‘ಮಲೆನಾಡ ಗಾಂಧಿ' ಗೋವಿಂದೇಗೌಡರ ನೆನಪಿನಲ್ಲಿ...

‘ಮಲೆನಾಡ ಗಾಂಧಿ' ಗೋವಿಂದೇಗೌಡರ ನೆನಪಿನಲ್ಲಿ...

ಮಾಜಿ ಸಚಿವ ದಿ.ಗೋವಿಂದೇ ಗೌಡರ ಬಗ್ಗೆ ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಲೇಖನ ಓದಿದೆ. ನಿಜಕ್ಕೂ ಅವರಂತಹ ವ್ಯಕ್ತಿಗಳು ರಾಜಕೀಯದಲ್ಲಿ ಅಪರೂಪ. ಅವರನ್ನು ಹತ್ತಿರದಿಂದ ಕಾಣುವ ಮತ್ತು ಅವರ ಜೊತೆ ಒಂದೆರಡು ಮಾತುಗಳನ್ನು ಆಡುವ ಅವಕಾಶ ನನಗೆ ೧೯೯೭ರಲ್ಲಿ ಸಿಕ್ಕಿತ್ತು. ನಾನು ಮಂಗಳೂರು ವಿವಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಯಾಗಿ ಬೆಂಗಳೂರು ಬಳಿಯ ರಾಮನಗರದ ಜನಪದ ಲೋಕದಲ್ಲಿ ನಡೆದ ಏಳು ದಿನಗಳ ‘ಫೆಸ್ಟಿವಲ್ ಕ್ಯಾಂಪ್' ನಲ್ಲಿ ಭಾಗವಹಿಸಿದ್ದೆ. ಬಹುಷಃ ೧೯೯೭ರ ಫೆಬ್ರವರಿ ತಿಂಗಳು ಇರಬಹುದು ಎಂದು ನನ್ನ ನೆನಪು. ಈ ಶಿಬಿರದ ಕೊನೆಯ ದಿನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗೋವಿಂದೇ ಗೌಡರು ಭಾಗವಹಿಸಿದ್ದರು,. ಆಗ ಅವರು ಕರ್ನಾಟಕ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು.

ಕಾರ್ಯಕ್ರಮವೆಲ್ಲಾ ಪ್ರಾರಂಭವಾಯಿತು. ನಾವೆಲ್ಲಾ ಶಿಬಿರಾರ್ಥಿಗಳು ಗೋವಿಂದೇಗೌಡರ ಮಾತುಗಳನ್ನು ಕೇಳಲು ಬಹಳ ಕುತೂಹಲದಿಂದ ಕಾಯುತ್ತಿದ್ದೆವು. ಆ ಸಮಯ ನನ್ನ ಗಮನ ಅವರು ಬಂದಿದ್ದ ಸರಕಾರೀ ಕಾರಿನತ್ತ ಹೋಯಿತು. ಕಾರಿನ ಎದುರು ಅಳವಡಿಸಿದ್ದ ಭಾರತದ ರಾಷ್ಟ್ರೀಯ ಧ್ವಜವು ತಲೆಕೆಳಗಾಗಿತ್ತು. ಅಂದರೆ ‘ಉಲ್ಟಾ’ ಆಗಿತ್ತು. ಇದು ಪತ್ರಿಕೆಯವರ ಗಮನಕ್ಕೆ ಬಂದರೆ ಅದೊಂದು ಸಣ್ಣ ಮಟ್ಟಿನ ಸುದ್ದಿಯೇ ಆಗುತ್ತಿತ್ತೇನೋ? ನಾನು ಮತ್ತು ನನ್ನ ಗೆಳೆಯ ಮೆಲ್ಲಗೆ ಕಾರ್ಯಕ್ರಮದ ನಡುವಿನಿಂದ ಎದ್ದು ಹೋಗಿ ಆ ಕಾರಿನ ಡ್ರೈವರ್ ಬಳಿ ಈ ವಿಷಯ ತಿಳಿಸಿದೆವು. ಆತನಿಗೂ ಅಲ್ಲಿಯವರೆಗೆ ಈ ವಿಷಯ ಅರಿವಿಗೆ ಬಂದಿರಲಿಲ್ಲ ಅನಿಸುತ್ತೆ. ಕೂಡಲೇ ಆತ ರಾಷ್ಟ್ರ ಧ್ವಜವನ್ನು ಸರಿಯಾಗಿಸಿದ. ನಂತರ ನಮಗೆ ಧನ್ಯವಾದಗಳನ್ನೂ ತಿಳಿಸಿದ. 

