ಸ್ಟೇಟಸ್ ಕತೆಗಳು (ಭಾಗ ೯೫೧)- ಮಾನವ

ಸ್ಟೇಟಸ್ ಕತೆಗಳು (ಭಾಗ ೯೫೧)- ಮಾನವ

ಪುಟ್ಟ ಬೀದಿಯ ತಿರುವಿನ ಮೊದಲ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಹೊಸತೊಂದು ತರಗತಿ ಆರಂಭವಾಗಿದೆ. ಅಲ್ಲಿ ದೊಡ್ಡದೊಂದು ಜಾಹೀರಾತಿನ ಫಲಕವನ್ನ ನೇತು ಹಾಕಿದ್ದಾರೆ. ಬನ್ನಿ ಇಲ್ಲಿ ಮಾನವರಾಗುವುದನ್ನು ಕಲಿಸುತ್ತೇವೆ ಅಂತ. ನಾನು ಮತ್ತೆ ಮತ್ತೆ ಯೋಚಿಸುವುದು ಅದನ್ನೇ ಇಲ್ಲಿ ಮಾನವರಾಗುವುದ್ದಕ್ಕೆ ಏನಿದೆ ಅಂತಾ?. ನಾವೆಲ್ಲರೂ ಮಾನವರಾಗಿಯೇ ಹುಟ್ಟಿದ್ದೇವೆ ಅಲ್ವಾ? ಪ್ರಾಣಿಗಳ ಹಾಗೆ ಏನು ಇಲ್ಲ. ಏನಿದು ಮಾನವರಾಗುವ ಹೊಸ ತರಗತಿ ಈ ಯೋಚನೆಯನ್ನು ಇಟ್ಟುಕೊಂಡೆ ತರಗತಿಗೆ ಸೇರಿಬಿಟ್ಟೆ. ಅವರು ಹೇಳಿದ ಶುಲ್ಕವನ್ನು ಪಾವತಿಸಿ  ಚಪ್ಪಲಿಯನ್ನ ಬಿಚ್ಚಿಡುವಲ್ಲಿಂದ ದಿನದ ತರಗತಿಗಳು ಆರಂಭವಾದವು. ತಪ್ಪು ಮಾಡಿದ ತಕ್ಷಣ ಅಲ್ಲಿ ಶಿಕ್ಷೆ, ಯಾವುದಕ್ಕೂ ಅನಗತ್ಯ ಕಾರಣವನ್ನು ನೀಡುವ ಹಾಗಿಲ್ಲ, ಪ್ರತಿಯೊಂದಕ್ಕೂ ಅವಕಾಶವನ್ನ ಪಡೆದೆ, ಸಹಾಯಕ್ಕೆ ಅಂತ ಯಾರನ್ನು ಆಶ್ರಯಿಸುವ ಹಾಗಿರಲಿಲ್ಲ, ಸುತ್ತಮುತ್ತ ಆಗುವಂತಹ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಬೇಕಿತ್ತು, ಸಮಸ್ಯೆ ನನ್ನದಲ್ಲ ಅಂದುಕೊಂಡು ಹಿಂಜರಿದು ನಿಲ್ಲುವ ಹಾಗೆ ಇರಲಿಲ್ಲ, ಮಾತು ಕಥೆ ಆಟ ಪಾಠಗಳ ಮೂಲಕ ಹೇಳಿಕೊಡಲಾಗುತ್ತದೆ. ಇಂತಿಷ್ಟು ವರ್ಷಗಳ ಅವಧಿ ಮುಗಿದ ನಂತರ ಅವರಿಗೆ ಪ್ರಾಯೋಗಿಕವಾಗಿ ಸಮಾಜದ ನಡುವೆ ಬೆರೆತು ಒಂದಷ್ಟು ದಿನ ಬದುಕಿ ಅಲ್ಲಿಯ ಅನುಭವಗಳನ್ನು ಪಡೆದುಕೊಂಡು ಮರಳಿ ಬರಬೇಕಿತ್ತು ಅಲ್ಲಿ ಬಂದ ಅನುಭವಗಳ ಆಧಾರದ ಮೇಲೆ ಅವರ ಪಕ್ವತೆಯನ್ನು ಗಮನಿಸಿ ಅವರನ್ನು ಮರಳಿ, ಸಮಾಜಕ್ಕೆ ಕಳುಹಿಸುವ ವ್ಯವಸ್ಥೆ ಆಗ್ತಾ ಇತ್ತು. ಅವರಿಂದ ಸಾಧ್ಯವಾಗದೆ ಹೋದಾಗ ಮತ್ತೆ ಮೊದಲಿಂದಲೇ ತರಗತಿಗಳು ಆರಂಭವಾದವು.

ಮೊದಮೊದಲು ತರಗತಿಯಲ್ಲಿ ಯಾರೂ ಇರಲೇ ಇಲ್ಲ ಆದರೆ ಕಾಲಕ್ರಮೇಣ ತರಗತಿ ಸಣ್ಣ ಕೊಠಡಿಯಿಂದ ಆರಂಭವಾದದ್ದು ಅಂತಸ್ತುಗಳ ಬಹುಮಹಡಿ ಕಟ್ಟಡಗಳನ್ನ ಆಶ್ರಯಿಸಿತು. ಯಾಕೆಂದರೆ ಯಾರು ಕೂಡ ಮಾನವರಾಗುವುದನ್ನ ಹೇಳಿ ಕೊಡ್ಲೇ ಇಲ್ಲ, ಈ ಸಮಾಜದಲ್ಲಿ ಆಗಬೇಕಾಗಿರೋದು ಮಾನವರಾಗುವ ಕೆಲಸ ಒಂದಷ್ಟು ಮೌಲ್ಯಗಳು ವಿಚಾರಗಳು ಚಿಂತನೆಗಳೆಲ್ಲವನ್ನ ಅಳವಡಿಸಿಕೊಂಡು ಸರಿ ತಪ್ಪುಗಳನ್ನು ತೂಗಿ ಜನರಿಗೆ ತಿಳಿಸುವವರು ಬೇಕಾಗಿದ್ದಾರೆ. ಮೌಲ್ಯಗಳ ಜೊತೆ ಬದುಕುವವರು ಬೇಕಾಗಿದ್ದಾರೆ. ಅದಕ್ಕೆ ನಾವು ದೊಡ್ಡ ಫಲಕವನ್ನ ಹಾಕಿದ್ದು ಬನ್ನಿ ಇಲ್ಲಿ ಮಾನವರಾಗುವುದನ್ನ ಹೇಳಿಕೊಡುತ್ತೇವೆ ನಿಮ್ಮಲ್ಲಿ ಯಾರಿಗಾದರೂ ಅಗತ್ಯವಿದ್ದರೆ ತಿಳಿಸಿ ನಾನು ಕೂಡ ಆ ತರಗತಿಗೆ ಸೇರಬೇಕು ಅಂದುಕೊಂಡಿದ್ದೇನೆ ಬನ್ನಿ ಮಾನವರಾಗುವ ತರಗತಿಗೆ ಸೇರ್ಪಡೆಗೊಳ್ಳೋಣ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