ಮೂಲಿಕಾ ಜ್ಞಾನವನ್ನು ಹಬ್ಬಿಸಿದ ಪಿ.ಎಸ್. ವೆಂಕಟರಾಮ ದೈತೋಟ

test

ನಡೆದಾಡುವ ಸಸ್ಯಶಾಸ್ತ್ರೀಯ ಗೂಗಲ್ ಪಾಣಾಜೆಯ ಪಿ.ಎಸ್.ವೆಂಕಟರಾಮ ದೈತೋಟರ ಮರಣದೊಂದಿಗೆ ದೊಡ್ಡ ಜ್ಞಾನವೊಂದರ ನಷ್ಟಕ್ಕೆ ಸಾರಸ್ವತ ಲೋಕ ಒಳಗಾಯಿತು. ಸಾಮಾನ್ಯವಾಗಿ ವ್ಯಕ್ತಿ ದೈವಾಧೀನವಾದಾಗ ‘ತುಂಬಲಾರದ ನಷ್ಟ’ ಎಂದು ಎರಡು ಪದಗಳನ್ನು ವರದಿ ಜತೆಗೆ ಪೋಣಿಸುತ್ತೇವೆ. ಯಾರಿಗೆ ನಷ್ಟ ಎನ್ನುವುದು ಪೋಸ್ಟ್ ಮಾರ್ಟಂ ಮಾಡಬೇಕಾದ ವಿಚಾರ. ಆದರೆ ವೆಂಕಟರಾಮ ದೈತೋಟರ ಮರಣವು ಕುಟುಂಬಿಕರಿಗೆ ಮಾತ್ರವಲ್ಲ ಸಾಮಾಜಿಕವಾಗಿ ನಿಜಾರ್ಥದ ತುಂಬಲಾರದ ನಷ್ಟ.
ಎಪ್ಪತ್ತೇಳು ವರುಷದ ಬದುಕು. ಆರೋಗ್ಯದ ವಿಚಾರವಾಗಿ ನಿತ್ಯ ಯೋಚನೆ. ಕಲಬೆರಕೆ ಮತ್ತು ಆಧುನಿಕ ಆಹಾರಗಳ ಸೇವನೆಯಿಂದ ಆರೋಗ್ಯ ಹಾನಿ ಎಂದು ತಿಳಿದಿದ್ದರೂ ಆರೋಗ್ಯದ ಕುರಿತು ನಿಗಾ ಇಲ್ಲದಿರುವ ಕುರಿತು ದೈತೋಟರಿಗೆ ಖೇದವಿತ್ತು. ತನ್ನ ಪ್ರಸ್ತುತಿಯಲ್ಲಿ ಏನಾದರೂ ದೋಷವಿದೆಯೋ, ಅಲ್ಲ ಜನರ ಅಸಡ್ಡೆಯೋ ಎನ್ನುವ ಗುಮಾನಿಯಿತ್ತು. ‘ಔಷಧವೇ ಆಹಾರವಾಗಬಾರದು. ಆಹಾರ ಔಷಧವಾಗಬೇಕು’ ಎನ್ನುವ ಮೌನ ಆಂದೋಳನವನ್ನು ಬದುಕಿನಲ್ಲಿ ಅನುಷ್ಠಾನಿಸಿದ್ದರು, ಹಬ್ಬಿಸಿದ್ದರು.
