ಒಂದೆಲೆ ಮೇಲಿನ ಕಾಡು

ಒಂದೆಲೆ ಮೇಲಿನ ಕಾಡು

ಪುಸ್ತಕದ ಲೇಖಕ/ಕವಿಯ ಹೆಸರು
ಸ.ವೆಂ. ಪೂರ್ಣಿಮಾ
ಪ್ರಕಾಶಕರು
ಹಾಡ್ಲಹಳ್ಳಿ ಪಬ್ಲಿಕೇಷನ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

ಒಂದೆಲೆ ಮೇಲಿನ ಕಾಡು -ಊರು ಮನೆ ಮಾತು ಎನ್ನುವ ಕೃತಿಯನ್ನು ಸ ವೆಂ ಪೂರ್ಣಿಮಾ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಕೇಶವ ಮಳಗಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

“ʻಒಂದೆಲೆ ಕಾಡಿನ ಮೇಲೆʼ ಪುಸ್ತಕ ಅಪರೂಪದ ಗುಣವಿಶೇಷಣಗಳನ್ನು ಪಡೆದ ಬರಹಗಳ ಸಂಚಯ. ನೆನಪುಗಳು ಕಿಕ್ಕಿರಿದ ಈ ಬರಹಗಳಲ್ಲಿ ಬಾಲ್ಯ, ತಾರುಣ್ಯ, ಮಧ್ಯ ವಯಸ್ಸಿನ ಮೆದು-ಮೆಲು ಮಾತು, ಅನುಭವದಿಂದ ಪಳಗಿ ಪಕ್ವವಾದ ಮೃದು-ಸಹನೀಯ ನುಡಿಗಳು ಮಡುಗಟ್ಟಿವೆ. ಈ ಕೃತಿಯಲ್ಲಿ ಆತ್ಮಚರಿತ್ರೆ, ಕಥನ, ಕಾವ್ಯ, ಮೌಖಿಕ ನುಡಿಗಾರಿಕೆ ವ್ಯಕ್ತಿಚಿತ್ರ, ಹೀಗೆ ಎಲ್ಲ ಅಂಶಗಳೂ ಗಟ್ಟಿಮೇಳದಂತೆ ಮೇಳೈಸಿ ತಮ್ಮದೇ ಗದ್ಯದ ಚೆಲುವಿನಿಂದ ಕಂಗೊಳಿಸುತ್ತಿವೆ.

ಹೊರಲೋಕವು ನಗಣ್ಯವೆಂದು ಕಾಣಬಹುದಾದ ಬದುಕಿನ ಅತಿ ಸಣ್ಣಪುಟ್ಟ ಸಂಗತಿ, ಆಗುಹೋಗು, ಘಟನೆಗಳಿಗೆ ಲೇಖಕಿಯ ಸೂಕ್ಷ್ಮತೆ ಹಾಗೂ ಸಂವೇದನಾಶೀಲತೆಗಳು ಹೊಸ ಹೊಳಪನ್ನು, ನಮ್ಯತೆಯನ್ನು ಒದಗಿಸಿ ಅಂತಃಕರಣದಿಂದ ತುಂಬಿ ತುಳುಕುವಂತೆ ಮಾಡಿವೆ. ಚಿತ್ರಕ ಶಕ್ತಿ ಈ ಬರಹಗಳ ಇನ್ನೊಂದು ಆಕರ್ಷಕ ಗುಣವಾಗಿದೆ. ಬಾಳಾಟದ ಸುಖದುಃಖ, ನಲಿವು-ನೋವು, ಗೆಳೆತನ, ಬಾಂಧವ್ಯದ ಸವಿ, ನಿರಪೇಕ್ಷಿತ ಪ್ರೀತಿಯ ಪರಿಣಾಮಗಳನ್ನು ಕಟ್ಟಿಕೊಡುವಾಗ ಈ ಚಿತ್ರಕತೆ ಮತ್ತು ರೂಪಕತೆಗಳ ನಿರೂಪಣೆಯು ಓದುಗರಲ್ಲಿ ಒಂದು ಸಾರ್ಥಕ ಭಾವವನ್ನು ಮೂಡಿಸಬಲ್ಲವು.

