ಗುರುಧ್ಯಾನ

ಗುರುಧ್ಯಾನ

 

                               ಗುರುಧ್ಯಾನ

 

ಎಲ್ಲರಿಗೂ ನೆನಪುಗಳು ಏನೋ ಒಂಥರಾ ಹಿತ, ಅವು ಯಾವಾಗ್ಲೂ ಕಾಣ್ತಾ ಕಾಡ್ತಾ ಇರ್ಬಹುದು, ನಂಗೂ ಅಷ್ಟೇ ನನ್ನ ಗುರುಗಳ‌ ಜೊತೆಗಿನ ನೆನಪುಗಳು ಯಾವಾಗಲೂ ಅತಿ ಮಧುರ, ಅವೆಲ್ಲವು ಪಂಚರಂಗಿ ನೆನಪುಗಳು, ಅವು ಈಗ ವಿವಿಧ ರಂಗಿನ ಅಮೂರ್ತ ನೆನಪುಗಳು, ಕೆಲ ನೆನಪುಗಳು ಎದೆಯಲ್ಲಿ ಇಂಗಿಹೋದರೆ, ಕೆಲ ನೆನಪುಗಳು ಲೇಖನಿಯಲ್ಲಿ ಮಾತಾಡ್ತಾವೆ, ಕೆಲವು ಕನಸುಗಳಲ್ಲಿ ರಾರಾಜಿಸುತ್ತವೆ, ನ್ನು ಕೆಲವು ಗುರುಗಳು ಅಚಾನಕ್ ಆಗಿ ಸಿಕ್ಕರೆ ಅಥವಾ ನಾನೇ ಭೇಟಿಯಾದರೆ ನನಸಾಗುತ್ತವೆ, ಈ ರೀತಿ ಸಿಕ್ಕಾಗ ಗುರುವಿನ ಜೊತೆಗಿನ ಪ್ರೀತಿಯಾದರಗಳಿಂದ, ಗೌರವಭಾವಗಳಿಂದ ತುಂಬಿದÀ ಹರಟೆಗೆ ಹೆಚ್ಚು ಸ್ವಾತಂತ್ರ್ಯ. ಕಲಿಕೆ ಹಂತದಲ್ಲಿ ಗುರುಭಕ್ತಿಯೋ, ಗುರುಭಯವೋ ಏನೋ ಕಾಣೇ ಮನದಲ್ಲಿ ನೂರಾರು ದುಗುಡಗಳು, ಈಗ ಸಿಕ್ಕರೆ ಹಾಗೇ ಬಿಟ್ಟೆನೇ, ಮಾತಿಗೆಳೆದು ಆಗಿನ ತಲೆಹರಟೆಗಳು, ಒರಟು ಮಾತುಗಳು, ನೆನಪುಗಳನ್ನೆಲ್ಲಾ ರೇಷ್ಮೆ ಗೂಡಿನ ಎಳೆ ಬಿಚ್ಚಿದ ಹಾಗೇ ಒಂದೊಂದೆ ಬಿಚ್ಚುತ್ತೇನೆ.ಏಕೆಂದರೆ ಗುರುವಿನ ಜೊತೆ ಹರಟುವುದು ನನಗೆ ಎಲ್ಲಿಲ್ಲದ ಸಂತೋಷ,