ಸಸ್ಯವೊಂದನ್ನು ವೀಕ್ಷಿಸಿದರೆ ಸಾಕು, ಅದರ ಪೂರ್ಣ ಗುಣಗಳು, ಸಸ್ಯಶಾಸ್ತ್ರೀಯ ವಿಚಾರಗಳು ನಾಲಗೆ ತುದಿಯಲ್ಲಿರುತ್ತಿತ್ತು. ಸಸ್ಯಗಳ ಪರಿಚಯಕ್ಕೆ ‘ಪುಸ್ತಕ ನೋಡಿ ಹೇಳ್ತೇನೆ’ ಎನ್ನುವ ಜಾಯಮಾನವೇ ಇದ್ದಿರಲಿಲ್ಲ. ಸಂಶಯ ಬಂದಾಗ ಮಾತ್ರ ಆಕರಗಳ ಮೊರೆ ಹೋಗುತ್ತಿದ್ದರು. ಸಸ್ಯಗಳ ವಿಚಾರಗಳಲ್ಲಿ ಇದಮಿತ್ಥಂ ಎನ್ನುವ ಜ್ಞಾನ. ಸಸ್ಯಗಳ ಪರಿಚಯ ಮತ್ತು ಔಷಧೀಯ ವಿಚಾರಗಳಲ್ಲಿ ಸಂಶಯ ಬಂದಾಗ ಅದಕ್ಕೆ ವೆಂಕಟರಾಮರ ತೀರ್ಪು ಅಂತಿಮ.
ಒಂದು ಹೊಸ ಮೂಲಿಕೆ ಪತ್ತೆಯಾದರೆ ಅದರ ಗುಣ-ದೋಷ ಮತ್ತು ಔಷಧೀಯ ಗುಣಗಳು ಖಚಿತವಾಗದೆ ಜನರ ಮುಂದಿಡರು. “ತಂದೆಯವರು ಔಷಧಿ, ವಿಧಾನಗಳನ್ನು ಜನರಿಗೆ ಲಿಖಿತವಾಗಿ ತಿಳಿಸಿದರು. ಪುಸ್ತಕ ಬರೆದರು. ಅಜ್ಜಿಮದ್ದನ್ನು ಪ್ರಚಾರ ಮಾಡಿದವರೇ ಅವರು. ಪುಸ್ತಕದಲ್ಲಾದರೂ ಈ ವಿದ್ಯೆ ಉಳಿಯಲಿ ಎಂಬುದು ಅವರ ಆಶಯ. ಆ ದಾರಿಯಲ್ಲಿ ನಾನು ಸಾಗುತ್ತಿದ್ದೇನೆ. ಮೂಲಿಕಾ ಪರಿಚಯದಲ್ಲಿ ನಮ್ಮ ಎಷ್ಟೋ ವೈದ್ಯರು ಗುಟ್ಟು ಮಾಡಿದರು. ಹಾಗಾಗಿ ಅವರ ನಂತರ ಅದು ಉಳಿಯಲಿಲ್ಲ. ಔಷಧಿಗಳ ಬಳಕೆ ಮನೆಮನೆಗಳಲ್ಲಿ ಆಗಬೇಕು. ಬಳಸಿದರಷ್ಟೇ ಅದು ಉಳಿಯುತ್ತದೆ,” ಎಂದಿದ್ದರು.
ವೆಂಕಟ್ರಾಮರ ಮಡದಿ ಜಯಲಕ್ಷ್ಮೀ. ಮೂಲತ ಸಾಗರ ಸನಿಹದ ಮುಂಡಿಗೇಸರದವರು. ವೈದ್ಯ ಪರಂಪರೆ. ಪ್ರಾಕೃತಿಕ ತಂಬುಳಿ, ಆಹಾರದ ಪದ್ಧತಿಯಲ್ಲಿ ಇವರು ಮನೆತಾಯಿ. ನಮ್ಮ ಕಣ್ಣಿಗೆ ಪರಿಸರದಲ್ಲಿರುವ ಗಿಡ, ಮರಗಳು ಕಳೆಯಾಗಿಯೋ, ಕಾಡಾಗಿಯೋ ಕಾಣುತ್ತದೆ. ಜಯಲಕ್ಷ್ಮೀಯವರಿಗೆ ಅವೆಲ್ಲವೂ ಆಹಾರ ವಸ್ತುವಾಗಿ ಔಷಧೀಯ ವಸ್ತುವಾಗಿ ಕಾಣುತ್ತದೆ. ದೈತೋಟರು ನಿರ್ವಹಿಸುತ್ತಿದ್ದ ಕೆಲವು ತರಬೇತಿ ಶಿಬಿರಗಳಲ್ಲಿ ಜಯಲಕ್ಷ್ಮೀಯವರದು ಸಮಾನ ಪಾಲು. ಮೂಲಿಕಾ ಪರಿಚಯ, ವೈದ್ಯಚಿಕಿತ್ಸಾ ವಿಧಾನಗಳ ವಿವರಣೆಯು ವೆಂಕಟರಾಮರದ್ದಾದರೆ, ಪಾರಂಪರಿಕ ಆಹಾರ ಸಿದ್ಧತೆಯ ಕುರಿತು ಜಯಲಕ್ಷ್ಮೀಯವರು ವಿವರಿಸುತ್ತಾರೆ.
