ಕಗ್ಗ ದರ್ಶನ – 23 (1)

ಕಗ್ಗ ದರ್ಶನ – 23 (1)

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ
ಲೆಲ್ಲಿಲ್ಲಿಯುಂ ನೋಡಿ ನಡೆದು ನಗುತಳುತ
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ
ಬಲ್ಲವನೆ ಮುಕ್ತನಲ - ಮಂಕುತಿಮ್ಮ
ಎಲ್ಲದರಿಂದ ಎಲ್ಲರಿಂದ ಮುಕ್ತನಾಗಬಲ್ಲವನು ಯಾರು ಎಂಬ ಪ್ರಶ್ನೆಗೆ ಈ ಮುಕ್ತಕದಲ್ಲಿ ಉತ್ತರ ನೀಡಿದ್ದಾರೆ ಮಾನ್ಯ ಡಿ.ವಿ.ಗುಂಡಪ್ಪನವರು. ಅಂತಹ ವ್ಯಕ್ತಿಯ ಮೂರು ಗುಣಗಳನ್ನು ಅವರು ವಿವರಿಸಿದ್ದಾರೆ.
ಮೊದಲಾಗಿ ಆ ವ್ಯಕ್ತಿಗೆ ಎಲ್ಲರಲ್ಲಿಯೂ ತಾನು ಮತ್ತು ತನ್ನಲ್ಲಿ ಎಲ್ಲರೂ ಇದ್ದಾರೆ ಎಂಬ ರೀತಿಯಲ್ಲಿ ಬದುಕಲು ಸಾಧ್ಯವಾಗಬೇಕು. ಎಲ್ಲೆಲ್ಲಿಯೂ ಎಲ್ಲ ಸಂದರ್ಭಗಳಲ್ಲಿಯೂ ತನ್ನ ನಡೆನುಡಿಯಲ್ಲಿ ಹಾಗೆಯೇ ನಡೆಯುವ ವ್ಯಕ್ತಿ ಅವನು. ಇತರರ ಸಂತೋಷದಲ್ಲಿ ಖುಷಿ ಪಡುತ್ತ, ಪರರ ದುಃಖವನ್ನು ಹಂಚಿಕೊಳ್ಳುತ್ತ ಬದುಕುವುದು ಆ ವ್ಯಕ್ತಿಯ ಎರಡನೆಯ ಗುಣ. ಮೂರನೆಯ ಗುಣ ಲೋಕಕ್ಕೆ ಬೆಲ್ಲವಾಗಿ, ತನಗೆ ತಾನು ಕಲ್ಲಾಗಿ ಬದುಕುವುದು. ಅಂದರೆ ಇತರರಿಗೆ ಆನಂದವನ್ನು ನೀಡುತ್ತ, ತನ್ನ ಎಲ್ಲ ಸಂಕಟಗಳಿಗೆ ಕಠೋರವಾಗಿ ಇರುವವನೇ ಎಲ್ಲದರಿಂದ ಬಿಡುಗಡೆಯಾಗಬಲ್ಲ.
ಯಾರಾದರೂ ಈ ರೀತಿಯಲ್ಲಿ ಬದುಕಲು ಸಾಧ್ಯವೇ? ಸಾಧ್ಯ ಎಂಬುದಕ್ಕೆ ಚರಿತ್ರೆಯಲ್ಲಿ ನೂರಾರು ನಿದರ್ಶನಗಳಿವೆ. ಭಾರತದ ಋಷಿಮುನಿಗಳು ಹೀಗೆಯೇ ಮುಕ್ತರಾಗಿ ಬದುಕಿದ್ದರು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರಮಣ ಮಹರ್ಷಿ, ಅರವಿಂದರು, ಮಹಾತ್ಮಾ ಗಾಂಧಿ ಹೀಗೆಯೇ ಬಾಳಿದವರು.
ಇತ್ತೀಚೆಗಿನ ಒಂದು ಉದಾಹರಣೆ: ತಮಿಳ್ನಾಡಿನ ನಾಗಪಟ್ಟಣಂನ ದಂಪತಿ ಕೆ. ಪರಮೇಶ್ವರನ್ ಮತ್ತು ಚೂಡಾಮಣಿ. ೨೬ ಡಿಸೆಂಬರ್ ೨೦೦೪ರಂದು ಸುನಾಮಿಯ ರಕ್ಕಸ ಅಲೆಗಳು ತಮಿಳ್ನಾಡಿನ ತೀರಕ್ಕೆ ಅಪ್ಪಳಿಸಿದವು. ಅಂದು ಇವರ ಮಕ್ಕಳಾದ ರಕ್ಷಣ್ಯ (೧೨ ವರುಷ), ಕಾರುಣ್ಯ (೯ ವರುಷ) ಮತ್ತು ಕಿರುಬಾಸನ್ (೫ ವರುಷ) ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿದ್ದ ಸಮುದ್ರ ತೀರಕ್ಕೆ ಹೋಗಿ ಆಟವಾಡುತ್ತಿದ್ದರು. ಜೊತೆಗೆ ಏಳು ಬಂಧುಗಳೂ ಇದ್ದರು. ಅವರೆಲ್ಲರೂ ಸುನಾಮಿಗೆ ಬಲಿ. ಅಲ್ಲೇ ಇದ್ದ ಪರಮೇಶ್ವರನ್ ಅದು ಹೇಗೋ ಪಾರಾಗಿ, ಕೊನೆಗೆ ಮನೆಯಲ್ಲಿದ್ದ ಮಡದಿ ಚೂಡಾಮಣಿಗೆ ಸುದ್ದಿ ತಿಳಿಸಿದಾಗ ಆಕೆಗೆ ಆಘಾತ. ಎರಡು ದಿನ ಆಕೆ ಮಾತಿಲ್ಲದೆ ಕೂತಿದ್ದರು. ಮೂರನೆಯ ದಿನ ಸಮುದ್ರ ತೀರದಲ್ಲೇ ಅವರೆಲ್ಲರ ಶವ ಮಣ್ಣು ಮಾಡಿ ಮನೆಗೆ ಬಂದರು. ಇಬ್ಬರಿಗೂ ಬದುಕೆಲ್ಲ ಕತ್ತಲಾಗಿ, ಆತ್ಮಹತ್ಯೆಗೆ ತಯಾರಾಗಿದ್ದರು. ಆಗ, ನಾಗಪಟ್ಟಣಂನ ಹಲವು ಮನೆಗಳಲ್ಲಿದ್ದ ಅನಾಥ ಮಕ್ಕಳ ಅಳು ಇವರಿಬ್ಬರ ಕರುಳು ತಟ್ಟಿತು. ಸಾಯುವ ಬದಲು ಅನಾಥ ಮಕ್ಕಳನ್ನು ಸಾಕಲು ನಿರ್ಧರಿಸಿದರು. ಒಂದಲ್ಲ, ಎರಡಲ್ಲ ಮೂವತ್ತು ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ. ತಮಗೆ ತಾವೇ ಕಲ್ಲಾಗಿ ಲೋಕಕ್ಕೆ ಬೆಲ್ಲವಾಗಿದ್ದಾರೆ.

Comments