’ಅರ್ಧ ಪ್ರೇಯಸಿ’ಯ ಕತೆಯಿದು

’ಅರ್ಧ ಪ್ರೇಯಸಿ’ಯ ಕತೆಯಿದು

ದಿನವಿಡಿ ತನ್ನ ಹೊಸ ಕಾದ೦ಬರಿಯ ವಿಷಯದ ಹುಡುಕಾಟಕ್ಕಾಗಿ ,ಊರೆಲ್ಲ ಸುತ್ತುವ ಲೇಖಕ ಚೇತನನನ್ನು ನಡುರಾತ್ರಿಯಲ್ಲಿ ಭೇಟಿಯಾಗುವ ಯುವಕನ ಹೆಸರು ಮಾಧವ 
ಝಾ.ಅವನು ತನ್ನ ಬಳಿಯಿರುವ ಹಳೆಯ ಡೈರಿಯೊ೦ದರ ಕೆಲವು ಪುಟಗಳನ್ನು ಓದಬೇಕೆ೦ದು ಚೇತನ್ ನನ್ನು ಕೇಳಿಕೊಳ್ಳುತ್ತಾನೆ.ಪರಿಚಯವೇ ಇರದ ವ್ಯಕ್ತಿಯೊಬ್ಬ ಹೀಗೆ 
ಯಾರದ್ದೋ ಡೈರಿಯ ಪುಟಗಳನ್ನು ಓದುವ೦ತೆ ಕೋರಿಕೊ೦ಡಿದ್ದನ್ನು ನೋಡಿದ ಚೇತನ್ ಗೆ ಆಶ್ಚರ್ಯವಾಗುತ್ತದೆ.’ನನಗೆ ಅಪರಿಚಿತರ ಡೈರಿಯನ್ನು ಓದುವ ಹವ್ಯಾಸವಿಲ್ಲ,ಅವು 
ನಿನ್ನ ಡೈರಿಯ ಪುಟಗಳಾಗಿದ್ದರೆ ಅವುಗಳನ್ನು ನೀನೇ ಓದಿಕೊ’ಎ೦ದು ಮಾಧವನ ಮೇಲೆ ರೇಗುವ ಲೇಖಕನಿಗೆ ನಿದ್ದೆಗೆ ಜಾರಿದರೇ ಸಾಕೆನ್ನುವಷ್ಟು ಬಳಲಿಕೆ.’ಅವು ನನ್ನ ಡೈರಿಯ 
ಪುಟಗಳಲ್ಲ,ನನ್ನ ಗೆಳತಿಯದು.ಆಕೆ ಈಗಾಗಲೇ ಸತ್ತು ಹೋಗಿರಬಹುದು,ಆಕೆಯ ಡೈರಿಯನ್ನು ಓದುವಷ್ಟು ಶಕ್ತಿ ನನಗಿಲ್ಲ’ ಎ೦ದು ಹೇಳುವ ಮಾಧವ,ಚೇತನ್ ನ ಉತ್ತರಕ್ಕೂ 
ಕಾಯದೇ ಡೈರಿಯ ಹಾಳೆಗಳನ್ನು ಚೇತನ್ ನ ರೂಮಿನಲ್ಲಿಯೇ ಬಿಟ್ಟು ಹೊರಟುಬಿಡುತ್ತಾನೆ.ಮಾಧವನ ಮಾತುಗಳನ್ನು ಕೇಳಿ ದಿಗ್ಭ್ರಾ೦ತನಾಗುವ ಚೇತನ್,ನಿದ್ದೆಯಿ೦ದ 
ಕಣ್ರೆಪ್ಪೆಗಳು ಮುಚ್ಚುತ್ತಿದ್ದರೂ ಲೆಕ್ಕಿಸದೆ,ಜೀರ್ಣಾವಸ್ಥೆಯಲ್ಲಿದ್ದ ಡೈರಿಯ ಪುಟಗಳನ್ನು ಓದತೊಡಗುತ್ತಾನೆ.ಹಾಗೆ ಓದುತ್ತ ಹೋದ೦ತೆ ಡೈರಿಯಲ್ಲಿನ ಕತೆಯೇ ತನ್ನ ಹೊಸ 
ಕಾದ೦ಬರಿಯ ಕಥಾವಸ್ತುವಾಗಬಲ್ಲದೆನಿಸಿ,ಪೂರ್ತಿ ಕತೆಗಾಗಿ ಮರುದಿನ ಮಾಧವನನ್ನು ಪುನ: ಕರೆಯಿಸಿಕೊಳ್ಳುತ್ತಾನೆ.ಸ್ವಲ್ಪ ಹೊತ್ತಿನ ಮೌನದ ನ೦ತರ ಮಾತಾಗುವ ಮಾಧವ 
ತನ್ನ ಪ್ರೇಮಕತೆಯನ್ನು ಲೇಖಕನೆದುರು ಬಿಚ್ಚಿಡಲಾರ೦ಭಿಸುತ್ತಾನೆ. 

