'ಬಾಲವಿಜ್ಞಾನಿಯಾದ ಪುಟ್ಟಿ..!'

'ಬಾಲವಿಜ್ಞಾನಿಯಾದ ಪುಟ್ಟಿ..!'

(ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು)

ಸಿಂಗಾರ,ಬಾಲ, ವಿಜ್ಞಾನಿ, ಪುಟ್ಟಿ , ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore
ಇಡಿ ಜಗತ್ತೆ ಅದುರಿಹೋಗಿತ್ತು ಆ ಹೊಸ ಬೆಳವಣಿಗೆಯಿಂದ….

ಎಲ್ಲರಿಗು ಈ ಕರಾಳ ದಿನ ಮುಂದೆಂದೊ ಬರುವುದೆಂದು ಗೊತ್ತಿದ್ದರು, ಯಾರಿಗು ಇಷ್ಟು ಕ್ಷಿಪ್ರವಾಗಿ ಬರಬಹುದೆಂಬ ಅರಿವಿರಲಿಲ್ಲ, ಯಾರೂ ಊಹಿಸಿರಲೂ ಇಲ್ಲ..

ಆದರೆ ಅದಾಗಲೆ ಬಂದು ಹೊಸಿಲಿಗೆ ಕಾಲಿಟ್ಟುಬಿಟ್ಟಿತ್ತು..ಬೇಕಿರಲಿಬಿಡಲಿ ಅನುಭವಿಸದೆ ವಿಧಿಯಿಲ್ಲ ಎನ್ನುವಂತೆ !

ಪುಟ್ಟಿಯ ಅಪ್ಪ ಪ್ರೊಫೆಸರ್ ಜ್ಞಾನಚಂದ್ರರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದರು, ಮುಂದೇನು ಎನ್ನುವಂತೆ. ಅವರು ಮೈಸೂರಿನ ಸಿ.ಎಫ್.ಟಿ.ಆರ್.ಐ ಸಂಸ್ಥೆಯಲ್ಲಿ ಆಹಾರಕ್ಕೆ ಸಂಬಂಧಪಟ್ಟ ವಿಭಾಗವೊಂದರಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ಆಹಾರತಳಿಗಳ ಗುಣಮಟ್ಟ, ಇಳುವರಿಗಳನ್ನು ಸಾಂಪ್ರದಾಯಿಕ, ಹಾನಿಕಾರಕವಲ್ಲದ ವಿಧಾನಗಳ ಮೂಲಕ ಹೆಚ್ಚಿಸಬಹುದಾದ ಸಾಧ್ಯತೆಯ ಸಂಶೋಧನೆಯಲ್ಲಿ ನಿರತರಾಗಿದ್ದವರು.

