ಗೊಲ್ಲನವನು...

ಗೊಲ್ಲನವನು...

ಗೊಲ್ಲರ ಗೊಲ್ಲನಾಗಿ ಮಲ್ಲರ ಮಲ್ಲನಾಗಿ ಬಲ್ಲಿದರ ಬಲ್ಲಿದನಾಗಿ ಶ್ರೀ ಕೃಷ್ಣ ತನ್ನ ಮೇಲಾರೋಪಿಸಿಕೊಂಡ ಪಾತ್ರಗಳೇ ಅಗಣಿತವಾದರು, ಸಾಧಾರಣ ಜನ ಮಾನಸದಲ್ಲಿ ಸೇರಿದಂತೆ ಪ್ರತಿಯೊಬ್ಬರಲ್ಲೂ ಅಚ್ಚಳಿಯದಂತೆ ತನ್ನ ಛಾಪು ಉಳಿಸುವ ಪಾತ್ರವೆಂದರೆ ಅವನ ಬಾಲ ಲೀಲೆಗಳನ್ನೊಳಗೊಂಡ ಎಳೆ ಬಾಲ್ಯದ ಪಾತ್ರ. ಅದರ ವೈವಿಧ್ಯತೆಗಳೆ ಕಟ್ಟಿ ಹಿಡಿಯಲಾಗದಷ್ಟು ವಿಸ್ತಾರ, ವಿನ್ಯಾಸಗಳ ಮಹಾಪೂರ. ತುಂಟಾಟದ ಕಂದನ ಪಾತ್ರವನ್ನು ಅವಲೋಕಿಸಿ ಆನಂದಿಸುತ್ತಿರುವಾಗಲೆ, ದುಷ್ಟ ಶಕ್ತಿಯನ್ನು ದಮನಿಸುವ ದಾನವ ಹತ್ಯಾಕಾಂಡದ ಪಾತ್ರ ಕಣ್ಮುಂದೆ ನಿಲ್ಲುತ್ತದೆ. ಅದರ ಆಸ್ವಾದನೆಯ ಹೊದರಿನಿಂದ ಹೊರಬರುವ ಮೊದಲೆ ಗೋಪಿ ಲೋಲನ ರಸಿಕ ತುಂಟಾಟಗಳು ಮನ ಸೆಳೆಯುತ್ತವೆ. ಈ ಚಿಕ್ಕಾಟಗಳೆಲ್ಲ ಬೇಡವೆಂದು ಆಧ್ಯಾತ್ಮಿಕಕ್ಕಿಣುಕಿದರೆ ನೇರ ಭಗವದ್ಗೀತೆಯ ರೂಪದಲ್ಲಿ  ಬ್ರಹ್ಮವೆ ತಾನಾಗಿ ಬೋಧಿಸುವ ಗುರುವಾಗಿಬಿಡುತ್ತದೆ. ಸಹಸ್ರಕ್ಕೂ ಮೀರಿದ ಮಹಿಷಿಯರಷ್ಟೂ ಜನರ ಜತೆ ಏಕಕಾಲದಲ್ಲಿರುತ್ತ, ಏಕವೆ ಅನೇಕವೆಂದಷ್ಟೆ ಸಹಜವಾಗಿ ಎಲ್ಲವನ್ನು ಸಮಷ್ಟೀಕರಿಸಿದ ಅನೇಕದಿಂದೇಕವಾಗುವ ಪಾತ್ರವೂ ಮತ್ತೊಂದು ಕಡೆಯಿಂದ ಸಡ್ಡು ಹೊಡೆಯುತ್ತ ನಾನೇನು ತಾನೇ ಕಮ್ಮಿ ಎನ್ನುತ್ತವೆ. ಹೀಗೆ ಎಲ್ಲವೂ ತಾನಾದ, ತಾನೇ ಎಲ್ಲವೂ ಆದ ಗೋವಿಂದನ 'ಬಾಲ ಲೀಲೆಗಳು' ಮಾತ್ರ ಒಂದೆಡೆ ತೀರಾ ಸಾಧಾರಣತ್ವದ ಹಂದರದಲ್ಲಿ ಅನಾವರಣಗೊಳ್ಳುತ್ತ, ಅದೆ ಸಮಯದಲ್ಲೆ ಅಸಾಧಾರಣತ್ವದ ಅಮಾನುಷ ಕೈಂಕರ್ಯಗಳಿಂದ ಆರಾಧನೆಗೊಳಪಡುವ ದ್ವಂದ್ವಕೊಳಗಾಗುತ್ತ ಇತ್ತ ಮಾನವನೂ ಎನ್ನಲಾಗದ ಅತ್ತ ದೇವನೂ ಎಂದು ವರ್ಣಿಸಲಾಗದ ಸಂದಿಗ್ದಲ್ಲೆ ಎಲ್ಲರನ್ನು ಸಿಕ್ಕಿಸಿ, ತಾನು ಮಾತ್ರ ತನ್ನ ಮಾಯಾಜಾಲವನ್ನು ಮುನ್ನಡೆಸಿಕೊಂಡು ಹೋಗುವ ಬಗೆಯೆ ಒಂದು ಅಪಾರ ಕೌತುಕದ ಅತಿಶಯ. ಆ ತುಣುಕಿನ ಮತ್ತೊಂದು ಲಹರಿ, ಈ ಕೆಳಗಿನ ಪದ್ಯ ರೂಪದ ಕವಿತೆಯಲ್ಲಿ ನಿರೂಪಿತ. 

