ನಾನೂ ಮತ್ತು ನನ್ನ ಇಷ್ಟಾನಿಷ್ಟಗಳು !!!

ನಾನೂ ಮತ್ತು ನನ್ನ ಇಷ್ಟಾನಿಷ್ಟಗಳು !!!

ಭಾರತಕ್ಕೆ ಹೋಗಿದ್ದಾಗ ಹೀಗೇ ಯಾವುದೋ ಮಾತಿಗೆ ಯಾರೋ ಕೇಳಿದರು "ಮಗನಿಗೆ ಚಿತ್ರಾನ್ನ ಅಂದ್ರೆ ಬಹಳ ಇಷ್ಟ ಅಲ್ವೇ?" ... ನಾನೆಂದೆ "ಹಾಗೇನಿಲ್ಲ, ಚಿಕ್ಕವನಾಗಿದ್ದಾಗ ಇಷ್ಟವಾಗ್ತಿತ್ತು. ಈಗ ಅದೇನೂ ಮೊದಲಿಷ್ಟ ಅನ್ನೋ ಹಾಗಿಲ್ಲ" ... ಆಗ ಬಂದಿದ್ದು ನನ್ನ ಇಷ್ಟಾನಿಷ್ಟಗಳ ಬಗ್ಗೆ ಯೋಚನೆ.

ಅಂದಿನ ದಿನಗಳಲ್ಲಿ ಎಷ್ಟೋ ವಿಚಾರಗಳು ಬಹಳ ಇಷ್ಟವಾಗುತ್ತಿತ್ತು. ಈಗ ಅವು ಸಹ್ಯವಾಗುತ್ತಿಲ್ಲ. ಹಾಗೇ, ಎಷ್ಟೋ ವಿಚಾರಗಳು ಆಗ ಇಷ್ಟವೇ ಆಗುತ್ತಿರಲಿಲ್ಲ, ಈಗ ಅವು ಚೆನ್ನಾಗಿವೆ ಅನ್ನಿಸುತ್ತಿದೆ. ಯಾಕಿರಬಹುದು?

ಬಹುಶ: ನನಗೆ ಈಗ ಬುದ್ದಿ ಬಂದಿರಬಹುದು. ತುಲನೆ ಮಾಡಿ ನೋಡುವಷ್ಟು ಬುದ್ದಿಮಟ್ಟ ಏರಿರಬಹುದು. ಆದರೆ ಗ್ಯಾರಂಟಿ ಇಲ್ಲ !

ಮೊನ್ನೆ ನೆಡೆದ ಘಟನೆ ಹೇಳುತ್ತೇನೆ ಕೇಳಿ. ಒಂದು ಸಂಜೆ ಮಲ್ಲೇಶ್ವರದಲ್ಲಿ ಅಡ್ಡಾಡುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಧುತ್ತೆಂದು ನನ್ನ ಹಳೆಯ ಕೊಲೀಗ್ ಸಿಗಬೇಕೇ? "ಏನ್ರೀ ಇಲ್ಲಿ? ಎಲ್ ಹೊರಟುಹೋಗಿದ್ರಿ ಇಷ್ಟು ದಿನ? ಆಸಾಮಿ ಅಡ್ರಸ್’ಗೇ ಇಲ್ಲ?" .. ಪ್ರಶ್ನೆಗಳ ಸುರಿಮಳೆ ! ಆಯ್ತು ಅಂತ ನನ್ನ ಬಗ್ಗೆ ಹೇಳಿದೆ. ನಾನು ಭವ್ಯಭಾರತ ದೇಶದಲ್ಲೇ ಇಲ್ಲ ಅನ್ನೋ ವಿಚಾರ ಅವರಿಗೆ ನಂಬುಗೆ ಆಗಲಿಲ್ಲ. ಯಾಕೆ ಅಂತ ನನಗೂ ಗೊತ್ತಾಗಲಿಲ್ಲ. ಇರಲಿ. "ರ್ರೀ, ವಿಷಯಾ ಗೊತ್ತಾ? ಸುಮಾ’ಗೆ ಎರಡನೇ ಮಗು ಆಯ್ತು" ಅಂದರು. ಸುಮಾ ಅನ್ನೋವ್ರು ಕೂಡ ನಮ್ಮ ಜೊತೆ ಕೆಲಸ ಮಾಡುತ್ತಿದ್ದವರು. ಈ ವಿಷಯ ಕೇಳಿದ್ದೇ ತಡ, ನಾನು ಅವರನ್ನು "ಹೌದಾ? ಗುಡ್ ನ್ಯೂಸ್ ಕಣ್ರೀ ... ಅಂದ ಹಾಗೆ ಮೊದಲನೇ ಮಗೂನೂ ಆಯ್ತಾ?" ಅಂದೆ!