ಆದರೆ ಇತ್ತೀಚೆಗಿನ ಔಚಿತ್ಯ ಮೀರಿದ ಔದ್ಯಮೀಕರಣದ ದೆಸೆಯಿಂದಲೊ,ಗೊತ್ತು ಗುರಿಯಿಲ್ಲದ ಪ್ರಗತಿಯ ಬೆನ್ನಟ್ಟಿದ ದೇಶಗಳ ಆರ್ಥಿಕ ನೀತಿಯ ಹುಚ್ಛಾಟದ ಫಲವೊ - ಜಗದೆಲ್ಲೆಡೆ ನಿಧಾನವಾಗಿ ಆರಂಭವಾಗಿದ್ದ 'ಗ್ಲೋಬಲ್-ವಾರ್ಮಿಂಗ್' ಅರ್ಥಾತ್ 'ಜಾಗತಿಕ ತಾಪಮಾನ'ದ ಸಮಸ್ಯೆ ಏಕಾಏಕಿ ಉಲ್ಬಣವಾಗಿಹೋಗಿತ್ತು. ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿ ತಪ್ಪುಗಳನ್ನು ಸರಿಪಡಿಸುವ ಮೊದಲೆ ತಡವಾಗಿ ಹೋಗಿ, ಅದಾಗಲೆ ತನ್ನ ಕಬಂಧಬಾಹುಗಳನ್ನು ತೆರೆದು ಎಲ್ಲವನೂ ಆಪೋಶಿಸತೊಡಗಿತ್ತು. ಆವರೆಗೆ ಪ್ರಕೃತಿ ವಿಕೋಪವಾಗಿ ಭೂಕಂಪ, ತ್ಸುನಾಮಿ, ತೈಪೂನುಗಳ ರೂಪದಲ್ಲಿ ಅಲ್ಲೊಂದಿಲ್ಲೊಂದು ನಡೆಯುತ್ತಿದ್ದ ಅವಘಡ, ಈ ಬಾರಿ ತನ್ನ ವ್ಯಾಪ್ತಿಯ ಉದ್ದಗಲಗಳನ್ನು ಏಕಾಏಕಿ ವ್ಯಾಪಿಸುತ್ತ, ಇಡೀ ಭೂಮಂಡಲವನ್ನೆ ಆವರಿಸಿಕೊಂಡುಬಿಟ್ಟಿತ್ತು, ಏರಿದ ತಾಪಮಾನದ ತೀವ್ರತೆಯಿಂದಾಗಿ ಭೀಕರ ಬರಗಾಲದ ರೂಪತಾಳುತ್ತ. ಹೆಚ್ಚಿದ್ದ ತಾಪಮಾನ ಒಂದೆರಡೆ ಡಿಗ್ರಿಗಳಷ್ಟಿದ್ದರೂ, ಅದರ ನೇರ ಪರಿಣಾಮ ಭೂಮಿಯ ನೆಲದ ಮೇಲುಂಟಾಗಿ ಅದರ ಅಂತರಾಳದಲ್ಲಿದ್ದ ಸತ್ವಗಳನ್ನೆಲ್ಲ ಹೀರಿ, ಬೆಳೆಗೆ ಬೇಕಿದ್ದ ಫಲವತ್ತತೆಯನ್ನೆಲ್ಲ ಇಂಗಿಸಿ, ಬರಡಾಗಿಸಿ ನಿರುಪಯುಕ್ತವಾಗುವಂತೆ ಮಾಡಿಬಿಟ್ಟಿತ್ತು. ಸಾಲದ್ದಕ್ಕೆ ಅರೆಬರೆ ಬೆಳೆದಿದ್ದ ಬೆಳೆಗಳೆಲ್ಲ ಸೊರಗಿ, ಮುರುಟಿಹೋಗಿ ಕೈಗೆ ಬರಬೇಕಿದ್ದ ಬೆಳೆಗಳು ನಾಶವಾಗಿಹೋಗಿದ್ದವು. ಜಗತ್ತಿನೆಲ್ಲೆಡೆ ಈ ಪ್ರತಿಕ್ರಿಯೆ ಸಮಾನಸ್ತರದಲ್ಲಿ ಸಂಭವಿಸಿದ್ದರು, ಕೆಲವೆಡೆ ಅದರ ತೀವ್ರತೆ ಹೆಚ್ಚಿದ್ದರೆ ಮತ್ತೆ ಕೆಲವೆಡೆ ಆರಂಭಿಕ ಹಂತದಲ್ಲಿ ಕಾಣಿಸಿಕೊಂಡಿತ್ತು. ಅಲ್ಲೂ ಕೂಡ ಈಗಾಗಲೆ ವಿನಾಶದತ್ತ ಹೆಜ್ಜೆಹಾಕುತ್ತ ನಡೆದ ಕಾರಣ, ಯಾವಾಗ ಬೇಕಾದರೂ ಅವುಗಳ ಸ್ಥಿತಿಯೂ ಅಧೋಗತಿಯನ್ನು ಕಾಣುವುದರಲ್ಲಿ ಯಾವುದೆ ಸಂಶಯವಿರಲಿಲ್ಲ. ಜಗತ್ತಿನ ವಿಜ್ಞಾನಿಗಳೆಲ್ಲ ಆಗಲೆ ಸೇರಿಕೊಂಡು ಈ ವಿಷಮ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ತಲೆ ಕೆಡಿಸಿಕೊಂಡಿದ್ದರು ಸಹ, ಅವರು ಪರಿಹಾರ ಕಂಡುಹಿಡಿಯುವ ತನಕ ಪರಿಸ್ಥಿತಿ ನಿಭಾಯಿಸಬೇಕಿತ್ತು. ಅಲ್ಲದೆ ಆ ಪರಿಹಾರ ಎಷ್ಟು ಬೇಗನೆ ಬರುವುದೊ, ಎಷ್ಟು ಬೇಗನೆ ಕಾರ್ಯಗತಗೊಳಿಸಲಾಗುವುದೊ ಎಂದು ಹೇಳಲಾದರೂ ಹೇಗೆ ಸಾಧ್ಯ?

ಪ್ರೊಫೆಸರ ಜ್ಞಾನಚಂದ್ರರ ಚಿಂತೆಗೆ ಅದೊಂದೆ ಕಾರಣವಾಗಿರಲಿಲ್ಲ... ಭಾರತದಲ್ಲಿ ಈಗಾಗಲೆ ವಿಷಮ ಮಟ್ಟ ಮುಟ್ಟಿದ್ದ ಕಾರಣ, ಬೆಳೆಗಳೆಲ್ಲ ನಾಶವಾಗಿ, ಹಲವೆಡೆಗಳಲ್ಲಿ ಸಂಭವಿಸಿದ್ದ ಭೂಕಂಪ, ನೆರೆ, ಪ್ರವಾಹಗಳ ದೆಸೆಯಿಂದಾಗಿ ಆಹಾರವನ್ನು ದಾಸ್ತಾನಿಡುವ ಸರ್ಕಾರಿ ಉಗ್ರಾಣಗಳು, ಸಂಗ್ರಹಾಗಾರಗಳು ಧ್ವಂಸವಾಗಿ, ಅಲ್ಲಿ ಶೇಖರಿಸಿಟ್ಟಿದ್ದ ಆಹಾರವೆಲ್ಲ ಬಳಸಲೆ ಸಾಧ್ಯವಿಲ್ಲದಂತೆ ಕೊಳೆತೊ, ಕೊಚ್ಚಿಕೊಂಡೊ ನಾಶವಾಗಿಹೋಗಿದ್ದವು. ಹೀಗಾಗಿ ಆಹಾರದ ದೊಡ್ಡ ಸಮಸ್ಯೆಯೊಂದು ದೇಶದ ಮುಂದೆ ಧುತ್ತನೆ ನಿಂತುಬಿಟ್ಟಿತ್ತು. ಅಸಹಾಯಕ ಪರಿಸ್ಥಿತಿಯಿಂದ ಕಂಗೆಟ್ಟ ಪ್ರಧಾನಮಂತ್ರಿಗಳು ಏನಾದರು ಮಾಡಲು ಸಾಧ್ಯವೆ ? ಎಂದು ಆರ್ತರಾಗಿ ಮೊರೆಯಿಟ್ಟಿದ್ದರು ವಿಜ್ಞಾನಿಗಳ ಬಳಗಕ್ಕೆ - ಏನು ಮಾಡಲಾಗದಿದ್ದರೆ ಉಂಟಾಗುವ, ಅರಾಜಕತೆ ದೊಂಬಿಗಳನ್ನು ನೆನೆಯುತ್ತ.