ಗೋವಿಂದೇಗೌಡರ ಭಾಷಣ ಮುಗಿಯಿತು. ಕಾರ್ಯಕ್ರಮ ಮುಗಿದ ಬಳಿಕ ಅವರು ಕಾರಿನತ್ತ ತೆರಳಿ ಅದರ ಚಾಲಕನ ಬಳಿ ಏನೋ ಮಾತನಾಡಿದರು. ನಂತರ ನಮ್ಮ ಕಡೆ ನೋಡಿ ಆ ಚಾಲಕ ಅಲ್ಲಿಗೆ ಬರುವಂತೆ ಸನ್ನೆ ಮಾಡಿದ. ನಾವೆಲ್ಲ ಅಲ್ಲಿಗೆ ಹೋದೆವು. ಗೋವಿಂದೇಗೌಡರು ಹೇಳಿದ ಮಾತು ನನಗಿನ್ನೂ ನೆನಪಿದೆ. ‘ಬಹಳ ಒಳ್ಳೇ ಕೆಲಸ ಮಾಡಿದ್ರಿ ಹುಡುಗ್ರೇ, ನಮ್ಮ ತ್ರಿವರ್ಣ ಧ್ವಜಕ್ಕೆ ಗೌರವ ನೀಡಬೇಕಾಗಿರೋದು ನಮ್ಮ ಮೊದಲ ಕರ್ತವ್ಯ. ಒಳ್ಳೇದಾಗಲಿ ನಿಮಗೆ' ಎಂಬ ಮಾತನ್ನು ಆಡಿದರು. ಗೋವಿಂದೇಗೌಡರು ವೇದಿಕೆಯಲ್ಲಿದ್ದರೂ ಈ ಧ್ವಜವನ್ನು ಸರಿ ಪಡಿಸಿದ ಘಟನೆಯನ್ನು ನೋಡಿದ್ದರು. ಅವರು ಅಷ್ಟೊಂದು ಚುರುಕಾಗಿದ್ದರು. ಅದು ಮೊಬೈಲ್ ಇಲ್ಲದ ಕಾಲ. ಅವರೊಂದಿಗೆ ಒಂದು ಫೋಟೋ ಸಹ ತೆಗೆಯಲು ಆಗಲಿಲ್ಲ ಎನ್ನುವ ನೋವು ಈಗಲೂ ನನಗೆ ಕಾಡುತ್ತಿದೆ. ಆದರೂ ಅವರ ಮಾತುಗಳು ಸದಾ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. 

ಆ ಲೇಖನ ಓದಿ ಇದೆಲ್ಲಾ ನೆನಪಾಯಿತು. ರಾಜಕೀಯ ಜೀವನದಿಂದ ನಿವೃತ್ತಿ ಪಡೆದು ಮಕ್ಕಳು ಮೊಮ್ಮಕ್ಕಳ ಜೊತೆ ತಮ್ಮ ಸಂಧ್ಯಾಕಾಲವನ್ನು ಬಹಳ ಆನಂದದಿಂದ ಕಳೆದ ಅಪರೂಪದ ರಾಜಕಾರಣಿ ಗೋವಿಂದೇಗೌಡರು. ಅವರ ಸರಳತೆ ಮತ್ತು ಪ್ರಾಮಾಣಿಕತೆ ಎಂದೆಂದಿಗೂ ಆದರ್ಶ ಎಂಬುವುದರಲ್ಲಿ ಎರಡು ಮಾತಿಲ್ಲ. 

ಚಿತ್ರ ಕೃಪೆ: ಅಂತರ್ಜಾಲ ತಾಣ