“ನಮ್ಮ ಹೊಟ್ಟೆಯೆಂದರೆ ತ್ಯಾಜ್ಯ ತುಂಬುವ ಚೀಲವಲ್ಲ. ಅದು ಶರೀರದ ಅತಿ ಪ್ರಮುಖ ಅಂಗ. ಜಠರದ ಆರೋಗ್ಯ ಸರಿಯಿದ್ದರೆ ಮಾತ್ರ ದೇಹಾರೋಗ್ಯ. ಅದು ಕೊಡುವ ಚೈತನ್ಯದಿಂದ ಆರೋಗ್ಯ, ಭಾಗ್ಯ” ಎನ್ನುತ್ತಿದ್ದರು. ದೈತೋಟ ದಂಪತಿಗಳು ಸಂದರ್ಭ ಬಂದಾಗಲೆಲ್ಲಾ ಕಾರ್ಯಾಗಾರ, ಶಿಬಿರಗಳಲ್ಲಿ ಇಂತಹ ವಿಚಾರಗಳನ್ನು ಪ್ರಸ್ತುತಪಡಿಸುತ್ತಿದ್ದರು. ಆಹಾರ ವಿಚಾರಗಳಲ್ಲಿ ಕಟ್ಟು ನಿಟ್ಟಾದ ಕ್ರಮಗಳನ್ನು ಸೂಚಿಸುತ್ತಿದ್ದರು. ಇಂತಹ ಕಲಾಪಗಳಲ್ಲಿ ಅವರ ಅನುಭವಗಳನ್ನು ಸ್ವೀಕರಿಸಿದ ನೂರಾರು ಮಂದಿ ಸಾತ್ವಿಕ ಆಹಾರದತ್ತ ಒಲವನ್ನು ತೋರಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿರುವುದನ್ನು ಕಾಣಬಹುದು.
ತಮ್ಮೆಲ್ಲಾ ಮಾತುಗಳಲ್ಲಿ ಅಡುಗೆಯ ಕುರಿತು ಒಂದೆಡೆ ಉಲ್ಲೇಖ ಮಾಡುತ್ತಾರೆ – “ತರಕಾರಿಯಲ್ಲಿ ಇತರ ಅವಶ್ಯವುಳ್ಳ ಮಸಾಲೆದ್ರವ್ಯಗಳೊಂದಿಗೆ ಸಂಸ್ಕರಿಸಿ ಪಾಕಗೊಳಿಸುವುದು ಅಡುಗೆ ಎನ್ನಿಸಿದೆ. ಆಹಾರದಲ್ಲಿ ತರಕಾರಿಗಳನ್ನು ಹೇಗೆಂದರೆ ಹಾಗೆ ಸೇರಿಸಿಕೊಂಡರೆ ತೊಂದರೆಗಳು ಹೆಚ್ಚಾಗಬಹುದು. ಅವನ್ನು ಕ್ರಮಬದ್ಧವಾಗಿ ಶುದ್ಧಿಗೊಳಿಸಿ, ಸಂಸ್ಕರಿಸಿ ಉಳಿದ ದ್ರವ್ಯಗಳೊಂದಿಗೆ ಶರೀರ ಮಾತ್ರವಲ್ಲದೆ ಮನಸ್ಸಿಗೂ ಹಿತವೆನ್ನಿಸುವಂತೆ ಅಳವಡಿಸಿಕೊಳ್ಳುವುದು ಅವಶ್ಯ. ತರಕಾರಿಯನ್ನು ಮನೆಯಲ್ಲೇ ಬೆಳೆಸಿ. ಮಾರುಕಟ್ಟೆಯಿಂದ ತಂದರೆ ನೀವು ರೋಗವನ್ನು ತಂದಂತೆ.
