ದೀಪಾವಳಿ ಪದ್ಯಗಳು

ದೀಪಾವಳಿ ಪದ್ಯಗಳು

ಕವನ
ಎಲ್ಲರಿಗೂ ದೀವಳಿಗೆಯ ಶುಭಾಶಯಗಳು, ತಡವಾಗಿಯಾದರೂ.
 
ಇತ್ತೀಚಿಗೆ ಹಳೆಗನ್ನಡದ ಛಂದೋಬದ್ಧ ರಚನೆಗಳ ಬಗ್ಗೆ ನನ್ನ ಆಸಕ್ತಿಯ ಕಾರಣದಿಂದಾಗಿ ದೀಪಾವಳಿಗಾಗಿ ಕೆಲವು ಪದ್ಯಗಳು ಇಲ್ಲಿವೆ.   ನಿಮ್ಮ ಅನಿಸಿಕೆ/ಅಭಿಪ್ರಾಯಗಳಿಗೆ ಸ್ವಾಗತ.
 
ಮತ್ತೇಭವಿಕ್ರೀಡಿತ ವೃತ್ತ
ನರಕಂ ಲೋಕಕೆ ಕತ್ತಲಿಕ್ಕಿ ನಿಲಿಸಲ್ ಕಾಡಲ್ಕೆ ಮೂಲೋಕಮಂ
ಸುರರುಂ ಮೇಣ್ ನರರುಂ ಮುರಾರಿ ಹರಿಯಂ ಬೇಡಲ್ ಜಗಂ ಭೋರಿಡಲ್
ಹರಿ ತಾಂ ವೇಗದಿ ಭಕ್ತರಿಂಗಭಯದಾನಂಗೈಯುತುಂ ಕ್ರೂರಿಯಾ
ಸುರನಂ ಕುಟ್ಟಿದನೀ ದಿನಂ ನರಕನಾಮಂ ಬಿದ್ದಿತಾ ಹಬ್ಬಕಂ
 
ಉತ್ಪಲಮಾಲಾ ವೃತ್ತ
ಶೌರಿಯ ಭಕ್ತನಾ ಬಲಿಯ ದಾನವ ಬೇಡಿದ ಕುಬ್ಜವಾಮನಂ
ಮಾರಳೆದುರ್ವಿಯಂ ಗಗನಮಂ ಪದಜೋಡಿಗಳಳ್ತೆಯೊಳ್ ದಿಟಂ
ಮೂರನೆ ಹೆಜ್ಜೆಗಾ ತಲೆಯ ಪಾದದೊಳೊತ್ತಿದನೊತ್ತಿ ಪಾತಳಂ
ಸೇರಿಸಿ ಕಾದನಾ ಮನೆಯ ಬಾಗಿಲನೀತನೆ ಭಕ್ತಬಾಂಧವಂ
 
ಉತ್ಸಾಹ ರಗಳೆ
ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ
 
ದ್ರುತವಿಲಂಬಿತ ವೃತ್ತ
ಜಲಜನಾಭನ ಪಾದಕೆ ವಂದಿಸು
ತ್ತಲಸಮಂ ಜಡಮಂ ಬಡಿದೋಡಿಸಲ್
ವಿಲಸಿಸುತ್ತೆರೆದೆಣ್ಣೆಯ ನೀರನುಂ
ಬೆಳಗುವಳ್ ಕಿರು ದೀಪದ ಸಾಲ್ಗಳಂ
 
ರಥೋದ್ಧತಾ ವೃತ್ತ
ಹೂರಣಂ, ರುಚಿಯ ಬೋಂಡಪಾಯಸಂ
ಸಾರು ಮೇಣ್ ಕರಿದ ಸಂಡ್ಗೆ ಹಪ್ಪಳಂ
ಭೂರಿಭೋಜನದಿ ಹೊಟ್ಟೆಯುಬ್ಬಿರಲ್
ಮೀರಿತೈ ನಿದಿರೆ ಒರಗಿದಾಕ್ಷಣಂ
 
ಕಂದ
ಏನಿದು ಕಣ್ಕುಕ್ಕುವ ಬೆಳ
ಕೇನಿದು ಸಿಡಿಯುವ ಪಟಾಕಿ ಸರಗಳ ಸದ್ದಿಂ
ಗಾನಭವೊಡೆವುದೊ ಸಿಡಿವುದೊ
ಕಾಣೆನಮಮ ತಲೆಯಿದಂತು ಬಿರಿವುದು ಸತ್ಯಂ
 
ಚೌಪದಿ
ಕಾಣಿಲ್ಲಿ ಸುರುಸುರನೆ ಸುರಿವ ಸುರುಬತ್ತಿಯಂ
ಮೇಣು ಹೂಬಾಣ ಬಿಡುತಿಹ ಪುಟ್ಟಿಯಂ
ಬಾಣದಾ ಸುಯ್ಲು ಮೇಣ್ ಚಕ್ರಗಳ ವಿಭ್ರಮಂ
ಕಾಣಿದೋ ಬೆಳಕಹಬ್ಬದ ಸಂಭ್ರಮಂ
 
ಭಾಮಿನೀ ಷಟ್ಪದಿ
ಭಾಮಿನಿಯರಾ ಸಡಗರವು ಮೇ
ಣಾ ಮುದದ ರಂಗೋಲಿ ಮನಗೆಲು
ವಾ ಮಧುರ ಖಾದ್ಯಗಳ ಸವಿ, ಬಾಲಕರ ಹಿರಿ ಹುಯಿಲು
ಹೂ ಮತಾಪಿನ ಬಿರುಸು-ಬಾಣದ
ಭೂಮಿಚಕ್ರದ ಸಿಡಿವ ಮದ್ದಿನ
ಧೂಮಲೀಲೆಯು ಗಗನ ಮುಟ್ಟಿತು ಬೆಳಕ ಹಬ್ಬದೊಳು
 
ಮಂದಾಕ್ರಾಂತ
ಭೂಮ್ಯಾಕಾಶಕ್ಕಡರಿ ನಲಿವೀ ಧೂಮಲೀಲಾವಿಲಾಸಂ
ರಮ್ಯಂ ಭವ್ಯಂ ಬೆಳಗಿ ನಗುವೀ ವರ್ಣವೈವಿಧ್ಯ ಹಾಸಂ
ಕಾಮ್ಯಂ ಬಾಯನ್ ರಸಗೊಳಿಸುವೀ ಹಬ್ಬದೂಟಂ ವಿಶೇಷಂ
ಸೌಮ್ಯಂ ನವ್ಯಂ ಮೊಗದಿಹೊಳೆವೀ ತೃಪ್ತಿ ಸಂತೋಷ ಭಾಸಂ