ಕವನ : ಭೀಷ್ಮನಂತೆ

ಕವನ : ಭೀಷ್ಮನಂತೆ

ಕವನ

ಕವನ : ಭೀಷ್ಮನಂತೆ

ಕತ್ತಮೇಲಕೆ ಎತ್ತಿ ಗಂಟಲನು ಸರಿಪಡಿಸಿ
ಆಗಸಕೆ ಕೈಬೆರಳ ತೋರಿ ನಿಂತೆ.
ಜೀವನದ ಬೇಕು ಬೇಡಗಳನ್ನು ನಿರ್ಧರಿಸಿ
ಪಥವನು ಕೈಗೊಂಡೆ ಭೀಷ್ಮನಂತೆ.

ಎನಿತು ಕಾದರು ಬಾನಿನಿಂದ ಹೂ ಮಳೆಯಿಲ್ಲ
ಹೃದಯದೊಳು ಚಪ್ಪಾಳೆಯಾಗಲಿಲ್ಲ
ಪ್ರಾಯಶಃ ಪ್ರಕೃತಿಗೆ ಮುನ್ನೋಟ ತಿಳಿದಿತ್ತು
ಗಡ್ಡಬಿಟ್ಟವರೆಲ್ಲ ಭೀಷ್ಮರಲ್ಲ.

ಅಗ್ರಹಾರದ ಕೃಷ್ಣಭಟ್ಟರಾ ಮನೆ ಮುಂದೆ
ಕಟ್ಟಿಗೆಗಳುರಿದಿತ್ತು ಶವದ ಹಿಂದೆ.
ಸಾವ ನೋಡಲು ನೆರೆದು ನಿಂತಿದ್ದ ಅಜ್ಜಿಯರು,
ಕುರುಡ, ಕುಂಟರನೆಲ್ಲ ನೋಡಿ ಬಂದೆ

ಇರುಳ ಗಡಿಯಾರ ಎಚ್ಚರಗೊಂಡು ಬೆಚ್ಚಿತ್ತು
ನಿಟ್ಟುಸಿರಬಿಡುತೆದ್ದೆ ಮಧ್ಯ ರಾತ್ರಿ
ಸಾವ!, ರೋಗದ ನೋವ!,ಮುಪ್ಪಡರಿದಾ ಜೀವ!
ಬದುಕಿನುದ್ದೇಶ, ಗುರಿಯಾಯ್ತು ಖಾತ್ರಿ

ಮುದ್ದಾಗಿ ಮಲಗಿದ್ದ ಮಡದಿ ಮೊಗವನು ಕಂಡೆ.
ಹಾಸಿಗೆಯ ಬಿಟ್ಟೆದ್ದು ಹೋಗಲಿಲ್ಲ.
ಪ್ರಾಯಶಃ ಪ್ರಕೃತಿಯು ಮನದಲ್ಲೆ ಗುನುಗಿತ್ತು
ಸಾವ ಕಂಡವರೆಲ್ಲ ಬುದ್ಧರಲ್ಲ.