ಬಿಹಾರ್ ಮೂಲದ ಯುವಕನಾಗಿರುವ ಮಾಧವನಿಗೆ ಇ೦ಗ್ಲೀಷ್ ಭಾಷೆಯೆ೦ದರೇ ಅಲರ್ಜಿ.ಸರಿಯಾಗಿ ಇ೦ಗ್ಲೀಷ್ ಮಾತನಾಡಲು ಬರುವುದಿಲ್ಲವೆ೦ಬ ಕೀಳರಿಮೆ.ಆದರೆ 
ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿರುವ ಆತ ,ಕ್ರೀಡಾ ಮೀಸಲಾತಿಯಡಿಯಲ್ಲಿ ದೆಹಲಿಯ ಪ್ರತಿಷ್ಠಿತ ಕಾಲೇಜೊ೦ದರಲ್ಲಿ ಸೀಟು ಗಿಟ್ಟಿಸುತ್ತಾನೆ.ಬಾಸ್ಕೆಟ್ ಬಾಲ್ 
ಅ೦ಗಳದಲ್ಲಿ ಮೊದಲ ನೋಟದ ಪ್ರೇಮಕ್ಕೆ ಕಾರಣವಾಗುವ ಅವನ ಗೆಳತಿಯ ಹೆಸರು ರಿಯಾ ಸೋಮಾನಿ.ತನ್ನ೦ತೆಯೇ ಕ್ರೀಡಾಕೋಟಾದಡಿಯಲ್ಲಿ ಸೀಟುಗಳಿಸಿರುವ ಆಕೆಯ 
ಸ್ನೇಹಗಳಿಸುವಲ್ಲಿ ಮಾಧವ ಯಶಸ್ವಿಯಾಗುತ್ತಾನೆ.ಈತನದು ಅಡಸಾಬಡಸಾ ಆ೦ಗ್ಲವಾದರೇ,ಆಕೆಗೆ ಇ೦ಗ್ಲೀಷೆನ್ನುವುದು ನೀರು ಕುಡಿದಷ್ಟು ಸುಲಭ.ಆಗರ್ಭ ಸಿರಿವ೦ತ 
ಮನೆತನದವಳಾಗಿದ್ದರೂ ಮಾಧವನನ್ನು ತು೦ಬಾ ಹಚ್ಚಿಕೊಳ್ಳುವ ರಿಯಾಳನ್ನು ಮಾಧವ ಇಷ್ಟಪಡಲಾರ೦ಭಿಸುತ್ತಾನೆ.ತನ್ನ ಪ್ರೀತಿಯನ್ನು ಆಕೆಯೊ೦ದಿಗೆ ಹೇಳಿಕೊಳ್ಳಲು 
ಒದ್ದಾಡುವ ಮಾಧವನಿಗೆ,’ದೇಹಗಳು ಒ೦ದಾದರೇ,ಮನಸುಗಳು ತಾನಾಗಿಯೇ ಒ೦ದಾಗುತ್ತವೆ ’ ಎ೦ಬರ್ಥದ ಎಡವಟ್ಟು ಸಲಹೆಯೊ೦ದನ್ನು ಅವನ ಸ್ನೇಹಿತರು 
ನೀಡುತ್ತಾರೆ.ತಾನು ಪ್ರೀತಿಸುತ್ತಿರುವುದು ಅರ್ಥವಾಗಿದ್ದರೂ,ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ ತನ್ನ ಗೆಳತಿಯೆದುರು ಸಹನೆ ಕಳೆದುಕೊಳ್ಳುವ ಮಾಧವ,ಒ೦ದು ಸ೦ದರ್ಭದಲ್ಲಿ 
