ಟಿಇಟಿ, ಅಭ್ಯರ್ಥಿಗಳ್ಯಾಕೆ ಪಲ್ಟಿ?

ಟಿಇಟಿ, ಅಭ್ಯರ್ಥಿಗಳ್ಯಾಕೆ ಪಲ್ಟಿ?

ಟಿಇಟಿ ಕಳಪೆ ಫಲಿತಾಂಶಕ್ಕೆ ಕಾರಣ ಯಾರು?

ಕೊನೆಗೂ ಟಿಇಟಿ ಫಲಿತಾಂಶ ಬಂದಿದೆ. ಆರಂಭದಿಂದಲೂ ಅನೇಕರ ಟೀಕೆಗೆ ಗುರಿಯಾಗಿದ್ದ ಈ ನೂತನ ಶಿಕ್ಷಕರ ಅರ್ಹತಾ ಪರೀಕ್ಷಾ ವ್ಯವಸ್ಥೆ ಫಲಿತಾಂಶದ ನಂತರ ಕೆಲವೊಂದು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿದೆ. ಪರೀಕ್ಷೆ ಬರೆದವರಲ್ಲಿ ಪತ್ರಿಕೆ-1 ರಲ್ಲಿ ಕೇವಲ ಶೇಕಡಾ 1 ಮತ್ತು ಪತ್ರಿಕೆ-2ರಲ್ಲಿ ಶೇಕಡಾ 10 ರಷ್ಟು ಅಭ್ಯರ್ಥಿಗಳು ಮಾತ್ರ ಪಾಸಾಗಿದ್ದಾರೆ.ಇಂತಹ ಕಳಪೆ ಫಲಿತಾಂಶಕ್ಕೆ ಜವಾಬ್ದಾರರು ಯಾರು ಎಂಬುದು ಪ್ರಶ್ನೆಯಾಗಿದೆ. ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ಶಿಕ್ಷಕ ಶಿಕ್ಷಣ ತರಬೇತಿ ಸಂಸ್ಥೆಗಳೇ?ಇಲ್ಲ, ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿ ಅದರ ಗುಣಮಟ್ಟವನ್ನು ಕಾಪಾಡದ ನಮ್ಮ ಸರ್ಕಾರವೇ?ಅಥವಾ ಸರಿಯಾದ ಪೂರ್ವತಯಾರಿಯಿಲ್ಲದೆ ಪರೀಕ್ಷೆ ನಡೆಸಿದ ಕೇಂದ್ರಿಕೃತ ದಾಖಲಾತಿ ಘಟಕವೇ? ಇಲ್ಲ, ಕೊಟ್ಟಿರುವ ಪಠ್ಯಕ್ರಮವನ್ನು ಅರ್ಥಮಾಡಿಕೊಂಡು ಸರಿಯಾಗಿ ಅಭ್ಯಾಸ ನಡೆಸದ ನಮ್ಮ ಅಭ್ಯರ್ಥಿಗಳೇ?
ವಿದ್ಯಾರ್ಥಿಗಳನ್ನು ಪಾಸು ಮಾಡಬೇಕಾದವರು ತಾವೇ ಪಾಸಾಗದಿದ್ದರೆ ಹೇಗೆ? ಕುಣಿಯಲು ಬರದವನು ಅಂಗಳ ಡೊಂಕು ಎಂದ ಹಾಗೆ ಪಾಸಾಗಲು ಸಾಧ್ಯವಾಗದರು ಟಿಇಟಿ ವ್ಯವಸ್ಥೆಯನ್ನೇ ದೂಷಿಸುತ್ತಿದ್ದಾರೆ.ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಟಿಇಟಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.ಹಾಗಾದರೆ ಪಾಸಾದವರ ಕೈಯಲ್ಲಿ ಏನು ಮಂತ್ರ ದಂಡವಿತ್ತೆ?ಸಮಸ್ಯೆ ಇರುವುದು ಟಿಇಟಿಯಲ್ಲಿ ಅಲ್ಲ.
ರಾಜ್ಯದಲ್ಲಿರುವ ಶಿಕ್ಷಕ ತರಬೇತಿ ಸಂಸ್ಥೆಗಳು ಕೇವಲ ಹಣಗಳಿಸುವ ವ್ಯಾಪಾರಕೇಂದ್ರಗಳಾಗಿವೆ.ಇವರು ನಿಯಮಾನುಸಾರ ಪಿ.ಯು ಸಿ ಅಥವ ಪದವಿಯಲ್ಲಿ ಶೇಕಡಾ 55 ಅಂಕ ಪಡೆದವರಿಗೆ ಪ್ರವೇಶ ಕೊಡುತ್ತಾರೆ .