ಹಾಳಾಗದಿದ್ದ ಸಂಗ್ರಹದಲ್ಲಿ ಕೆಲವು ವಾರ-ತಿಂಗಳು ಕಾಲ ತಳ್ಳಬಹುದಿದ್ದರು, 'ಅಲ್ಲಿಂದ ಮುಂದೆನು?' ಎನ್ನುವ ಪ್ರಶ್ನೆ ಭೂತಕಾರವಾಗಿತ್ತು ಎಲ್ಲರೆದುರು. ಆ ದಿನವೆಲ್ಲ ಆಫೀಸಿನಲ್ಲಿ ಅದೆ ವಿಷಯ ಚರ್ಚಿಸಿ ಸನ್ನಿವೇಶದಿಂದ ಪಾರಾಗುವ ದಾರಿ ತೋರದೆ ಕಂಗಾಲಾಗಿದ್ದ ಮನಸ್ಥಿತಿಯಲ್ಲಿ, ಚಿಂತೆಯಲ್ಲಿಯೆ ಮನೆಗೆ ಬಂದು ಸೋಫಾಗೊರಗಿ ಕಣ್ಣುಮುಚ್ಚಿ ಕುಳಿತಿದ್ದರು, ಜ್ಞಾನಚಂದ್ರ. ಆಗ ಪುಟ್ಟ ಮೃದುವಾದ ಕೈ ಬೆರಳುಗಳು ಹಣೆ ಮುಟ್ಟಿದ ತಂಪಾದ ಅನುಭವವಾದಾಗ, ಆ ಸ್ಪರ್ಶ ತಮ್ಮ ಕಿರಿಯ ಮಗಳು ಸೃಷ್ಟಿಯದೆ ಎಂದರಿವಾಗಿ ಕಣ್ಣು ತೆರೆಯದೆಯೆ,

'ಏನು ಪುಟ್ಟಾ..? ಸ್ಕೂಲ್ ಆಯ್ತಾ?' ಎಂದರು.

‘ಹೂಂ... ಈಗ ತಾನೆ ಮುಗೀತು... ಯಾಕಪ್ಪ? ತಲೆ ನೋವಾ? ಕುಡಿಯೋಕೆ ನೀರು ತಂದು ಕೊಡ್ಲಾ?' ಎಂದಳು ಸೃಷ್ಟಿ, ಪುಟ್ಟ ಮಗುವಿನ ನಿಷ್ಕಲ್ಮಶ ಕಕ್ಕುಲತೆಯಿಂದ.

'ಅಯ್ಯೊ.. ನೋವೇನೂ ಇಲ್ಲಾ ಕಂದ.. ಕೆಲಸ ಜಾಸ್ತಿಯಿತ್ತು.. ಸ್ವಲ್ಪ ಆಯಾಸ ಅಷ್ಟೆ...' ಎಂದರು ಜ್ಞಾನಚಂದ್ರ.

ಅವರು ಮಾತು ಮುಗಿಸುವ ಮೊದಲೆ ಅಲ್ಲಿಂದ ಓಡಿದ ಸೃಷ್ಟಿ, ಅಡಿಗೆಮನೆಯ ಫ್ರಿಡ್ಜಿನಿಂದ ಒಂದು ಲೋಟಕ್ಕೆ ನೀರು ಬಗ್ಗಿಸಿಕೊಂಡು ತಂದು ತಂದೆಯ ಕೈಗಿಟ್ಟಳು. ಅವಳಿತ್ತ ನೀರನ್ನು ಗಟಗಟನೆ ಕುಡಿದು ಕೆಳಗಿಡುತ್ತಿದ್ದಂತೆ ತಟ್ಟನೆ ಪ್ರಶ್ನೆ ಬಂದಿತ್ತು ಚೂಟಿ ಮಗಳ ಬಾಯಿಂದ...

'ಅಪ್ಪಾ..ನಮ್ಮ ಟೀಚರ್ ಹೇಳ್ತಾ ಇದ್ದರು, ಇನ್ನು ಮುಂದೆ ನಮಗೆ ತಿನ್ನಲು ಆಹಾರವೆ ಸಿಗದೆ ಹೋಗುವ ಹಾಗಾಗಬಹುದು 'ಗ್ಲೋಬಲ್-ವಾರ್ಮಿಂಗ್ನಿಂದ...ಅಂತ' ನಿಜವೇನಪ್ಪ?’

'ಓಹೋ..ಇಷ್ಟು ಬೇಗನೆ ಸ್ಕೂಲಿನ ಮಕ್ಕಳಿಗು ತಲುಪಿಬಿಟ್ಟಿತ ಈ ಸುದ್ಧಿಯ ತುದಿ?' ಅಂದುಕೊಳ್ಳುತ್ತಲೆ, ಮಗಳಿಗೆ ಸುಳ್ಳುಮಾಹಿತಿ ನೀಡಿ ದಾರಿ ತಪ್ಪಿಸಬಾರದೆಂದು ಅಲೋಚಿಸುತ್ತ, ' ಹೌದು ಪುಟ್ಟಾ.. ಈಗ ನಾವೆಲ್ಲ ವಿಜ್ಞಾನಿಗಳು ಸೇರಿ ಏನಾದರೂ ಪರಿಹಾರ ಕಂಡುಕೊಳ್ಳದೆ ಹೋದರೆ ಇನ್ನು ಸ್ವಲ್ಪ ದಿನದಲ್ಲೆ ಭಯಂಕರ ಆಹಾರದ ಸಮಸ್ಯೆ ತಲೆಯೆತ್ತಿಕೊಳ್ಳುತ್ತದೆ.. ಅಷ್ಟರೊಳಗೆ ಏನಾದರು ಉಪಾಯ ಕಂಡುಕೊಂಡರೆ ಎಲ್ಲರು ಅಪಾಯದಿಂದ ತಪ್ಪಿಸಿಕೊಳ್ಳಬಹುದು.. ಅದಕ್ಕಿನ್ನು ಸಮಯವಿದೆಯಾದ ಕಾರಣ ಕೂಡಲೆ ಚಿಂತಿಸುವ ಅಗತ್ಯವಿಲ್ಲ...' ಎಂದರು.

