ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ

ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ

ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ ಇ ಟಿ) ಈ ವರ್ಷ ಗೊಂದಲದ ಗೂಡಾಗಿ, ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದ್ದು ಅಕ್ಷಮ್ಯ. ಎ ೧೮ ಮತ್ತು ೧೯ರಂದು ನಡೆದ ಸಿ ಇ ಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯಕ್ರಮಕ್ಕೆ ಹೊರತಾದ ಸುಮಾರು ಐವತ್ತು ಪ್ರಶ್ನೆಗಳು ಇದ್ದದ್ದು ಈ ಎಲ್ಲಾ ಸಮಸ್ಯೆಗಳಿಗೆ ಮೂಲ. ಮೊದಲ ದಿನವೇ ಮಾಧ್ಯಮಗಳಲ್ಲಿ ಈ ಕುರಿತು ವಿಸ್ತ್ರತವಾಗಿ ವರದಿಗಳು ಪ್ರಕಟವಾದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ ಇ ಎ) ಕೂಡಲೇ ಎಚ್ಚೆತ್ತುಕೊಳ್ಳಲಿಲ್ಲ. ಸಾಲದೆಂಬಂತೆ ಮರುದಿನದ ಪ್ರಶ್ನೆ ಪತ್ರಿಕೆಯಲ್ಲೂ ಪಠ್ಯಕ್ರಮಕ್ಕೆ ಹೊರತಾದ ಹಲವು ಪ್ರಶ್ನೆಗಳಿದ್ದವು. ಇದನ್ನು ಮಾಧ್ಯಮಗಳು ಮತ್ತು ಸಾರ್ವಜನಿಕರು ನಿರಂತರವಾಗಿ ಪ್ರಶ್ನಿಸತೊಡಗಿದ ನಂತರ ಕೆ ಇ ಎ ಅಧಿಕಾರಿಗಳು ಎಚ್ಚೆತ್ತುಕೊಂಡರು. ತಪ್ಪಾಗಿರುವುದನ್ನು ತಡವಾಗಿಯಾದರೂ ಒಪ್ಪಿಕೊಂಡರು. ಆದರೆ ಆಗಿದ್ದ ಪ್ರಮಾದಕ್ಕೆ ಯಾವುದೇ ಪರಿಹಾರ ಕಂಡುಕೊಳ್ಳುವುದಕ್ಕೆ ಮುಂದಾಗಲಿಲ್ಲ. ಒತ್ತಡ ಹೆಚ್ಚಾದ ಬಳಿಕ, ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂಬಂಧ ತಜ್ಞರ ಸಮಿತಿಯನ್ನು ರಚಿಸಿದರು. ಆ ಸಮಿತಿ ಇದೀಗ ತನ್ನ ವರದಿಯನ್ನು ಸಲ್ಲಿಸಿ, ಗೊಂದಲಕ್ಕೆ ತೆರೆ ಎಳೆದಿದೆ. ಇಷ್ಟೆಲ್ಲ ಆಗುವ ಹೊತ್ತಿಗೆ ವಿದ್ಯಾರ್ಥಿಗಳು ಮತ್ತು ಪಾಲಕರ ಮನಸ್ಥಿತಿ ಏನಾಗಿರುತ್ತದೆ ಎಂಬುದರ ಬಗ್ಗೆ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಎಳ್ಳಷ್ಟೂ ಯೋಚನೆ ಮಾಡದೇ ಇದ್ದದ್ದು ದುರದೃಷ್ಟಕರ.

ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಮೌಲ್ಯಮಾಪನದಿಂದಲೇ ಕೈಬಿಡಬೇಕು. ತಪ್ಪಾದ ಎರಡು ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕು. ತೆಗೆದುಹಾಕಲಾದ ಪ್ರಶ್ನೆಗಳನ್ನು ಮತ್ತು ಕೀ ಉತ್ತರಗಳನ್ನು ಕೆ ಇ ಎ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸುಗಳನ್ನು ಪಾಲಿಸುವಂತೆ ಕೆ ಇ ಎ ಗೆ ಸರ್ಕಾರ ಸೂಚನೆಯನ್ನೂ ನೀಡಿದೆ. ಕೆ ಇ ಎ ತಕ್ಷಣ ಕಾರ್ಯಪ್ರವೃತ್ತರಾಗಿ, ಆದಷ್ಟು ಬೇಗ ಕೀ ಉತ್ತರಗಳನ್ನು ಪ್ರಕಟಿಸಬೇಕು. ವಿದ್ಯಾರ್ಥಿಗಳು ಸಲ್ಲಿಸುವ ಆಕ್ಷೇಪಣೆಗಳನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು. ಮೌಲ್ಯಮಾಪನವನ್ನೂ ಶೀಘ್ರವೇ ಪೂರ್ಣಗೊಳಿಸಿ, ಫಲಿತಾಂಶವನ್ನು ಪ್ರಕಟಿಸಬೇಕು. ಪ್ರಶ್ನೆ ಪತ್ರಿಕೆ ರೂಪಿಸುವ ವಿಷಯ ತಜ್ಞರಿಗೆ ಸಿಲೆಬಸ್ ಕೊಡುವಾಗ ಕೆ ಇ ಎ ಯ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಧಿಸೂಚನೆ ಹೊರಡಿಸುವುದಕ್ಕೆ ಮೊದಲೇ, ಪಿ ಯು ಇಲಾಖೆಯ ಜತೆ ಸಮಾಲೋಚಿಸಿ ಸಿಲೆಬಸ್ ಖಚಿತ ಪಡಿಸಿಕೊಳ್ಳಬೇಕು. ಸಿಲೆಬಸ್ ಗೆ ಸಂಬಂಧಿಸಿದಂತೆ ಪಿಯು ಇಲಾಖೆ ಮತ್ತು ಕೆ ಇ ಎ ಸಮನ್ವಯ ಸರಿಯಾಗಿದ್ದರೆ ಈ ರೀತಿಯ ಸಮಸ್ಯೆ ಪುನರಾವರ್ತನೆ ಆಗುವುದನ್ನು ತಪ್ಪಿಸಬಹುದು. ಸಿ ಇ ಟಿ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯೇನಲ್ಲ. ಈ ವರ್ಷ ಸುಮಾರು ಮೂರುವರೆ ಲಕ್ಷ ಮಕ್ಕಳು ಈ ಪರೀಕ್ಷೆ ಬರೆದಿದ್ದಾರೆ. ಅದಲ್ಲದೇ, ಈ ವಿದ್ಯಾರ್ಥಿಗಳಿಗೆ ಇದು ಜೀವನದ ಭವಿಷ್ಯವನ್ನು ರೂಪಿಸುವ ಪರೀಕ್ಷೆ. ಈ ಬಾರಿ ಆದಂತಹ ಗೊಂದಲ ಮುಂದೆಂದೂ ಪುನರಾವರ್ತನೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸುವುದು ಅಗತ್ಯ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೩೦-೦೪-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