ಅವನ್ಯಾಕೆ ನಮ್ಮನ್ನು ಅನಾಥರನ್ನಾಗಿಸುತ್ತಿದ್ದಾನೆ !!

ಅವನ್ಯಾಕೆ ನಮ್ಮನ್ನು ಅನಾಥರನ್ನಾಗಿಸುತ್ತಿದ್ದಾನೆ !!

ಸತ್ತವರೆಲ್ಲ ನಕ್ಷತ್ರವಾಗುತ್ತಾರೆಂದು 
ಯಾರು ಹೇಳಿದರು ನೇಗಿಲ ಯೋಧನಿಗೆ 
ಇಲ್ಲಿ ಹಸಿರು ಬೆಳಕು ನೀಡಿದವ,ಮೇಲೆಲ್ಲೋ ಹೋಗಿ
ಮಿನುಗು ಬೆಳಕು ನೀಡುವ ಹಂಬಲದಲ್ಲಿದ್ದಾನೆ.

ಯಾರ್ಯಾರೋ ಹೆತ್ತ ಮಕ್ಕಳಿಗೆಲ್ಲ, 
ಕಿಂಚಿತ್ತೂ ಬೇಸರವಿಲ್ಲದೆ 
ತನ್ನ ಹೊಲದಲ್ಲೇ ಅನ್ನ ಬೆಳೆದವನಿಗೆ 
ಯಾರು ಹೇಳಿದರು, ಮೇಲೆಲ್ಲೋ ಸ್ವರ್ಗವಿದೆಯೆಂದು,

ಅವನು ಬೆವರನ್ನು ಮಾತ್ರ ದಾರಾಳವಾಗಿ ಕುಡಿದು 
ನಮ್ಮ ಉದರಕ್ಕೆ ತಂಪಿನ ದಾರೆ ಎರೆದವನಿಗೆ 
ಯಾರು ಹೇಳಿದರು, ಅವನಿಲ್ಲದೆ ನಾವು ಬದುಕಬಹುದೆಂದು!!

ಲಕ್ಷಗಟ್ಟಲೆ ದುಡಿದು, ಪೇಟೆಯ ಬದಿಯಲ್ಲಿ 
ತಿಂದು ತೇಗಿದವರೆಷ್ಟು! 
ತಿಂದದ್ದನ್ನು ಕರಗಿಸಲು ಹೆಣಗಿದವರೆಷ್ಟು!
ಅವನದ್ದೇ ನೆಗಿಲುಗಳ ಮೇಲೆ ನಿಂತ ನಗರಗಳಲ್ಲಿ 
ಕಡೆಗಣಿಸಿದ್ಯಾರು ಅವನನ್ನು!!

ಮೈಗೆಲ್ಲ ಬಿಸಿಲ ಹೊದಿಕೆ ಹೊದ್ದು ಗೈದವ,
ಕೈ ರೇಖೆ ಅಳಿಸಿ ಹೋಗುವಷ್ಟು ಊಳಿದವ,
ಏಕೆ ನಮ್ಮನ್ನು ಬಿಟ್ಟು ಅಗಲುತ್ತಿದ್ದಾನೆ?

ಭೂಮಿಯ ಮಣ್ಣಿಗೆ ತಲೆಬಾಗಿದವನ ಬದುಕಿಗೆ 
ಬೆಂಕಿಇಟ್ಟವರು ನಾವೇ ಅಲ್ಲವ ,,,,,,,,
ನಾವೇಕೆ ಸುಮ್ಮನೆ ನೋಡುತ್ತಿದ್ದೇವೆ !!

Comments

Submitted by kavinagaraj Sat, 09/12/2015 - 08:51

ನಕ್ಷತ್ರ, ಸೂರ್ಯ, ಚಂದ್ರ, ಸ್ವರ್ಗ, ನರಕಗಳೆಲ್ಲ ನಮ್ಮ ಜೊತೆಯಲ್ಲೇ ಇವೆ. ಕಾಣುವ ಸಹೃದಯಿಗಳಿಗೆ ಕೊರತೆಯಿದೆ. ಈ ಭಾವ ಹೊಮ್ಮಿರುವ ಕವಿತೆಯ ಸಾರ ಇಷ್ಟವಾಯಿತು, ನವೀನರೇ.

Submitted by makara Wed, 09/23/2015 - 09:05

ನವೀನ್, ನಿಮ್ಮ ಕವನ ಬಹಳ ಅರ್ಥಪೂರ್ಣವಾಗಿ ಅನ್ನದಾತನ ಬಗೆಗೆ ಆಲೋಚಿಸುವಂತೆ ಮಾಡುತ್ತದೆ. "ಒಕ್ಕಲಿಗನೊಕ್ಕಿದರೆ ಒಕ್ಕುವುದು ಜಗವೆಲ್ಲ, ಒಕ್ಕಲಿಗನೊಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ", ಎಂಬ ನಾನ್ನುಡಿ ನೆನಪಾಯಿತು.