ನನ್ನನ್ನೇ ಕೆಕ್ಕರಿಸಿ ನೋಡಿದ ಅವರು "ನಿಮಗೆ ಯಾವ ದೇಶದಲ್ಲಿದ್ದರೂ ಬುದ್ದಿ ಬರೋಲ್ಲ. ಹೋಗ್ರೀ" ಅಂತ ನುಡಿದು ತಾವು ಹೊರಟೇ ಹೋದರು. ನಾನಿನ್ನೂ ಅಲ್ಲೇ ಇದ್ದೆ !!

ಈ ಘಟನೆಯಿಂದ ಸಾಬೀತಾಗಿದ್ದು ಏನಂದರೆ ’ನನಗೆ ಬುದ್ದಿ ಬಂದಿಲ್ಲ’ ಅಂತ. ಹೋಗಲಿ ’ಅರಿವು’ ಮೂಡಿರಬಹುದೇ?

ಅಲ್ಲಾ, ಬುದ್ದೀನೇ ಬಂದಿಲ್ಲ ಅಂದ ಮೇಲೆ ಅರಿವು ಹೇಗೆ ಮೂಡೀತು. ಅದು ಸರಿ, ಬುದ್ದಿಗೂ ಅರಿವಿಗೂ ಏನು ವ್ಯತ್ಯಾಸ? ವಿಜ್ಞ್ನಾನಿ ಐನ್ ಸ್ಟೀನ್ ಬುದ್ದಿವಂತ. ಭಗವಾನ್ ಬುದ್ದ ಜ್ಞ್ನಾನಿ, ಅರಿವು ಗಳಿಸಿದಾತ. ಆದರೆ ಬುದ್ದನನ್ನು ಬುದ್ದಿವಂತ ಅಂತ ಎಲ್ಲೂ ಉಲ್ಲೇಖಿಸಿಲ್ಲ. ಅಂದರೇ, ಬುದ್ದಿಯೇ ಬೇರೆ, ಅರಿವೇ ಬೇರೆ ಅಂತಾಯ್ತು ತಾನೇ? ಬಹುಶ: ಒಂದು ’ಇಹ’ದ ವಿಚಾರ ಇನ್ನೊಂದು ’ಪರ’ದ ವಿಚಾರ ಇರಬಹುದು. 

’ಇಹಪರ’ ಅಂತ ಯೋಚನೆ ಬಂದು ಪರಪರ ಅಂತ ತಲೆ ಕೆರೆದುಕೊಳ್ಳೋಣ ಅನ್ನಿಸುತ್ತಿದೆ. ಬುದ್ದಿ ಮತ್ತು ಅರಿವಿನ ನಡುವೆ ವ್ಯತ್ಯಾಸವೇ ಅರಿಯದವನಿಗೆ ಎರಡೂ ಮೂಡಿಲ್ಲ ಅನ್ನೋದು ಖರೆ. ಹಾಗಿದ್ದರೆ ನನಗೇನಾಗಿದೆ? ಯಾರನ್ನಾದರೂ ಕೇಳಬೇಕು ... ಇರಲಿ ...

ಆಗಲೇ ಇಷ್ಟಾನಿಷ್ಟಗಳ ಬಗ್ಗೆ ಹೇಳ್ತಿದ್ನಲ್ಲಾ, ಮೊದಲಿಗೆ ಅದರ ವಿಚಾರ ಬಗ್ಗೆ ಒಳ ಹೊಕ್ಕು ನೋಡೋಣವೇ?

ಮೊದಲು ಊಟದ ವಿಚಾರ. ಇದೇ ಒಂದು ಕಾದಂಬರಿಯಷ್ಟಾದರೆ ಬೈದುಕೊಳ್ಬೇಡಿ ! 

