ಸೋಲು ಬದುಕಿನ ಅಂತ್ಯ ಅಲ್ಲ

ಸೋಲು ಬದುಕಿನ ಅಂತ್ಯ ಅಲ್ಲ

ಎಸ್ಸೆಸ್ಸೆಲ್ಸಿ ಫೇಲ್ ಆದ ಬೇಸರದಿಂದ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಯ ಕೆಟ್ಟ ನಿರ್ಧಾರಕ್ಕೆ ಮೊರೆ ಹೋದರು. ಪರೀಕ್ಷೆಯ ಭಯ, ಪೋಷಕರ ಭೀತಿ, ಶಿಕ್ಷಕರ ಒತ್ತಡಕ್ಕೆ ಬೆದರಿ ನಿತ್ಯ ಸಾವಿಗೆ ಶರಣಾಗುತ್ತಿರುವ ಯುವಕ/ಯುವತಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರು ನಗರದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯುವ ಅವಕಾಶ ಕೈತಪ್ಪಿತೆಂದು ಆತಂಕಗೊಂಡು ಕಾಲೇಜಿನ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಯು ಈಗೀಗ ಯುವಜನರ ನಡುವಿನ ಸಮೂಹ ಸನ್ನಿಯಾಗಿ ಹರಡಿಕೊಂಡಿದೆ. 

ಒತ್ತಡ, ಆತಂಕ ಅನ್ನುವ ಅವಳಿ ಅಪಾಯಗಳು ಹದ್ದುಮೀರಿ ಸಾಗಿದ್ದು, ಎಳೆಯ ಜೀವಗಳನ್ನು ಹಿಂಡಿಹಾಕುತ್ತಿರುವುದು ಸ್ಪಷ್ಟವಾಗಿದೆ. ಪ್ರತಿಷ್ಟಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಗಿಟ್ಟಿಸುವ ಕನಸಿನೊಂದಿಗೆ ರಾಜಸ್ಥಾನದ ಕೋಟಾಕ್ಕೆ ಹೋಗುವ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ಓದಿನ ಒತ್ತಡ ತಾಳದೇ ಚಡಪಡಿಸುತ್ತಿರುವ ಕಥೆಗಳು ನೂರಾರು. ಒಂದು ವರ್ಷದಲ್ಲಿ ೨೮ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ವರದಿಗಳು ಬಂದಿವೆ. ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ಕಡೆಯಲ್ಲೆಲ್ಲಾ ಇಂತಹ ಆತ್ಮಹತ್ಯೆ ಪ್ರಕರಣಗಳು ಸಾಮಾನ್ಯ. ಇದನ್ನು ತಡೆಯುವ ಉದ್ದೇಶದಿಂದ ಸರಕಾರಗಳು ತಮ್ಮ ಸೀಮಿತ ವ್ಯಾಪ್ತಿಯೊಳಗೆ ಪ್ರಯತ್ನ ನಡೆಸಿರುವುದು ನಿಜ. ‘ಟೆಲಿಮನಸ್' ಎಂಬ ವಿಶೇಷ ಸಹಾಯವಾಣಿಯನ್ನು ಇದಕ್ಕಾಗಿಯೇ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈ ಸಹಾಯವಾಣಿಗೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಸುಮಾರು ೧೦ ಸಾವಿರ ಕರೆಗಳು ಬಂದಿವೆ ಎನ್ನುವ ಮಾಹಿತಿ ಇದೆ. ಕರೆ ಮಾಡಿದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ.

ಇದು ಸ್ಪರ್ಧಾ ಜಗತ್ತು. ಗೆಲುವೇ ಗುರಿ. ‘ಗೆದ್ದವ ಗಣ್ಯ, ಸೋತವ ನಗಣ್ಯ' ಎನ್ನುವುದು ಮೌಢ್ಯ. ಸ್ಪರ್ಧೆಯಲ್ಲಿ ಒಬ್ಬ ಗೆದ್ದರೆ ಇನ್ನೊಬ್ಬ ಸೋಲಲೇಬೇಕು ಎನ್ನುವುದು ಸರಳ ನಿಯಮ. ಇದನ್ನು ಗ್ರಹಿಸದೇ ಇರುವವರು ಮಾತ್ರ ಇಂಥ ಕೆಟ್ಟ ತೀರ್ಮಾನಕ್ಕೆ ಬರಲು ಸಾಧ್ಯ. ಸೋಲು, ಗೆಲುವು ಎರಡೂ ಶಾಶ್ವತ ಸ್ಥಿತಿ ಅಲ್ಲ. ತಾಳ್ಮೆ ಮತ್ತು ಸತತ ಪ್ರಯತ್ನವೇ ನಿಜವಾದ ಗೆಲುವು.

ಮಕ್ಕಳ ವಿಷಯದಲ್ಲಿ ಆಕಾಶಕ್ಕೆ ಏಣಿ ಹಾಕುವ ಪೋಷಕರು ವಾಸ್ತವಕ್ಕೆ ಇಳಿದು ಯೋಚಿಸಬೇಕು. ಗೆಲುವಿನ ಚಾಟಿ ಹಿಡಿದು ನಿಲ್ಲುವ ಶಿಕ್ಷಕರು, ಬದುಕಿನ ಅಗಾಧ ಸಾಧ್ಯತೆಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಇದೆಲ್ಲವನ್ನು ಮೀರಿಯೂ ಮಾನಸಿಕ ಆಘಾತ, ಏರುಪೇರುಗಳಿಗೆ ಒಳಗಾಗುವ ಜನರಿಗೆ ಸೂಕ್ತ ಕೌನ್ಸಿಲಿಂಗ್ ನೆರವು ಲಭಿಸಬೇಕು. ಈ ದಿಸೆಯಲ್ಲಿ ಸರಕಾರ, ಸಂಘ-ಸಂಸ್ಥೆಗಳ ಜತೆಗೆ ಪ್ರಜ್ಞಾವಂತ ಸಮಾಜವೂ ಎಚ್ಚರದ ಹೆಜ್ಜೆ ಇಡಬೇಕು.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೬-೦೫-೨೦೨೪  

ಚಿತ್ರ ಕೃಪೆ: ಅಂತರ್ಜಾಲ ತಾಣ