ಕವನ

ಮೌನರೋದನ

Submitted by jayaprakash M.G on Thu, 10/16/2014 - 20:08

ಮಿಂಚಾಗಿ ಬಂದಿಳಿದು ಸುಖದ ಸಿಂಚನವಾದೆ

ಬರಡಾದ ಜೀವನದಿ ಸಿರಿಹಸಿರ ಕೊನರಿಸಿದೆ

ಏರುಪೇರಿನ ದಾರಿಯಲಿ ಬಸವಳಿದು ಬೀಳುತಿರೆ

ಸಂತೈಸಿ ಜೊತೆಯಾದೆ ಸಿಹಿನೀರ ತೊರೆಯಂತೆ

ಪಯಣಮುಗಿಯುವ ಮುನ್ನ ಮರೆಯಾದೆ ಮಿಂಚಂತೆ

ಕರಗಿ ಹೋದುದು ಬೆಳಕು ಕಾರಿರುಳೆ ದಾರಿಯಲಿ

ನಿನ್ನ ನೆನೆಪಿನ ನೋವು ನಮ್ಮ ಕಣ್ಣ ಕಂಬನಿಗಳಲಿ

ನಿನ್ನ ನೆನೆಪಿನ ರೂಪ ನಮ್ಮ ಕಣ್ಣ ಕನ್ನಡಿಯಲಿ

ಚರಮ ಸೀಮೆಯಲಿನ್ನು ಚಿರಶಾಂತಿ ನಿನಗಿರಲಿ

ನಿನ್ನ ನೆನೆಪಿನ ನೋವಿನಲೆಗಳ ಹೊಡೆತ

ಎನ್ನೆದೆಯಾಳದ ಮೌನರೋದನದ ಮೊರೆತ.

ಸರಣಿ

ಜೊಳ್ಳುಗನ್ನಡಿ

Submitted by jayaprakash M.G on Sat, 10/11/2014 - 08:51

ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು

ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ

ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ

ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು

ಭಾರಿಬೇಟೆಯ ಕವಳದಾಸೆಗೆ  ಜೇಡನಿಳಿದನು ಎಳೆಯ ಜಾಡಲಿ

ಹಿಡಿಯಲೇನಿದೆ ಕಾಳಗೋಳಿನ ನೀರಹನಿಗಳಜೊಳ್ಳುಗನ್ನಡಿ

ಕಾಳಕೌಶಲ ಗೋಳಗನ್ನಡಿ ಬಿಂಬಭಾಸ್ಕರ ಮಂದಮಾರುತ

ಶಬ್ದ ಬಿಂಬಿತ ಭಾವಚುಂಬಿತ ಅರ್ಥಗರ್ಭಿತ ಸ್ವಛ್ಛಂದ ಸರಳಗಬ್ಬಂ.

 