ತನ್ನ ತೀರ್ಥರೂಪರು ನಿರ್ದೇಶಿಸಿದ ಹಾದಿಯಲ್ಲಿ ವೆಂಕಟರಾಮರು ಸಾಗಿದ್ದರು. ಸಿದ್ಧ ಪ್ರಶ್ನೆಗಳುಳ್ಳ ಮಾಹಿತಿ ಪತ್ರವನ್ನು ರೋಗಿ ಭರ್ತಿ ಮಾಡಿಕೊಡಬೇಕಾದುದು ಮೊದಲಾದ್ಯತೆ. ಇದರ ಆಧಾರದಲ್ಲಿ ರೋಗಪತ್ತೆ. ರೋಗಕ್ಕೆ ಬೇಕಾದ ಮೂಲಿಕೆಗಳನ್ನು ಬರೆದುಕೊಟ್ಟು, ಔಷಧ ತಯಾರಿ ವಿಧಾನವನ್ನು ತಿಳಿಸುತ್ತಿದ್ದರು. ಪಾರಂಪರಿಕವಾಗಿ ಸೇವಾ ಭಾವದಿಂದ ಮೂಲಿಕಾ ಚಿಕಿತ್ಸೆಯನ್ನು ಮಾಡುತ್ತಿದ್ದ ದೈತೋಟರು ಚಿಕಿತ್ಸೆಗೆ ಶುಲ್ಕ ಸ್ವೀಕರಿಸುತ್ತಿದ್ದಿರಲಿಲ್ಲ. ಕಾಣಿಕೆ ಹುಂಡಿಗೆ ಯಥಾಶಕ್ತಿ ಹಾಕಲು ಸೂಚಿಸುತ್ತಿದ್ದರು. ವರುಷದ ಕೊನೆಗೆ ಈ ಮೊತ್ತವೆಲ್ಲವನ್ನೂ ಸೇರಿಸಿ ‘ಧನ್ವಂತರಿ ಹವನ’ ಮಾಡುತ್ತಿದ್ದರು.
ವೆಂಕಟ್ರಾಮರ ಮನೆಯಲ್ಲಿಯೇ ಇದ್ದು, ಚಿಕಿತ್ಸಾ ವಿಧಾನ, ಸಸ್ಯ ಹುಡುಕಾಟ, ರೋಗಿಗಳ ನಿರ್ವಹಣೆಯನ್ನು ಆಭ್ಯಸಿಸಿದ ವೀಣಾ ರಮಾನಂದ ಸಾಗರದಲ್ಲಿ ಮೂಲಿಕಾ ವೈದ್ಯರಾಗಿದ್ದಾರೆ. ಅನ್ನಪೂರ್ಣ ದೈತೋಟ, ಸ್ವರ್ಣಲತಾ ಮುಂಡೂರು, ಲಲಿತಾ ತೆಂಕಿಲ ಪುತ್ತೂರು, ಅನ್ನಪೂರ್ಣ ನೆಲ್ಲಿಕಳೆಯ, ಹೈಮಾವತಿ ಪಾಲೆಪ್ಪಾಡಿ, ತಿರುಮಲೇಶ್ವರೀ ಸೂರ್ಡೇಲು, ಅನ್ನಪೂರ್ಣ ಕಾರ್ಮಾರು, ಹರಿದಾಸನ್ ಪೆರ್ಲ – ಇವರೆಲ್ಲಾ ವೆಂಕಟ್ರಾಮರೊಂದಿಗಿದ್ದು ಮೂಲಿಕಾ ಜ್ಞಾನವನ್ನು ಅಭ್ಯಸಿಸಿದವರು.
ವೆಂಕಟರಾಮರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸನಿಹದ ಪಾಣಾಜೆಯವರು. ಇವರ ಅಜ್ಜ ವೈದ್ಯ ಶಂಕರನಾರಾಯಣ ಭಟ್ಟ. ಪ್ರಸಿದ್ಧ ಕಿಳಿಂಗಾರು ಮೆನತನ. ವೈದ್ಯ ಭಟ್ಟರೆಂದೇ ಖ್ಯಾತಿ. ಕೇರಳದ ಅಷ್ಟವೈದ್ಯರಲ್ಲೊಬ್ಬರಾಗಿದ್ದ ಪರಮೇಶ್ವರನ್ ಮೂಸ್ಸಾದ್ ಅವರಲ್ಲಿ ಆಯುರ್ವೇದ ಶಾಸ್ತ್ರದ ಕಲಿಕೆ. ಆಯುರ್ವೇದೀಯ ಔಷಧಗಳಲ್ಲಿ ಮೂಲದ್ರವ್ಯಗಳ ಅಭಾವವಿದ್ದಾಗ ಬಳಕೆಯಾಗುವ ಬದಲು ದ್ರವ್ಯಗಳ ವಿಚಾರವಾಗಿ ಏಕಾಂಗಿಯಾಗಿ ಸಂಶೋಧನೆ ಮಾಡಿದವರು.
ತಂದೆ ಪಂಡಿತ ಶಂಕರನಾರಾಯಣ ಭಟ್. ಇವರು ಆಯುರ್ವೇದ ಮತ್ತು ಮೂಲಿಕಾ ತಜ್ಞ. ಜಾನಪದ, ಪಾರಂಪರಿಕ ರಹಸ್ಯ ಮೂಲಿಕೆಗಳ ಕುರಿತು ವೃದ್ಧ ವೈದ್ಯರಿಂದ, ವೃದ್ಧ ಮಾತೆಯರಿಂದ, ನಾಡ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದರು. ಅಂತಹುಗಳನ್ನು ಪರಿಷ್ಕರಿಸಿ, ಪ್ರಯೋಗಿಸಿ, ಧನಾತ್ಮಕ ಪರಿಣಾಮ ಪಡೆದು ಆಯಾ ವೈದ್ಯರದೇ ಹೆಸರಿನಲ್ಲಿ ಪತ್ರಿಕೆಗಳ ಮೂಲಕ ಪ್ರಚುರಗೊಳಿಸಿದ್ದರು. ಮಗ ವೆಂಕಟರಾಮರಿಗೆ ಇವರದೇ ವ್ಯೆದ್ಯಹಾದಿ.
