ನೀತಿ-ನಡತೆಯ ಕತೆಗಳು

ನೀತಿ-ನಡತೆಯ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವಿವಿಧ ಲೇಖಕರು
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.50/-

ನವಕರ್ನಾಟಕ ಪ್ರಕಾಶನದ “ಕಿರಿಯರ ಕಥಾಮಾಲೆ”ಯಲ್ಲಿ ಪ್ರಕಟವಾಗಿರುವ ಈ ಸಂಕಲನದಲ್ಲಿ ವಿವಿಧ ಲೇಖಕರ 13 ಕತೆಗಳಿವೆ. ಪ. ರಾಮಕೃಷ್ಣ ಶಾಸ್ತ್ರಿ, ಪಳಕಳ ಸೀತಾರಾಮ ಭಟ್ಟ, ಸಂಪಟೂರು ವಿಶ್ವನಾಥ್, ದೊಡ್ಡಬಾಣಗೆರೆ ಪ್ರಕಾಶಮೂರ್ತಿ ಮತ್ತು ವಿ. ರಾಮಚಂದ್ರ ಶಾಸ್ತ್ರಿ ಬರೆದಿರುವ ಕತೆಗಳು.

ಯಾವುದೇ ಸಮಾಜದಲ್ಲಿ ವ್ಯಕ್ತಿಗಳ ನೀತಿ-ನಡತೆಯು ಆ ಸಮಾಜದ ಸಹಜೀವನ, ಶಾಂತಿ ಹಾಗೂ ನೆಮ್ಮದಿಗೆ ಕಾರಣವಾಗುತ್ತದೆ. ಇವುಗಳನ್ನು ಬಾಲ್ಯದಲ್ಲಿಯೇ ರೂಪಿಸುವುದು ಬಹಳ ಅಗತ್ಯ ಮತ್ತು ಇದು ನಿರಂತರವಾಗಿ ನಡೆಯಬೇಕಾದ ಕಾಯಕ. 1950-60ರ ದಶಕದ ವರೆಗೆ ನಮ್ಮ ದೇಶದ ಶೇಕಡಾ 80ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದರು. ಅಲ್ಲೆಲ್ಲ ಕೂಡುಕುಟುಂಬಗಳಲ್ಲಿ ಜನರ ಬದುಕು. ಆ ಕುಟುಂಬಗಳ ಅಜ್ಜ-ಅಜ್ಜಿಯರು, ಹಿರಿಯರು ಮಕ್ಕಳಿಗೆ ದಿನದಿನವೂ ಕತೆಗಳನ್ನು ಹೇಳುತ್ತಿದ್ದರು: ರಾಮಾಯಣದ, ಮಹಾಭಾರತದ, ಪಂಚತಂತ್ರದ, ಪುರಾಣಗಳ ಹಾಗೂ ಜನಪದದ ಕತೆಗಳು. ಇವು ಮಕ್ಕಳ ನೀತಿ-ನಡತೆ ರೂಪಿಸಲು ಪೂರಕವಾಗಿದ್ದವು. ಜೊತೆಗೆ ಆ ಹಿರಿಯರ ನಡತೆಯನ್ನೂ ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತಲೇ ಕಲಿಯುತ್ತಿದ್ದರು. ಅದಕ್ಕೇ ಹೇಳೋದು “ಮನೆಯೇ ಮೊದಲ ಪಾಠಶಾಲೆ” ಎಂದು. ಆದರೆ ಈಗ ಶೇಕಡಾ 50ರಷ್ಟು ಜನರು ನಗರಗಳಲ್ಲೇ ವಾಸ ಮಾಡುತ್ತಿದ್ದಾರೆ - ಒಂಟಿ ಕುಟುಂಬಗಳಲ್ಲಿ. ಈ ಕುಟುಂಬಗಳಲ್ಲಿ ಹೆತ್ತವರಿಗೆ ಮಕ್ಕಳೊಂದಿಗೆ ಮಾತನಾಡಲಿಕ್ಕೂ ಸಮಯವಿರುವುದಿಲ್ಲ. ತಮ್ಮ ದಿನನಿತ್ಯದ ಜಂಜಡಗಳಲ್ಲೇ ಅವರು ಹೈರಾಣಾಗಿರುತ್ತಾರೆ. ಇನ್ನು ಮಕ್ಕಳಿಗೆ ಕತೆ ಹೇಳಲು ಪುರುಸೊತ್ತು ಎಲ್ಲಿರುತ್ತದೆ? ಆದ್ದರಿಂದ ಇಂದಿನ ಕಾಲದಲ್ಲಿ ಇಂತಹ ಪುಸ್ತಕಗಳು ಮುಖ್ಯವಾಗುತ್ತವೆ.