ಒಂದಾನೊಂದು ಕಾಲದಲ್ಲಿ ... ಹೋಗ್ಲಿ ಬಿಡಿ ... ಅಂದು ಅನ್ನ-ತಿಳಿ ಸಾರು ಬಿಟ್ಟರೆ ಬೇರೇನೂ ಇಷ್ಟವಾಗ್ತಿರಲಿಲ್ಲ. ಗೊಡ್ಡು ಸಾರು ನಿಜಕ್ಕೂ ಗೊಡ್ಡು ಅನ್ನಿಸುತ್ತಿತ್ತು. ಮೆಂಥ್ಯ ಬೇಳೇ ಹುಳಿಯಲ್ಲಿ ಮೆಂಥ್ಯ ಹುಡುಕಿ ಪಕ್ಕಕ್ಕೆ ಇಡೋದೇ ಒಂದು ದೊಡ್ಡ ಕೆಲಸ. ಅಪ್ಪಿತಪ್ಪಿ ಬಾಯಿಗೆ ಒಂದು ಸಿಕ್ಕಿತೋ, ಆ ಕಹಿಗೆ, ಹೊಟ್ಟೆಯಲ್ಲಿರೋದೆಲ್ಲ ಆಚೆ ಬರುತ್ತೇನೋ ಎಂಬ ಅನುಭವ. ಗೋರಿಕಾಯಿ ಹೆಸರು ಕೇಳಿದರೇ ಏನೋ ಒಂಥರಾ. ಬದನೇಕಾಯಿ, ಹೀರೇಕಾಯಿ ಪಿಚಪಿಚ. ಬೆಂಡೆಕಾಯಿ ಲೋಳೆ (ಹುರಿದಿದ್ದರೂ!) ಪಡವಲಕಾಯಿ ಏನೋ ಒಂಥರಾ ಟೇಸ್ಟು. ಇನ್ನು ಕೂಟು, ಅಯ್ಯಪ್ಪ! ಎಲೆಗೆ ಹಾಕಿದ್ರೆ, ಸಿಮೆಂಟ್ ಕಲಿಸಿ ಹಾಕಿದ್ರೇನೋ ಅನ್ನಿಸುತ್ತಿತ್ತು !

ಆಗೆಲ್ಲ "ತರಕಾರೀ ಇಲ್ಲದೇ ಹುಳಿ ಮಾಡಬಾರದಾ?" ಅನ್ನಿಸುತ್ತಿತ್ತು. "ತಿಳಿ ಮಾತ್ರ ಸಾಕು" ಅಂತ ಕೇಳಿ ಅಮ್ಮನ ಕೈಲಿ ಬೈಸಿಕೊಳ್ಳುತ್ತಿದ್ದೆ. ಒಂದು ವೇಳೆ ಅಪ್ಪಿತಪ್ಪಿ ಯಾವುದಾದರೂ ತರಕಾರಿ ಸೌಟು ದಾಟಿ ನನ್ನ ತಟ್ಟೆಗೆ ಬಂತೋ, ಅದನ್ನು ಹೆಕ್ಕಿ ಬದಿಗಿರಿಸುತ್ತಿದ್ದೆ. ಆಗ "ಅದಕ್ಕೆ ದುಡ್ಡು ಕೊಟ್ಟಿದ್ದೀವಿ. ಸಂಪಾದನೆ ಮಾಡೋವ್ರಿಗೆ ಗೊತ್ತು ಆ ಕಷ್ಟ" ಅಂತ ಬೈಗುಳ. ದುರದೃಷ್ಟವಶಾತ್, ಆ ಬೈಗುಳಗಳು ಅಂದು ಅರ್ಥವೇ ಆಗುತ್ತಿರಲಿಲ್ಲ ! ನೋಡಿ, ಇಂದಿಗೂ ಅವು ಬೈಗುಳ ಅಲ್ಲ ಬುದ್ದಿಗೆ ಹೇಳಿದ್ದು ಅನ್ನೋದೇ ಅರ್ಥವಾಗಿಲ್ಲ !!

ಸಾಕಾಯ್ತು ... ಇನ್ನು ಮುಂದೆ ಹೀಗಾಗಲು ಬಿಡೋಲ್ಲ ಅಂತ ವಿಜಯದಶಮಿ ದಿನ ಮಹಾಸಂಕಲ್ಪ ಮಾಡುತ್ತಿದ್ದೆ. ’ಇಂದಿನಿಂದ ತರಕಾರಿ’ ತಿನ್ನುತ್ತೇನೆ ಅಂತ. ಹಬ್ಬದಂದು ಬೂದಗುಂಬಳದ ಹುಳಿಯೋ ಪಳಿದ್ಯವೋ ಚೆನ್ನಾಗಿ ಉಂಡು, ಏಕಾದಶಿಯ ತಿಂಡಿ ಮೆಂದು, ದ್ವಾದಶಿಯ ಸೊಪ್ಪಿನ ಹುಳಿ ತಿಂದಾದ ಮೇಲೆ ತ್ರಯೋದಶಿಯಿಂದ ಮತ್ತದೇ ಗೋಳು. ಯಾವ ತರಕಾರಿಯೂ ಸೇರವಲ್ದು. ಮುಂದಿನ ವಿಜಯದಶಮಿಗೆ ಮತ್ತದೇ ರೆಸಲ್ಯೂಶನ್ !