ಅಲ್ಲಿ ಅರ್ಹರಲ್ಲದ ಉಪನ್ಯಾಸಕರಿಂದ ಬೋಧನೆ ಮಾಡಿಸಿ ಹಾಗೊ ಹೀಗೊ ಕೋರ್ಸ್ ಪೂರ್ಣಗೊಳಿಸಿ ಪ್ರಶಿಕ್ಷಣಾರ್ಥಿಗಳನ್ನು ತಯಾರು ಮಾಡುತ್ತಾರೆ.ಹೀಗೆ ಹೊರಬಂದವರಲ್ಲಿ ಕೆಲವರು ಖಾಸಗಿ ಸಂಸ್ಥೆಗಳಲ್ಲಿ ಸೇವೆಗೆ ಸೇರಿದರೆ,ಇನ್ನೂ ಕೆಲವರು ತಮ್ಮದಲ್ಲದ ವೃತ್ತಿಯನ್ನು ಆಯ್ದುಕೊಂಡು ಬೋಧನೆಯಿಂದ ದೂರವಾಗುತ್ತಾರೆ.ಇವರು ಯುದ್ಧ ಕಾಲೆಃ ಶಸ್ತ್ರಾಭ್ಯಾಸ ಅನ್ನೋಹಾಗೆ ಪರೀಕ್ಷೆಗಳು ಬಂದಾಗ ಸಿದ್ಧತೆ ಮಾಡಿಕೊಳ್ಳುತ್ತಾರೆ.ಟಿಇಟಿಯಂತಹ ಪರೀಕ್ಷೆ ಎದುರಿಸಬೇಕಾದರೆ ಕಾಲದ ಜೊತೆ ಹೆಜ್ಜೆ ಹಾಕಬೇಕಾಗುತ್ತದೆ.ಅಂದರೆ ಪ್ರಚಲಿತ ಶಿಕ್ಷಣಕ್ರಮ ದೊಂದಿಗೆ ತಮಗೆ ತಾವು ಪರಿಷ್ಕರಣೆಗೆ ಒಳಪಡಬೇಕಾಗುತ್ತದೆ.
ಈ ತಲೆಮಾರಿನ ವಿದ್ಯಾರ್ಥಿಗಳು ಮತ್ತು ಅವರಿಗೆ ರೂಪಿಸಿರುವ ಪಠ್ಯಕ್ರಮವನ್ನು ಗಮನಿಸಿದರೆ ಇದನ್ನು ಬೋಧಿಸಲು,ಶೇಕಡ 55 ಬಿಡಿ ಶೇಕಡ 70 ಅಂಕ ಪಡೆದು ಕೋರ್ಸ್ ಮುಗಿಸಿದವರಿಗೂ ಕಷ್ಟಸಾಧ್ಯ. ಈಗ ಸೇವೆಯಲ್ಲಿರುವ ಅದೆಷ್ಟೋ ಶಿಕ್ಷಕರು ಇಲಾಖೆ ಹಮ್ಮಿಕೊಳ್ಳುವ ತರಬೇತಿಗಳಲ್ಲಿ ಪಠ್ಯಕ್ರಮದ ಕ್ಲಿಷ್ಟತೆಯ ಬಗ್ಗೆ ತಮ್ಮ ಗೋಳು ತೋಡಿಕೊಂಡಿದ್ದಾರೆ.ಟಿಇಟಿಯಂತಹ ಪರೀಕ್ಷೆಗಳನ್ನು ಪಾಸು ಮಾಡುವಷ್ಟು ಬೌದ್ಧಿಕ ಸಾಮರ್ಥ್ಯವಿಲ್ಲದವರಿಗೆ ಖಂಡಿತ ಈಗಿನ ಪರಿಷ್ಕೃತ ಪಠ್ಯಕ್ರಮವನ್ನು ಬೋಧಿಸಲು ಸಾಧ್ಯವಿಲ್ಲ.
ಅದರಲ್ಲು ಈಗ ಪಾಸ್ ಆಗಿರುವವರಲ್ಲಿ ಕೆಲವರು ಮೀಸಲಾತಿಯ ಕೃಪೆಗೆ ಪಾತ್ರರಾಗಿದ್ದಾರೆ.ಸಾಮಾನ್ಯವರ್ಗದಲ್ಲಿ ಜಸ್ಟ್ ಪಾಸಾದವರ ಸಂಖ್ಯೆಯು ಅಷ್ಟೇ ಇದೆ.ಮುಂದಿನ ದಿನಗಳಲ್ಲಿ ಅರ್ಹತಾ ಪರೀಕ್ಷೆಯ ಪಠ್ಯಕ್ರಮದ ಮಾಹಿತಿಯನ್ನು ಶಿಕ್ಷಕರ ತರಬೇತಿ ಹಂತದಲ್ಲೇ ಆಳವಡಿಸಬೇಕು.ಜೊತೆಗೆ ಡಿ.ಇಡಿ ಬಿ.ಇಡಿ ಪ್ರವೇಶಾತಿ ಪಡೆಯಲು ಇರುವ ಕನಿಷ್ಟ ಶೇಕಡ ಅಂಕಗಳನ್ನು ಹೆಚ್ಚಿಸಬೇಕು.ನಾಯಿಕೊಡೆಗಳಂತೆ ತಲೆಯೆತ್ತಿರುವ ತರಬೇತಿ ಸಂಸ್ಥೆಗಳಿಗೆ ಹೊಸ ಮಾನದಂಡವನ್ನು ಬಳಸಿ ಕಡಿವಾಣ ಹಾಕಬೇಕು.ಕಳಪೆ ಸಂಸ್ಥೆಗಳ ಅನುಮತಿ ರದ್ದುಗೊಳಿಸಬೇಕು.ಈ ರೀತಿ ಮಾಡಿದರೆ ಶಿಕ್ಷಕರ ತರಬೇತಿ ಪಡೆದು ನಿರುದ್ಯೋಗಿಗಳಾಗಿ ಅಳೆಯುವುದು ತಪ್ಫುತ್ತದೆ ನಮ್ಮ ಮಕ್ಕಳಿಗೆ ಒಳ್ಳೆಯ ಬೌದ್ಧಿಕ ಸಾಮರ್ಥ್ಯವುಳ್ಳ ಶಿಕ್ಷಕರೂ ಸಿಗುತ್ತಾರೆ.

ಎಸ್.ಕೆ