ಮುಗ್ಧತೆ, ಸರಳತೆ ಮತ್ತು ಬದುಕನ್ನು ನೋಡುವಾಗ ಮೈಗೂಡಿಸಿಕೊಂಡ ಹೆಣ್ತತನ ಭಾವಗಳು ಕೂಡ ಪೂರ್ಣಿಮಾ ಅವರ ಬರಹಗಳನ್ನು ಗಟ್ಟಿಯಾಗಿಸಲು ಕಾರಣವಾಗಿವೆ. ಅತ್ಯಂತ ಸಹಜವೆನ್ನುವಂತೆ ಅವರಿಗೆ ಒಲಿದಿರುವ ಭಾಷಾ ವಿಲಾಸವು ಗದ್ಯದ ಗುಣಾತ್ಮಕತೆಯನ್ನು ಮೇಲುಸ್ತರಕ್ಕೇರಿಸಿವೆ. ಸಂಕೀರ್ಣತೆಗಳಿಲ್ಲದ, ಆದರೆ, ಚತುರತೆ, ಕುತೂಹಲ ಉಳಿಸಿಕೊಳ್ಳುವ ಜಾಣ್ಮೆ ಹಾಗೂ ಎಲ್ಲಿ, ಯಾವಾಗ ಏನನ್ನು ಹೇಳಿ ಕೇಳುಗ-ಓದುಗರನ್ನು ಚಕಿತಗೊಳಿಸಬೇಕು ಎಂಬ ಎಚ್ಚರದ ಪಾರಂಪರಿಕ ಕಥನಗಾರಿಕೆ ಪೂರ್ಣಿಮಾ ಅವರಿಗೆ ಸಹಜವಾಗಿ ಒಲಿದಿದೆ.

ರೂಪಕದಂತಿರುವ ಪುಸ್ತಕದ ಶೀರ್ಷಿಕೆಯು ಒಳಗಿರಬಹುದಾದ ಬರಹಗಳ ಸೂಚನೆಯನ್ನು ಕೊಡಬಲ್ಲದು. ಹೆಣ್ತನದ ಕರುಳು ಮತ್ತು ಕಣ್ಣುಗಳ ಅಂತಃಕರಣದಿಂದ ಮಲೆನಾಡಿನ ಬದುಕಿನ ಆಗುಹೋಗುಗಳು ಇಲ್ಲಿ ಎದುರುಗೊಳ್ಳಬಹುದು ಎಂದು ಸೂಕ್ಷ್ಮ ಓದುಗರು ಅರಿಯಬಲ್ಲರು. ಜತೆಗೆ, ಒಂದು ಹೆಣ್ಣಿಗೆ, ಒಂದು ಕಾಲಘಟ್ಟದಲ್ಲಿ ಆದ ಖಾಸಗಿ ಅನುಭವಗಳು ನಮ್ಮ ಅನುಭವಗಳಾಗಿ ಬದಲಾಗಬಲ್ಲ ಸಾರ್ವತ್ರಿಕತೆಯ ಶಕ್ತಿ-ಸಾಮರ್ಥ್ಯ ಪಡೆದಿವೆ ಎಂದು ಅರಿಯಬಲ್ಲರು. ಮಲೆನಾಡಿನ ಪರಿಚಯವಿಲ್ಲದ ಬಯಲುಸೀಮೆಯ ಓದುಗರು ಇಲ್ಲಿನ ಮಳೆ, ಏಲಕ್ಕಿಯ ವಾಸನೆ, ಬತ್ತದ ಘಮಲು, ಚಳಿ, ಬದುಕು, ಮಣ್ಣಿನ ಗೊಂಬೆಗಳಂತಿರುವ ಜನರ ಅನುಭವಗಳನ್ನು ಸ್ವತಃ ಅನುಭವಿಸುತ್ತ, ಬೆಚ್ಚಗಿನ ಭಾವದಲ್ಲಿ ʻನಾವು ಎಲ್ಲಿಯೇ ಇದ್ದರೂ ಮನುಷ್ಯರ ಪ್ರೇಮ-ಕಾಮ, ರಾಗದ್ವೇಷ, ಪಡಿಪಾಟಲು, ನಲಿವು-ನೋವುಗಳನ್ನು ಒಳಗೊಂಡ ಒಲವಿನ ಸಂಗತಿಗಳು ಮಾತ್ರ ಒಂದೇ ಆಗಿವೆʼ, ಎಂಬ ಜೀವನದ ಸತ್ಯವನ್ನು ಅರಿಯುವರು. ಬರಹದಲ್ಲಿ ಇದನ್ನು ಸಾಧಿಸುವುದು ಸುಲಭವೇನಲ್ಲ. ಪೂರ್ಣಿಮಾ ಅವರು ಅತ್ಯಂತ ಸಹಜವಾಗಿ ಇದನ್ನು ಸಾಧಿಸುವ ಮೂಲಕ ತಾವೊಬ್ಬ ಎಲೆಮರೆಯಲಿರುವ ಸಮರ್ಥ ಗದ್ಯಲೇಖಕಿ ಎಂದು ನಿರೂಪಿಸಿದ್ದಾರೆ.

