ಸಿರಿವಂತಿಕೆ ಎಂದರೇನು?

ಸಿರಿವಂತಿಕೆ ಎಂದರೇನು?

ಸಿರಿವಂತಿಕೆ ಎಂದರೇನು?  ತಿಳಿದುಕೊಳ್ಳೋಣ ಅಂತ ಸಂಚಾರ ಹೊರಟೆ !

ಬಡವ ಹೇಳ್ತಾನೆ ’ಎಳ್ಡೊತ್ತು ಊಟ, ಸಂಜೆಗೆ ಒಂದು ಸಣ್ ಬಾಟ್ಲಿ ಸಾರಾಯಿ ಹಾಕ್ಕೊಂಡು ಹಗ್ಗದ್ ಮಂಚದ್ ಮ್ಯಾಗೆ ನೆಮ್ಮದಿಯಾಗಿ ಸೂರ್ಯ ಉಟ್ಟೋ ದಿಕ್ಕಿನಾಗೆ ತಲೆ ಇಟ್ಟು ಚಂದ್ರನ್ ನೋಡ್ಕೊಂಡ್ ಮಲೀಕ್ಕೊಂಡ್ರೆ ಸಾಕು’ ಅಂದ  ಹೊಸ ವರ್ಷದಲ್ಲಿ ನಿನ್ ಕನಸು ನಿಜವಾಗಲಿ ಅಂತ ಶುಭಕೋರಿ ಹೊರಬಂದೆ.

ಮಧ್ಯಮ ವರ್ಗದ ಪ್ರತೀಕವಾದ ಒಬ್ಬಾತ ನುಡಿದ ’ಬೆಂಗಳೂರಿನಲ್ ಒಂದು ಬಂಗಲೆ, ಓಡಾಡ್ಲಿಕ್ಕೆ BMW ಕಾರು, ಊಟ ತಿಂಡಿ ಮಾಡಿಕೊಡ್ಲಿಕ್ಕೆ ಅಡುಗಯೆವರು, ಕಸ-ಮುಸುರೆ ಮಾಡೋಕ್ಕೆ ಕೆಲಸದವರು, ತೋಟ ನೋಡ್ಕೊಳ್ಳಿಕ್ಕೆ ಆಳು ಕಾಳು, ಊರಾಚೆ ಒಂದ್ ಐದು ಎಕರೆ ...’ ಇನ್ನೂ ಹೇಳ್ತಿದ್ರು ನಾನೇ ಎದ್ದು ಬಂದೆ.

ಸಿರಿವಂತ ವರ್ಗದ ಹೆಣ್ಣು ’ಸಣ್ಣ example ಕೊಡೋದಾದರೆ, ಈ ವರ್ಷದ ನನ್ ಬರ್ತ್-ಡೇ’ಗೆ ಒಂದು ಒಳ್ಳೆಯ ಗಿಫ್ಟ್, ಮಿಕ್ಕ ಚಿಲ್ಲರೆ ಕಾಸಿನಲ್ಲಿ ಎರಡು ವಾರ ಯೂರೋಪ್’ಗೆ ಶಾಪಿಂಗ್ ಟ್ರಿಪ್’ ... ಉಸಿರು ಕಟ್ಟಿ ಎದ್ದು ಬಂದೆ

ಅತಿ ಸಿರಿವಂತನೊಬ್ಬ ’ದುಡ್ಡಿನ ಹಿಂದೆ ಬಿದ್ದು ತಪ್ಪು ಮಾಡಿದೆ ಅನ್ನಿಸ್ತಿದೆ ! ನನಗಿರೋ ಆಸ್ತಿ-ಪಾಸ್ತಿ ಎಲ್ಲ ಅನಾಥಾಶ್ರಮಕ್ಕೆ ನೀಡಿ, ನೆಮ್ಮದಿಯಾಗಿ ಪ್ರಕೃತಿ ಸೌಂದರ್ಯ ಸವಿಯುತ್ತ ಜೀವನ ನೆಡೆಸಬೇಕು ಅನ್ನಿಸಿದೆ’ ... ಜ್ಞ್ನಾನೋದಯವಾದಂತಾಗಿ ಎದ್ದು ಬಂದೆ.

ಅರ್ಥಾತ್, ಮನುಕುಲದ ವರ್ಗದವರನ್ನು ಒಂದು ವೃತ್ತ ಎಂದುಕೊಂಡರೆ ಬಡವ ಮತ್ತು ಅತೀ ಶ್ರೀಮಂತನ ಆಶಯಗಳು ಒಂದೇ ಅಂತಾಯ್ತು ! ಈ ಎರಡು ವರ್ಗವೇ ’ನೆಮ್ಮದಿ’ಗಾಗಿ ಆಶಿಸುತ್ತಿರುವವರು.  

ಜಯ ನಾಮ ಸಂವತ್ಸರವು ಎಲ್ಲರ ಜೀವನದಲ್ಲಿ ’ನೆಮ್ಮದಿ’ ಎಂಬ ಸಿರಿವಂತಿಕೆಯನ್ನು ತರಲಿ ಎಂದು ಆಶಿಸುತ್ತ ಭಲ್ಲೆ ಕುಟುಂಬವು ಯುಗಾದಿ ಶುಭಾಶಯಗಳನ್ನು ಕೋರುತ್ತೇವೆ.

 

Comments