ಯಾಕೆಂದರೆ, “ನೀನು ಪರರಿಗೆ ಉಪಕಾರಿಯಾಗಿ ಬಾಳಬೇಕು; ಸತ್ಯವನ್ನೇ ಹೇಳಬೇಕು” ಎಂಬಂತಹ ನೀತಿಗಳನ್ನು ಮಕ್ಕಳಿಗೆ ಹೇಳಿದರೆ ಅವು ಮಕ್ಕಳ ಮನಸ್ಸಿಗೆ ನಾಟುವುದಿಲ್ಲ. ಬದಲಾಗಿ ಅಂತಹ ನೀತಿಗಳನ್ನು ಕತೆಯ ರೂಪದಲ್ಲಿ ಹೇಳಿದರೆ ಅವು ಮಕ್ಕಳ ಮನದಲ್ಲಿ ಬೇರೂರುತ್ತವೆ. ಮಕ್ಕಳು ಈ ಪುಸ್ತಕದ ಕತೆಗಳನ್ನು ಓದಿ, ಅವುಗಳಿಂದ ಕಲಿಯಬೇಕಾದ ನೀತಿಯನ್ನು ತಿಳಿದುಕೊಳ್ಳಬಹುದು. ಕತೆಗಳು ಮಕ್ಕಳ ನೆನಪಿನಲ್ಲಿ ಬಹುಕಾಲ ಉಳಿಯುತ್ತವೆ. ಅದಲ್ಲದೆ ಕತೆಗಳನ್ನು ಮಕ್ಕಳು ಮತ್ತೆಮತ್ತೆ ಓದಿಕೊಳ್ಳಬಹುದು. ಜೊತೆಗೆ ಹೆತ್ತವರು ಅವಕಾಶವಾದಾಗೆಲ್ಲ ಇಂತಹ ಪುಸ್ತಕಗಳ ಕತೆಗಳನ್ನು ಮಕ್ಕಳಿಗೆ ಓದಿ ಹೇಳಬಹುದು.

ಪಳಕಳ ಸೀತಾರಾಮ ಭಟ್ಟರ “ಆಟದ ಕೋವಿ” ಎಂಬ ಕತೆ ಹಲವು ನೀತಿಗಳನ್ನು ತಿಳಿಸುತ್ತಾ ಮಕ್ಕಳ ನಡತೆ ತಿದ್ದಲು ಸಹಕಾರಿ. ಇದರಲ್ಲಿ ಸತೀಶ ಎಂಬ ಬಾಲಕ ಆಟದ ಕೋವಿಗಾಗಿ ಹಟ ಮಾಡುತ್ತಾನೆ. ಅಂತೂ ಅವನ ಅಕ್ಕಂದಿರು ಅವನಿಗೆ ಆಟದ ಕೋವಿ ತಂದು ಕೊಡುತ್ತಾರೆ. ಅದರೊಂದಿಗೆ ಕೇಪ್‌ಗಳ ಪೊಟ್ಟಣವೂ ಸಿಗುತ್ತದೆ. ಇವು ಕೈಗೆ ಸಿಕ್ಕಿದ ನಂತರ ಬಾಲಕ ಸುಮ್ಮನಿರುತ್ತಾನೆಯೇ? ಕೋವಿಯಿಂದ ಕೇಪ್ ಸಿಡಿಸಿ ಸದ್ದು ಮಾಡುತ್ತಾ ಇತರರಿಗೆ ಕೀಟಲೆ ಮಾಡಲು ಶುರು ಮಾಡುತ್ತಾನೆ. ಅಕ್ಕಂದಿರು ಆಕ್ಷೇಪಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲಾಗಿ, ಅದನ್ನು ಸಮರ್ಥಿಸುತ್ತಾನೆ. ಕೊನೆಗೆ, ಮನೆಗೆ ಒಬ್ಬ ಪೊಲೀಸ್ ಬಂದಾಗ ಅಡಗಿಕೊಳ್ಳುತ್ತಾನೆ. ಸತೀಶನನ್ನು ಬಚಾವ್ ಮಾಡಲಿಕ್ಕಾಗಿ ಅಕ್ಕಂದಿರೂ ಪೊಲೀಸನೊಂದಿಗೆ ಸುಳ್ಳು ಹೇಳುತ್ತಾರೆ. ಕೊನೆಗೆ, ಅಕ್ಕ ಮಾಲಿನಿ ಸತೀಶನಿಗೆ “ಎಂಥ ಹೊಲಸು ಕೆಲಸ ಮಾಡಿಬಿಟ್ಟೆ ನೀನು? ...” ಎಂದೆಲ್ಲ ಛೀಮಾರಿ ಹಾಕುತ್ತಾಳೆ. ಈಗ ಸತೀಶ ತನ್ನ ತಪ್ಪು ಒಪ್ಪಿಕೊಳ್ಳುತ್ತಾನೆ. “ಇನ್ನೊಮ್ಮೆ ಖಂಡಿತ ಹೀಗೆ ಮಾಡುವುದಿಲ್ಲ” ಎಂದು ಅಕ್ಕನಿಗೆ ಮಾತು ಕೊಡುತ್ತಾನೆ.

“ಅತಿ ಆಸೆ ಗತಿಗೇಡು”, “ಸನ್ಯಾಸಿ ಮತ್ತು ದರೋಡೆಕೋರರು”, “ಪಾಠ ಕಲಿಸಿದ ನಾಟಕ” ಇತ್ಯಾದಿ ಎಲ್ಲ ಕತೆಗಳೂ ಮಕ್ಕಳಿಗೆ ಹಲವು ನೀತಿಗಳನ್ನೂ ಒಳ್ಳೆಯ ನಡತೆಗಳ ಪ್ರಾಮುಖ್ಯತೆಯನ್ನೂ ಸರಳವಾಗಿ ತಿಳಿಸುತ್ತವೆ.

ಕನ್ನಡನಾಡಿನ ಪ್ರತಿಯೊಂದು ಮನೆಯಲ್ಲಿ ಇರಬೇಕಾದ ಪುಸ್ತಕವಿದು. ಇದರಲ್ಲಿರುವ ಕತೆಗಳನ್ನು ಓದುತ್ತ ಓದುತ್ತ ಮಕ್ಕಳಿಗೆ ಓದಿನ ರುಚಿ ಹತ್ತುತ್ತದೆ ಮಾತ್ರವಲ್ಲ ಜೀವನದುದ್ದಕ್ಕೂ ಪಾಲಿಸಬೇಕಾದ ನೀತಿಗಳ ಅರಿವು ಮೂಡುತ್ತದೆ.