'ಆದರೆ ನಮ್ಮ ಮಿಸ್ಸು, ನಾವು ಬೇಗನೆ ಪರಿಹಾರ ಕಂಡು ಹಿಡಿಯದಿದ್ದರೆ ಎಲ್ಲರಿಗು ಅಪಾಯ ಅನ್ನುತ್ತಿದ್ದರಲ್ಲಾ?' ಎಂದಳು ಸೃಷ್ಟಿ ಮುಗ್ದದನಿಯಲ್ಲಿ. ಅಲ್ಲಿ ಕಳವಳಕ್ಕಿಂತ ಕುತೂಹಲವೆ ಹೆಚ್ಚಾಗಿತ್ತು.

'ಅವಸರವೆನ್ನುವುದೇನೊ ನಿಜ.. ಅದರೆ ಅದು ಇವತ್ತು, ನಾಳೆಯೆ ಆಗಬೇಕೆನ್ನುವಷ್ಟಲ್ಲ... ಇನ್ನು ಕೆಲವು ವಾರ-ತಿಂಗಳ ಕಾಲಾವಕಾಶವಿದೆ... ಅಷ್ಟರಲ್ಲಿಯೂ ಪರಿಹಾರ ಕಾಣದಿದ್ದರೆ ಆಗ ದೊಡ್ಡ ಸಮಸ್ಯೆಯನ್ನೆದುರಿಸಬೇಕಾಗಬಹುದು...'

'ಸಮಸ್ಯೆ ಎಂದರೆ? ಏನಾಗಿಬಿಡುತ್ತದಪ್ಪ?' ಮತ್ತೆ ಮಗಳ ಕುತೂಹಲದ ಮುಗ್ದಪ್ರಶ್ನೆ..

'ಅಂದರೆ.. ಆಗ ಯಾರಿಗು ತಿನ್ನಲು ಆಹಾರವಿರದೆ ಎಲ್ಲೆಲ್ಲು ಅರಾಜಕತೆ, ದೊಂಬಿ ಶುರುವಾಗಿ ಬಿಡುತ್ತದಮ್ಮ... ಹೊಸ ಆಹಾರ ಬೆಳೆಯಲಾಗುವುದಿಲ್ಲ, ಇರುವುದು ಬಳಸಿಯಾದ ಮೇಲೆ ಆಹಾರಕ್ಕಾಗಿ ದೊಡ್ಡ ಹೊಡೆದಾಟ, ಹೋರಾಟವೆ ನಡೆಯಬಹುದು... ಲಕ್ಷಾಂತರ ಜನ ಹೊಟ್ಟೆಗಿಲ್ಲದೆ ಸಾಯಬೇಕಾಗಿ ಬರಬಹುದು..' ಆದಷ್ಟು ಅವಳಿಗರ್ಥವಾಗುವ ರೀತಿಯಲ್ಲಿ ವಿವರಿಸಲೆತ್ನಿಸಿದರು ಜ್ಞಾನಚಂದ್ರ..

'ಯಾಕಪ್ಪ, ನಾವು ಹೊಲಗದ್ದೆಗಳಲ್ಲಿ ಬೆಳೆದಿರೋಲ್ವಾ? ನೀನು ಸೈಂಟಿಸ್ಟಲ್ವಾ ? ನಿನ್ನ ರಿಸರ್ಚಿನಲ್ಲಿ ಅಹಾರ ಹೆಚ್ಚು ಬೆಳೆಸೊ ಹಾಗೆ ಮಾಡ್ತೀರಾಂತ ನೀನೆ ಹೇಳಿದ್ದೆ?'

ತಿರುಗುಬಾಣದಂತೆ ಬಂದ ಪ್ರಶ್ನೆಗೆ ಸಮಾಧಾನದಿಂದಲೆ ಉತ್ತರಿಸುತ್ತ, 'ಹಾಗಲ್ಲ ಪುಟ್ಟ.. ನನ್ನ ರಿಸರ್ಚು ಬೆಳೆಯ ಇಳುವರಿ ಹೇಗೆ ಹೆಚ್ಚಿಸೋದು ಅಂತ - ಅಂದರೆ ಹೇಗೆ ಜಾಸ್ತಿ ಬೆಳೆ ಬರುವ ಹಾಗೆ ಮಾಡೋದು ಅಂತ.. ಅದರೆ ಬೆಳೆಯೊ ನೆಲವೆಲ್ಲ ಬಂಜರಾಗಿ ಏನೂ ಬೆಳೆಯೋಕೆ ಆಗದಿದ್ರೆ ಇಳುವರಿಯಿದ್ದರು ಏನು ಪ್ರಯೋಜನವಾಗಲ್ಲ, ಅಲ್ಲವಾ?’

'ಹೌದು..?'

