ಪಿತ್ರಾರ್ಜತದ ಮನೆಯಲ್ಲಿ ಒಂದು ಹಗಲು

ಪಿತ್ರಾರ್ಜತದ ಮನೆಯಲ್ಲಿ ಒಂದು ಹಗಲು

ಕವನ

ಪಿತ್ರಾರ್ಜಿತದ ಮನೆಯಲ್ಲಿ, ಒಂದು ಹಗಲು

ಅಪ್ಪ ಸತ್ತು ವರ್ಷದ ಮೇಲೆ
ಪಿತ್ರಾರ್ಜಿತದ ಮನೆ ಮಾರಾಟಕ್ಕಿಡಲು
ಮೊನ್ನೆ ಹುಟ್ಟಿದೂರಿಗೆ ಹೋಗಿದ್ದೆ;
    
ರಣ ಬಡಿದಂತಿದ್ದ ಬೀದಿಯಲ್ಲಿ
ಸೊಂಟ ಮುರಿಸಿಕೊಂಡ ಒಂಟಿಮನೆ,
ಸಾರಿಸದ ಜಗಲಿಯಲ್ಲಿ ಮಲಗಿದ್ದ ಬೀದಿನಾಯಿ-
ಯನ್ನೋಡಿಸಿ ಕದ ತೆರೆದು ಒಳಗಡಿಯಿಟ್ಟರೆ;

ಹೆಂಚು ಜಾರಿ ಸೂರಿಂದಿಳಿದ ಮಳೆನೀರು
ಸರೋವರವಾಗಿದೆ, ದಿವಾನ ಖಾನೆಯೀಗ
ಜಂತಿ, ತೊಲೆ, ಕಂಬಗಳಲೆಲ್ಲ ಗೆದ್ದಲಿನ ವಹಿವಾಟು
ಅಡುಗೆ ಮನೆಯೊಲೆಯಲ್ಲಿ ಮುದುರಿ ಮಲಗಿದ್ದ ಮಾಳ ಬೆಕ್ಕು;

ಹಿಂದೊಮ್ಮೆ ನನ್ನದಾಗಿದ್ದ ಕೋಣೆಯಲ್ಲಿಣುಕಿದರೆ
ಚಿಲಕ ಕಿತ್ತ ಕಿಟಕಿ, ಒಡೆದ ಕನ್ನಡಿ, ತಂತಿ ಕೊಂಡಿಯಲಿ ರಾಶಿ ಪತ್ರ
ಇಲಿ ತಿಂದುಳಿದ ಪುಸ್ತಕದ ಹಾಳೆ, ಧೂಳಿನಭಿಷೇಕ
ಮೊಳೆಗೆ ನೇತುಬಿದ್ದ ಜಯಂತಿ-ರಾಜ್ಕುಮಾರ್ ಸಿನಿಮಾದ ಚಿತ್ರ.

ದೇವರ ಮನೆಯ ನಾಗಂದಿಗೆಯಲ್ಲಿ ಹಳೆಯ ಪಂಚಾಂಗದ ಕಟ್ಟು
ರಟ್ಟು ಕಿತ್ತ ಸಂಧ್ಯಾವಂದನೆ, ನಿತ್ಯ ಪೂಜೆಯ ಪುಸ್ತಕ
ಹರಳೊಡೆದು ಹೊರಗಿಣುಕಿದ ಮನೆ ದೇವರು
ಅದ್ವೈತಿ ಶಂಕರರ ನಗುಮುಖದ ಮೊಹರು

ಅಂತೂ ಇಂತೂ ಅನುಜಾಣಿಸಿ ಬಚ್ಚಲಿಗೆ ಬಂದರೆ;
ಅರ್ಧ ನೀರುಳಿದ ತೊಟ್ಟಿಯಲ್ಲಿ ಸಾವಿರದ ಹುಳುಗಳು
ಹಂಡೆ ಕಿತ್ತ ಒಲೆ, ಹೊಗೆಗಿಳಿಬಿದ್ದ ಇಲ್ಲಣದ ಬಳ್ಳಿ
ಅರ್ಧಂಬರ್ಧ ಉರಿದು ನಂದಿಸಿದ ಕೊಳ್ಳಿ

ಹಿತ್ತಿಲಿನಲ್ಲಂತೂ ಚಪ್ಪರ ಜರುಗಿ ಕೃಷವಾಗಿದೆ ಹೂವ ಬಳ್ಳಿ,
ಕರಿಬೇವಿನ ಗಿಡಕ್ಕೆ ಯಾವುದೋ ರೋಗ
ನುಸಿ ಹತ್ತಿ ಸುಳಿಯೊಣಗಿ ನಿಂತ ತೆಂಗಿನ ಮರ
ಸೀಬೆ ಗಿಡದ ತುಂಬ ಕೆಂಜಿಗದ ಗೂಡು.

ಬಂದು, ನೋಡಿ, ಬೆಲೆ ಕಟ್ಟುತ್ತೇವೆಂದವರು
ನಿರಾಕರಿಸಿದರು, ಶುಭ ಶಕುನವಾಗಲಿಲ್ಲವೆಂದು
ಒಳಗೆಲ್ಲೋ ಅನುಮಾನ; ಇದು ದಾಯಾದಿಯುಪಾಯ
ಬೆಲೆ ಬೀಳಿಸಲು ಕಾಣದ ಕೈ ಹೆಣೆದ ಜಾಲ?

ಸ್ಥಾವರಕ್ಕಳಿವುಂಟೆಂದು ಜಗಲಿಗೆ ಬಂದು ಕೂತೆ
ಇವಳ ಕರೆ, ಜಂಗಮನ ಸೊಲ್ಲಿಗೆ-
“ವ್ಯವಹಾರ ಮುಗಿಯದೇ ಮಾತು ಕೊಡಬೇಡಿ
ವಯಸ್ಸಿಗೆ ಬಂದ ನಮ್ಮ ಮಕ್ಕಳಿಗೂ ಹಕ್ಕು ಇದೆ ಪಿತ್ರಾರ್ಜಿತದಲ್ಲಿ”

ಹುಟ್ಟಿದ ಮನೆಯನ್ನು ಹಾಗೇ ಬಿಟ್ಟು ಬಂದೆ
ಹೋಗುವಾಗ ನೀನೇನು ಒಯ್ದೆಯೋ ನನ್ನ ತಂದೆ?

 

Comments