        ತಾಯಿಯ ಹೊರತುಪಡಿಸಿದರೆ ನನ್ನಲ್ಲಿ ಗುರುವಿಗೇನೆ ಆಗ್ರಸ್ಥಾನ. ‘ತಾಯಿಯೇ ಮೊದಲ ಗುರು’ ಅದರಲ್ಲಿಯೇ ಶಿಕ್ಷಣ ನೀಡಿದ ಗುರುವಿಗೆ ಕೀರ್ತಿ ಶಿಖರ. ನಾವಿಂದು ಅಕ್ಷರಸ್ಥ ಎಂದು ತಲೆಯೆತ್ತಿ ನಿಲ್ಲಲು ಕಾರಣ ಗುರುಗಳ ಶ್ರಮದ ಫಲ. ಗುರುಗಳು ನಮ್ಮ ಬಾಲಗಳನ್ನು ಅದೆಷ್ಡು ಬಾರಿ ಕತ್ತರಿಸಿ ತಿದ್ದಿಲ್ಲವೇ?, ತಪ್ಪುಗಳ ಸದ್ದಿಲ್ಲದೇ ಮಾಡಿಲ್ಲವೇ?, ಗುರುಗಳಿಗೆ ನಾವು ನೀಡುವ ಒಂದೇ ಒಂದು ಕಾಣಿಕೆಯೆಂದರೆ ಮುಂದೆ ಗುರುಗಳು ಹಲವರಿಗೆ ನನ್ನ ಶಿಷ್ಯ ಇವನು ಎಂದು ಗರ್ವದಿಂದ ಹೇಳಿಕೊಳ್ಳುವಂತೆ ಮಾಡುವುದೇ ಹೊರತು ಮತ್ತೇನಲ್ಲ. ಕಲಿಕೆಯ ಜ್ಞಾನ ನಮ್ಮನ್ನಿಡಿದಿಡುವುದು ನಾವು ಗುರುವಿನ ಬಗ್ಗೆ ಹೊಂದಿರುವ ಭಕ್ತಿಯ ಶ್ರೇಷ್ಠತೆಯ ಫಲ. ಗುರುವನ್ನು ಗೌರವಿಸದವನು ವೈಯಕ್ತಿಕವಾಗಿ ಗೆಲುವು ಸಾಧಿಸಿರಬಹುದು ಆದರೆ ಸಾಮಾಜಿಕವಾಗಿ ಪದೇ ಪದೇ ವಿಫಲವಾಗಿರುತ್ತಾನೆ ಏಕೆಂದರೆ ಗುರುವನ್ನು ಗೌರವಿಸದವನು ಸಮಾಜದಲ್ಲಿ ಹೇಗೆ ಪ್ರೀತಿಪಾತ್ರನಾಗಲು ಸಾಧ್ಯ?. ಗುರು-ಶಿಷ್ಯನ ಅನುಸಂಧಾನ ಸ್ವಚ್ಛವಾಗಿದ್ದರೆ, ಯವುದೇ ವಿಷಯದಲ್ಲೇ ಆಗಲಿ, ಯಾವುದೇ ಮಜಲಲ್ಲಾದರೂ ಸಫಲನಾಗುತ್ತಾನೆ ಎಂದೇಳುವುದರಲ್ಲಿ ಹಿನ್ನೆಡೆಯಿಲ್ಲ. ತಾಯಿಯ ಶಿಕ್ಷಣ ಎಷ್ಟು ಮುಖ್ಯವೋ ಗುರುವಿನ ಶಿಕ್ಷಣವೂ ಅಷ್ಟೇ ಪ್ರಾಮುಖ್ಯ ಅದಕೇನೆ “ತಾಯಿ ದೇವೋಭವ, ಗುರುದೇವೋ ಭವ” ಎಂದು ದೇವರಿಗೆ ಹೋಲಿಕೆ ಮಾಡಿರುವುದು. ತಾಯಿ ಅನಕ್ಷರಸ್ಥೆ-ತಿದ್ದುವ ಶಿಕ್ಷಣ ಎಂದೂ ಹೇಳಿಕೊಡಲಿಲ್ಲ, ಅಮೇಲಿನಿದ್ದರೂ ಗುರುವಿನ ಬತ್ತಳಿಕೆಯಲ್ಲಿ ಬಾಣವಾಗಿ ಕಲಿತವನು.

