‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೧) - ಅಂಬಿಕಾತನಯದತ್ತ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೧) - ಅಂಬಿಕಾತನಯದತ್ತ

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ ೧೮೯೬ರ ಜನವರಿ ೩೧ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (೧೯೧೮) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (೧೯೩೫) ಪದವಿ ಪೂರ್ಣಗೊಳಿಸಿದರು.

ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಒಪ್ಪೊತ್ತಿನ ಶಿಕ್ಷಕರಾದರು. ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ನೇಮಕಗೊಂಡರು. ನಿವೃತ್ತರಾದ ಮೇಲೆ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಸಲಹೆಗಾರ (೧೯೫೬) ಆಗಿ ಕೆಲಸ ಮಾಡಿದರು.

ಮುಂಬಯಿಯಲ್ಲಿ ನಡೆದ ೨೧ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿದ್ದ ಅವರು ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ (೧೯೩೦) ಲೇಖಕ ಗೋಷ್ಠಿಯನ್ನು ನಿರ್ವಹಿಸಿದರು. ಕೆಲವು ಕಾಲ ‘ಜೀವನ’ ಮಾಸಪತ್ರಿಕೆ ಮತ್ತು ‘ಜಯಕರ್ನಾಟಕ’ ಪತ್ರಿಕೆ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಬೇಂದ್ರೆ ಅವರಿಗೆ ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ (೧೯೬೮) ಪದವಿ , ಕಾಶಿಯ ವಿದ್ಯಾಪೀಠ ಗೌರವ ಡಾಕ್ಟರೇಟ್ (೧೯೭೬) ನೀಡಿದವು. ಕೇಂದ್ರ ಸರ್ಕಾರ ಪದ್ಮಶ್ರೀ (೧೯೬೮) ಪ್ರಶಸ್ತಿ ನೀಡಿತು. ಕೇಂದ್ರದ ಸಾಹಿತ್ಯ ಅಕಾಡೆಮಿ ಫೆಲೋ ಗೌರವಕ್ಕೆ ಪಾತ್ರರಾಗಿದ್ದ ಬೇಂದ್ರೆ ಅವರಿಗೆ ಅದಮಾರು ಮಠದವರು ಕರ್ನಾಟಕ ಕವಿಕುಲತಿಲಕ ಬಿರುದು ನೀಡಿದ್ದರು. ಶಿವಮೊಗ್ಗದಲ್ಲಿ ನಡೆದ ೨೭ ನೇ ಕನ್ನಡ ಸಾಹಿತ್ಯ ಸಮ್ಮೇಳನ (೧೯೪೩) ಅಧ್ಯಕ್ಷತೆ ವಹಿಸಿದ್ದರು. ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ (೧೯೫೬) ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ (೧೯೭೪) ದೊರಕಿದವು. ಬೇಂದ್ರೆಯವರು ೧೯೮೧ರ ಅಕ್ಟೋಬರ್ ೨೬ರಂದು ಮುಂಬಯಿಯಲ್ಲಿ ನಿಧನರಾದರು.

ಕೆಲವು ಕೃತಿಗಳು: ಕೃಷ್ಣಕುಮಾರಿ, ಸಖೀಗೀತ, ಉಯ್ಯಾಲೆ, ಗರಿ, ನಾದಲೀಲೆ, ಅರುಳುಮರುಳು ಇತ್ಯಾದಿ ೨೫ ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ, ಕಾವ್ಯೋದ್ಯೋಗ, ಸಾಹಿತ್ಯ ವಿರಾಟ ಸ್ವರೂಪ, ನಾಕುತಂತಿ, ನಿರಾಭರಣ ಸುಂದರಿ, ಶಾಂತಲಾ (ಅನುವಾದ) ಇತ್ಯಾದಿ.

ಹೊಸಗನ್ನಡ ಕಾವ್ಯಶ್ರೀ ಕೃತಿಯಲ್ಲಿ ಬೇಂದ್ರೆಯವರ ನಾಲ್ಕು ಕವನಗಳು ಪ್ರಕಟವಾಗಿವೆ. ಮೂರು ಕವನಗಳು ಈಗಾಗಲೇ ಮುದ್ರಿತವಾಗಿರುವುದರಿಂದು ಉಳಿದ ಒಂದು ಪ್ರಸಿದ್ಧ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ.