ಗೊಲ್ಲನವನು...
_____________________

ಗೊಲ್ಲನವನು ಮೆಲ್ಲಗೆ ಬಂದ
ಕಳ್ಳ ಹೆಜ್ಜೆಯಲವನೆ ಮುಕುಂದ
ತುಟಿಗೆ ಬಳಿದ ಬೆಣ್ಣೆಯ ಚಂದ
ಅಮ್ಮನಪ್ಪುಗೆಯಲಿ ಮುಗ್ದ ಕಂದ ||

ಬಾಯೊಳಗಿಟ್ಟ ಮಣ್ಣಿನ ಋಣಕೆ
ತೋರಿಸಿಬಿಟ್ಟನೆ ಜಗದವತರಣಿಕೆ
ಮುಗ್ದ ನಗೆ ಹಾಲುಗಲ್ಲದ ಕೂಸು
ಕಪಟದಲೆ ಗೋಪಿಗೂ ಸತಾಯಿಸು ||

ಚತುರಮತಿಯ ಚಾಣಾಕ್ಷ್ಯತೆ ಗಾಢ
ಕಟ್ಟಿ ನಿಲುವಲಿಟ್ಟ ಮಡಿಕೆಯನೂ ಬಿಡ
ಬೆನ್ನ ಮೇಲೇರಿ ಕೋಲಲಿ ಬಡಿಯುತ
ಸೋರಿ ಚೆಲ್ಲಾಡೆ ಬೆಣ್ಣೆ ಮೊಸರ ಕದಿಯುತ ||

ಕಟ್ಟಿದರೇನು ಹಗ್ಗದಲಿ ಕಿರಿಯ ಕೈ ಕಾಲು 
ಬಗ್ಗದ ಜೀವ ಸೆಳೆದೊಯ್ದನೆ ಒರಳ ಕಲ್ಲು
ನುಗ್ಗಿಸಿ ಮರದ ನಡುವಲಿ ಮುರಿದ ಗೋಣು
ವೃಕ್ಷರೂಪಿ ದಾನವನಿದ್ದರು ಬಿಡದವನು ||

ಹಾಲ್ಕುಡಿಯುತ ವಿಷವುಣಿಸಿದ ಪೊಗರ
ಬರಿ ಹಸುಗಂದನೆಂದರೆ ಹೇಗೆ ನಂಬುವರ ?
ಕಾರಣ ನಿಮಿತ್ತ ಅವತಾರಪುರುಷ ಶ್ರೀ ಹರಿ
ಮನುಜ ಜನ್ಮವೆತ್ತಿದ ಭೂಭಾರ ಹರಿಸಿದ ಪರಿ ||

-------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------