       ಗೆಳೆಯರು ಸಿಕ್ಕಾಗ ಗುರುವು ಕಲಿಸಿದ್ದರ ಬಗ್ಗೆ ಹೆಚ್ಚಾಗಿ ಯಾರೂ ಯಾವತ್ತು ಮಾತಾಡುವುದಿಲ್ಲ, ಆದರೆ ಗುರುವಿಂದ ನಾವು ಫಜೀತಿಗೊಳಗಾದ, ಏಟು ತಿಂದ ಸಂದರ್ಭಗಳನ್ನೇ ಹೆಚ್ಚಾಗಿ ನೆನೆಯುವುದು. ಅದರಲ್ಲಿ ಕೆಲವು “ನಾಗರಾಜ್ ಸಾರ್ ಕೈಗಳ ಮೇಲೆ ತೀಡಿದ ಚಪಾತಿಗಳು, ಸೂಟ್‍ಕೇಸ್ ಮೇಲೆ ಹೊಡೆದ ಹೊಡೆತಗಳು, ಗಂಗಾಧರ್ ಸಾರ್‍ನ ಬಾಸುಂಡೆ ಸಹಿತದ ಬೆತ್ತದ ಏಟುಗಳು, ಅವರು ಹೊಡೆದರೆ ಬೆತ್ತ ಮುರಿಯದೇ ಇರುತ್ತಿರಲಿಲ್ಲ, ಇನ್ನೊಂದ್ ವಿಷ್ಯ ಗೊತ್ತಾ ಅವರಿಗೆ ಬೆತ್ತದ ಸಪ್ಲೈ ನಂದೇನೇ ವಿಪರ್ಯಾಸ, ಪಾಟೀಲ್ ಸಾರ್ ಹೊಡೆಯುವುದೇ ವಿಶೇಷ. ಬಾಳಾ ಒಳ್ಳೆಯವರು ನಮ್ಮಿಸ್ಸು ಏನು ಕೇಳಿದ್ರು ಎಸ್ಸೆಸ್ಸು-ಯಾರು ಗೊತ್ತಾ ನಮ್ಮ ಹಿಂದಿ ಮಿಸ್ಸು, ಪಿ.ಟಿ ಸಾರ್ ಮಾಡಿಸುತ್ತಿದ್ದ ಬೆಳಗಿನ ಮಂಪರಿನ ಪ್ರಾರ್ಥನೆಗಳು, ಯೋಗಾಸನಗಳು, ಅಬ್ಬಾ! ನೆಚ್ಚಿನ ಶವಾಸನ, ಕಾಂಪೌಂಡ್ ಸುತ್ತ ಗಿರಕಿ ಹೊಡೆಯುತ್ತ ಓಡುತ್ತಿದ್ದ ಓಟಗಳು, ಪಿಕ್‍ನಿಕ್‍ಗೆ ಹೋಗಿ ಸಿಕ್ಕಿಬಿದ್ದ ಕ್ಷಣಗಳು, ಹೇಳುತ್ತಾ ಹೋದರೆ ಹತ್ತು ಹಲವು.

         ಇಷ್ಟೆಲ್ಲಾ ಹೇಳಿದ ಮೇಲೆ ನನ್ನ ನೆಚ್ಚಿನ ನಯನ, ಶೈಲಜಾ ಮೇಡಂ ಬಗ್ಗೆ ಹೇಳದೆ ಹೋದರೆ ನಾನೀವರೆಗೂ ಹೇಳಿದ ಮಾತುಗಳಿಗೆ ಅರ್ಥಪೂರ್ಣ ಅಂತ್ಯ ಇರುವುದಿಲ್ಲ.

