ಮದುವೆ ಮಾಡಿ ನೋಡು ... ಕಾಂಟ್ರ್ಯಾಕ್ಟ್ ಕೊಟ್ಟು ನೋಡು !

ಮದುವೆ ಮಾಡಿ ನೋಡು ... ಕಾಂಟ್ರ್ಯಾಕ್ಟ್ ಕೊಟ್ಟು ನೋಡು !

"ಸಂತೋಷ, ಬಹಳಾ ಸಂತೋಷ. ಏನು ನೀವೇ ನಿಂತು ಮದುವೆ ಮಾಡ್ತಿದ್ದೀರೋ? ಇಲ್ಲಾ ಕಾಂಟ್ರ್ಯಾಕ್ಟೊ?" ನನಗೆ ಇದೇ ಅರ್ಥವಾಗೋಲ್ಲ ! ಅಂತರ್ಪಟ ಹಿಡಿದಾಗ, ಹಾರ ಬದಲಿಸಿಕೊಂಡಾಗ, ರೆಸೆಪ್ಷನ್’ನಲ್ಲಿ ಹೀಗೆ ಎಲ್ಲೆಡೆ ನಿಲ್ಲೋದು ಗಂಡು-ಹೆಣ್ಣು, ನಾನಲ್ಲ. ನಾನು ಹೆಣ್ಣು ಕ.ಪಿ ಕಣ್ರೀ, ಕನ್ಯಾ ಮಾತೃ .... ನಾನ್ಯಾಕೆ ನಿಲ್ಲಲಿ? ಕೂರ್ತಿರ್ತೀನಿ ಅಥವಾ ಓಡಾಡ್ತಿರ್ತೀನಿ !!

ಕಪಿಯ ಕಡೆಯವರು ಅಂತ ಹೇಳಿಕೊಂಡ ಮೇಲೆ, ತಗ್ಗಿ ಬಗ್ಗಿ ನೆಡೆಯಬೇಕಾದ್ದು ಧರ್ಮ ನೋಡಿ. ಅದಕ್ಕೇ ನಾನು ನಿಧಾನವಾಗೇ ಹೇಳ್ದೆ "ಆಗಲ್ಲ ಕಣ್ರೀ, ನಮ್ ಯಜಮಾನರಿಗೆ ಬೆನ್ನು ಆಪರೇಷನ್ ಆಗಿರೋದ್ರಿಂದ ಜಾಸ್ತಿ ಹೊತ್ತು ನಿಂತರೆ ಬೆನ್ನಲ್ಲಿ ಛಳಕು ಬರುತ್ತೆ. ನಿಂತು ಮದುವೆ ಮಾಡೋಕ್ಕೆ ಆಗೋಲ್ಲ ಅದಕ್ಕೇ ಕಾಂಟ್ರ್ಯಾಕ್ಟ್ ಕೊಟ್ಟಿದ್ದೀವಿ". 

ಈ ಸನ್ನಿವೇಶ ಬಹಳ ಹಳೆಯದು ಬಿಡಿ! ಇಂತಹ ಕಾಲದಿಂದ ಈಗ ಸ್ವಲ್ಪ ಮುಂದುವರೆದಿದೆ ವಿಷಯ!! ಈಗ ಹೊಸದಾಗಿ ಬಂದಿರೋ ಈ ಕಾಂಟ್ರ್ಯಾಕ್ಟ್ ಪದ್ದತಿ ಬಗ್ಗೆ ಹೇಳ್ತೀನಿ ಕೇಳೀ!!!

ಇಂದಿನ ಕಾಂಟ್ರ್ಯಾಕ್ಟ್ ಪದ್ದತಿಯ ಮೂಲ ಉದ್ದೇಶ ಪ್ರೈವೇಸಿ ! ಅರ್ಥಾತ್, ನಿಮ್ಮ ಮಗಳಿಗೆ ಗಂಡು ನೋಡುವಾಗ ಹುಡುಗನ ಮನೆ ಕಡೆಯವರು ನಿಮ್ಮ ಮನೆಗೆ ಬರುವುದನ್ನು ಕಿಟಕಿಯಲ್ಲೇ ಕೂತು ನೋಡುವ ಕಿಟಕಿ ಕಾಮಾಕ್ಷಮ್ಮನವರ ಕಾಟ ಈ ಪದ್ದತಿಯಲ್ಲಿ ಇರೋದಿಲ್ಲ. ಆದರೂ ಹೇಳ್ತೀನಿ, ಟಿ.ವಿ ಸೀರಿಯಲ್ ಬರೋ ಹೊತ್ತಿಗೆ ಕೆಲಸದಿಂದ ಗಂಡ ಮನೆಗೆ ಬಂದರೂ ಅಥವಾ ಕಳ್ಳನೇ ಬಂದು ಕಳ್ಳತನ ಮುಗಿಸಿ ಕಾಫಿ ಕುಡಿದು ಹೋದರೂ ಗೊತ್ತಾಗದೇ ಇರೋ ಈ ದಿನಗಳಲ್ಲಿ ಎದುರು ಮನೆಗೆ ಯಾರು ಬಂದರೇನು ಬಿಟ್ಟರೇನು ಎಂದು ತಿಳಿದುಕೊಳ್ಳುವ ವ್ಯವಧಾನವಾದರೂ ಎಲ್ಲಿ?

ಇಲ್ಲಿ ಇನ್ನೂ ಒಂದು ವಿಷಯ ಇದೆ ನೋಡಿ. ಧಾರಾವಾಹಿ ಬರೋ ಸಮಯದಲ್ಲಿ ನಿಮ್ಮ ಮಗಳನ್ನು ನೋಡಲು ಬರ್ತೀವಿ ಅಂತ ಹೇಳೋ ಗಂಡಿನ ಕಡೆಯವರು ಯಾರಿದ್ದಾರೆ?