ಇಲ್ಲಿನ ಪ್ರತಿ ಬರಹವೂ ಲೇಖಕಿಯ ಅನುಭವದೊಂದಿಗೆ ನಂಟು ಹೊಂದಿರುವುದರಿಂದ ಭಾವುಕತೆಗೆ, ಖಾಸಗಿತನಕ್ಕೆ ಹೆಚ್ಚು ಪ್ರಾಧಾನ್ಯತೆ. ಆದರೆ, ಇವು ಕೇವಲ ಭಾವೋತ್ಕಟತೆಯನ್ನು ಗುಣವಾಗಿ ಹೊಂದಿರುವ ಬರಹಗಳೆಂದು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಈ ಭಾವುಕತೆಯು ಅಂತಃಕರಣದ ಲೋಕಕ್ಕೆ ಸಂಬಂಧಿಸಿದ, ಹೇಳಲೇಬೇಕಾದ ಮತ್ತು ಪ್ರತಿಯೊಬ್ಬರೂ ಕೇಳಲೇಬೇಕಾದ ಸಿಹಿ-ಕಹಿ-ಒಗರುಗಳ ಕಥನಗಳನ್ನು ಅಡಗಿಸಿಕೊಂಡಿದೆ. ಇಂತಹ ಕಥನಗಳಿಲ್ಲದೆ ಬದುಕು ಪೂರ್ಣವಾಗುವುದಿಲ್ಲ.

“ತುಂಬಿ ಹರಿಯುತ್ತಿರುವ ಹೇಮಾವತಿ, ಉಕ್ಕುತ್ತಿರುವ ಜಲಪಾತಗಳು, ಮೋಡವನ್ನೇ ಮುಸುಕು ಹಾಕಿಕೊಂಡಂತಿರುವ ಘಟ್ಟಗಳು, ಶುಭ್ರವಾಗಿ ಹಸಿಬಾಣಂತಿಯಂತೆ ಹಸಿರ ಸಿರಿ. . .”

“ನೋವೂ ನೆನಪಾಗಿ ಸಂಭ್ರಮವಾಗುವುದಕ್ಕೆ, ಸಮಯ ತೆಗೆದುಕೊಳ್ಳುತ್ತದೆ.”

“ಒಳ್ಳೆಯ ಮಾತುಗಳು ಹಾಗೆ. . ಸುತ್ತಲೂ ಸಂತೋಷವನ್ನು ಕೊಡುತ್ತವೆ. ನಾವೂ ಹೆಚ್ಚು ಸಂತೋಷವಾಗಿರುತ್ತೇವೆ.”

“ಒಡೆದು ಹೋದ ಕುಟುಂಬಗಳು, ಮುರಿದುಬಿದ್ದ ಗೆಳೆತನ, ದಾಯಾದಿಗಳ ಕಲಹ, ಅಣ್ಣ-ತಮ್ಮಂದಿರ ಆಸ್ತಿ ವಿವಾದ, ಮದುವೆಯ ಮನಸ್ತಾಪ. ಹಣಕಾಸಿನ ಜಗಳಗಳು ಹೀಗೆ ಸರಿಪಡಿಸಲಾಗದು ಯಾವುದೂ ಇಲ್ಲ. ಎಲ್ಲವೂ ಸರಿಯಾಗುತ್ತವೆ.”

“ಅಣ್ಣ ತಂಗಿ ಅಕ್ಕ ತಮ್ಮ ಎಂದು ಅಂದುಕೊಳ್ಳಲು ಒಡಹುಟ್ಟಲೇ ಬೇಕಿಲ್ಲ. ಆ ಭಾವನೆಯನ್ನು ಬೆಳೆಸಿಕೊಂಡರೆ ಸಾಕು. . . ಸ್ವೀಕರಿಸಿದರೆ ಆಯ್ತು… ನಮ್ಮವರು ಎಂದುಕೊಂಡರೆ ಮಾತ್ರ ಅಂತರ ಕಡಿಮೆಯಾಗುತ್ತದೆ… ಎಲ್ಲರೂ ಹತ್ತಿರವಾಗುತ್ತೇವೆ.”