ಶೈಲಜಾ, ನಯನ ಮೇಡಂ ಹೈಸ್ಕೂಲಿನ ಓದಿನ ದಿನಗಳಲ್ಲಿ ನನಗೆ ಬೆಂಗಾವಲಾಗಿ ಸಹಾಯ ಮಾಡಿದವರು, ಅವರನ್ನು ಜೀವನ ಪೂರ್ತಿ ಮರೆಯಲಾಗುವುದಿಲ್ಲ. ಅವರು ನನಗೆ ಸ್ಫೂರ್ತಿ ನೀಡಿದ ಮಾತುಗಳು ಪ್ರತಿನಿತ್ಯವೂ ನನ್ನನ್ನು ಎಚ್ಚರಿಸುತ್ತಿರುತ್ತವೆ. ಅವರು ನನಗೆ ಅಚ್ಚು-ಮೆಚ್ಚಿನ ಗುರುಗಳಿಗಿಂತ ಆತ್ಮೀಯ ಸ್ನೇಹಿತರಾಗಿದ್ದರು, ಅಷ್ಟೇ ಏಕೆ ನನ್ನ ಸ್ವಂತ ಮನೆಯವರೇ ಆಗಿದ್ದರು. ಅವರು ಸಹ ನನ್ನ ಶೈಕ್ಷಣಿಕ ಜೀವನದ ಬಗ್ಗೆ ಹಲವಾರು ಕನಸುಗಳನ್ನು ಕಂಡಿದ್ದರು. ನಯನಾ ಮೇಡಂ 10ನೇ ತರಗತಿಗೆ ಪಸ್ಟ್ ಬಂದರೆ ಗಿಪ್ಟ್ ಕೊಡುತ್ತೇನೆಂದು ಹೇಳಿದ್ದರು, ಅದರಂತೆ ನಾನು ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆದಿದ್ದೆ, ಅವರು ಗಿಪ್ಟ್ ಕೊಟ್ಟ ಶರ್ಟು ಇಂದಿಗೂ ಭದ್ರವಾಗಿ ಬಚ್ಚಿಟ್ಟಿದ್ದೇನೆ, ಅದೇ ರೀತಿ ನಯನಾ ಮೇಡಂ, ನಾನು ಶೈಲಜಾ ಮೇಡಂ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದು ಅವಿಸ್ಮರಣೀಯ, ನನ್ನ ಕಣ್ಣೀರಿಗೆ, ಹತಾಶೆಗಳಿಗೆ ಧೈರ್ಯ ತುಂಬಿ ಅದರಿಂದ ಹೊರಬರಲು ಕಾರಣರಾದವರನ್ನು ಮಾತಾಡಿಸಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿವೆ, ಇದು ಇದೇ ರೀತಿ ಮುಂದುವರಿಯದಿರಲಿ ಎಂಬುದು ನನ್ನ ಅಭಿಲಾಷೆ. ಪಿಯುಸಿಯಲ್ಲೂ ಉತ್ತಮ ಅಂಕ ತೆಗೆದುಕೊಂಡು ಇಷ್ಟ ಇಲ್ಲದ್ದನ್ನು ಓದಲಾಗದೇ ಹಿಂದಿರುಗಿ ಬಂದ ದಿನದಿಂದ ಅವರನ್ನೇಕೋ ಮಾತನಾಡಿಸಲಾಗಲಿಲ್ಲ, ನನ್ನ ಮೇಲೆ ಅಪಾರ ಭರವಸೆಗಳನ್ನಿಟ್ಟಿದ್ದ ಅವರಿಗೆ ಏನನ್ನು ಹೇಳಲು, ಏನನ್ನು ಮಾತಾಡಲು ಸಾಧ್ಯವಾಗಲೇ ಇಲ್ಲ, ಆದರೆ ಅಂದಿಗಿಂತ ಇಂದೇ ಹೆಚ್ಚಾಗಿ ಅವರನ್ನು ನೆನೆಯುತ್ತೇನೆ, ಕಾರಣ ಹೃದಯಕ್ಕೆ ಹತ್ತಿರವಾದವರು.

                ಮಿಸ್ ಯೂ ಮೇಡಂ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

            

 

 

 

 

 

 

 

Comments

Submitted by kavinagaraj Mon, 09/14/2015 - 12:02

ಇದು ಗುರುವಂದನೆಯೂ ಆಗಿದೆ. ನಿಮ್ಮ ಅ ಗುರುಗಳಿಗೆ ಈ ಲೇಖನದ ಲಿಂಕ್ ಕಳಿಸಿಕೊಡಿ. ಸಂತೋಷಿಸಿಯಾರು!