ಪಾಣಾಜೆ ಪಂಡಿತ ಶಂಕರನಾರಾಯಣ ಭಟ್ಟರ ಮೂಲಿಕಾ ಜ್ಞಾನವನ್ನು ದಾಖಲಿಸುವ ಉದ್ದೇಶದಿಂದ ಮತ್ತು ಮೂಲಿಕಾ ವೈದ್ಯ ಪ್ರಚಾರಕ್ಕಾಗಿ ‘ಆಯುರ್ವೇದ ಪ್ರಕಾಶನ’ವಿದೆ. ಆರೋಗ್ಯದಾನ ಕೈಪಿಡಿ, ಆರೋಗ್ಯ ಸಾಧನ, ಆರೋಗ್ಯ ಜೀವನ, ಗರ್ಭಿಣಿ-ಬಾಣಂತಿ-ಬಾಲೋಪಚಾರ, ಅಜ್ಜಿಮದ್ದು, ಮಧುದೀಪಿಕಾ, ತುಳು ವೈದ್ಯ ರತ್ನಮಾಲೆ ಮುಖ್ಯವಾದವುಗಳು. ಜಯಲಕ್ಷ್ಮೀ ವಿ. ರಾವ್ ಪ್ರಕಾಶನದಲ್ಲಿ ‘ಅನ್ನ ಆರೋಗ್ಯ, ಔಷಧ’ ಕೃತಿ, ಪುತ್ತೂರಿನ ವಿವೇಕಾನಂದ ಸಂಶೋಧನಾ ಕೇಂದ್ರದಿಂದ ಪ್ರಕಾಶಿತವಾದ ‘ಔಷಧೀಯ ಸಸ್ಯ ಸಂಪತ್ತು’ ಪ್ರಕಟಣೆಗಳು. ಮೊನ್ನೆಯಷ್ಟೇ ಬಿಡುಗಡೆಯಾದ ‘ಅಡಿಕೆ ವಲಯದ ಹಸಿ ಮದ್ದುಗಳು’ ಎನ್ನುವ ಪುಸ್ತಕವು ದೈತೋಟರ ಕನಸಿನ ಕೃತಿ. ಕಳೆದ ನಾಲ್ಕೈದು ತಿಂಗಳಿನಿಂದ ಇದರ ತಯಾರಿ ಕೆಲಸದಲ್ಲಿ ಮಗ್ನರಾಗಿದ್ದರು.
ಮೂಲಿಕಾ ಜ್ಞಾನವು ದೈತೋಟರಿಗೆ ರಕ್ತದಲ್ಲಿ ಬಂದ ಬಳುವಳಿ. ಜತೆಗೆ ಬದ್ಧತೆಯ ಜೀವನದ ಸಂಸ್ಕಾರ. ಸರಳತೆ, ಪ್ರಾಮಾಣಿಕತೆಗಳು ಮಿಳಿತವಾದ ಬದುಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಯಾವುದೇ ಫಲಾಪೇಕ್ಷೆಯನ್ನು ಬಯಸದೆ, ಮೂಲಿಕಾ ಜ್ಞಾನಪ್ರಸಾರಕ್ಕಾಗಿ ದುಡಿದ ಹಿರಿದೇಹವು ಜುಲೈ 21ರಂದು ಕಾಲದೊಂದಿಗೆ ಲೀನವಾಯಿತು. ಅವರೊಂದಿಗೆ ದಾಖಲಿಸಲಾಗದ ಅನೇಕ ಅಂಶಗಳೂ ಮರೆಯಾದುವು.
ಕೃಷಿ ಮಾಸಿಕ ‘ಅಡಿಕೆ ಪತ್ರಿಕೆ’ಯಲ್ಲಿ ಇಪ್ಪತ್ತೇಳು ವರುಷದಿಂದ ಅಂಕಣಕಾರರಾಗಿದ್ದರು. ಹೊಸದಿಗಂತ ಪತ್ರಿಕೆಯಲ್ಲೂ ವಿವಿಧ ಲೇಖನಗಳನ್ನು ಬರೆದು ಜ್ಞಾನಪ್ರಸಾರ ಮಾಡುತ್ತಿದ್ದರು. ‘ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿ. ರೋಗವನ್ನು ದೂರವಿಡಿ’ ಎಂದು ಕಿವಿಹಿಂಡುವ ಹಿರಿಯರ ಕಣ್ಮರೆಯು ಲೇಖನಾರಂಭದಲ್ಲಿ ಉಲ್ಲೇಖಿಸಿದ ನಿಜಾರ್ಥದ ‘ತುಂಬಲಾರದ ನಷ್ಟ.
- ನಾ. ಕಾರಂತ ಪೆರಾಜೆ
ಚಿತ್ರ ವಿವರ:
ಪಿ.ಎಸ್.ವೆಂಕಟರಾಮ ದೈತೋಟ
ಮೂಲಿಕಾ ಜ್ಞಾನ ಪ್ರಸಾರ
ನಿತ್ಯ ಹುಡುಕಾಟ