ಇಂದಿನ ಪರಿಯೇ ಬೇರೆ. ಬೆರಳೆಣಿಕೆಯಷ್ಟು ತರಕಾರಿ ಬಿಟ್ಟರೆ ಮಿಕ್ಕೆಲ್ಲವೂ ಪ್ರಿಯ ! ಕೆಲವು ತರಕಾರಿ ಅಂದರೆ ಮಹಾಪ್ರಾಣ, ಮತ್ತೆ ಕೆಲವು ಅಲ್ಪಪ್ರಾಣ. 

ಇನ್ನು ತಿಂಡಿಯ ವಿಚಾರಕ್ಕೆ ಬಂದರೆ ನನ್ನೊಂದಿಗೆ ಬಹಳ ಮಂದಿ ಇದ್ದಾರೆ. ನನ್ನಂತೆಯೇ ಹಲವಾರು ಮಂದಿಗೆ ’ಉಪ್ಪಿಟ್ಟು’ ಎಂದರೆ ದ್ವೇಷ ಅನ್ನೋದನ್ನು ನಾನು ಬಲ್ಲೆ. ಆದರೆ ಅದು ಅಂದು, ಇಂದಿನ ಕಥೆ ಅಲ್ಲ ! 

ಅಂದು ಗಟ್ಟಿ ಅವಲಕ್ಕಿಗೆ ತುರಿದ ಕೊಬ್ಬರಿ-ಎಣ್ಣೆ-ಚಟ್ನಿಪುಡಿ ಕಲಿಸಿ ನ್ಯೂಸ್ ಪೇಪರ್ ಹರಿದು ಅದರ ಮೇಲೆ ಹಾಕಿಕೊಟ್ಟರೆ ಸಾಕಿತ್ತು. ಆದರೆ ಇಂದು? ಅದು ಒಣ ಅನ್ನಿಸುತ್ತೆ, ಗಟ್ಟಿ ಅನ್ನಿಸುತ್ತೆ. ಯಾಕೋ?

ಊಟ ತಿಂಡಿ ವಿಚಾರ ಅದರೆ ಸಾಕೇ? ಕಾಫಿ ವಿಚಾರ ಬೇಡವೇ?

ಬೆಳಿಗ್ಗೆ ಆರರಿಂದ ರಾತ್ರಿ ಘಂಟೆ ಹತ್ತಾದರೂ ಸರಿ, ಕಾಫಿ ಯಾವ ಹೊತ್ತಲ್ಲೂ ಜೈ !! ಯಾರ ಮನೆಗೆ ಹೋದರೂ, ಮಾತನಾಡಿಸದೇ ಹೋದರೂ ಓಕೆ, ಆದರೆ ಕಾಫಿ ಸಮಾರಾಧನೆ ಆಗಲೇಬೇಕು. ಬೆಳಿಗ್ಗೆ ಕಾಫಿ ಹೊಟ್ಟೆಗೆ ಬೀಳದೇ ಹೋದರೆ ತಲೆನೋವು ಬರುತ್ತಿತ್ತು. ಬೆಳಿಗ್ಗೆ ಆರಕ್ಕೆ ಒಮ್ಮೊಮ್ಮೆ ’ನೆನ್ನೆ ಕಾಫಿಪುಡಿ ತರೋದು ಮರೆತುಹೋಯ್ತು’ ಅಂತೇನಾದ್ರೂ ಅಡುಗೆ ಮನೆಯಿಂದ ವಿಷಯ ಹೊರಬಂತೋ, ಅಷ್ಟೇ. ಬೆಳಿಗ್ಗೇ ಬೆಳಿಗ್ಗೇನೇ ಮೂಡ್ ಔಟು ! ಕಂಡ ಕಂಡ ಅಂಗಡಿ ಸುತ್ತೋದು. ಎಲ್ಲೆಲ್ಲೂ ಬಡಿದ ಬಾಗಿಲುಗಳು. ’ಅದೇನು ಅಂಗಡಿ ಬಾಗಿಲು ಬಡ್ಕೊಂಡಿರ್ತಾರೋ ಏನೋ? ಇಪ್ಪತ್ತನಾಲ್ಕು ಘಂಟೆ ತೆರೆದಿರೋ ಅಂಗಡಿ ಇರಬಾರದಿತ್ತೇ?’ ಅಂತ ಹುಡುಕೊಂಡು ಹೋಗಿ, ಯಾವುದೋ ಮೂಲೆಯಲ್ಲಿ ನಿದ್ದೆಗಣ್ಣಿನ ಕಾಕನ ಅಂಗಡಿಯಲ್ಲಿ ಅವನದೇ ಹೆಸರಿಲ್ಲದ ಬ್ರ್ಯಾಂಡ್ ಕಾಫಿ ಪುಡಿಕೊಳ್ಳೋದು. ’ಚಿಲ್ಲರೆ ಇಲ್ಲ’ ಅಂತ ಮೊದಲೇ ಸೊಟ್ಟದ ಮೂತಿ ಇನ್ನೂ ಸೊಟ್ಟ ಮಾಡುತ್ತಿದ್ದ. ಹಾಗೂ ಹೀಗೂ ಪುಡಿ ತಂದು ಕಾಫಿ ಸಮಾರಾಧನೆ ಆಗುವಷ್ಟರಲ್ಲಿ ಘಂಟೆ ಎಳಾಗುತ್ತಿತ್ತು ! ಅಂದಿನ ದಿನವೆಲ್ಲ ಭಯಂಕರ ತಳಮಳ. ಎಷ್ಟರಮಟ್ಟಿಗೆ ಅಂದರೆ ಒಂದು ಕಾಫಿಪುಡಿ ಅಂಗಡಿ ತೆರೆಯಬೇಕು ಎನ್ನುವಷ್ಟು !!

