"ನಂಬಿಕೆ"

"ನಂಬಿಕೆ"

ಇಂದು ಮುಂಜಾನೆ, ನಾನು ಹಾಗು ನನ್ನ ಗೆಳೆಯ ಇಬ್ಬರೂ ಹೋಟೆಲ್ ಒಂದರಲ್ಲಿ ತಿಂಡಿ ತಿನ್ನುತ್ತಾ, ಏನೇನೋ ಹರಟುತ್ತಾ ಕುಳಿತಿದ್ದೆವು, 

ಆಗ ದಿಗ್ಗನೆ ನನ್ನ ಗೆಳೆಯನ ಮನದಲ್ಲಿ ಏನೋ ಒಂದು ಪ್ರಶ್ನೆ ಮೂಡಿತು,

ನನ್ನನ್ನು ಕೇಳಿದ, "ಗೆಳೆಯ ನಂಬಿಕೆ ಎಂದರೇನು?" ಎಂದು, 

ನಾನು ಮುಗುಳ್ನಕ್ಕು ಹೇಳಿದೆ, ನಂಬಿಕೆ ಎಂದರೆ Belief, 

"ಅಯ್ಯೋ ಹಾಗಲ್ಲ ಮಾರಾಯ, ಪದಕ್ಕೆ ಇನ್ನೊಂದು ಪದದ ಅರ್ಥ ಅಲ್ಲ, ನಾನು ಕೇಳಿದ್ದು ಆ ಪದದ ಭಾವಾರ್ಥ, ಒಳಾರ್ಥ," ಎನೇನೊ ಗೊಣಗಿದ,

ನಾನು ಸುಮ್ಮನೆ ಏನೋ ಯೋಚಿಸುವನಂತೆ ನಟಿಸ ತೊಡಗಿದೆ (ವಾಸ್ತವವಾಗಿ ನನಗೆ ತಿನ್ನುವ ದೋಸೆಯ ಮೇಲೆ ಆಸಕ್ತಿ ಜಾಸ್ತಿ ಇತ್ತು),

ಅಷ್ಟುಹೊತ್ತಿಗಾಗಲೇ, ಹೋಟೆಲಿನ ಮಾಣಿ ಬಿಲ್ಲನ್ನು ತಂದು ನಮ್ಮ ಮುಂದಿಟ್ಟ, ದೋಸೆಯನ್ನು ಚಟ್ನಿಯಲ್ಲಿ ಅದ್ದಿ ಅದರ ಸ್ವಾದವನ್ನು ಸವಿಯುತ್ತಿದ್ದ ನನ್ನ ಹೊರ ಮನಸಿಗೆ ಅದರ ಅರಿವಾಗಲಿಲ್ಲ,

ತಿಂದು ಮುಗಿಸಿದ ನನ್ನ ಗೆಳೆಯ ಬಿಲ್ ಹಣವನ್ನು ಮಾಣಿಯ ಕೈಲಿಟ್ಟ, ಬಿಲ್ ತೆಗೆದುಕೊಂಡ ಮಾಣಿ, ಕ್ಯಾಷಿಯರ್ ಇದ್ದಲ್ಲಿಗೆ ಹೊದ‌, 

ನಾನು ನನ್ನ ಗೆಳೆಯನ ಮೇಲೆ ಕಿರುಚಿದೆ,,,

"ಏನಾಯ್ತು " ? ಅವನೆಂದ (ಬಹುಷಃ ಬಿಲ್ ಅವನು ಪಾವತಿಸಿದ್ದಕ್ಕೆ ನನಗೆ ಕೋಪ ಬಂದಿರಬೇಕು ಎಂದುಕೊಂಡನೇನೋ)

"ಮಾಣಿಯ ಕೈಯಲ್ಲಿ ಬಿಲ್ ನ ಹಣ ಕೊಟ್ಟೆಯಲ್ಲ! ಒಂದು ವೇಳೆ ಮಾಣಿ ಹಿಂತಿರುಗಿ ಬಂದು ಹಣವನ್ನೇ ನೀಡಿಲ್ಲ ಎಂದರೆ ?" ನಾನು ಅದೇ ದಾಟಿಯಲ್ಲಿ ನುಡಿದೆ,