'ಅದೆ ಈಗ ಪ್ರಶ್ನೆಯಾಗಿರೋದು... ಅಪ್ಪನಿಗು ಮತ್ತು ಅಪ್ಪನ ಫ್ರೆಂಡು-ವಿಜ್ಞಾನಿಗಳಿಗು ಇದನ್ನ ಹೇಗೆ ಪರಿಹರಿಸೋದು ಅಂತ ಇನ್ನೂ ಗೊತ್ತಾಗಿಲ್ಲ...ಅದಕ್ಕೆ ಇನ್ನು ಉತ್ತರ ಹುಡುಕುತ್ತಾ ಇದ್ದಾರೆ… ಉತ್ತರ ಗೊತ್ತಾದರೆ ಎಲ್ಲವು ಪರಿಹಾರ ಆದಹಾಗೆ...'

' ಏನೂಂದ್ರೆ ಏನೂ.... ಬೆಳಿಯೋಕ್ ಆಗಲ್ವ ಅಪ್ಪಾ?'

'ಇಲ್ಲಮ್ಮ... ಭೂಮಿಯೆಲ್ಲ ಬಂಜರಾಗಿ ಏನೂ ಬೆಳೆಯೋಕೆ ಆಗದ ಹಾಗಾಗಿಬಿಡುತ್ತದೆ... ಬೆಳೆದರೂ ಅರೆಬರೆ ಕುರುಚಲಂತೆ ತಿನ್ನಲು ಯೋಗ್ಯವಿರದ, ಸಾಕಾಗದ ಪರಿಸ್ಥಿತಿ ಉಂಟಾಗಬಹುದು...'

'ಪಾಪ.. ಅಲ್ಲಿಗೆ ಗಿಡಗಳೆಲ್ಲ 'ದ್ಯುತಿ ಸಂಶ್ಲೇಷನ ಕ್ರಿಯೆ' ಮಾಡ್ಕೋಳೊಕ್ಕೆ ಆಗಲ್ವ..?' ತನಗೆ ತಾನೆ ಎಂಬಂತೆ ಹೇಳಿಕೊಳ್ಳುತ್ತ ಸ್ವಯಂತಾನೆ ವಿಜ್ಞಾನಿಯ ಹಾಗೆ ಕುಳಿತ ಮಗಳನ್ನೆ ನೋಡುತ್ತಿದ್ದ ಜ್ಞಾನಚಂದ್ರರಿಗೆ, ತುಸು ಕೀಟಲೆ ಮಾಡಬೇಕೆನಿಸಿತು..ಆ ಉತ್ಸಾಹದಲ್ಲೆ, ' ನಮ್ಮ ಪುಟ್ಟಿ ವಿಜ್ಞಾನಿಯಾಗಿದ್ದರೆ ಇದನ್ನು ಹೇಗೆ ಪರಿಹರಿಸುತ್ತಿದ್ದಳು?' ಎಂದು ಕೇಳಿದರು.

ಸೃಷ್ಟಿ ಅದೇ ಭಂಗಿಯಲ್ಲಿ ಕುಳಿತು, 'ನಾನೂ ಅದನ್ನೆ ಯೋಚಿಸುತ್ತಿದ್ದೇನೆ..' ಎಂದಾಗ ದಂಗಾಗುವ ಸರದಿ ಜ್ಞಾನಚಂದ್ರರದಾಗಿತ್ತು!

' ಹೌದಾ..? ಪರವಾಗಿಲ್ಲವೆ...! ನಮ್ಮ ಪುಟ್ಟೀನು ಸೈಂಟಿಸ್ಟ್ ಆಗ್ತಾ ಇರೋ ಹಾಗಿದೆಯಲ್ಲ? ನಮ್ "ಮರಿಸೈಂಟಿಸ್ಟ್' ಇದನ್ನ ಹೇಗೆ ಪರಿಹರಿಸುತ್ತೊ ಹೇಳು ನೋಡೋಣ..?' ಎಂದರು ಛೇಡಿಕೆಯ ದನಿಯಲ್ಲಿ.

'..ನಾನು ಯೋಚಿಸ್ತಿದ್ದೆ..ಗಿಡಗಳಿಗೆ ಬೆಳೆಯೋಕ್ ಆಗ್ದೆ ಇದ್ರೆ, ನಾವೇ ಯಾಕೆ ಗಿಡಗಳ ತರ ಆಗ್ಬಾರದು? ಅಂತ..'

'ಅಂದರೆ?'

'ಅಂದರೆ...? ನಮಗು ಸಸ್ಯಗಳಿಗು ಏನು ವ್ಯತ್ಯಾಸ ಹೇಳು ನೋಡೋಣ ?'

'ನನಗೂ ಮರೆತುಹೋಗಿದೆಯಲ್ಲಾ ? ಎಲ್ಲಿ ನಮ್ಮ ಪುಟ್ಟಿ-ವಿಜ್ಞಾನಿಯೆ ಹೇಳಿಬಿಡಲಿ ನೋಡೋಣ..?'

' ಸಸ್ಯಗಳ ಜೀವಕೋಶಗಳು ತಮ್ಮ ಆಹಾರ ತಾವೆ ತಯಾರಿಸಿಕೊಳ್ಳುತ್ತವೆ, ಪ್ರಾಣಿಗಳಿಗೆ ಆ ಶಕ್ತಿ ಇರುವುದಿಲ್ಲ...’

'ಅರೆರೆ...! ಹೌದಲ್ಲಾ? ...ಆಮೇಲೆ?'