ಇಂದು ? ಸದಾ ಪುಡಿ ಇರುತ್ತೆ. ಇಪ್ಪತ್ತನಾಲ್ಕು ಘಂಟೆ ತೆರೆದಿರೋ ಅಂಗಡಿಗಳು ಇವೆ. ಆದರೆ ಬೇಕಿಲ್ಲ. ಸಾಮಾನ್ಯವಾಗಿ, ಬೆಳಿಗ್ಗೆ ಒಂದು ಕಪ್ ಕಾಫಿ ಕುಡಿದರೆ ಮುಗೀತು. ಮತ್ತೆ ಮರುದಿನ ಬೆಳಗಿನವರೆಗೆ ಆ ದಿಕ್ಕಲ್ಲೂ ತಲೆ ಇಡೋಲ್ಲ !!

ಊಟ ತಿಂಡಿಯ ಬಗ್ಗೆ ಮಾತು ಆಯ್ತು ... ಮಾತೇನು? ದೊಡ್ಡ ಕಥೆಯೇ ಆಯ್ತು.

ಇನ್ನು ಮನರಂಜನೆಯತ್ತ ದೃಷ್ಟಿ ಹರಿಸೋಣ .... ಹಾಡುಗಳು ... "ಮಲೆನಾಡ ಕಣಿವೆಯಲಿ ಹಸಿರು ಬನದಿಂದ ನಿನಗಾಗಿ ಗಿಳಿಯೊಂದ ನಾ ತರಲಾರೆ" ಎಂಬ ಹಾಡು ನಂದನ ಕಾರ್ಯಕ್ರಮದಲ್ಲಿ ಮೂಡಿ ಬರುವಾಗ ’ಏನ್ ಹೀರೋ ಗುರೂ ನೀನು? ಹಾಡು ಪೂರ ಅದಾಗಲ್ಲಾ, ಇದಾಗಲ್ಲಾ ಅಂದ್ರೆ ಇನ್ನು ಹೀರೋಯಿನ್’ಗೆ ಕೊಡೋದೇನು?’ ಅಂತ ನಗು ಬರುತ್ತಿತ್ತು. ನಿಜವಾಗಲೂ ... ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಹಾಡು ಕೇಳ್ತಿದ್ರೆ ಕೇಳ್ತಾ ಇರೋಣ ಅನ್ನಿಸುತ್ತೆ. ಎಂಥ ಅದ್ಬುತ ಕಲ್ಪನೆ, ಒಬ್ಬ ಶ್ರೀಸಾಮಾನ್ಯನ ಮಿತಿಯನ್ನ ಎಷ್ಟು ಚೆನ್ನಾಗಿ ಹೇಳಿದ್ದಾರೆ? ನಾನೂ ಒಂದು ಹಾಡು ಬರೆಯಬೇಕು ಎನ್ನಿಸುವಷ್ಟು ತಲ್ಲೀನನಾಗಿ ಹೋಗುತ್ತೇನೆ.