ಕಾಂಟ್ರ್ಯಾಕ್ಟ್ ಕಂಪನಿಯ ವೆಬ್ ತಾಣದಲ್ಲಿ ಮೊದಲಿಗೆ ಆನ್ಲೈನ್ ಅಕೌಂಟ್ ತೆರೆಯಬೇಕು. ತಾಣವು ಕಸ್ಟಮರ್ ನಂಬರ್ ಕೊಡುತ್ತದೆ. ಕಸ್ಟಮರ್ ರೆಪ್ರೆಸೆಂಟೇಟಿವ್ ಜೊತೆ ಮಾತುಕತೆಗಾಗಿ, ಮೂರು ದಿನಗಳನ್ನು ಆಯ್ಕೆಗಾಗಿ ನಿಮ್ಮ ಮುಂದೆ ಇಡುತ್ತದೆ. ನಿಮಗೆ ಮೂರರಲ್ಲಿ ಅನುಕೂಲವಾದ ಒಂದು ದಿನವನ್ನು ಆಯ್ಕೆ ಮಾಡಿ ಕ್ಲಿಕ್ಕಿಸಿದಾಗ ನಿಮಗೆ ಒಂದು  confirmation  ಈ-ಮೇಲ್ ಬರುತ್ತದೆ. ಇದೇನು ವೀಸಾ ಮಾಡಿಸುವ ಪರಿ ಇದ್ದ ಹಾಗೆ ಇದೆಯಲ್ಲ ಅಂದೀರಿ ಜೋಕೆ .... ಏಕೆಂದರೆ ಇದಿನ್ನೂ ಆರಂಭವಷ್ಟೇ !

ಅಲ್ಲಿಗೆ ಮೊದಲ ಹೆಜ್ಜೆ ಇಟ್ಟ ಹಾಗೆ.

ನಿಗದಿತವಾದ ಇಂಟರ್ವ್ಯೂ ದಿನ, ಒಂದೆರಡು ಘಂಟೆಗಳ ಅವಧಿಗಳನ್ನು ಕಾಂಟ್ರ್ಯಾಕ್ಟ್ ಕಂಪನಿಯ ಬ್ರಾಂಚ್ ಆಫೀಸಿನಲ್ಲಿ ಕಳೆಯಲು ಸಿದ್ದರಾಗೇ ಬರಬೇಕು. ಮೊದಲಿಗೆ ಕಾಂಟ್ರ್ಯಾಕ್ಟ್ ಪತ್ರಕ್ಕೆ ಸಹಿ ಹಾಕಬೇಕು. ಕಾಂಟ್ರ್ಯಾಕ್ಟ್ ವಿವರಗಳು ಏನಪ್ಪಾ ಅಂದರೆ. ಎರಡು ವರ್ಷಗಳ ಅವಧಿಯಲ್ಲಿ ಕಂಪನಿಯ ಸಹಾಯದಿಂದ ಹೆಣ್ಣು / ಗಂಡಿಗೆ ಮದುವೆ ನಿಶ್ಚಯವಾಗಿ, ಮದುವೆ ನೆಡೆದ ಮರುದಿನವೇ ಕಾಂಟ್ರ್ಯಾಕ್ಟ್ ಮುಗಿಯುತ್ತದೆ. ಅದಕ್ಕೆ ತಿಂಗಳು ತಿಂಗಳೂ ಇಂತಿಷ್ಟು ಅಂತ ಕಟ್ಟಬೇಕು. ಇದು ಹೆಚ್ಚು ಕಮ್ಮಿ ಸಾಲ ತೆಗೆದುಕೊಂಡು ತಿಂಗಳು ತಿಂಗಳೂ ಪಾವತಿಸಿದ ಹಾಗೆ.

ಕಾಂಟ್ರ್ಯಾಕ್ಟ್ ಬೇಗ ಮುಗಿದ ಅವಧಿಗೆ ಪ್ರೋ-ರೇಟ್ ಮಾಡಿ ಇನ್ನೆಷ್ಟು ಪಾವತಿ ಮಾಡಬೇಕು ಎಂಬುದನ್ನೂ ತಿಳಿಸಿಸುತ್ತಾರೆ. ಇನ್ಷೂರೆನ್ಸ್ ಕಂಪನಿಗಳಂತೆ ಇವರಿಗೂ ಹಣ ವಾಪಸ್ ಮಾಡುವ ಪರಿಪಾಠ ಇಲ್ಲ.  ಎರಡು ವರ್ಷಗಳವರೆಗೂ ಓಡಾಡಿ ಮದುವೆ ನಿಶ್ಚಯವಾಗದೆ ಇದ್ದಲ್ಲಿ ಹೊಸ ಕಾಂಟ್ರ್ಯಾಕ್ಟ್ ಸಹಿ ಹಾಕಬೇಕು ಅಥವಾ ಬಿಟ್ಟು ಹೋಗಬಹುದು. ಕಟ್ಟುಪಾಡುಗಳೇನೂ ಹೇರುವುದಿಲ್ಲ. ಹೆಣ್ಣು / ಗಂಡು ಹುಡುಕಿ ಮದುವೆ ಮಾಡಿಸಿಯೇ ತೀರುತ್ತೇವೆ ಎಂದು ಅವರೇನೂ ಗ್ಯಾರಂಟಿ ಕೊಡುವುದಿಲ್ಲ.  ಒಂದು ರೀತಿ ಆಪರೇಷನ್ ಥಿಯೇಟರ್’ಗೆ ಒಳಗೆ ಹೋದ ಪೇಷಂಟ್’ನಂತೆ !