‘'ಸಸ್ಯಗಳಿಗೆ ಬೆಳಕಿದ್ದರೆ ಸಾಕು, ‘ಪೋಟೊಸಿಂಥೆಸಿಸ್’ ಮಾಡಿ ತನ್ನ ಆಹಾರ ತಾನೆ ಮಾಡ್ಕೊಳ್ಳುತ್ತೆ.. ಅದರೆ ಪ್ರಾಣಿಗಳಿಗೆ ಬೇರೆಯವರ ಮೇಲೆ ಅವಲಂಬಿಸಿಯೆ ಬದುಕಬೇಕು..’

'ಆಹಾ..ನಮ್ಮ ಪುಟ್ಟಿ ಎಷ್ಟೊಂದು ವಿಷಯ ತಿಳ್ಕೊಂಡ್ಬಿಟ್ಟಿದೆ? ನೀನು ಹೇಳೋದೇನೊ ನಿಜ.. ಆದರೆ ಇದರಿಂದ ನಮ್ ಸಮಸ್ಯೆ ಹೇಗೆ ಪರಿಹಾರ ಮಾಡೋದು ಅನ್ನೋದೆ ಗೊತ್ತಾಗ್ತಾ ಇಲ್ವಲ್ಲಾ?’

'ತುಂಬಾ ಸುಲಭಾ ಅಪ್ಪಾ.. ನಾವು ಎರಡು ಸಸಿಗಳನ್ನ ಅವುಗಳ ಕಡ್ಡಿ ಕತ್ತರಿಸಿ ಕಸಿಮಾಡಿ ಹೊಸಾತರ ಗಿಡ-ಹೂ ಬೆಳೆಸೋಲ್ವ? ಹಾಗೇನೆ ಸಸ್ಯಜೀವಕೋಶ ತೊಗೊಂಡು ಯಾಕೆ ಪ್ರಾಣಿ ಜೀವಕೋಶಕ್ಕೆ ಕಸಿ ಮಾಡ್ಬಾರ್ದುಅಂತ ಯೋಚಿಸ್ತಿದ್ದೆ...'

'ಹಾಂ...!'

' ಆಗ ಈ ಹೊಸ ಕಸಿಮಾಡಿದ ಜೀವಕೋಶ ಸೂರ್ಯನ ಬೆಳಕನ್ನ ಕುಡೀತಾ, ಸಸ್ಯದ ಹಾಗೆ ತನ್ನ ಆಹಾರ ತಾನೆ ತಯಾರಿಸ್ಕೋಬಹುದಲ್ವಾ?’

‘ಜ್ಞಾನ ಚಂದ್ರರು ಅವಕ್ಕಾಗಿ ತಮ್ಮ ಬಿಟ್ಟಬಾಯನ್ನು ಬಿಟ್ಟ ಹಾಗೆಯೆ ಅವಳತ್ತಲೆ ನೋಡುತ್ತಿದ್ದರೆ, ಸೃಷ್ಟಿ ಮಾತ್ರ ಎತ್ತಲೊ ನೋಡುತ್ತ, 'ಅದೇತರ ನಾವು ಗಿಡ-ಜೀವಕೋಶದ ಸ್ವೆಟರ್ ತಯಾರಿಸಿದರೆ, ಅದನ್ನು ತೊಟ್ಟುಕೊಂಡುಬಿಟ್ಟು ಸೂರ್ಯನ ಬೆಳಕಲ್ಲಿ ನಿಂತರೆ ಆಯ್ತು, ತಾನೆ ಆಹಾರಮಾಡಿ ನಮ್ಮ ದೇಹಕ್ಕೆ ತಿನ್ನಿಸಿಬಿಡುತ್ತದೆ..’ ಎಂದಳು!

ಒಂದರೆಗಳಿಗೆ ಏನು ಹೇಳಬೇಕೆಂದೆ ತೋಚಲಿಲ್ಲ ಜ್ಞಾನಚಂದ್ರರಿಗೆ..ಅವಳು ಹೇಳಿದ್ದರ ಸಾಧ್ಯಾಸಾಧ್ಯತೆಗಿಂತಲು ಅವಳು ಯೋಚಿಸಿದ ರೀತಿ ಮತ್ತು ಉಪಾಯ ಅದ್ಭುತವೆನಿಸಿತು. ಆಗ ಇದ್ದಕ್ಕಿದ್ದಂತೆ ಏನೊ ಕೊರೆದಂತಾಗಿ ಮನದಾಳವನ್ನು ಕೆದಕಿದಾಗ ತಾವು ಮಾಡುತ್ತಿದ್ದ ಮತ್ತೊಂದಾವುದೊ ಸಂಶೋಧನೆಯ ನೆನಪಾಗಿತ್ತು - ಹಿಮಾಲಯದಂತಹ ದುರ್ಗಮ ಪ್ರದೇಶದಲ್ಲಿ ಸೈನ್ಯದಲ್ಲಿ ಬಳಸಲು ಸಾಧ್ಯವಾಗುವಂತಹ ಆಹಾರದ ಮಾತ್ರೆಗಳ ಸಂಶೋಧನೆಯ ವಿಷಯ. ಆದು ನೆನಪಾಗುತ್ತಿದ್ದಂತೆ ಏನೊ ಹೊಳೆದವರಂತೆ ಮಗಳ ಹಣೆಗೊಂದು ಹೂಮುತ್ತಿಕ್ಕಿದವರೆ ತಮ್ಮ ರೂಮಿನತ್ತ ಓಡಿದರು ಪ್ರೊಫೆಸರ-ಜ್ಞಾನಚಂದ್ರರು. ಮಗಳ ಐಡಿಯಾದಿಂದ ಸಸ್ಯಗಳ ಹಾಗೆ ಸೂರ್ಯನ-ಬೆಳಕನ್ನು ಬಳಸಿ, ಸಸಿಗಳ ಅದೆ ತತ್ವ-ಸಿದ್ದಾಂತದನುಸಾರ ಆಹಾರವಾಗಿ ಪರಿವರ್ತಿಸಿ ಅದನ್ನು ಮಾತ್ರೆಯ ರೂಪದಲ್ಲಿ ಶೇಖರಿಸಿಡಬಹುದಲ್ಲ - ಎಂದವರಿಗೆ ತಟ್ಟನೆ ಹೊಳೆದಿತ್ತು...!