"ಹ್ಹ ಹ್ಹ" ನಕ್ಕು ಬಿಟ್ಟ ಆತ,

ಯಾಕೇ ? ಯಾಕೆ ನಗ್ತಾ ಇದ್ದೀಯ ! ನಾನು ಕೇಳಿದೆ,

"ಜನರ ಮೇಲೆ ಅಷ್ಟು "ನಂಬಿಕೆ" ಕಳೆದುಕೊಂಡರೆ ಹೇಗೆ ಮಾರಾಯ?, ಅದೂ ಅಲ್ಲದೇ ಅಷ್ಟೂ "ನಂಬಿಕೆ" ಇಲ್ಲದೇ  ಅವನನ್ನು ಇಲ್ಲಿ ಕೆಲ್ಸಕ್ಕೆ ಇಟ್ಟುಕೊಳ್ತಾರ ?" ಗೆಳೆಯ ಉಸುರಿದ,

ನಾನು ಮುಗುಳ್ನಕ್ಕೆ, ಗೆಳೆಯ ಅವನ ಪ್ರಶ್ನೆಗೆ ಅವನೇ ಉತ್ತರ ಕಂಡುಕೊಂಡ, ಮಾಣಿ ನಂಬಿಕೆ ಉಳಿಸಿಕೊಂಡ. 

-ನವೀನ್ ಜೀ ಕೇ 

Comments

Submitted by makara Mon, 11/25/2013 - 23:09

ಜೀವನ ನಡೆಯುವುದೇ ಒಂದು ನಂಬಿಕೆಯಿಂದ. ನಾಳೆ ನಾವು ಬದುಕಿರುತ್ತೇವೆ ಎನ್ನುವ ನಂಬಿಕೆಯಿಂದಲೇ ನಾಳೆ ಮಾಡಬೇಕಾಗಿರುವ ಕೆಲಸಗಳ ತಯಾರಿ ನಡೆಸಿಕೊಂಡು ಇಂದು ಮಲಗುತ್ತೇವೆ. ಆ ನಂಬಿಕೆಯೇ ಇಲ್ಲವೆಂದಿದ್ದರೆ ಯಾರೂ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ ಅಲ್ಲವೇ? ಜಗತ್ತಿನಲ್ಲಿ ಅತ್ಯಂತ ಸೋಜಿಗದ ಸಂಗತಿ ಯಾವುದೆನ್ನುವ ಯಕ್ಷನ ಪ್ರಶ್ನೆಗೆ ಧರ್ಮರಾಯ ತಮ್ಮ ಮುಂದೆಯೇ ಎಷ್ಟೋ ಜನ ಸಾಯುತ್ತಿದ್ದರೂ ಸಹ ನಾನು ಮಾತ್ರ ಶಾಶ್ವತ ಎಂದು ತಿಳಿಯುವ ಮನುಷ್ಯ ಎಂದು ಹೇಳುತ್ತಾನೆ. ಅದು ಬೇರೆ ವಿಷಯ. ಇರಲಿ ಬಿಡಿ, ನಂಬಿಕೆಯ ಕುರಿತಾದ ಚುಟುಕು ಕಥೆಗೆ ಅಭಿನಂದನೆಗಳು, ನವೀನ್ ಅವರೆ.

Submitted by naveengkn Tue, 11/26/2013 - 10:00

In reply to by makara

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು ಶ್ರಿಧರ್ ಅವರೇ,,,,,,, "ನಂಬಿಕೆ" ಎನ್ನುವ ಶೀರ್ಷಿಕೆಗೆ ಆದ್ಯಾತ್ಮದ ತಿಳಿ ಪದರವನ್ನು ಹಚ್ಚಿ, ಜೀವನ ಎನ್ನುವ ಅರ್ಥವಾಗದ (ನನಗೆ ಅರ್ಥವಾಗದ) ದೋಣಿಗೆ, ನಂಬಿಕೆ! ಎನ್ನುವ ಪದವೇ ನೀರಿನ ಅಲೆ ಇದ್ದಂತೆ, ಎಂದು ನವಿರಾಗಿ ಪ್ರತಿಕ್ರಿಯೆ ಬರೆದಿರುವಿರಿ,,,,,, ನನಗೆ ಅರ್ಥವಾಗದ ಒಂದು ಚಿಕ್ಕ ಸಂಶಯ, ಧರ್ಮರಾಯನ ಉತ್ತರದ ಪರಿಯಲ್ಲಿ ಇದ್ದುದು ಜೀವನದ ಬಗ್ಗೆ ಮನುಷ್ಯನಲ್ಲಿರುವ "ಶಾಶ್ವತ" ಎನ್ನುವ ಭ್ರಮೆಯ ಬಗ್ಗೆಯೋ ಅಥವಾ "ಏನಾದರು ನಾನು ಬದುಕಬೇಕು ಎನ್ನುವ" ಆತ್ಮವಿಶ್ವಾಸವೋ ? ಗೊಂದಲದಲ್ಲಿದ್ದೇನೆ!