ಅಂದು "ಹಮ್ಮುಬಿಮ್ಮು ಒಂದೂ ಇಲ್ಲ, ಹಾಡು ಹೃದಯ ತೆರೆದಿದೇ ... ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ" ಎಂದು ಕೇಳುವಾಗ, ಅಲ್ಲಾ, ಮಾನಸಸರೋವರ’ದಲ್ಲಿ ಇನ್ನೂ ಎಂತೆಂಥಾ ಹಾಡುಗಳಿವೆ, ಈ ಹಾಡನ್ನ ಯಾಕೆ ಮೆಚ್ಚುತ್ತಾರೆ ಅನ್ನೋದೇ ಅರ್ಥವಾಗ್ತಿರಲಿಲ್ಲ. ಈಚೆಗೆ ಹಲವು ವರ್ಷಗಳಿಂದ, ಅಂದರೆ, ಈ ಹಾಡಿನ ಆಳ ಅರಿತಾಗಿನಿಂದ, ಸಾಹಿತ್ಯಕ್ಕೆ ಮನಸೋತಿದ್ದೇನೆ.

ಈ ಮುಂಚೆ ಅರ್ಥಾತ್ ಬಾಲ್ಯದಲ್ಲಿ ಹೊಡೆದಾಟ, ಬಡಿದಾಟ, ರಿವೆಂಜ್ ಸಿನಿಮಾಗಳು ಅಂದರೆ ಬಲು ಇಷ್ಟ ನನಗೆ. ಬೆಟ್ಟ ತುದಿಯಿಂದ ಜಾರಿಕೊಂಡು ಬಂದ ಹೀರೋ, ಬೆಟ್ಟದ ಬುಡ ತಲುಪಿ, ವಿಲನ್’ನ ಜೀಪು ಜಿಗಿದು ಅವನಿಗೆ ಹೊಡೆದಾ ಅಂದರೆ .. ಆಹಾ, ಮಜ ! 

ಅದೇ ಈಗಿನ ಸಿನಿಮಾಗಳಲ್ಲಿ ಅವನ್ನು ಕಂಡಾಗ ಎದ್ದು ಓಡಿ ಹೋಗೋಣ ಎನ್ನಿಸುತ್ತೆ. ಬಹುಶ: ಅಂದಿನ ಚಾಕು-ಚೂರಿ ಈಗ ಉದ್ದವಾಗಿ ಲಾಂಗ್ ಆಗಿರುವುದಕ್ಕೆ ಇರಬೇಕು. ಹಾಗೇನೂ ಇಲ್ಲ ... ಬಾಬು ಅವರ "ಅಂತ" ಸಿನಿಮಾ ಇಷ್ಟಪಟ್ಟು ನೋಡಿದ್ದೆ. ಕ್ರೌರ್ಯ ಅನ್ನಿಸಲೇ ಇಲ್ಲ ಅಂದು.  ಈಗಿನ ತೆರೆಯ ಮೇಲೆ ಕ್ರೂರತನವನ್ನು ಅತೀ ವೈಭವೀಕರಿಸಿ ತೋರುವುದರಿಂದ ಹಾಗೆ ಅನ್ನಿಸುತ್ತೋ, ಗೊತ್ತಿಲ್ಲ. ಒಟ್ಟಿನಲ್ಲಿ ರಕ್ತಪಾತ ತೋರುವ ಸಿನಿಮಾಗಳು ಸಲ್ಲದು.

ಇಷ್ಟೆಲ್ಲ ಹೇಳಿದೆ ಅಂದ ಮಾತ್ರಕ್ಕೆ ನನ್ನ ಇಡೀ ಜೀವನ ಉಲ್ಟ-ಪಲ್ಟಾ ಆಗಿದೆ ಅಂತಲ್ರೀ. ಅಂದಿಗೂ ಇಂದಿಗೂ ಹಾಸ್ಯ ಎಂದರೆ ಅಷ್ಟೇ ಇಷ್ಟ. ಪತ್ತೇದಾರಿ ಸಿನಿಮಾಗಳು, ಕಥೆಗಳು ಅಂದರೆ ಪ್ರಾಣ. ಸಂಸಾರ ಒಡೆಯುವ ಸಿನಿಮಾಗಳು ಎಂದಿಗೂ ಸಲ್ಲದು. ಸೊಪ್ಪಿನ ತೊವ್ವೆ, ಅಂಬಲಿ, ಮೆಣಸಿನ ಸಾರು ಹೀಗೆ ಎಲ್ಲವೂ ಅಂದಿಗೂ ಇಂದಿಗೂ ಪ್ರಿಯ. ಹಾಗೇನೇ ಶರಟು ಗರಿಗರಿಯಾಗಿ ಇಸ್ತ್ರಿಯಾಗಿರಬೇಕು, ’ಇನ್’ ಆಗಿರಬೇಕು. ಮತ್ತು ಓದಿನ ವಿಚಾರ ... ಹೋಗ್ಲಿ ಬಿಡಿ ....