ಅದಾದ ಒಂದೆ ತಿಂಗಳಲ್ಲಿ ತಮ್ಮ ಸಂಶೋಧನೆ ಫಲಪ್ರದವಾಗಿ ಯಶಸ್ಸುಕಂಡಾಗ ಅದರ ಫಲಿತಾಂಶ ಮತ್ತು ಅದರ ವಾಣಿಜ್ಯೀಕೃತ ಬಳಕೆಯ ವೈಜ್ಞಾನಿಕ ಸೂತ್ರ ಮೂಲವನ್ನು ಪೇಟೆಂಟು ಮಾಡಿಸಿ ಅದರ ಸಾರಾಂಶವನ್ನು ವಿಜ್ಞಾನಿ ವಲಯದ ಪತ್ರಿಕೆಗಳಲ್ಲಿ ಪ್ರಕಟಿಸಿಯೂಬಿಟ್ಟರು. ಅದರ ಕರಡನ್ನು ಮೂಲಸೂತ್ರವಾಗಿ ಬಳಸಿ ಬರಿ ಸೈನ್ಯಕ್ಕೆ ಮಾತ್ರವೇನು, ಯಾರು ಬೇಕಾದರು ಬಳಸಬಹುದಾದ ಮಾತ್ರೆಯನ್ನು ಕಂಡು ಹಿಡಿದುಬಿಟ್ಟಿದ್ದರವರು...!

ಇನ್ನು ನಿಜವಾದ ಜಾಗತಿಕ-ತಾಪಮಾನದ ಮೂಲಸಮಸ್ಯೆಗೆ ಪರಿಹಾರ ಕಂಡುಹಿಡಿಯುವತನಕ, ಆಹಾರದ ಕಥೆಯೆನು? ಎಂದು ಚಿಂತಿಸುವ ಹಾಗಿರಲಿಲ್ಲ..ಈ ಸಂಶೋಧನೆಯ ಫಲವಾಗಿ ಬರಿಯ ಸೂರ್ಯನ ಬೆಳಕನ್ನೆ ಬಂಡವಾಳವಾಗಿಸಿಕೊಂಡು ಆಹಾರದ ಸಮಸ್ಯೆಯನ್ನು ನೀಗಿಸಿಕೊಳ್ಳಲು ಸಾಧ್ಯವಾಗಿತ್ತು. ಭೀತಿಯ ಕ್ಷಣಗಳೆಲ್ಲವು ಮುಗಿದು ತಮ್ಮ ಸಂಶೋಧನೆಗೆ ರಾಷ್ಟ್ರಮಟ್ಟದ ಪುರಸ್ಕಾರಗಳೆಲ್ಲ ಹುಡುಕಿಕೊಂಡು ಬಂದಾಗ ಅದೇ ಪ್ರಧಾನ ಮಂತ್ರಿಗಳ ಕೈಲೆ ಪ್ರಶಸ್ತಿ ಸ್ವೀಕರಿಸುವ ಅವಕಾಶ ಕೂಡ ಸಿಕ್ಕಿತು ವಿಜ್ಞಾನಿ ಜ್ಞಾನಚಂದ್ರರಿಗೆ...!

ಆ ಸಮಾರಂಭ ನಡೆದಾಗ ವೇದಿಕೆಯ ಮೇಲಕ್ಕೆ ಪುಟ್ಟಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ, ಅವಳ ಸ್ಪೂರ್ತಿಯೆ ತಮ್ಮ ಈ ಸಂಶೋಧನೆಯ ಪ್ರೇರಕವಾದ ಕಥೆಯನ್ನು ಹೇಳಲು ಮರೆಯಲಿಲ್ಲ ಪ್ರೊಫೆಸರ ಜ್ಞಾನಚಂದ್ರ.

ಆ ಕಥೆ ಕೇಳಿದ ಪ್ರಧಾನಮಂತ್ರಿಗಳು 'ಬೆಳೆಯುವ ಕುಡಿ ಮೊಳಕೆಯಲ್ಲೆ' ಎಂದು ಹಿಗ್ಗುತ್ತ ತಂದೆಯ ಕೊರಳಲಿದ್ದ ಅದೇ ಪದಕವನ್ನೆತ್ತಿ ಮಗಳಿಗೆ ತೊಡಿಸಿಬಿಟ್ಟರು! ಪುಟ್ಟ ಸೃಷ್ಟಿಗೆ ಹಿಗ್ಗೊಹಿಗ್ಗು...ತಾನೆ ಭವಿತದ ವಿಜ್ಞಾನಿಯಾಗಿ ಪ್ರಶಸ್ತಿ ಪಡೆದವಳಂತೆ ಸಂಭ್ರಮಿಸಿ ಖುಷಿಪಟ್ಟಳು!!