ಅಕಸ್ಮಾತ್ ಈ ಎರಡು ವರ್ಷಗಳ ಅವಧಿಯಲ್ಲಿ ತಮ್ಮದೇ ಹಾದಿ ಹಿಡಿದು ಬೇರೆಡೆ ಮದುವೆ ನಿಶ್ಚಯ ಮಾಡಿಕೊಂಡರೆ, ಅರ್ಥಾತ್ ಕಂಪನಿಯ ಸಹಾಯವಿಲ್ಲದೆ ಹೊರಗೆ ನೆಡೆಸುವ ವ್ಯವಹಾರದಿಂದ ಮದುವೆ ನಿಶ್ಚಯವಾದಲ್ಲಿ ದಂಡ ಪಾವತಿ ಮಾಡಿ ಕಾಂಟ್ರ್ಯಾಕ್ಟ್ ಮುಗಿಸಬೇಕಾಗುತ್ತದೆ. ಕಾಂಟ್ರ್ಯಾಕ್ಟ್’ನ ದಂಡ ಪಾವತಿಯನ್ನು ಮದುವೆ ದಿನಕ್ಕೆ ಮುಂಚೆ ಮುಗಿಸದೇ ಇದ್ದಲ್ಲಿ, ಮದುವೆ ನಿಂತು ಹೋದರೆ ತಾವು ಅದಕ್ಕೆ ಜವಾಬ್ದಾರರಲ್ಲ ಎಂಬ ವಿಶೇಷ ಸೂಚನೆಯನ್ನು ಚಿಕ್ಕದಾದ ಬೋಲ್ಡ್ ಅಕ್ಷರಗಳಲ್ಲಿ ನಮೂದಿಸಿರುತ್ತದೆ! ಇದು ಒಂದು ರೀತಿ ಮೊಬೈಲ್ ಫೋನಿನ ಸರ್ವೀಸ್ ಕಾಂಟ್ರ್ಯಾಕ್ಟ್ ಇದ್ದ ಹಾಗೆ. ಮೊಬೈಲ್ ಕಾಂಟ್ರ್ಯಾಕ್ಟ್’ನಲ್ಲಿ ಮುಖ್ಯ ಸೂಚನೆಯನ್ನು ಬರೀ ಚಿಕ್ಕ ಅಕ್ಷರಗಳಲ್ಲಿ ಹಾಕಿರ್ತಾರೆ ಆದರೆ ಬೋಲ್ಡ್’ನಲ್ಲಿ ಇರೋಲ್ಲ ಅಷ್ಟೇ !

ಇದಿಷ್ಟನ್ನು ಕಂಪನಿಯವರು ಮೊದಲು ವಿವರಿಸಿ ಫಾರ್ಂ’ಗೆ ಸಹಿ ಹಾಕಿಸಿಕೊಳ್ಳುತ್ತಾರೆ.

ಸಹಿ ಹಾಕಿದ ಕ್ಷಣ ಎರಡನೇ ಹೆಜ್ಜೆ ಇಟ್ಟ ಹಾಗೆ.

ಸಹಿ ಹಾಕಿದ ಮರುಕ್ಷಣ ನಿಮ್ಮ ಇನ್-ಬಾಕ್ಸ್’ಗೆ ಒಂದು ಈ-ಮೇಲ್ ಬಂದು ಬೀಳುತ್ತೆ. ನಿಮ್ಮ ಈ-ಮೇಲ್’ಗೆ ಕಳಿಸಿರುವ ಒಂದು ಲಿಂಕ್’ಅನ್ನು ಕ್ಲಿಕ್ಕಿಸಿ, ಲಾಗಿನ್ ಆಗಿ, ವೈಯುಕ್ತಿಕ ಮಾಹಿತಿ ನೀಡಬೇಕು. ಅರ್ಥಾತ್, ಅಪ್ಪ, ಅಮ್ಮ ಮಗ/ಮಗಳು ಇವರುಗಳ ಓದು ಬರಹ, ಕೆಲಸ ಇತ್ಯಾದಿ. ನಿಮ್ಮ ಕೆಲಸದ ಟೈಟಲ್ ಹೇಳಿದರೆ ಸಾಲದು, ಎಲ್ಲಕ್ಕೂ ಪುರಾವೆ ನೀಡಲೇಬೇಕು. ಜೆ.ಡಿ ಎಂಬೋದು ಜಾಯಿಂಟ್ ಡೈರೆಕ್ಟರ್ ಆಗಬಹುದು ಜೀಪ್ ಡ್ರೈವರ್ ಕೂಡ ಆಗಬಹುದು ಅಲ್ಲವೇ, ಅದಕ್ಕೆ.  