ಆಗ ಇಷ್ಟವಾಗದೇ ಇದ್ದದ್ದು ಈಗ ಹೇಗೆ ಸಲ್ಲುತ್ತಿದೆ? ಬುದ್ದಿ ಬಂದಿಲ್ಲ ! ಅರಿವು ಮೂಡಿಲ್ಲ !! ಬಹುಶ: ಜವಾಬ್ದಾರಿ ಬಂದಿರಬೇಕು. ಅಮ್ಮ ಅಂದೆಂದೋ ಹೇಳಿದ ಮಾತು ಇತ್ತೀಚೆಗೆ  ನೆನಪಾಯ್ತು "ನಮ್ಮ ಮಕ್ಕಳು ಅಂತ ನಾವು ಹೇಳ್ತೀವಿ. ನೀವುಗಳು ತಿದ್ದಿಕೊಳ್ಳೋಲ್ಲ. ನಿಮ್ದೇ ಮಕ್ಕಳು ಅಂತ ಆದ ಮೇಲೆ ಎಲ್ಲ ಅರಿವಾಗುತ್ತೆ. ಅಷ್ಟು ಹೊತ್ತಿಗೆ ನಾವಿರೋಲ್ಲ" ಅಂತ. ಓ! ಎಷ್ಟೆಷ್ಟೋ ವಿಚಾರಗಳು ಈಗ ಅರಿವಾಗ್ತಿದೆ.

ಒಂದಂತೂ ನಿಜ ... ಇಲ್ಲಿ ’ನಾನು’ ಬರೀ ನಾನೇ ಅಲ್ಲ. ಇಲ್ಲಿ ಹಲವಾರು ಮಂದಿ ನನ್ನಂತೆಯೇ ಇದ್ದೀರಿ.

ಜೀವನದಲ್ಲಿ ಕೆಲವೊಂದು ಸಾರಿ ಆಧ್ಯಾತ್ಮಿಕ ಆಲೋಚನೆಗಳು, ವಿವೇಚನಾಭರಿತ ಕುತೂಹಲಗಳು, ಪ್ರಕೃತಿಯ ನಿಗೂಢತೆಗಳು ಸುಮ್ಮನೆ ಹಾಗೇ ಪುಟಿದೆದ್ದು ನಿಂತು, ಹೂವು ಬಿರಿವಂತೆ, ಅನಾವರಣಗೊಳ್ಳುತ್ತದೆ. ಎಲ್ಲರಿಗೂ ಈ ಭಾಗ್ಯ ಬಾರದೇ ಎಲ್ಲೋ ನನ್ನಂತಹ ಆಯ್ದ ಮಂದಿಗೆ ಮಾತ್ರ ಬರಬಹುದು ಎಂದೂ ಅನ್ನಿಸಿದೆ.

’ಅಂದು ಸಲ್ಲದ್ದು ಇಂದು ಸಲ್ಲುತಿಹುದು. ಅಂದು ಇಷ್ಟವಾಗಿದ್ದು ಇಂದೇಕೋ ಸಹ್ಯವಾಗುತ್ತಿಲ್ಲ’ ಎಂಬ ವಿಚಾರ ಧಾರೆಯನ್ನೇ ಒಬ್ಬ ಆತ್ಮೀಯರ ಮುಂದೆ ಸುರುವಿದೆ.

ಅವ ನಕ್ಕು ನುಡಿದ "ಇದಕ್ಕೆ mid age crisis ಅಥವಾ ಮಧ್ಯವಯಸ್ಕರ ಮನೋವೇದನೆ" ಅಂತಾರೆ ಅಂದ !

ಹೌದೇ ????