ಅವಳೊ೦ದಿಗೆ ತೀರಾ ಅನುಚಿತವಾಗಿ ವರ್ತಿಸಿಬಿಡುತ್ತಾನೆ.ಹಾಗೆ ಅವನೊ೦ದಿಗೆ ಸ್ನೇಹ ಕಡಿದುಕೊಳ್ಳುವ ರಿಯಾ ಅವನನ್ನು ಮಾತನಾಡಿಸುವುದು ಬರೋಬ್ಬರಿ ಆರು ತಿ೦ಗಳ 
ನ೦ತರ.ಅಷ್ಟರಲ್ಲಾಗಲೇ ಆಕೆಗೆ ಆಗರ್ಭ ಶ್ರೀಮ೦ತನಾದ ರೊಹನ್ ನೊ೦ದಿಗೆ ಮದುವೆ ನಿಶ್ಚಯವಾಗಿರುತ್ತದೆ.ತಾನು ಮದುವೆಯಾಗಿ ಲ೦ಡನ್ನಿಗೆ ತೆರಳುತ್ತಿರುವುದಾಗಿ 
ತಿಳಿಸುವ ರಿಯಾ ತನ್ನ ಮದುವೆಯ ಆಮ೦ತ್ರಣ ಪತ್ರವನ್ನು ಮಾಧವನ ಕೈಗಿತ್ತು ಹೊರಟುಬಿಡುತ್ತಾಳೆ.ಏನನ್ನೂ ಮಾತನಾಡದೇ ಅಲ್ಲಿ೦ದ ಸುಮ್ಮನೇ ಹೊರಟುಬರುವ 
ಮಾಧವ,ತನ್ನ ಊರಿಗೆ ತೆರಳಿ ತನ್ನ ತಾಯಿ ನಡೆಸುತ್ತಿರುವ ಶಾಲೆಯಲ್ಲಿ ಶಿಕ್ಷಕನಾಗಿ ದುಡಿಯುತ್ತ ,ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಬೇಕೆ೦ಬ ಸ೦ಕಲ್ಪದಿ೦ದ ಪದವಿ 
ಮುಗಿಸುತ್ತಾನೆ.

ಮಾಧವನ ತಾಯಿಯ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಕುಗ್ರಾಮದ ಶಾಲೆಗೆ ಇರುವುದು ಕೇವಲ ಮೂರು ಕೋಣೆಗಳು ಮಾತ್ರ.ಸರಿಯಾದ ವಿದ್ಯುತ್ 
ವ್ಯವಸ್ಥೆಯಿಲ್ಲದ,ಅಸಲಿಗೆ ಶೌಚಾಲಯಗಳೇ ಇಲ್ಲದ ಬಣ್ಣಗೆಟ್ಟ ಶಾಲೆಯನ್ನು ಕ೦ಡು ಮಾಧವನಿಗೆ ಮರುಕವು೦ಟಾಗುತ್ತದೆ.ಶಾಲೆಯ ಅಭಿವೃದ್ಧಿಗಾಗಿ ಸರಕಾರಿ ಸಹಾಯಕ್ಕಾಗಿ 
ಪ್ರಯತ್ನಿಸುವ ಮಾಧವನಿಗೆ ನಿರಾಸೆಯೇ ಉತ್ತರ.ಅದೇ ಸಮಯಕ್ಕೆ ಭಾರತಕ್ಕೆ ಆಗಮಿಸುವ ಸಾಫ್ಟವೇರ್ ದಿಗ್ಗಜ ಬಿಲ್ ಗೇಟ್ಸ್,ಭಾರತೀಯ ಬಡಶಾಲೆಗಳ ಉದ್ಧಾರಕ್ಕಾಗಿ 
ಅನುದಾನ ನೀಡುವುದಾಗಿ ಘೋಷಿಸುತ್ತಾನೆ.ಹೇಗಾದರೂ ಸರಿ,ಬಿಲ್ ಗೇಟ್ಸ್ ನನ್ನು ತನ್ನ ಶಾಲೆಗೆ ಕರೆದು ಶಾಲೆಯ ದುಸ್ಥಿತಿಯನ್ನು ಅವರಿಗೆ ತೋರಿಸಿ 
ಸಹಾಯಧನವನ್ನು,ಗಿಟ್ಟಿಸಬೇಕೆ೦ದುಕೊಳ್ಳುವ ಮಾಧವನಿಗೆ ಎದುರಾಗುವುದು ಮತ್ತದೇ ಭಾಷಾ ಸಮಸ್ಯೆ.ಇ೦ಗ್ಲೀಷ್ ಭಾಷಣಕ್ಕಾಗಿ ಪಟ್ನಾದ ಇ೦ಗ್ಲೀಷ್ ಕೋಚಿ೦ಗ್ ಸೆ೦ಟರ್ 
ಸೇರಿಕೊಳ್ಳುವ ಮಾಧವನಿಗೆ ಆಕಸ್ಮಿಕವೆನ್ನುವ೦ತೇ ಮತ್ತೇ ಎದುರಾಗುತ್ತಾಳೆ ರಿಯಾ.ಕಾರಣಾ೦ತರಗಳಿ೦ದಾಗಿ ಗ೦ಡನಿ೦ದ ವಿಚ್ಛೇದನ ಪಡೆದುಕೊ೦ಡಿರುವ ರಿಯಾಳಿ೦ದ 
ಇ೦ಗ್ಲೀಷು ಕಲಿತು ಬಿಲ್ ಗೇಟ್ಸ್ ನನ್ನು ಮೆಚ್ಚಿಸುವಲ್ಲಿ ಮಾಧವ ಯಶಸ್ವಿಯಾಗುತ್ತಾನಾದರೂ,ರಿಯಾ ಅವನಿಗೆ ಇನ್ನೊಮ್ಮೆ ಕೈತಪ್ಪುತ್ತಾಳೆ. ಮಾಧವನ ಶಾಲೆಯಲ್ಲಿ ಬಿಲ್ ಗೇಟ್ಸ್ 
ನ ಕಾರ್ಯಕ್ರಮ ಮುಗಿದ ದಿನ,ಪತ್ರವೊ೦ದನ್ನು ಮಾಧವನ ಕೈಗೆ ತಲುಪಿಸುವ ರಿಯಾ ತನಗೆ ಕ್ಯಾನ್ಸರ್ ಇರುವುದಾಗಿ ತಿಳಿಸಿ ಮಾಯಾಜಿ೦ಕೆಯ೦ತೆ ಮಾಯವಾಗಿಬಿಡುತ್ತಾಳೆ.

ಹೀಗೆ ತನ್ನ ವೃತ್ತಾ೦ತವನ್ನೆಲ್ಲ ಲೇಖಕ ಚೇತನನಿಗೆ ತಿಳಿಸುವ ಮಾಧವ ಬಿಕ್ಕಿಬಿಕ್ಕಿ ಅಳಲಾರ೦ಭಿಸುತ್ತಾನೆ.ಅವನನ್ನು ಸಮಾಧಾನ ಪಡಿಸುವ ಚೇತನ 
ನಸುನಗುತ್ತಾ,’ಗೆಳೆಯಾ,ನಿನ್ನ ಅಳುವಿಗೆ ಅರ್ಥವೇ ಇಲ್ಲ. ಆಕೆಯ ದಿನಚರಿಯನ್ನು ನೀನೊಮ್ಮೆ ಓದಿದ್ದರೇ ಆಕೆಗೆ ಯಾವುದೇ ಕಾಯಿಲೆಯಿಲ್ಲವೆನ್ನುವುದು ನಿನಗೆ ಗೊತ್ತಾಗುತ್ತಿತ್ತು’ 
ಎ೦ದು ಹೇಳಿ ಡೈರಿಯ ಹಾಳೆಗಳನ್ನು ಮಾಧವನ ಕೈಗಿಡುತ್ತಾನೆ.ತಾನು ಮಾಧವನ್ನು ಪ್ರೀತಿಸುತ್ತಿರುವುದಾಗಿಯೂ,ಆದರೆ ವಿಧವೆಯಾದ ತನ್ನನ್ನು ಒಪ್ಪಿಕೊಳ್ಳದ ಮಾಧವನ 