ಮದುವೆಯಾಗಿ ಬಂದ ಮನೆಯಲ್ಲಿ ಯಾರು ಯಾರು ಇರುತ್ತಾರೆ, ಹುಡುಗ/ಹುಡುಗಿಗೆ ಅವರುಗಳು ಯಾವ ರೀತಿ ಸಂಬಂಧಿಗಳು ಇತ್ಯಾದಿ. ಎರಡನೆಯ ಸೆಕ್ಷನ್’ನಲ್ಲಿ ಜಾತಕದ ವಿವರಣೆ ನೀಡುವುದೇ ಅಲ್ಲದೇ, ಗಂಡು/ಹೆಣ್ಣು ತಾವು ತಮ್ಮ ಜೀವನ ಸಂಗಾತಿಯಲ್ಲಿ ಕಾಣಲಿಚ್ಚಿಸುವ ಗುಣಲಕ್ಷಣಗಳನ್ನು ಆಯ್ಕೆ ಮಾಡಲು ಅದಕ್ಕೆ ರೇಟಿಂಗ್ ಕೊಡಬೇಕು. ಪಟ್ಟಿ ಮಾಡಿರುವ ಅರವತ್ನಾಲ್ಕು ಗುಣಲಕ್ಷಣದ ಮುಂದೆ High, Medium, Low ಎಂದು ನಮೂದಿಸಿರುವೆಡೆ ಒಂದನ್ನು ಆಯ್ಕೆ ಮಾಡಬೇಕು. ಯಾವ ಗುಣ ಬೇಕೇ ಬೇಕು, ಯಾವುದು ಕಡಿಮೆ ಇದ್ದರೂ ತಡೆದುಕೊಳ್ಳಬಹುದು, ಮತ್ತೆ ಯಾವ ಗುಣ ಇಲ್ಲದಿದ್ದರೂ ನೆಡೆಯುತ್ತೆ ಎಂಬ ಮಾಹಿತಿ. ಕಂಪ್ಯೂಟರ್ ಜಗತ್ತಿನ ಪ್ರಾಜೆಕ್ಟ್ ಇದ್ದ ಹಾಗೆ.

ಇದಾದ ನಂತರ ಮೂರನೆಯ ಸೆಕ್ಷನ್’ನಲ್ಲಿ ಆಸ್ತಿಕ/ನಾಸ್ತಿಕ ಮನೋಭಾವದ ಬಗ್ಗೆ ಒಂದೆರಡು ಮಾತು. ಮನೆಯಲ್ಲಿ ಅತ್ತೆ ದೇವರಿಗೆ ಮಂಗಳಾರತಿ ಮಾಡಿದಾಗ, ಸೊಸೆ ಅಗ್ನಿಶಾಮಕದಳಕ್ಕೆ ಕರೆ ಮಾಡಬಾರದು ನೋಡಿ ಅದಕ್ಕೆ. ಇದರ ಜೊತೆ , ರಾಜಕೀಯ ಒಲವಿನ ಬಗೆಗಿನ ನಿಲುವು ಇವುಗಳನ್ನು ಸೂಕ್ಷ್ಮವಾಗಿ ಹೇಳಬೇಕು. ನೀವು ಕೊಡುವ ಮಾಹಿತಿಯ ರಕ್ಷಣೆ ತಮ್ಮದು ಎಂಬ ಜವಾಬ್ದಾರಿಯನ್ನು ಕಂಪನಿಯವರು ಹೊತ್ತಿದ್ದಾರೆ (ಅಂತ ಹೇಳಿದ್ದಾರೆ). ಮಗ ಕಾಂಗ್ರೆಸ್’ಗೆ ಕೈ ಎತ್ತಿ, ಮಾವ ಆಪ್’ನ ಟೋಪಿ ಹಾಕಲು, ಮನೆಗೆ ಬರುವ ಸೊಸೆ ಬಿ.ಜೆ.ಪಿ ಕಮಲ ಹಿಡಿದು ಬರಲು, ಅತ್ತೆ ಜನತಾ ದಳದ ಹೊರೆ ಹೊತ್ತಿದ್ದರೆ ಸಂಸಾರದ ಗತಿ?  ಹಾಗಾದಲ್ಲಿ ಆ ಮನೆಯಲ್ಲಿನ(?) ವಾತಾವರಣ ಹೆಚ್ಚು ಕಮ್ಮಿ ಪಾರ್ಲಿಮೆಂಟ್ ಇದ್ದ ಹಾಗೆ ಇರುತ್ತೆ ಅಂತ ಮೊದಲೇ ತೆಗೆದುಕೊಳ್ಳುವ ಎಚ್ಚರಿಕೆ ಇದು.

ಕೊನೆಯ ಸೆಕ್ಷನ್ ಅಂತೂ ಊಹೆಗೂ ನಿಲುಕದ್ದು ಬಿಡಿ ! ಗಂಡು / ಹೆಣ್ಣು ಇವರುಗಳ ಕಡೆ ಸದ್ಯದಲ್ಲೇ ಅಥವಾ ಒಂದು/ಎರಡು ವರುಷದಲ್ಲಿ ಟಿಕೆಟ್ ತೆಗೆದುಕೊಳ್ಳುವ ಹಾದಿಯಲ್ಲಿ ಯಾರಾದರೂ ಇದ್ದರೆ ಅದರ ಬಗ್ಗೆ ವಿಶೇಷ ಮಾಹಿತಿ. ಸಾಮಾನ್ಯವಾಗಿ ಮನೆಯಲ್ಲಿ ಅತಿ ಹಿರಿಯರಿದ್ದಾಗ ಮದುವೆ/ಮುಂಜಿ ಸಮಯದಲ್ಲಿ ಕೊಂಚ ಅಳುಕು ಇದ್ದೇ ಇರುತ್ತೆ ನೋಡಿ. ಈ ಮಾಹಿತಿಯನ್ನು ನೀಡುವುದರಿಂದ ಹುಡುಕಾಟ ಮಧ್ಯೆ ಏನಾದರೂ ವ್ಯತ್ಯಾಸವಾದಲ್ಲಿ, ಒಂದು ವರ್ಷ ಬ್ರೇಕ್ ತೆಗೆದುಕೊಳ್ಳಬಹುದು. ಇದಕ್ಕೆ ಹೆಚ್ಚುವರಿ ದುಡ್ಡಿನ ಹೊಡೆತ ಬೀಳುವುದಿಲ್ಲ, ವಾರ್ಷಿಕಕ್ಕೆ ಕರೆದರೆ ಸಾಕು ಅಷ್ಟೇ!

ಇಲ್ಲಿಗೆ ಮೂರನೇ ಹೆಜ್ಜೆ ಇಟ್ಟ ಹಾಗೆ.