ಸಪ್ತಕಲಾ

ಸ್ಪಂದ ಬಂಧ ಸ್ವಚ್ಛಂದಾ

ಸ್ವೈರಾ ನಿರ್ವೈರಾ ಸುಮ್ಮನಿರದಾ

ಕಾದು ಕಾದು ನಾದಾ

ಭೇದಾ ಅಬೇಧಾ, ಮೀರಿ

ಭಾವನೋವ ತಾಳದೇ

 

ತನ್ನ ತಾನುಂಗೀ

ಎದೆಯೊಳಗಿಂಗೀ

ಸ್ವಾತಂತ್ರ್ಯ ಪಡೆಯುವುದಣ್ಣ

ಆರ್ಕಚಂದ್ರ ಸಾಂದ್ರವಾಗಿ

ನಾದಾತೀತ ಗೀತ

ಸ್ವರಮೇಳತಾಳ ರಾಗ

ರೀತಿಯಲ್ಲಿ

ಆತ್ಮಪ್ರೀತಿಯಲ್ಲಿ

ಸ್ವಾತಂತ್ರ್ಯ ಪಡೆಯುವುದಣ್ಣ

೨.

ಇದೋ ಅರೆವೋ ಮರೆವೋ

ಅವಳಿ ಜವಳಿ ತರವೋ

ಧ್ರುವಾಸ್ಮೃತಿಯಾ ತೆರವೋ

ಆಕಾಶರೇಖಾಲೇಖಾ

ಹೃದಯಾಂತರ್ಕೇಕಾ

ಭಾವನೋವ ತಾಳದೇ

ಅದೃಶ್ಯ ಹೊಳದು

ಕಾಣ್ಕೆರೂಪ ತಳೆದು

ಸ್ವಾತಂತ್ರ್ಯ ಪಡೆಯುವುದಣ್ಣ

ಟಂಕಾ ಅಂಕಾ ಸರಿಸಿ

ವ್ಯಂಗ್ಯಾ ವಕ್ರಾ ಬೆರೆಸಿ

ಎಲ್ಲೂ ಕಲ್ಲುಚಿತ್ರ

ಮೂರ್ತಿಯಲ್ಲಿ

ಕೀರ್ತಿ ಅರ್ತಿಯಲ್ಲಿ

ಸ್ವಾತಂತ್ರ್ಯ ಪಡೆಯುವುದಣ್ಣ

೩.

ತಂತ್ರ ಅರಿಯದೇ

ಮಂತ್ರ ಮಣಮಣಗುಟ್ಟಿ

ಕೆಟ್ಟ ಯಂತ್ರದಂತೆ

ಕೈಕಟ್ಟಿ ಎತ್ತೆತ್ತು

ತತ್ತರಿಸುತ್ತಿರಲು

ಭಾವನೋವ ತಾಳದೆ…

ಮೌನ ಕೂಡಿ

ಮೌನ ಮೂಡಿ

ಸ್ವಾತಂತ್ರ್ಯ ಪಡೆಯುವುದಣ್ಣ

ಆವೇಶ ಅಂಗಾಂಗ ತುಂಬಿ

ನರನರನಲುಗಿ ಅಲುಗಿ

ಗೊಂದಣ ತಾಂಡವ ಲಾಸ್ಯ

ನೃತ್ಯದಲ್ಲೀ

ಇಲ್ಲೀ ಮರ್ತ್ಯದಲ್ಲಿ

ಸ್ವಾತಂತ್ರ್ಯ ಪಡೆಯುವುದಣ್ಣ.

೪.

ಕರ್ಮ ಅಕರ್ಮದ ತಂತ್ರ

ಫಲವಿಫಲತೆಯೊಳ ತಂತ್ರ

ಈಶ್ವರಿಯಂತ್ರ

ಸ್ವರೂಪ ತೋರ್ಪ ದೀಪ

ಮಿಂಚಿಗೂ ಸಮೀಪ

ಭಾವನೋವತಾಳದೇ

ಪ್ರಕೃತಿಯೂ ದುಡಿದೂ

ದೈವ ತಡೆದೂ

ಸ್ವಾತಂತ್ರ್ಯ ಪಡೆಯುವುದಣ್ಣ

ಆವಿದಿತ ವಿದಿತ ಉದಿತಾ

ಸಾರ್ತಾತಾ ಭಾವ ಜೀವಾ

ಅಭಿನಯ ವಚನ ನಾಟ್ಯಾ

ಕೃತಿಯಲಿ

ದೃಷ್ಟೀಸೃತಿಯಲಿ

ಸ್ವಾತಂತ್ರ್ಯ ಪಡೆಯುವುದಣ್ಣ

(‘ಹೊಸಗನ್ನಡ ಕಾವ್ಯಶ್ರೀ ಕೃತಿಯಿಂದ ಆಯ್ದ ಕವನ)