ಸಾಗಲಿ ನಮ್ಮೀ ಪಥವು ಗುರಿಯತ್ತ

ಸಾಗಲಿ ನಮ್ಮೀ ಪಥವು ಗುರಿಯತ್ತ

     ಹಿರಿಯರಾದವರು ಹೀಗೆ ಹೇಳ್ತಿರ್ತಾರೆ.. ಸುದೀರ್ಘ ಜೀವನಕ್ಕೊಂದು ಗುರಿ ಮುಖ್ಯ ಎಂದು. ಆಯಿತು ನಮಗೊಂದು ಗುರಿ ಇದೆ ಅಂಬೋಣ. ಆದರೆ ಆ ಗುರಿ ಸೇರಲು ಮಾರ್ಗವು ಸಹ ಬೇಕಲ್ಲವೇ. ಎಂಬಲ್ಲಿಗೆ ಕಣ್ಣೆದುರಿಗೆ ಹಲವಾರು ಮಾರ್ಗಗಳು ಕಾಣಿಸುತ್ತವೆ. ಹಾಗಂತ ಎಲ್ಲಾ ಮಾರ್ಗಗಳಲ್ಲಿ ಹೋದರೆ ಗುರಿ ಸೇರಬಹುದೇ..! ಇಲ್ಲವಲ್ಲ. ಅದಕ್ಕೆ ಸೂಕ್ತವಾದ ಮಾರ್ಗ ಯಾವುದು ಎಂದು ಆರಿಸುವುದು ಸಹ ಮುಖ್ಯವಾಗಿರುತ್ತದೆ. ಅಂದಾಗ ಮಾರ್ಗಗಳ ಆಯ್ಕೆ, ಮಾರ್ಗಗಳ ಬಗ್ಗೆ ನಮ್ಮಲ್ಲಿ ಗೊಂದಲಗಳು ಉಂಟಾಗುವುದು ಸಹಜ. ಕೆಲವೊಂದು ಮಾರ್ಗದಲ್ಲಿ ಸುಂಕ ಕಟ್ಟುವ ಪ್ರಮೇಯವು ಬರಬಹುದು. ಕೆಲವೊಂದು ಮಾರ್ಗದಲ್ಲಿ ಅಡೆತಡೆಗಳಿಲ್ಲದ್ದಿದ್ದರೂ ಎಲ್ಲಿಗೆ ಹೋಗುತ್ತಿದ್ದೇವೆ ಎಂದು ತಿಳಿದುಕೊಳ್ಳಲು ಆಗದೆ ಇರಬಹುದು. ಇನ್ನು ಕೆಲ ಮಾರ್ಗಗಳಲ್ಲಿ ಮಾರ್ಗಸೂಚಿ ಇದ್ದರೂ ಗುರಿಗೆ ಎಷ್ಟು ದೂರ ಎಂದು ನಿಗದಿ ಪಡಿಸದೆ ಇರಬಹುದು. ಕೆಲವು ಮಾರ್ಗಗಳಲ್ಲಿ ಗುರಿ ಮುಟ್ಟುವ ಕನಸಿನೊಂದಿಗೆ ಹೋಗುವಾಗ ಕಾಲನ ಅಲೆಗೆ ಸಿಕ್ಕಿ ಅರ್ಧಕ್ಕೆ ಅಧ್ಯಾಯ ಮುಗಿಸಿ ಕಾಲನ ಅಧೀನ ಆಗಲೂಬಹುದು. ಇನ್ನು ಕೆಲವು ಮಾರ್ಗಗಳಲ್ಲಿ ನಮ್ಮ ಗುರಿಯ ತಪಾಸಣೆ ಮಾಡಲುಬಹುದು. ಕೆಲವು ಮಾರ್ಗಗಳಲ್ಲಿ ಹೋಗುವಾಗ ಗುರಿಯೇ ಮರೆತು ಹೋಗಿ ಮಾರ್ಗ ಬದಲಾಗಬಹುದು.

     ಆದರೆ ಗುರಿ ಮುಟ್ಟಲು ಆಗುವುದಿಲ್ಲ ಅಂತ ಏನಿಲ್ಲ. ಗುರಿ ಮುಟ್ಟುವ ಮಾರ್ಗ ಅಳೆಯುವಂತಿದ್ದರೆ, ಗುರಿಯ ಬಗ್ಗೆ ನಮಗೆ ಸ್ಪಷ್ಟ ನಿಲುವಿದ್ದರೆ, ಗುರಿ ಮುಟ್ಟಲೇಬೇಕೆಂಬ ಛಲವಿದ್ದರೆ, ಧೈರ್ಯದಿಂದ ಪಣಕಟ್ಟಿ ನಿಂತರೆ, ಜೊತೆಗೆ ತಾಳ್ಮೆ, ಆತ್ಮವಿಶ್ವಾಸ, ಸ್ವಲ್ಪ ಬುದ್ಧಿ ಮತ್ತು ದೃಢತೆ ಇದ್ದರೆ ಖಂಡಿತಾ ಅನ್ಯರ ಮಾತಿಗೂ ಗುರಿಯಾಗದೆ ಗುರಿ ಸಾಧಿಸಬಹುದು ಏನಂತೀರಾ?!!
-ಪಿ.ಕೆ. ಜೈನ್ ಚಪ್ಪರಿಕೆ.

 

Comments