ್ಬಾ! ಇಲ್ಲಿಗೆ ಬ್ರಿಟಿಷರಲ್ಲದೇ ಮತ್ತೆ ಯಾರು ಬರ್ತಾರೆ ಹೇಳಿ? ಸಾಹಸ ಚಾರಣದಲ್ಲಿ ಉದ್ಗಾರ. 'ಕಾಗೆ ಕೂರದ ಮರವಿಲ್ಲ, ಬ್ರಿಟಿಷರು ಹೋಗದ ಸ್ಥಳವಿಲ್ಲ' ಎನ್ನುವಂತೆ ಕಾಡು ಕಣಿವೆಗಳಲ್ಲಿ ಪರಂಗಿಗಳು ಸುತ್ತಾಡಿದ ಕುರುಹುಗಳಿವೆ! ಕಂದಾಯ ಇಲಾಖೆಯ ರೆಕಾರ್ಡ್ ರೂಮು ನೋಡಬೇಕು.
ಅಲ್ಲಿನ ಎತ್ತರದ ದೈತ್ಯ ರ್ಯಾಕ್‍ಗಳೆಲ್ಲ ಸಾಗುವಾನಿಯವು. ಅದರಲ್ಲಿನ ಕಾಗದ ಪತ್ರಗಳ ಕಡತ ಬಿಚ್ಚಿದರೆ ಗ್ರಾಮದ ನೂರಿನ್ನೂರು ವರ್ಷಗಳ ದಾಖಲೆಗಳಿವೆ. ರೆಕಾರ್ಡ್ ರೂಮಿನ ಕಟ್ಟಡ ನಿರ್ಮಾಣವಂತೂ ಕಾಗದ ಪತ್ರ ರಕ್ಷಣೆಯ ವ್ಯವಸ್ಥಿತ ವಿನ್ಯಾಸ. ಜಮೀನು ಮೂಲತಃ ಯಾರದ್ದಾಗಿತ್ತು, ಕೆರೆಯ ನೀರಾವರಿ ಕಾಲುವೆ ಹೇಗಿದೆ ಎಂದು ಅವರು ಬರೆದಿಟ್ಟ ವಿವರಗಳಿವೆ. ನೂರೈವತ್ತು ವರ್ಷಗಳಾದರೂ ಅವತ್ತಿನ ಕಂದು ಬಣ್ಣದ ಕಾಗದ ಈಗಲೂ ಸುರಕ್ಷಿತವಾಗಿದೆ. ಸರ್ವೆ ನಕಾಶೆಗಳಂತೂ ಎಷ್ಟು ಕರಾರುವಕ್ಕಾಗಿವೆಯೆಂದರೆ ಇಡೀ ಸ್ವತಂತ್ರ ಭಾರತ ಈಗ ಅದನ್ನು ನಂಬಿ ನಡೆದಿದೆ. ನದಿ, ಹಳ್ಳದ ಮಾಹಿತಿ, ಅರಣ್ಯದ ವಿವರಗಳಿಗೆ ಶತಮಾನದ ಹಿಂದಿನ ಫಾರೆಸ್ಟ್ ವರ್ಕಿಂಗ್ ಪ್ಲಾನ್, ಸರ್ವೆ ಸೆಟ್ಲಮೆಂಟ್ ವರದಿಗಳನ್ನು ನೋಡುತ್ತೇವೆ. ಕೆನರಾದ ಸುಫಾ ಕಾಡಿನ ಕುಂಡ್ಪೆ ಪ್ರದೇಶದಲ್ಲಿ ಎರಡು ಹುಲಿಗಳ ನಡುವೆ ಪರಸ್ಪರ ಕದನ ನಡೆಯಿತು. ಜಗಳದಲ್ಲಿ ಒಂದು ಹುಲಿ ಸಾವನ್ನಪ್ಪಿತು. ಹುಲಿ ಹುಲಿಯ ನಡುವೆ ಕಾಳಗ ನಡೆದು ಹುಲಿ ಸತ್ತ ಅಪರೂಪದ ಪ್ರಸಂಗ. ಅದು ಕ್ರಿ.ಶ. 1875ರ ಎಪ್ರಿಲ್ 3ರಂದು ನಡೆಯಿತೆಂದು ದಾಖಲೆ ಹೇಳುತ್ತದೆ.