ಪ್ರತಿ ಶುಕ್ರವಾರ ಸಂಜೆ, ಲಕ್ಷ್ಮಿ ಬರುವ ಹೊತ್ತಿಗೆ, ನೀವು ಕೊಟ್ಟ ಮಾಹಿತಿಗೆ ಸೂಕ್ತವಾಗಬಹುದಾದ ಆಯ್ದ ಕೆಲವು ವಧೂ/ವರರ ವಿಚಾರ ಹೊತ್ತ ಈ-ಮೇಲ್ ನಿಮ್ಮ ಡಬ್ಬಕ್ಕೆ ಬಂದು ಬೀಳುತ್ತೆ. ಈ-ಮೇಲ್ ಬಂದಿದೆ ಎಂದು ತಿಳಿಸಲು ಎಸ್.ಎಂ.ಎಸ್ ಕಳಿಸುತ್ತಾರೆ. ಪ್ರೈವೇಸಿ ಆದ್ದರಿಂದ ಫೇಸ್ಬುಕ್’ನಲ್ಲಿ ಹಾಕುವುದಿಲ್ಲ. ವಾರಾಂತ್ಯದ ದಿನಗಳನ್ನು ಅದಕ್ಕೆ ವ್ಯಯಿಸಬಹುದು. ಸೋಮವಾರ ಬೆಳಿಗ್ಗೆಯ ಹೊತ್ತಿಗೆ ನಿಮ್ಮ ಮನಸ್ಸಿಗೆ ಹಿಡಿಸಿದ ಮತ್ತು ಆಯ್ದ ಸಂಖ್ಯೆಯನ್ನು ಕಂಪನಿಯವರಿಗೆ ಕಳುಹಿಸಿಕೊಡಬೇಕು (ಹೆಸರು, ವಿಳಾಸ ಇತ್ಯಾದಿ ಮಾಹಿತಿ ಇರುವುದಿಲ್ಲ). ಯಾವುದೂ ಹಿಡಿಸದೇ ಹೋದರೆ, ಈ-ಮೇಲ್ ಕಳಿಸುವ ಗೋಜಿಲ್ಲ. ಆದರೆ ವಿಷಯ ತಿಳಿಸದೇ ಹೋದರೆ, ಆ ಮುಂದಿನ ಶುಕ್ರವಾರದ ಈ-ಮೇಲ್’ನಲ್ಲಿ ಮತ್ತದೇ ವಧೂ/ವರರ ವಿಚಾರ ಇರುವ ಸಂಭವ ಹೆಚ್ಚು. ನೀವು ಕಳಿಸಿದ ಆಯ್ಕೆಯನ್ನು ಆ ಸಂಬಂಧಪಟ್ಟ ಪಾರ್ಟಿಯವರನ್ನೂ ಸಂಪರ್ಕಿಸುತ್ತಾರೆ. ಅವರಿಗೂ ಸರಿ ಕಂಡಲ್ಲಿ ಎರಡೂ ಪಕ್ಷದವರ ಆರೂ ಜನರ ಭೇಟಿ ಕಂಪನಿಯ ಮೀಟಿಂಗ್ ರೂಮಿನಲ್ಲಿ ಏರ್ಪಾಡಾಗುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರದ ಮಾದರಿ !

ಇದು ನಾಲ್ಕನೇ ಹೆಜ್ಜೆ.