{ಏಪ್ರಿಲ್ ತಿಂಗಳ ’ಅಪರಂಜಿ’ಯ ಯುಗಾದಿ ವಿಶೇಷಾಂಕದಲ್ಲೂ ಪ್ರಕಟವಾಗಿತ್ತು}

Comments

Submitted by jayanth ramachar 1 Wed, 04/29/2015 - 14:00

ಭಲ್ಲೇಜಿ... ನಿಮ್ಮ ಇಷ್ಟಾನಿಷ್ಟಗಳ ಜೊತೆಗೆ ಇನ್ನೊಂದು ಸೇರ್ಪಡೆ... ನಿಮ್ಮ ಬರಹಗಳಲ್ಲಿನ ವೈವಿಧ್ಯತೆ ಅಂದಿಗೂ ಇಂದಿಗೂ ವೈವಿಧ್ಯ :) ಮೆಂತ್ಯ ಬೇಳೆ ಹುಳಿ ನೆನೆಸಿ ಆಫೀಸಿನಲ್ಲಿ ಬಾಯಲ್ಲಿ ನೀರೂರುವಂತೆ ಮಾಡಿದ್ರಿ ...

Submitted by bhalle Wed, 04/29/2015 - 19:54

In reply to by jayanth ramachar 1

ಐನಾತಿ ವಿಷಯ ಹಿಡಿದುಹಾಕಿ ಬಿಟ್ರಿ !! ನಾಳೆ ಊಟಕ್ಕೆ ಏನು ಅಂತ ತಿಳಿದುಹೋಯ್ತು... ಅನಂತ ಧನ್ಯವಾದಗಳು ಜಯಂತ್!

Submitted by kavinagaraj Sat, 05/02/2015 - 08:14

ನಿಮ್ಮ ಇಷ್ಟಾನಿಷ್ಟಗಳ ಪಟ್ಟಿ ನಿಮ್ಮ ಬಂಧುಗಳಿಗೆ, ಮಿತ್ರರಿಗೆ ಸಹಾಯಕವಾಗುತ್ತದೆ. ನಿಮ್ಮ ಶ್ರೀಮತಿಯವರ ಅನಿಸಿಕೆಯನ್ನೂ ದಾಖಲಿಸಿದ್ದರೆ ಬರಹ ಮತ್ತಷ್ಟು ಕಳೆಗಟ್ಟುತ್ತಿತ್ತು! :)
ಚಿತ್ರಾನ್ನ ಸಾಮಾನ್ಯವಾಗಿ ಹಿಂದಿನ ದಿನ ಮಾಡಿದ ಻ನ್ನ ಹೆಚ್ಚಾಗಿ ಉಳಿದಿದ್ದರೆ ಅಂದಿನ ಬೆಳಿಗ್ಗೆಯ ತಿಂಡಿಯಾಗಿ ತಯಾರಿಸುವುದು ಸಾಮಾನ್ಯ. ಹೋಟೆಲುಗಳಲ್ಲಿ ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಸಿಗವ ಪಲಾವ್, ರೈಸ್ ಬಾತ್, ಪುಳಿಯೋಗರೆ ಇತ್ಯಾದಿಗಳೂ ಹಿಂದಿನ ಉಳಿಕೆಯ ಫಲವೇ ಆಗಿರುತ್ತವೆ. ಇವು ಸಾಯಂಕಾಲದ ಹೊತ್ತಿನಲ್ಲಿ ಸಿಗುವುದಿಲ್ಲ!
ನನ್ನ ಇಷ್ಟಾನಿಷ್ಟ ತಿಂಡಿಗಳು, ತರಕಾರಿಗಳ ಪಟ್ಟಿ ಮಾಡಿ 'ಇವನೊಬ್ಬ ಬೇರೆ ಅಭಿರುಚಿಯವನು' ಎಂದೇಕೆ ಅನ್ನಿಸಿಕೊಳ್ಳಲಿ.
ಭಲ್ಲೆಯವರೇ, ಧನ್ಯವಾದಗಳು, ಲಘುಬರಹದಿಂದ ಮನಸ್ಸು ಲಘುಗೊಳಿಸಿದಿರಿ.

Submitted by bhalle Sat, 05/02/2015 - 18:34

In reply to by kavinagaraj

ಧನ್ಯವಾದಗಳು ಕವಿಗಳೇ ... ನೀವು ಹೇಳಿದ ಈ ವಿಚಾರ ಗಮನಾರ್ಹ :-)
"ಬೆಳಗಿನ ಸಮಯದಲ್ಲಿ ಸಿಗವ ಪಲಾವ್, ರೈಸ್ ಬಾತ್, ಪುಳಿಯೋಗರೆ ಇತ್ಯಾದಿಗಳೂ ಹಿಂದಿನ ಉಳಿಕೆಯ ಫಲವೇ ಆಗಿರುತ್ತವೆ. ಇವು ಸಾಯಂಕಾಲದ ಹೊತ್ತಿನಲ್ಲಿ ಸಿಗುವುದಿಲ್ಲ!"