ಚಿತ್ರಸ್ಫೂರ್ತಿ-ಪದ್ಯಪಾನ 129

ಸರಣಿ

ಜೀವಬಿಂದು

Submitted by jayaprakash M.G on Wed, 06/25/2014 - 10:01

ವಸಂತ ಸಂತಸದಿ ಮೂಡಿ ಬಂದಿಹ ನಗುಮೊಗದ ನಗೆಹೂವ ನಿಜಮೊಗ್ಗೆ

ಬಿರಿಯುವಾ ತವಕಕ್ಕೆ ತುಟಿಯಂಚುಗಳ ಸಡಿಲಿಸದ ಬಿಂಕದಾ ಸಂಚೇಕೆ

ಬಿಗಿಯದಿರು ಕೆಂದುಟಿಯಂಚುಗಳ ಬಿಚ್ಚಿಬಿಡು ಬೀರಲಿ ಸೌರಭದ ಸಿರಿನಗೆಯು

ಹಗಲಿರುಳು ಕಾಡುತಲಿ  ಪುರುಷನೆದೆಯಾಳದಲುಳಿಯಲಿ ನಿನ್ನ ಹೂನಗೆಯ ಮೋಡಿ

ಬೆಚ್ಚಿಬೀಳಲಿ ತಡವರಸಿ ಎದೆಬಡಿತದೇರುಪೇರಿನ ಪ್ರೇಮಾಂಕುರದ ಪ್ರಕೃತಿಯ ಸನ್ನಿಯಲಿ

ಮೂಡಲಿ ಜೀವಜಾಲದ ಪಯಣ ಕಂಕಣಕೆ  ಪರಿಣಯದ ಪ್ರಥಮ ಮಧುರ ಪ್ರಣಯ ಹೆಜ್ಜೆ

ಕಸಿವಿಸಿಯ ಬಿಸಿಯುಸಿರ ಹಸಿಹರೆಯ ನೆರೆಯುಕ್ಕಿ ಸರಸಮಯ  ಶಿಶಿರಶಶಿಯುದಿಸಿಬಂದಂತೆ

ಬಿಗಿದಪ್ಪಿ ಬರಸೆಳೆದು ಕಲ್ಪಕಲ್ಪಾಂತರವ ಬೆಸೆಬೆಸೆವ ಜೀವರಸಗಂಗೆಯೊಸರಿ ಬಂದಂತೆ

ಹರಿವಿರಂಚಿಗಳ ನಾಭಿನಾಳದ ಪಳೆಯುಳಿಕೆಯೊಳು ನವಜೀವ ಧರೆಯೊಳಗೆ ನಳನಳಿಸಿ  ಬಂದಂತೆ

ಸರಣಿ

ತುಂಟಶೀನನ ತ್ರಿಪದಿಗಳು ಶ್ರೀನಾಥ್ ಶೇಜವಾಡ್ಕರ್

Submitted by shejwadkar on Sun, 01/26/2014 - 16:01

"ತುಂಟಶೀನನ ತ್ರಿಪದಿಗಳು"

ಕನ್ನಡ ಪುಸ್ತಕ

ಲೇಖಕರು;  ಶ್ರೀನಾಥ್ ಶೇಜವಾಡ್ಮರ್

ವಿವರಣೆಗಳಿಗಾಗಿ  ಬ್ಲಾಗ್ ವೀಕ್ಷಿಸಿ

http://shreenathshejwadkar.blogspot.in/

ಗಜಪಡೆಯ ಗೋಳಾಟ

Submitted by jayaprakash M.G on Tue, 01/07/2014 - 06:29

ಬಿಳಿದಾದ ಕರಿಕೊಂಬು ಮೊರದಗಲ ಗಜಕರ್ಣ

ಮಾರುದ್ದ ಕರಿಮೂಗು ಪಿಳಿಪಿಳಿಯ ಸಣ್ಕಣ್ಣು

ಉಬ್ಬುಬ್ಬು ಗಜಕುಂಭ ಮದ್ದಾನೆ ಪುಂಡಾಟ

ಅಬ್ಬಬ್ಬ ಕಾಲ್ಕಂಬ ದೊಡ್ದಾದ ಗುಡಾಣ್ದ್ಹೊಟ್ಟೆ

ಕಿವಿಯೊಡೆಯೊ ಘೀಳಾಟ ಬಲುಚಂದ ಮರಿಯಾಟ

ಬಲುಮೆಚ್ಚು ಬೆಲ್ದಚ್ಚು ದುಃಸ್ವಪ್ನ ಕಾಳ್ಗಿಚ್ಚು

ಕಾಡೀಗ ಬೇಜಾರು ನಾಡಲ್ಲೆ ಬಲುಮೋಜು

ಆಗಾಗಬರ್ತೀವಿ ನೀವ್ಯಾಕೆ ಕಿರುಚ್ತೀರಿ

ಕಾಡನ್ನ ಕಡಿತೀರಿ ಬೆಂಕೀನು ಹಚ್ತೀರಿ

ಕಾಡನ್ನ ನುಂಗ್ತೀರಿ ನಾಡನ್ನೆ ಬೆಳಸ್ತೀರಿ

ನಮ್ಗೀಗ ಕಾಡಲ್ಲಿ ಜಾಗಾನೆ ಸಿಗ್ತಿಲ್ಲ

ನೀರಿಲ್ಲ ನಿಡಿಯಿಲ್ಲ ಬದುಕೋಕೆ ಆಗ್ತಿಲ್ಲ

ಅದ್ಕೆಂದೆ ಬರ್ತೀವಿ ಇಲ್ಲೇನೆ ಇರ್ತೀವಾ

ನೀವಾದ್ರೆ ಬರಬೌದು ನಾವ್ಬಂದ್ರೆ ಯಾಕ್ಹಿಂಗೆ

ಸರಣಿ

ಅಡ್ಡಡ್ದ – ಉದ್ದುದ್ದ ರೇಖೆಗಳು !!