ಇವು ನಾವೇ ಆಡಿರಬಹುದಾದ, ಬರೆಯಬಹುದಾದ ಮಾತುಗಳಂತೆ ಅನ್ನಿಸುತ್ತದೆಯಲ್ಲವೆ. ಒಂದು ಒಳ್ಳೆಯ ಮಾತಿನ, ಬರಹದ ಹೆಚ್ಚುಗಾರಿಕೆ ಇದೇ ಆಗಿರುತ್ತದೆ. ಇನ್ನೊಬ್ಬರ ಅನುಭವದ ನುಡಿ ನಮ್ಮದು ಅನ್ನಿಸುವಂತೆ ಮಾಡುವುದು. ಏಕಾಂತದ ಅನುಭವ ಲೋಕಾಂತದ ಅನುಭವವಾಗುವುದು. ಪೂರ್ಣಿಮಾರ ಈ ಬರಹಗಳು ಅಂಥ ಅನುಭವವನ್ನು ಒದಗಿಸಬಲ್ಲವು. ಮೊದಲು ಹೇಳಿದಂತೆ ಪೂರ್ಣಿಮಾರ ಗದ್ಯವು ಕಥನ, ಮೌಖಿಕ ಕಾವ್ಯ, ಪ್ರಬಂಧದ ಲಾಲಿತ್ಯ ಹಾಗೂ ಬದುಕಿನ ಭಾವತೀವ್ರತೆಯನ್ನು ಗುಣವಾಗಿಸಿಕೊಂಡು ಮುಪ್ಪರಿಗೊಂಡಿದೆ. ಮನೆಗೊಂದು ಹಿರಿತಲೆ ಇರಬೇಕು, ಕೃಷ್ಣನೆಂದರೆ ಕತೆ, ಪರ್ಸಿನಲ್ಲಿ ದುಡ್ಡು ಕಾಣೆಯಾದ, ʻರಂಗನಾಯಕಿʼ, ಈಚಲು ಚಾಪೆಯ ಮೇಲೆ, ಬೂಬಮ್ಮನ ಮಕ್ಕಳು ಇವು ಮತ್ತು ಇಂಥ ಬರಹಗಳು ವ್ಯಕ್ತಿಚಿತ್ರಗಳಂತೆ ಕಂಡರೂ ಅವುಗಳ ಗದ್ಯದ ಸೊಬಗು, ಪಕ್ವ ನಿರೂಪಣೆ ಹಾಗೂ ಬದುಕನ್ನು ನೋಡುವ ಲೇಖಕಿಯ ಪಕ್ವತೆಯಿಂದಾಗಿ ಓದುಗರಿಗೆ ಬೇರೆಯದೇ ನೆಲೆಯ ಅನುಭವವನ್ನು ನೀಡಬಲ್ಲವು.

ಹೆಚ್ಚಿಗೇನು? ಈ ಕೃತಿ ಪೂರ್ಣಿಮಾ ಅವರ ಮೊದಲ ಕೃತಿಯಂತೆ. ನನಗೇನೂ ಹಾಗೆನ್ನಿಸುವುದಿಲ್ಲ. ಬದುಕು ನೀಡಿದ ಅನುಭವಗಳು ಮಾಗುವವರೆಗೂ ಕಾಪಿಟ್ಟು ಬರೆದ ಯಾವುದೇ ಪರಿಣತ ಲೇಖಕರ ಕೃತಿಯಂತೆಯೇ ಇದೆ. ಒಂದು ಸ್ಥಳ ಮಿತಿಗೆ ಒಳಪಟ್ಟು ಬರೆಯುವಾಗ ಕಾಸಿ, ಸೋಸಿ, ಚಿನ್ನವನು ಮಾಡುವುದು ಹೇಗೆ ಎಂದು ಅರಿತ ರಸತಜ್ಞತೆಯಿಂದ ಕೂಡಿವೆ. ಇಂತಹ ಅಪ್ಪಟ ಬರಹಗಳನ್ನು ಓದಿಸಿದ ಲೇಖಕಿಗೆ, ಸಾಹಸಿ ಗೆಳೆಯ ಚಲಂ ಹಾಡ್ಲಹಳ್ಳಿಯವರಿಗೆ ಕೃತಜ್ಞತೆ ಸೂಚಿಸುವುದಷ್ಟೇ ನಾನು ಮಾಡಬಹುದಾದ ಕೆಲಸ.”