ಆರೂ ಜನರನ್ನು (ಎರಡು ಜೊತೆ ಹಿರಿಯರು, ಹುಡುಗ, ಹುಡುಗಿ) ಭೇಟಿ ಮಾಡಿಸಿ ಪರಿಚಯ ಮಾಡಿಕೊಡುವ ಪುಣ್ಯ ಕೆಲಸದ ಜವಾಬ್ದಾರಿ ಕಂಪನಿಯವರದ್ದು. ನೀವು ಅಲ್ಲಿ ಬಂದು ಕೂತು "ಲೋ! ರಾಮನಾಥ ನಿನ್ ಮಗಳೇನೋ?" ಅನ್ನೋದು ಅಥವಾ "ರಾಯರೇ, ನಿಮಗೆ ಮದುವೆಗೊಬ್ಬ ಮಗ ಇದ್ದಾನೆ ಅನ್ನೋದೆ ಗೊತ್ತಿರಲಿಲ್ಲ" ಅನ್ನೋದೆಲ್ಲ ನೆಡೆಯೋಲ್ಲ ಬಿಡಿ. ಇಟ್ಸ್ ಟೂ ಲೇಟ್ !  ಪರಿಚಯ ಮಾಡಿಕೊಟ್ಟ ಕಂಪನಿಯವರ ಮುಂದಿನ ಕೆಲಸ ಏನಿದ್ದರೂ, ನಿಮ್ಮ ಮಿಕ್ಕ ಮಾತುಕಥೆಗಳನ್ನು ನೋಟ್ ಮಾಡಿಕೊಳ್ಳುವ ಸೆಕ್ರೆಟರಿ ಕೆಲಸ. ಮಿಕ್ಕ ವಿಚಾರಕ್ಕೆ ಮೂಗು ತೂರಿಸೋದಿಲ್ಲ. ಗಂಡೋ / ಹೆಣ್ಣೋ ಅಥವಾ ಇಬ್ಬರೂ ಬೇರೆ ಊರಿನಲ್ಲೋ / ವಿದೇಶದಲ್ಲೋ ಇದ್ದ ಪಕ್ಷದಲ್ಲಿ ಸ್ಕೈಪ್ ಅಥವಾ ವಿಡಿಯೋ ಕಾನ್ಫ಼ೆರೆನ್ಸಿಂಗ್ ನೆಡೆಸಲಾಗುತ್ತದೆ. ಇದಕ್ಕೆ ತಗಲುವ ಖರ್ಚನ್ನು ಲೆಕ್ಕ ಮಾಡಿ ನಂತರ ಬಿಲ್ ಕಳಿಸಲಾಗುತ್ತದೆ. ಎರಡೂ ಕಡೆಯವರು ಒಪ್ಪಿ ಮುಂದುವರೆಯಲು ಇಚ್ಚಿಸಿದಲ್ಲಿ, ಜ್ಯೋತಿಷಿಗಾಗಿ ಏರ್ಪಾಡು ಮಾಡುವುದು, ಲಗ್ನಪತ್ರಿಕೆ ಬರೆಸುವುದು, ಛತ್ರ ಹುಡುಕುವುದು, ಅಡುಗೆಯವರನ್ನು ನೋಡುವುದು, ಕ್ಲೀನಿಂಗ್ ಜನರನ್ನು ಹೊಂದಿಸುವುದು ಎಲ್ಲವೂ ಕಂಪನಿಯವರೇ ನೋಡಿಕೊಳ್ಳುತ್ತಾರೆ. ಅಡುಗೆ ಏನು ಮಾಡಿಸಬೇಕು ಎಂಬೋದು ನಿಮ್ಮ ಹಣೆಬರಹ. ಪ್ರಿಂಟಿಂಗ್, ಹಂಚುವಿಕೆ, ನಿಮ್ಮ ಪರವಾಗಿ ಮನೆ ಮನೆಗೆ ಹೋಗಿ ಆಹ್ವಾನಿಸುವಿಕೆ ಅಥವಾ ವೆಬ್ ತಾಣದ ಆಹ್ವಾನ ಸಿದ್ದಪಡಿಸುವಿಕೆ ಇತ್ಯಾದಿಗೆ ಬೇರೆ ಖರ್ಚು. ಸದ್ಯಕ್ಕೆ ನಿಮ್ಮ ಜುಟ್ಟು ಅವರ ಕೈಲಿ ಇರೋದ್ರಿಂದ, ನಿಶ್ಚಿತಾರ್ಥ ಮಾಡಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು. ಮಾಡಿದಲ್ಲಿ, ಕಂಪನಿಗೆ ಕರೆಯೋಲೆ ಕಾಪಿ ನೀಡಲೇಬೇಕು.

ಇಲ್ಲಿಗೆ ಐದನೇ ಹೆಜ್ಜೆ ಮುಗೀತು.

ಮದುವೆ ದಿನದ ಕಾಫಿ, ತಿಂಡಿ, ಊಟೋಪಚಾರಗಳಿಂದ ಹಿಡಿದು, ಫೋಟೋ, ವಿಡಿಯೋ, ತಾಂಬೂಲ, ಇತ್ಯಾದಿಗಳು, ಗಂಡಿಗೆ ಕಾಶೀಯಾತ್ರೆ ಸಾಮಾನುಗಳು, ರಿಸೆಪ್ಷನ್ ಹಾಲ್’ನ ಅಲಂಕಾರ ಕೊನೆಗೆ ವಧೂ-ವರರ ಮೊದಲ ರಾತ್ರಿಯ ರೂಮನ್ನು ಸಿಂಗರಿಸುವಿಕೆ ಎಲ್ಲ ಜವಾಬ್ದಾರಿ ಕಂಪನಿಯವರದು. ರೂಮಿನ ಸಿಂಗಾರವು ನಿಮಗೆ ಯಾವುದಾದರೂ ಚಲನಚಿತ್ರದಲ್ಲಿ ನೋಡಿದಂತೆ ಇರಬೇಕು ಎಂದಲ್ಲಿ ಆ ದೃಶ್ಯದ ಒಂದು ಫೋಟೋ ಕೊಟ್ಟರೆ ಸಾಕು. ಅದಕ್ಕೆ ತಕ್ಕಂತೆ ಸಿಂಗರಿಸುತ್ತಾರೆ. ಬಿಲ್ ಮಾತ್ರ ಬೇರೆ !

ಇಲ್ಲಿಗೆ ಆರನೇ ಹೆಜ್ಜೆ ಇಟ್ಟಾಯ್ತು.

ಕಾಂಟ್ರ್ಯಾಕ್ಟ್’ನಲ್ಲಿ ಮೊದಲೇ ನಮೂದಿಸಿರುವಂತೆ, ಬೀಗರ ಔತಣದ ದಿನದ ವಿಶೇಷ ಸತ್ಯನಾರಾಯಣ ಪೂಜೆಯ ಜವಾಬ್ದಾರಿ ಕಂಪನಿಯವರದು. ಅಂದರೆ ಅಂದಿನ ದಿನದ ಪೂಜೆಗೆ ಬೇಕಿರುವ ದೊಡ್ಡ ಸೈಜಿನ ಸತ್ಯನಾರಾಯಣನ ಫೋಟೋ ಮತ್ತು ಪ್ರಸಾದ ಕಂಪನಿ ಕಡೆಯಿಂದ ಅಂತ ! ವಧು-ವರರ ಕಡೆಯವರಿಗೆ ಶುಭಕೋರಿ ದೊಡ್ಡ ಸೈಜಿನ ಬಿಲ್ ಅನ್ನು ಅವರಿಬ್ಬರ ಕೈಗೆ ಕೊಟ್ಟು ಹಣ ತೆಗೆದುಕೊಂಡು ಮದುವೆಯ ಸರ್ಟಿಫಿಕೇಟ್ ಕೈಗೆ ನೀಡಿ ಹೊರಗೆ ಹೊರಟರೆ, ಮತ್ತಿನ್ಯಾವ ವಿಷಯಕ್ಕೂ ತಲೆ ಹಾಕುವುದಿಲ್ಲ.

