ಕಾಯಕದ ಪರಿ

ಕಾಯಕದ ಪರಿ

ಕವನ

----------------------------------------------------------------------------------------------------

ಶರ್ತಗಳನಿಕ್ಕದೆಲೆ ಇದಿರು ಅ
ನರ್ಥ ವಾಕುಗಳಿರದೆ ಮನದಿ ಸ
ಮರ್ಥರಹುದಿತ್ಯರ್ಥಗೈವಡೆ ಸಕಲರೆ೦ದರಿತು
ಅರ್ತಿಯಿ೦ದಲಿ ಒರೆಯಬ೦ದಿಹೆ
ಅರ್ಥಗರ್ಭಿತವಾದ ನುಡಿಗಳ
ಅರ್ಥವಿಸುತನ್ವರ್ಥಗೊಳಿಪೊಡೆ ಯತ್ನ ಸಾರ್ಥಕವು

ತಾಯ ಬಸಿರಿ೦ದುದಿಸಿತೆನ್ನಯ
ಕಾಯವಿದುವೇ ಕಾಯಜನ ಪಿತ
ಜೀಯನಿತ್ತಿಹ ದಾಯ ಸೊಬಗಿನ ಗೇಯವೆ೦ದೆನುತ
ಪಾಯದಾಯವನರಿತು ಬಲಿಯುವ
ಆಯತನದ೦ದದಲಿ ಗೈವೆನು
ಕಾಯಕವ ಭವದಲ್ಲಿ ಕ್ಷಣಗಳ ಬೀಯಗೈಯದೆಯೆ

ಫಲದಪೇಕ್ಷೆಯ ದೂರವಿರಿಸುತ
ತಲಹು ಇಹುದೆನಗೆ೦ಬ ಛಲದಲಿ
ಕಲಿಲವಿರದಿಹ ಅಲಘ ತಪವನು ಗೈವೆನನವರತ
ಹಲದಿ ಹೊಲವನು ಹಸನುಗೊಳಿಸುತ
ಪೊಲಿಯ ಉಲುಪೆಯ ದೇವಗರ್ಪಿಸೆ
ಒಲವರದಿ ಕಲೆಯುವೆನು ಕೆಲಸದಿ ಅಲಪು ಮರೆಯುತಲಿ

ದೋಷಗಳಿಗ೦ಜುತ್ತಲಾ ಯಮ
ಪಾಶದುರುಳಿನ ಭಯದಿ ಮನವ
ಕ್ಲೇಶಗೊಳಿಸುತ ಕಾರ್ಯಗಳ ಕಡೆಗಣಿಸಿ ನಡೆಯುತಿರೆ
ಶೇಷವಪ್ಪುದು ಕರ್ಮ ನಿಶ್ಚಿತ
ಶೋಷಿತವು ತನು ಪಸಿವಿನಿ೦ದ ಹ
ತಾಶ ಅರಗದು ಎ೦ಬ ಭಯದಲಿ ಅಶನವುಣ್ಣದಿರೆ

ಮಾಡಿ ಮುಗಿಸುವೆ ದುಡಿಯುತಲಿ ಮು೦
ದೂಡೆನೆ೦ದಿಗು ನಾಳೆಗೆನ್ನುತ
ನಾಡಿಮಿಡಿತದ ನಿಲುಗಡೆಯ ದಿನವಿರಲು ಸುಪ್ತಿಯಲಿ
ಗೂಡ ಸೇರುವ ತವಕದಲಿ ಹಾ
ರಾಡಿ ಖಗಗಳು ಗಮಿಪ ತೆರದಲಿ
ಹಾಡುತಾಡುತ ಈಡಿಗೆಸೆಯುವೆ ಕಾಯ ಸಾಯಕವ

ಕಷ್ಟವೆನಿಸಬಹುದಾದ ಪದಗಳ ಅರ್ಥ:
ಅರ್ತಿ - ಪ್ರೀತಿ , ಒರೆ - ನುಡಿ , ಗೇಯ - ಹಾಡು , ಪಾಯ - ಬುನಾದಿ, ಆಯತನ - ಮನೆ ಬೀಯ - ನಷ್ಟ ,ತಲಹು -ಗುರಿ ಮುಟ್ಟುವ ಶಕ್ತಿ , ಕಲಿಲ - ಕಲ್ಮಷ ,ಅಲಘ - ಕಟಿಣ ,ಪೊಲಿ - ಧಾನ್ಯ ಸಮೃದ್ಧಿ,ಉಲುಪೆ - ಕಾಣಿಕೆ ,ಅಲಪು - ದಣಿವು,ಒಲವರ -ಪ್ರೀತಿ,ಸಾಯಕ -ಬಾಣ

ಚಿತ್ರಕೃಪೆ : ಅಂತರ್ಜಾಲ

Comments