--ನವೀನ್ ಜೀ ಕೇ

Submitted by makara Tue, 11/26/2013 - 13:07

In reply to by naveengkn

ನವೀನ್ ಅವರೆ,
ಧರ್ಮರಾಯನ ಉತ್ತರದ ಪರಿಯಲ್ಲಿ ಇದ್ದುದು ಜೀವನದ ಬಗ್ಗೆ ಮನುಷ್ಯನಲ್ಲಿರುವ "ತಾನು ಮಾತ್ರ ಶಾಶ್ವತ" ಎನ್ನುವ ಭ್ರಮೆ - ಇದೇ ಸರಿಯಾದದ್ದು, ಗೊಂದಲ ಬೇಡ. :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by naveengkn Tue, 11/26/2013 - 13:41

In reply to by makara

ನಿಮ್ಮ ಉತ್ತರ ಸರಳವಾಗಿ ಅರ್ಥವಾಗುವಂತಿದೆ, ಗೊಂದಲ ಪರಿಹರಿಸಿದ್ದಾಕ್ಕಾಗಿ ಧನ್ಯವಾದಗಳು, --ನವೀನ್ ಜೀ ಕೇ

Submitted by nageshamysore Tue, 11/26/2013 - 04:32

ನಂಬಿಕೆಯಿಂದಲೆ ನಡೆವ ಜಗ...
.
ಕೈ ಹಿಡಿದರೆ ಸಲಗ,
ಕೈ ಬಿಟ್ಟರೆ ಬದುಕೆ ಅಗ್ಗ,
ಕೈ ಕೊಟ್ಟರೆ ನೇಣಿನ ಹಗ್ಗ,
ಅಷ್ಟಾದರೂ ಬಿಡದ ಜುಗ್ಗಾ,
ನಂಬಿಕೆಯಲೆ ಮುನ್ನಡೆವ ಜಗ ||
.
-ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by naveengkn Tue, 11/26/2013 - 10:15

In reply to by nageshamysore

ಸುಂದರ ಕವನಯುತ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗೇಶ್ ಅವರೇ, ನಾವು ಅನೇಕ ರೀತಿಯ ಲೆಕ್ಕ ಪತ್ರಗಳು, ಹಾಗು ಅನೇಕ ಸಾಫ್ಟ್-ವೇರ್ ಗಳ ಮೂಲಕ ನಮ್ಮ ಮಾತಿಗೆ ಒಂದು ಲೆಕ್ಕಾಚಾರ ಕೊಟ್ಟು, ಬದುಕನ್ನು ಆ ಪರಿದಿಯೊಳಗೆ ಇರಿಸಿದ್ದೇವೆ, ಆದರೆ ಇದೆಲ್ಲ ಇಲ್ಲದೆಯೂ ನಾವು (ಭಾರತೀಯರು) ಬದುಕಿದ್ದವರು, ಬರಿಯ ನಂಬಿಕೆ ಎನ್ನುವ ಮಾತಿನ ಮೇಲೆ..... ಇಂದೂ ಕೂಡ ಎಷ್ಟೇ ತಂತ್ರಜ್ಞಾನಯುತವಾಗಿ ಮುಂದುವರಿದರೂ, ನಂಬಿಕೆ ಎನ್ನುವ ನಮ್ಮೊಳಗಿನ ನಂಬಿಕೆಗಿಂತಾ ಮಿಗಿಲಾದುದು ಯಾವುದು ಇಲ್ಲ,,,,, ನಿಮ್ಮ ಕವನದ ಕೊನೆಯ ಸಾಲಿನಲ್ಲಿ ಹೇಳಿದಂತೆ,

-ನವೀನ್ ಜೀ ಕೇ

Submitted by ramvaidya Thu, 11/28/2013 - 19:07

ಛೊಲೊ ಬರ್ದಿಯಲೇ... ಹಿಂಗೆ ಬರಕೊತಿರು ಫುಲ್ ಟೈಮ್ ಲೇಖಕ ಆಗ್ತಿ.

Submitted by naveengkn Thu, 11/28/2013 - 21:11

In reply to by ramvaidya

ಶರಣ್ರಿ ವೈದ್ಯರಾ,,,,, ನಿಮ್ಮ ಮನಸ್ನಾಗ್ ಬಂದ್ ಮ್ಯಾಗ್, ಖರೇನ ಆಗ್ತೈತ್ರಿ,,, --ನವೀನ್ ಜೀ ಕೇ