Submitted by ksraghavendranavada on Sun, 04/07/2013 - 13:39

೧.

ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ

ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ,

ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ

ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು!

೩ ತಿ೦ಗಳಿ೦ದ ಏನಾದರೂ ಬರೆಯಲೇ ಬೇಕೆ೦ದುಕೊ೦ಡವನು

ಕೊನೆಗೊ೦ದು ದಿನ ಮನಸ್ಸು ಮಾಡಿ ಬರೆಯಲು ಕುಳಿತು

ಭಾರೀ ತ್ರಾಸ ಪಟ್ಟು ಬರೆದಿದ್ದು ಅಡ್ಡಡ್ಡ- ಉದ್ದುದ್ದ ರೇಖೆಗಳನ್ನು!

 

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

Submitted by ksraghavendranavada on Mon, 04/01/2013 - 13:29

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್

ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ?

ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|

ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ

ಸೈಟೆಲ್ಲಿ೦ದ ತಗೋಳ್ಳೋದೆ?

ನೀನೇನಾದ್ರೂ ಉಳಿಸಿದ್ಯೇನೆ?

ಎಷ್ಟಿದೆ? ಏನ್ಕಥೆ?

 

ಏನೇ... ನೆನಪು ಮಾಡಿಕೋ, ಆ ದಿವಸ

ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ

ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ ಸೌಧವ..

 

ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!

ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|

ಎಲ್ಲರೂ ಕಾಣೊ ಕನಸಲ್ಲ ಅದು?

ಬ್ಲಾಗ್ ವರ್ಗಗಳು

ಸ್ವಾತಂತ್ರ

Submitted by H A Patil on Wed, 08/15/2012 - 20:11

   

ಬಂದಿದೆ ಬಂದಿದೆ ಸ್ವಾತಂತ್ರ !
ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆ
ಏತಕೆ ಬಂದಿದೆ ಸ್ವಾತಂತ್ರ !
ದೇಶಕೆ ಇಲ್ಲದ ಕೋಶಕೆ ಇಲ್ಲದ
ಜನ ಸಾಮಾನ್ಯನಿಗಿಲ್ಲದ ಸ್ವಾತಂತ್ರ !

ಆರ್ಯರು ಹೋದರು ಅರಸರು ಬಂದರು
ಮೊಗಲರು ಹೋದರು ಆಂಗ್ಲರು ಬಂದರು
ಬಂದಿತು ಜನತೆಗೆ ಸ್ವಾತಂತ್ರ್ಯ
ಜಗದೋದ್ಧಾರದ ಮಂತ್ರವ ಪಠಿಸಿ
ಮೊಸಳೆಯ ಕಣ್ಣೀರನು ಸುರಿಸಿ
ಗಾಂಧಿಯ ಮೇಲೆ ಆಣೆಯನಿಟ್ಟು
ಹಿಡಿದರು ದೇಶದ ಚುಕ್ಕಾಣಿ

ದೇಶೋದ್ದಾರಕೆ ಪಣ ತೊಟ್ಟವರು
ಅವನಾ ಪಕ್ಷ ಇವನಾ ಪಕ್ಷ
ಶೋಷಕರವರು ಶೋಷಿತರಿವರು
ಬಡವರು ಇವರು ಬಲ್ಲಿದರವರು
ಸ್ಪೃಶ್ಯರು ಇವರು ಅಸ್ಪೃಶ್ಯರು ಅವರು
ಮಾಲಿಕರಿವರು ಕಾರ್ಮಿಕರವರು
ಎಂದೊಡೆದಾಳಿದರು ಜನಮನ

ಸರಣಿ