ಏಳನೇ ಹೆಜ್ಜೆ ಮುಗಿದಿಲ್ಲ, ಇನ್ನೊಂದು ಚೂರು ಬಾಕಿ ಇದೆ !

ಕಂಪನಿಯವರು ಕೊಟ್ಟ ಬಿಲ್’ಅನ್ನು ಎತ್ತಲಾರದೆ, ಹುಡುಗನ ಕಡೆಯವರು ಹೆಣ್ಣಿನ ತಂದೆಗೆ ಆ ಬಿಲ್ಲನ್ನು ಹೊರಲು ಹೇಳಿ ವರದಕ್ಷಿಣೆ ರೂಪದಲ್ಲಿ ಆ ಬಿಲ್ ಪಾವತಿಸಿಬಿಡಿ ಎಂದು ಹೇಳುವುದರೊಂದಿಗೆ ಹಿಂಬದಿಯಿಂದ ಶುಶ್ರಾವ್ಯ ಗೀತೆ ಮೊಳಗುತ್ತದೆ "ಸಪ್ತಪದೀ, ಇದು ಸಪ್ತಪದೀ ... ಈ ಏಳು ಹೆಜ್ಜೆಗಳ ಸಂಬಂಧಾ ... " ... ಈಚೆಗೆ ಬಂದಿರುವ ಹೊಸ ಪದ್ದತಿಯಂತೆ "ಚಾರ್ ಕದಮ್ ಬಸ್ ಚಾರ್ ಕದಮ್" ಅಂತ ನಾಲ್ಕೇ ಹೆಜ್ಜೆ ಇಟ್ಟರೂ ಅಡ್ಡಿಯಿಲ್ಲ ... ಕಾಂಟ್ರ್ಯಾಕ್ಟ್’ಗೂ ಇಡೋ ಹೆಜ್ಜೆಗೂ ಸಂಬಂಧವಿಲ್ಲ !

- ಮದುವೆಯ ಈ ಹೊಸ ಕಾಂಟ್ರ್ಯಾಕ್ಟ್ ಬರೆದವರು ಶ್ರೀನಾಥ್ ಭಲ್ಲೆ ...

Comments

Submitted by venkatb83 Thu, 04/23/2015 - 11:21

"ಮಗ ಕಾಂಗ್ರೆಸ್’ಗೆ ಕೈ ಎತ್ತಿ, ಮಾವ ಆಪ್’ನ ಟೋಪಿ ಹಾಕಲು, ಮನೆಗೆ ಬರುವ ಸೊಸೆ ಬಿ.ಜೆ.ಪಿ ಕಮಲ ಹಿಡಿದು ಬರಲು, ಅತ್ತೆ ಜನತಾ ದಳದ ಹೊರೆ ಹೊತ್ತಿದ್ದರೆ ಸಂಸಾರದ ಗತಿ? ಹಾಗಾದಲ್ಲಿ ಆ ಮನೆಯಲ್ಲಿನ(?) ವಾತಾವರಣ ಹೆಚ್ಚು ಕಮ್ಮಿ ಪಾರ್ಲಿಮೆಂಟ್ ಇದ್ದ ಹಾಗೆ ಇರುತ್ತೆ ಅಂತ ಮೊದಲೇ ತೆಗೆದುಕೊಳ್ಳುವ ಎಚ್ಚರಿಕೆ ಇದು."

;())))

"ಮದುವೆ ದಿನದ ಕಾಫಿ, ತಿಂಡಿ, ಊಟೋಪಚಾರಗಳಿಂದ ಹಿಡಿದು, ಫೋಟೋ, ವಿಡಿಯೋ, ತಾಂಬೂಲ, ಇತ್ಯಾದಿಗಳು, ಗಂಡಿಗೆ ಕಾಶೀಯಾತ್ರೆ ಸಾಮಾನುಗಳು, ರಿಸೆಪ್ಷನ್ ಹಾಲ್’ನ ಅಲಂಕಾರ ಕೊನೆಗೆ ವಧೂ-ವರರ ಮೊದಲ ರಾತ್ರಿಯ ರೂಮನ್ನು ಸಿಂಗರಿಸುವಿಕೆ ಎಲ್ಲ ಜವಾಬ್ದಾರಿ ಕಂಪನಿಯವರದು. ರೂಮಿನ ಸಿಂಗಾರವು ನಿಮಗೆ ಯಾವುದಾದರೂ ಚಲನಚಿತ್ರದಲ್ಲಿ ನೋಡಿದಂತೆ ಇರಬೇಕು ಎಂದಲ್ಲಿ ಆ ದೃಶ್ಯದ ಒಂದು ಫೋಟೋ ಕೊಟ್ಟರೆ ಸಾಕು. ಅದಕ್ಕೆ ತಕ್ಕಂತೆ ಸಿಂಗರಿಸುತ್ತಾರೆ. ಬಿಲ್ ಮಾತ್ರ ಬೇರೆ !"

