ಕುಡಿನೋಟ ಬೀರಿದಳು

ಕುಡಿನೋಟ ಬೀರಿದಳು

ಕವನ

ದುಡಿಮೆಯಲಿ ನಾ ಸಾಗಿ

ಗಡಿಬಿಡಿಯ ಬಾಳಲ್ಲಿ

ಬಿಡುವನ್ನು ಬಯಸಿ ಮನ ರೋಸಿ ಹೋಗಿ

ಕಡಲತ್ತ ಸೆಳೆದಿರಲು

ದಡದಲ್ಲಿ ನಡೆದಿರಲು

ತಡೆಯೊಡ್ಡಿ ಕರೆದಿತ್ತು ನನ್ನ ಕೂಗಿ

 

ನಡುವಿನಲಿ ಕರವಿಟ್ಟು

ಬೆಡಗಿನಲಿ ಕುಳಿತಿರುವ

ಹುಡುಗಿಯನು ನಾ ಕಂಡೆ ದಂಡೆಯಲ್ಲಿ

ಕಡು ನೀಲಿ ಪೋಷಾಕು

ಮುಡಿಯಲ್ಲಿ ಹೂವಿಟ್ಟು

ಚಡಪಡಿಕೆ ಇಣುಕಿತ್ತು ಮೋರೆಯಲ್ಲಿ

 

ನಿಡುಸುಯ್ದು ಉಸಿರಲ್ಲಿ

ನಡುಗುತಿಹ ಧ್ವನಿಯಲ್ಲಿ

ನುಡಿದಿಹಳು ವೃತ್ತಾಂತ ಅಳೆದು ತೂಗಿ

ಬಡತನದ ಬಾಳಲ್ಲಿ

ಕಡೆಗಣಿಪ ಜನರೊಡನೆ

ಹೊಡೆದಾಡಿ ಬಂದಿಹಳು ಸೋತುಹೋಗಿ

 

ಮಿಡಿಯುತಿಹ ಕಂಬನಿಗೆ

ಮಿಡಿಯುತಿರೆ ನನ್ನೆದೆಯು

ಬಿಡು ಚಿಂತೆ ಎಂದಿರುವೆ ಧೈರ್ಯ ತುಂಬಿ

ತಡೆ ಹಿಡಿದು ಕಣ್ಣೀರು

ಕುಡಿನೋಟ ಬೀರಿದಳು

ಒಡನಾಡೆ ಬಂದಿಹಳು ನನ್ನ ನಂಬಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ ಕೃಪೆ ವಾಟ್ಸಾಪ್) 

ಚಿತ್ರ್