ಶಿರಸಿಯ ಹರಕಿನಬೇಣ ತೋಟದ ಕೆಂಪಡಿಕೆ ಮಾರುಕಟ್ಟೆಗೆ ಹೋದರೆ ಇನ್ನುಳಿದ ಪ್ರದೇಶದ ಅಡಿಕೆಗಿಂತ ಈಗಲೂ ಹೆಚ್ಚಿನ ಬೆಲೆ ಗಳಿಸುತ್ತದೆ. ಅಷ್ಟೇಕೆ ಕೆ.ಪಿ.ಮೆಥರಾನಿ ಹಾಗೂ ಎಚ್.ಡಿ.ಭಾಸ್ಕರವಿಲ್ಲೆ ಎಂಭತೈದು ವರ್ಷದ ಹಿಂದೆ ಬರೆದ ಕೃಷಿ ವಿವರದಲ್ಲಿ ಅತ್ಯುತ್ತಮ ಗುಣಮಟ್ಟದ ಅಡಿಕೆ ಇಲ್ಲಿ ದೊರೆಯುತ್ತದೆಂದು ಬರೆದಿದ್ದಾರೆ!
ಬೆಂಗಳೂರಿನಲ್ಲಿ ಸ್ಯಾಂಕಿ ಟ್ಯಾಂಕ್ ಇದೆ. ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿದ್ದ ಮೇಜರ್ ಸ್ಯಾಂಕಿ ನೆನಪಿಗೆ ಕೆರೆಗೆ ಹೆಸರಿದೆ. ಮೈಸೂರು ಸೀಮೆಯ 19,223 ಕೆರೆಗಳ ಹೂಳು ತೆಗೆಯಲು ಆಳ ಅಧ್ಯಯನ ವರದಿಯನ್ನು ಕ್ರಿ.ಶ. 1866ರಲ್ಲಿ ನೀಡಿದ್ದರು. ಸರಣಿ ಕೆರೆ, ಕಾಲುವೆಗಳ ಹೂಳು ತೆಗೆಯುವುದು, ಅಚ್ಚುಕಟ್ಟು ಪ್ರದೇಶದ ನೀರಾವರಿಗೆ ವಹಿಸಬೇಕಾದ ಎಚ್ಚರಿಕೆಗಳ ಬಗೆಗೆ ವಿವರವಿದೆ. ಹಳೆಯ ವರದಿ ಈಗಲೂ ಸೀಮೆಯ ಅಮೂಲ್ಯ ದಾಖಲೆ. ದಕ್ಷಿಣ ಭಾರತದ ಭೂಪಟ ತಯಾರಿಯ ನೇತೃತ್ವವಹಿಸಿದ ಕರ್ನಲ್ ಮೆಕೆಂಜಿ ಕ್ರಿ.ಶ. 1796ರಲ್ಲಿ ಮೂಲೆಮೂಲೆಯ ಊರು ಅಡ್ಡಾಡಿದವರು. ನಕ್ಷೆ ತಯಾರಿಯ ಸರ್ವೆ ಕೆಲಸದ ಜತೆಗೆ ಜನರಿಂದ ವಿವಿಧ ಭಾಷೆಗಳಲ್ಲಿ ಪ್ರಾದೇಶಿಕ ವಿಶೇಷಗಳ ಮಾಹಿತಿ ಸಂಗ್ರಹಿಸುವುದು ಇವರ ಹವ್ಯಾಸ. ಮೆಕೆಂಜಿ ಕೈಫಿಯತ್ತು ಇತಿಹಾಸದ ಓದಿಗೆ ನೆರವಾಗುತ್ತದೆ. ಭೂಮಿಯ ಮಣ್ಣು ಪರೀಕ್ಷೆಗೆ ಆಗ ಇಷ್ಟೆಲ್ಲ ಸಲಕರಣೆಗಳಿರಲಿಲ್ಲ. ಕುದುರೆಯಲ್ಲಿ ಓಡಾಡುತ್ತಿದ್ದ ಮೆಕೆಂಜಿ ಹಳ್ಳಿಯ ಬೂಮಿಯ ಮಣ್ಣನ್ನು ಬಾಯಿಗೆ ಹಾಕಿ ಪರೀಕ್ಷಿಸುತ್ತಿದ್ದರು. ಜನ ಇವರನ್ನು 'ಮಣ್ಣು ತಿನ್ನುವ ಸಾಹೇಬ' ಎಂದು ಕರೆದರು. ನಮ್ಮ ಭೂಮಿಗಳ ಸರ್ವೆ ನಡೆಸಿ ಕಂದಾಯ ನಿಗದಿಗೊಳಿಸುವಾಗ ಮಣ್ಣು ಗುಣ, ನೀರಾವರಿ, ಉತ್ಪನ್ನ ಸಾಗಿಸುವ ರಸ್ತೆ ಅನುಕೂಲತೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಭೂಮಿಯ ಹತ್ತು ಅಡಿ ಅಂತರದಲ್ಲಿ ಮಣ್ಣಿನ ವ್ಯತ್ಯಾಸವಾದರೂ ಕಂದಾಯ ಬದಲಾಗಿರುವುದು ಬ್ರಿಟಿಷರ ಸರ್ವೆ ನಿಖರತೆಗೆ ಸಾಕ್ಷಿ.
ಕ್ರಿ.ಶ. 1860 ರಲ್ಲಿ ಕಾರವಾರದಿಂದ ಕೈಗಾಕ್ಕೆ ನೂತನ ರಸ್ತೆ ಮಾಡುವ ಕೆಲಸ ಶುರುವಾಯಿತು. ಆದರೆ ರಸ್ತೆಗೆ ಸೂಕ್ತ ಸ್ಥಳವಿರಲಿಲ್ಲ.ಆಗ ನಾರಾಯಣಪ್ಪ ತೇಲಂಗರು ತಮ್ಮ ಭೂಮಿ ದಾನ ಮಾಡಿದರು. ಅವರಿಗೆ ಬ್ರಿಟಿಷ್ ಸರಕಾರ 'ದಗಲಾ' ಎಂದು ಬಿರುದು ನೀಡಿತು. ದಗಲಾ ಎಂದರೆ ಆಗ ವಿ.ಐ.ಪಿ.ಗೆ ಸಮನಾದ ಗೌರವ! ಮುಂದೆ ಕೃಷಿಕರು ದಗಲಾ ನಾರಾಯಣಪ್ಪ ಎಂದು ಹೆಸರಾದರು.
ರಸ್ತೆ, ಸೇತುವೆ, ರೈಲ್ವೆ ಯೋಜನೆಗಳಲ್ಲಿಯ ಇಂತಹ ಶತಮಾನದ ಮಾಹಿತಿಗಳು ಅಚ್ಚರಿ ಮೂಡಿಸುತ್ತವೆ. ಕೃಷಿಕರಿಗೆ ಅರಣ್ಯ ಸೌಲಭ್ಯ ನೀಡಿದ ಮುತುವರ್ಜಿ, ಆಡಳಿತದ ಶಿಸ್ತು, ಅಚ್ಚುಕಟ್ಟುತನವನ್ನು ಕಂದಾಯ, ಅರಣ್ಯ ದಾಖಲೆಗಳು ಸಾರಿ ಹೇಳುತ್ತಿವೆ. ಸಮಸ್ಯೆಗಳನ್ನು ಕಲೆಕ್ಟರ್‍ಗಳು ಸ್ಥಳದಲ್ಲಿ ಇತ್ಯರ್ಥಗೊಳಿಸಿದ ಸಂಗತಿಗಳಂತೂ ಬ್ರಿಟಿಷ್ ಕೆನರಾದ ದಂತಕತೆಯಾಗಿವೆ. ವ್ಯವಸ್ಥಿತ ದಾಖಲೆ ಬರವಣಿಗೆ, ವ್ಯವಹಾರದಲ್ಲಿ ಶಿಸ್ತು, ನಿಯಮ, ಸಮಯಪ್ರಜ್ಞೆಯಿದೆ. ಎರಡನೆ ಮಹಾಯುದ್ಧ ಕಾಲದಲ್ಲಿ ಉಣ್ಣಲು ಅನ್ನವಿಲ್ಲದಿದ್ದಾಗ ರಂಗೂನ್ ಅಕ್ಕಿ ನೀಡಿ ನೆರವಾದ ಕೆನರಾಕಲೆಕ್ಟರ್ ಟಪ್ಪರ್ ನೆನಪಿಗೆ ಹೊನ್ನಾವರದಲ್ಲಿ ಆಗ 'ಟಪ್ಪರ್ ಹಾಲ್ ನಿರ್ಮಾಣವಾಗಿದೆ. ಕಾರವಾರ ಪ್ರವೇಶದ ಪುಟ್ಟ ಹಳ್ಳಕ್ಕೆ ಸೇತುವೆ ನಿರ್ಮಿಸಿದ ನೆನಪಿಗೆ 'ಲಂಡನ್ ಬ್ರಿಜ್' ಹೆಸರಿದೆ. ಹೋರಾಡಿ ಹೊರದಬ್ಬಿದೆವೆಂದು ಚರಿತ್ರೆಯಲ್ಲಿ ಅಷ್ಟೆಲ್ಲ ಹೇಳಿದರೂ ಮನದ ಮೂಲೆಯಲ್ಲಿ ಈಗಲೂ ಬ್ರಿಟಿಷರ ಪ್ರೀತಿಯಿದೆ. ಸವಿ ನೆನಪಿಗೆ ಊರೂರುಗಳಲ್ಲಿ ಗೌರವ ಸ್ಮಾರಕಗಳಿವೆ.
ಕ್ರಿ.ಶ. 1986ರ ಅಕ್ಟೋಬರ್ 24ರಂದು ಅಂದಿನ ಪ್ರಧಾನಿ ರಾಜೀವ ಗಾಂಧಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸೀಬರ್ಡ್ ನೌಕಾ ನೆಲೆಗೆ ಅಡಿಗಲ್ಲು ಇಟ್ಟಿದ್ದಾರೆ. ರೂ.25000 ಕೋಟಿ ವೆಚ್ಚದ ದೇಶದ ಮಹತ್ವದ ರಕ್ಷಣಾ ಯೋಜನೆ ಇದು. ಅಕ್ಟೋಬರ್ 24ರ ಎಷ್ಟು ಗಂಟೆ, ಎಷ್ಟು ಸೆಕೆಂಡಿಗೆ ಅಡುಗಲ್ಲು ಇಡಲಾಯಿತೆಂದು ಜಿಲ್ಲಾಧಿಕಾರಿಯಲ್ಲಿ ಒಮ್ಮೆ ಕೇಳಿದ್ದೆವು. 'ಅಯ್ಯೊ! ಅದಕ್ಕೆ ಸಂಶೋಧನೆ ಮಾಡಬೇಕು' ಎಂದಿದ್ದರು. ಪ್ರಮುಖ ಐತಿಹಾಸಿಕ ಘಟನೆಯಲ್ಲಿ ಸಮಯದ ದಾಖಲೆಯೇ ನಮೂದಾಗಿಲ್ಲ, ಇದು ನಮ್ಮ ಆಡಳಿತ ಶೈಲಿ. ಸ್ವಾತಂತ್ರ್ಯ ಪಡೆದು ಕಬ್ಬಿಣ ಟೊಪ್ಪಿಯವರು ಹೋಗಿ ಖಾದಿ ಟೋಪಿಯವರನ್ನು ಆಡಳಿತಕ್ಕೆ ಕೂರಿಸಿದ್ದೇವೆ. ಭ್ರಷ್ಟಾಚಾರದಲ್ಲಂತೂ ದಾಖಲೆ ನಿರ್ಮಿಸಿದ್ದೇವೆ!
                                                                                                                                                                                                                                            --ಶಿವಾನಂದ ಕಳವೆ