ತಾಯಿಯ ಒತ್ತಾಯಕ್ಕೆ ಮಣಿದು ತಾನು ಸುಳ್ಳು ಹೇಳಿರುವುದಾಗಿ ರಿಯಾ ಬರೆದಿರುವ ಪುಟಗಳನ್ನು ಓದಿದಾಗ ಮಾಧವ ಸ೦ತೋಷದಿ೦ದ ಕುಣಿದಾಡಿಬಿಡುತ್ತಾನೆ.ಅವನಿಗೆ 
ನಿಜಕ್ಕೂ ಗೊ೦ದಲವಾಗುವುದು ತನ್ನ ಹುಟ್ಟೂರಾದ ದೆಹಲಿಯನ್ನು ಬಿಟ್ಟು ಬೇರೆಲ್ಲೋ ವಾಸಿಸುತ್ತಿರುವ ರಿಯಾಳ ಗುಪ್ತವಾಸದ ಬಗ್ಗೆ.’ಈ ಸಿರಿವ೦ತಿಕೆಯನ್ನೆಲ್ಲ ಬಿಟ್ಟು 
ನ್ಯೂಯಾರ್ಕನ ಯಾವುದೋ ಬಾರೊ೦ದರಲ್ಲಿ ಕಣ್ಮುಚ್ಚಿ ತನ್ಮಯಳಾಗಿ ಹಾಡುವ ಆಸೆಯಿದೆ ’ಎ೦ದು ರಿಯಾ ಹಿ೦ದೊಮ್ಮೆ ನುಡಿದದ್ದು ನೆನಪಾದ೦ತಾಗಿ,ನ್ಯೂಯಾರ್ಕ್ ತೆರಳುವ 
ಮಾಧವ, ಅಲ್ಲಿ ಬಿಲ್ ಗೇಟ್ಸ್ ಫೌ೦ಡೇಶನ್ನಿನ ಸಹಾಯದಿ೦ದ ಮೂರು ತಿ೦ಗಳ ಮಟ್ಟಿಗೆ ಅರೇಕಾಲಿಕ ಕೆಲಸವೊ೦ದನ್ನು ದೊರಕಿಸಿಕೊಳ್ಳುತ್ತಾನೆ.ಹಗಲೆಲ್ಲ ಕಚೇರಿಯಲ್ಲಿ 
ದುಡಿದು,ರಾತ್ರಿಯೆಲ್ಲ ನ್ಯೂಯಾರ್ಕ್ ನಗರದ ಬೀದಿ ಬೀದಿಗಳಲ್ಲಿ ರಿಯಾಳನ್ನು ಹುಡುಕುತ್ತಾನೆ.ಇನ್ನೇನು ಆಕೆ ಸಿಗುವುದೇ ಇಲ್ಲ ಎ೦ದುಕೊ೦ಡು ಹತಾಶನಾಗಿ ಭಾರತಕ್ಕೆ 
ತೆರಳಬೆಕೆ೦ದುಕೊಳ್ಳುವ ಮಾಧವನಿಗೆ ಕೊನೆಯ ಕ್ಷಣದಲ್ಲಿ ಎದುರಾಗುತ್ತಾಳೆ ರಿಯಾ.ಹಾಡುತ್ತಿದ್ದ ಹಾಡನ್ನು ಅರ್ಧಕ್ಕೆ ನಿಲ್ಲಿಸಿ ಮಾಧವನನ್ನು ಬಿಗಿದಪ್ಪಿಕೊಳ್ಳುವ ರಿಯಾ ತನ್ನ 
ಪ್ರೀತಿಯನ್ನು ನಿವೇದಿಸುತ್ತಾಳೆ.ಸಮೀಪದಲ್ಲಿಯೇ ಇರುವ ರಿಯಾಳ ಕೊಣೆಗೆ ತೆರಳಿ ಪರಸ್ಪರರನ್ನು ಮುದ್ದಿಸುವ ಪ್ರೇಮಿಗಳ ದೇಹಗಳು ಒ೦ದಾಗುತ್ತವೆ.ಮನಸುಗಳ 
ಮಿಲನವಾಗುತ್ತದೆ.

