ಕಣ್ಣೀರು

ಕಣ್ಣೀರು

ಕವನ

ಕಣ್ಣೀರು

ರಾಜ್ಯ ಮಟ್ಟದ ದಸರಾ ಕಾವ್ಯ ಸ್ಪರ್ಧೆ‍ 2015 ರಲ್ಲಿ ಪ್ರಥಮ ಬಹುಮಾನಿತ ಕವನ‍‍ >ತೀರ್ಪುಗಾರರು‍‍‍‍‍‍‍‍‍‍ ಬಸವರಾಜ ಸೂಳಿಭಾವಿ (ಖ್ಯಾತ‌ ಕವಿಗಳು, ಗದಗ‌)‍,ಆಯೋಜನೆ : ರಾಜಹಂಸ (ಚಲನಚಿತ್ರ ಸಹ ನಿರ್ದೇಶಕರು)
 

1
ಪದೇ ಪದೇ ಮೂಲೆಯಲ್ಲಿ ಕುಳಿತು ಅತ್ತದ್ದು
ಅವರಿವರು ಬಯ್ದರೆಂದಲ್ಲ,ಕಾಲಿಂದ ಒದ್ದರೆಂದಲ್ಲ
ಮೂಲೆಯಲ್ಲಿಯೇ ಕುಳಿತುಬಿಡುತ್ತೇನೆಂಬ ಭಯದಿಂದ

2
ಅಳುನಿಂತಾಗ ಕಿವಿತಟ್ಟಿದ, ಉಸಿರು ನಿಂತ
ಹರಿತಾದ ಮಾತುಗಳು ನನ್ನ ಮೇಲೆಯೇ
ಸವಾರಿ ಮಾಡುತಿವೆಯೇನೋ ಎಂದೆನಿಸತೊಡಗಿತು

3
ಎಲ್ಲರ ಇಷ್ಟಗಳು ನನ್ನ ಬಯಕೆಗಳ
ಗೂಡಿಗೆ ಕೊಳ್ಳಿ ಇಟ್ಟವು ಯಾರೂ ಗಮನಿಸಲಿಲ್ಲ
ಕಣ್ಣೀರು ಒಂಟಿ ಕಣ್ಣಿಂದ ಪಾದ ತಾಕುತ್ತಿದ್ದವು

4
ಏಕಾಂತ ನಡಿಗೆಯೂ ಯಾರೋ ಹಿಂಬಾಲಿಸಿದಂತೆ
ನನ್ನ ಆಲೋಚನೆಗಳ ಬುಡಕ್ಕೆ ಕೈ  ಹಾಕಿ
ಹೊಸಕಿದಂತೆ ನಿತ್ಯ ವೇದಿಸುವಂತೆ ಕಾಡುತಿವೆ

5
ಬಸ್ಸಿನ ಕಿಟಕಿಯಲಿ ಅದೆಷ್ಟೊ ಬಾರಿ
ಜಿನುಗಿದ ಕಣ್ಣೀರ ಹನಿ ಮಾಯವಾದವು
ಗಾಳಿರಾಯನೆಂದಿಗೂ ಬಾಹ್ಯಕ್ಕೆ ಗುಟ್ಟು ಬಿಚ್ಚಿಡಲಿಲ್ಲ

6
ರಾತ್ರಿಯಾದರೆ ನಿದ್ದೆ ಹತ್ತದೆ, ಕಣ್ಣೀರು
ಬತ್ತಿಹೋದವೇನೋ ಎಂದೆನಿಸಿ ಮರುದಿನ
ಮತ್ತೆಯಾದರೆ ಕಣ್ಣಿಂದ ಹನಿ ಜಿನುಗತೊಡಗಿದವು

7
ಬಾವಿಯ ಆಳವ ದಿಟ್ಟಿಸುತ ಯಾರ
ಗೊಡವೆ-ಗದ್ದಲಗಳಿಲ್ಲದ ಮನತುಂಬಿದ ಕಣ್ಣೀರು
ಇಂದೇಕೋ ಮತ್ತೇ ಕಣ್ಣ ತೇವ ಮಾಡುತಿವೆ

8
ಕತ್ತಲಲ್ಲಿಯೆ  ನಾನು ಏಕಾಂತದಲ್ಲಿದ್ದರೂ
ನನ್ನ ಬಿಗಿದಪ್ಪಿದ ನೆರಳ ಮಾಯೆ ಎಂದಿಗೂ
ಮಾಯವಾಗಲಿಲ್ಲ, ಕರುಳ ಬಳ್ಳಿಯ ಬಲ

9
ನನದೊಬ್ಬನದೇ ದುಃಖ ಮತ್ತ್ಯಾರಿಲ್ಲ ಎಂದಾಗ
ಏಕೋ ಏನೋ ನನ್ನಂತೆ ಯಾರೋ ಇದ್ದಾರೆ
ಅದರಿಂದ ಎದ್ದಿದ್ದಾರೆ, ನಾನೇಕೆ ಹೀಗೆ?

10
ಎಷ್ಟು ದಿನ ಇದ್ದೇನೆಂಬ ಭಯವಿಲ್ಲದೇ
ಲೋಕ-ನಾಕಗಳ ಅರಿವಿಲ್ಲದೇ ನನ್ನನೇ
ನಾ ಹುಡುಕುವ ದಾರಿಯೂ ನಾನಾಗಬೇಕು.