ಧನ್ಯವಾದಗಳೊಂದಿಗೆ 

ನಾಗೇಶ ಮೈಸೂರು

 

Comments

Submitted by smurthygr Fri, 09/04/2015 - 16:36

<<ಅದರ ಕರಡನ್ನು ಮೂಲಸೂತ್ರವಾಗಿ ಬಳಸಿ ಬರಿ ಸೈನ್ಯಕ್ಕೆ ಮಾತ್ರವೇನು, ಯಾರು ಬೇಕಾದರು ಬಳಸಬಹುದಾದ ಮಾತ್ರೆಯನ್ನು ಕಂಡು ಹಿಡಿದುಬಿಟ್ಟಿದ್ದರವರು...!>> ವಾಸ್ತವದಲ್ಲಿ ಇಷ್ಟು ಸುಲಭವಾಗಿದ್ದರೆ ... !

Submitted by nageshamysore Fri, 09/04/2015 - 18:29

In reply to by smurthygr

ಮೂರ್ತಿಗಳೆ ನಮಸ್ಕಾರ.. ನಿಮ್ಮ ಮಾತು ನಿಜ - ವಾಸ್ತವದಲ್ಲಿ ಅಷ್ಟು ಸುಲಭದಲ್ಲಿ ಕಂಡು ಹಿಡಿಯುವಂತಿದ್ದರೆ ಸಮಸ್ಯೆಗಳು ಅದೆಷ್ಟು ಸುಲಭವಾಗಿ ಪರಿಹಾರವಾಗುತ್ತಿದ್ದವೊ ಏನೊ.. ಆದರೆ ಮಕ್ಕಳ ಕಥೆಯಾದ ಕಾರಣ ತುಸು ಉತ್ಪ್ರೇಕ್ಷೆಯನ್ನೆ ಕ್ರಿಯಾತ್ಮಕತೆಯ ಸರಕಾಗಿ ಬಳಸಿಕೊಂಡೆ - ಕ್ರಿಯಾಶೀಲತೆಗೆ ಹೆಚ್ಚು ಇಂಬುಕೊಡುವ ಉದ್ದೇಶದಿಂದ.

ಆದರೆ ಈಗಿನ ದಿನಗಳಲ್ಲಿನ ಕೆಲವು ಸಂಶೋಧನೆ ಮತ್ತು ತಂತ್ರಜ್ಞಾನದ ಪ್ರಗತಿಯಲ್ಲಾಗುತ್ತಿರುವ ಬದಲಾವಣೆಯ ವೇಗ ನೋಡಿದರೆ, ಮುಂದೊಮ್ಮೆ ಇಂತಹ ಅವಿಷ್ಕಾರಗಳು ಸಾಕ್ಷಾತ್ಕಾರಗೊಳ್ಳುವ ದಿನಗಳು ಎದುರಾದರೂ ಅಚ್ಚರಿಯಿಲ್ಲವೇನೊ :-)

Submitted by nageshamysore Fri, 09/04/2015 - 18:42

In reply to by santhosha shastry

ನಮಸ್ಕಾರ ಶಾಸ್ತ್ರಿಗಳೆ.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದನ್ನು ಓದಿ ಸ್ಪೂರ್ತಿಗೊಂಡ ನಮ್ಮ ಯಾರಾದರು ಕನ್ನಡ ಪುಟ್ಟ ಪುಟ್ಟಿಯರು ಮುಂದೊಮ್ಮೆ ಇಂಥ ಸಂಶೋಧನೆ, ಸಾಧನೆ ಮಾಡಿಬಿಡಲಿ ಎಂದು ಆಶಿಸೋಣ :-)

Submitted by nageshamysore Mon, 09/07/2015 - 19:44

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಊಹೆ ಸಂಗತವೆ - ಮುಂದೊಮ್ಮೆ ಇದು ನಿಜವಾದರು ಅಚ್ಚರಿಪಡಬೇಕಿಲ್ಲ. ಆದರೆ ಒಂದು ವೇಳೆ ನಿಜವಾದರೂ, ಯಾರಾದರು ಕನ್ನಡ ಪುಟ್ಟನೊ, ಪುಟ್ಟಿಯೊ ಅದರ ಕೀರ್ತಿಗೆ ಭಾಜನರಾಗಲಿ ಎಂದು ಆಶಿಸುತ್ತೇನೆ :-)

Submitted by nageshamysore Wed, 09/09/2015 - 16:35

In reply to by naveengkn

ನವೀನರೆ, ಮಕ್ಕಳ ಆಲೋಚನೆಯಲ್ಲಿ ಯಾವುದೆ ನಿರ್ಬಂಧ, ಸಾಧ್ಯಾಸಾಧ್ಯತೆಗಳ ಅನುಮಾನಗಳು ಅಡ್ಡಗಾಲು ಹಾಕುವುದಿಲ್ಲವಾದ ಕಾರಣ, ಅವರಲ್ಲಿ 'ಔಟ್ ಆಫ್ ದಿ ಬಾಕ್ಸ್' ಚಿಂತನೆ ಸಾಧ್ಯ. ಅದರಿಂದಾಗಿ ಸಮಸ್ಯೆಯ ಪರಿಹಾರಕ್ಕೆ ಸಾಂಪ್ರದಾಯಿಕ ರೀತಿ ಮಾತ್ರವಲ್ಲದೆ, ವಿಭಿನ್ನ ರೀತಿಯಲ್ಲು ಆಲೋಚಿಸಬಹುದು. ಅಂತದ್ದೊಂದು ಮನಸತ್ವವನ್ನು ಪುಟ್ಟಿಯ ರೂಪದಲ್ಲಿ ಬಿಂಬಿಸುವ ಯತ್ನ. ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು :-)