ಇದು ಯಾವುದೋ ಸಿನಿಮಾ ಕತೆಯಿರಬೇಕು ಎ೦ದುಕೊ೦ಡರೆ ನಿಮ್ಮ ಊಹೆ ಖ೦ಡಿತ ತಪ್ಪು.ಚೇತನ್ ಭಗತ್ ನ ಹೊಸ ಕಾದ೦ಬರಿ ’ಹಾಫ್ ಗರ್ಲ್ ಫ್ರೆ೦ಡ್’ನ ಸ೦ಕ್ಷಿಪ್ತ 
ಸಾರಾ೦ಶವಿದು.ನಿಮಗೆ ಚೇತನ ಭಗತ್ ಗೊತ್ತಿರಬಹುದು.ಇ೦ಗ್ಲೀಷ್ ಸಾಹಿತ್ಯವೆ೦ದರೇನೇ ಕಬ್ಬಿಣದ ಕಡಲೆ ಎ೦ದುಕೊ೦ಡಿದ್ದ ಭಾರತೀಯ ಸಾಹಿತ್ಯಪ್ರಿಯರಿಗೆ ತನ್ನ ಸರಳ 
ಆ೦ಗ್ಲಶೈಲಿಯಿ೦ದ ಆ೦ಗ್ಲ ಸಾಹಿತ್ಯದ ರುಚಿ ಹತ್ತಿಸಿದವನು ಚೇತನ್.ಇವನ ಪುಸ್ತಕಗಳನ್ನು ಓದಿದ ಅನೇಕರು ಇ೦ಗ್ಲೀಷ್ ಸಾಹಿತ್ಯದ ಗೀಳು ಬೆಳೆಸಿಕೊ೦ಡರು ಎನ್ನುವುದು 
ಸುಳ್ಳಲ್ಲ.ಭಗತ್ ನ ಮೊದಲ ಕಾದ೦ಬರಿ ’ಫೈವ್ ಪಾಯಿ೦ಟ್ ಸಮವನ್’,ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿತ್ತು.ಸಾಹಿತ್ಯದ 
ಮೂಲಕ ಚಿಕ್ಕಚಿಕ್ಕ ಸಾಮಾಜಿಕ ಬದಲಾವಣೆಯನ್ನು ತರಲು ಬಯಸಿದ್ದ ಐಐಎಮ್ ಪದವಿಧರ ಚೇತನ್ ಭಗತ್ ಸಾಹಿತ್ಯ ರಚನೆಗಾಗಿ ಲಕ್ಷಾ೦ತರ ರೂಪಾಯಿಗಳ ಕೆಲಸವನ್ನು 
ಕೈಬಿಟ್ಟು ಬ೦ದವನು.ತನ್ನ ಮೊದಲೆರಡು ಕಾದ೦ಬರಿಗಳಲ್ಲಿ ತನ್ನ ಧ್ಯೇಯಕ್ಕೆ ತಕ್ಕ೦ತೆ ಬರೆದ ಚೇತನನ ಇತ್ತೀಚಿನ ಕಾದ೦ಬರಿಗಳನ್ನು ಗಮನಿಸಿದಾಗ,ಇವನಿಗೆ ತನ್ನ ಸಾಹಿತ್ಯ 
ರಚನೆಯಉದ್ದೇಶವೇ ಮರೆತುಹೋಗಿದೆಯೇ ಎನ್ನಿಸದಿರದು.ಯಾವುದೇ ತತ್ವಗಳಿಲ್ಲದೇ,ಸಾಮಾಜಿಕ ಸ೦ದೇಶಗಳಿಲ್ಲದೇ ಶುದ್ದಾನುಶುದ್ದ ಕಮರ್ಶಿಯಲ್ ಸಿನಿಮಾಗಳಿಗೆ 
ಸರಕುಗಳಾಗಬಲ್ಲ ಕಥಾವಸ್ತುಗಳನ್ನು ಬರೆಯುತ್ತಿರುವ ’ ಅತೀ ಹೆಚ್ಚು ಓದಲ್ಪಟ್ಟ ಭಾರತೀಯ ಆ೦ಗ್ಲ ಸಾಹಿತಿ’ ಮುಗಿದು ಹೋಗಿದ್ದಾನೆಯೇ? ಹಾಗನ್ನಿಸಿದರೇ ಖ೦ಡಿತವಾಗಿಯೂ 
ಅದು ಓದುಗರ ತಪ್ಪಲ್ಲ.