;(((

ಭಲ್ಲೆ ಅವರೇ ..ಮುಂಜಾನೆ ತುಟಿಯಲ್ಲಿ ಕಿರುನಗೆ ಹೊಮ್ಮಿಸಿ ಅಂತ್ಯ ಓದಿ ಮುಗಿಸಿದಾಗ ಭರಪೂರ ನಗು ಹೊಮ್ಮಿಸಿದ ಬರಹ ..
ಬಹು ದಿನಗಳ ನಂತರ ಸಂಪದದಲ್ಲಿ ಒಂದೊಳ್ಳೆ ಮನೋರಂಜನಾ ಬರಹ ಓದುವ ಅವಕಾಶ ಒದಗಿಸಿದ ನಿಮಗೆ ನನ್ನಿ ....
ಇನ್ನೂ ಈ ಬರಹದ ವಿಷ್ಯ ವಸ್ತುವಿನ ಬಗೆಗೆ ನೀವ್ ಬರೆದದ್ದು ಸತ್ಯ... ವಧು ಹುಡುಕಲು ನಾ (ನನ್ನ ಹಾಗೆ ಹಲವರು) ಪಟ್ಟ ಕಸ್ಟ-ನಸ್ಟ (!!) ಬಗ್ಗೆ ಬರೆದರೆ ಅದೇ ಮಹದ್ ಗ್ರಂಥ ಆದೀತು...!! ಎಲ್ಲೊಲ್ಲೊ ಹುಡುಕಾಡಿ ಕೊನೆಗೂ ನಾ ಇಸ್ಟ ಪಟ್ಟ ನನ್ನಿಸ್ಟ ಪಡುವ ಹುಡುಗಿ ಸಿಗುವಾಗ ಹುಸ್ಸಪ್ಪ ಎನಿಸಿತ್ತು....! ಯಾವೆಲ್ಲ ಮ್ಯಾಟ್ರಿ ಮನಿ(!!) ವೆಬ್‌ಸೈಟು -ಸ್ನೇಹಿತರು ಸಂಬಂಧಿಗಳು ಈ ವಿಷ್ಯದಲ್ಲಿ ನನಗೆ ಸಹಾಯ ಮಾಡಲಾಗಲಿಲ್ಲ...!! ಇನ್ನೂ ಕೆಲವರು ನನ್ನ ಕರೆ -ಮೆಸೇಜ್ ನೋಡಿ ದುರ್ದಾನ ಪಡೆದವರಂತೆ ಮಾರು ದೂರ ಸರಿದರು(ನನ್ನ ವಧು ಅನ್ವೇಷಣೆಯ ಕಿರಿಕಿರಿ ತಾಳದೆ) ಆದ್ರೆ ಕೊನೆಗೆ ನನ್ನ ಗೋಳು ನೋಡದೆ ಆ 'ಮುಖ ಪುಸ್ತಕ' ನನಗೆ ಈ ನಿಟ್ಟಿನಲ್ಲಿ ಬಹು ದೊಡ್ಡ ಸಹಾಯ ಮಾಡಿತು...ಹೀಗಾಗಿ ಯಾರೇನೇ ಅಂದರೂ 'ಮುಖ ಪುಸ್ತಕ' ನಮ್ಮ ಜೀವನದ ಒಂದು ಮಹತ್ತರ ಘಟ್ಟದಲ್ಲಿ ಮಹದ್ ಸಹಾಯ ಮಾಡಿ ವಿಶೇಷ ಸ್ಥಾನ ಸಂಪಾದಿಸಿದೆ.. ಅದೊಂದು ದೊಡ್ಡ ರೋಚಕ ಕಥೆ --ಆ ಬಗ್ಗೆ ಮುಂದೊಮ್ಮೆ ಬರೆವೆ..
ಮನೆ ಕಟ್ಟಿ ನೋಡು -ಮದ್ವೆ ಮಾಡಿ(ಕೊಂಡು)ನೋಡು ಅನ್ನೋ ಗಾದೆ ಸೂಪರ್ ಸತ್ಯ..!!
ಶುಭವಾಗಲಿ

\|||||/

ಸುಮಾರು ವಿಚಾರಗಳನ್ನು ಹಂಚಿಕೊಂಡಿದ್ದೀರಾ ಸಪ್ತಗಿರಿಯವರೇ
ಧನ್ಯವಾದಗಳು ....

ಮದುವೆ ಊಟ ಯಾವಾಗ?

ವೆಂಕಟ್,
"ವಧು ಹುಡುಕಲು ನಾ (ನನ್ನ ಹಾಗೆ ಹಲವರು) ಪಟ್ಟ ಕಸ್ಟ-ನಸ್ಟ (!!) ಬಗ್ಗೆ ಬರೆದರೆ ಅದೇ ಮಹದ್ ಗ್ರಂಥ ಆದೀತು...!! " ‍ ಮಹದ್ ಅಲ್ಲದೇ ಇದ್ರೂ ಚಿಕ್ಕದಾಗಿ ಬರೆಯಿರಿ... ನಿಮ್ಮ‌ ಕಮೆಂಟೇ ಇಸ್ಟು ರಸಭರಿತ‌ ಎಂದರೆ ಪೂರ್ಣ‌ ಕಥೆ ಇನ್ನೂ ರಸಭರಿತ‌ ವಾಗಬಲ್ಲದು...ಪ್ರಯತ್ನ‌ ಪಡಿ
ನರೇಂದ್ರ‌

Submitted by kavinagaraj Tue, 04/28/2015 - 15:35

:)) ನಿಜಕ್ಕೂ ಇಂದಿನ ದಿನಕ್ಕೆ ಸೂಕ್ತವಾಗಿದೆ. ಭಲ್ಲೆಯವರೇ, ನೀವೇ ಒಂದು ಕಾಂಟ್ರ್ಯಾಕ್ಟ್ ಕಛೇರಿ ತೆರೆಯಹುದಾಗಿದೆ. ಒಂದು 'ಕೈ' ನೋಡಿಯೇಬಿಡಿ!!

ಧನ್ಯವಾದಗಳು ಕವಿಗಳೇ! ಒಳ್ಳೇ ಐಡಿಯಾನೇ! ನನ್ ಐಡಿಯಾ ನಾನೇ ಒಂದು 'ಕೈ' ನೋಡುವುದು ! :-)