ದೀಪಾವಳಿ ಪರುಷ ಸ್ಪರ್ಶ

ದೀಪಾವಳಿ ಪರುಷ ಸ್ಪರ್ಶ

ಕಾರ್ತಿಕದಪ್ಪುಗೆಗೆ ಹಣತೆಗದೇನೊ ಕೌತುಕ
ಕಾಯಲಾಗದ ತಪನೆ ದೀಪಾವಳಿ ಬೆಳಕಾಗಿ
ಉರಿದು ಬತ್ತಿಯ ಜರಿದೆಣ್ಣೆಯಲದ್ದಿ ತಿರಿದು
ಮಿಣುಕು ಮಿಣುಕಲೆ ಬೆಳಕು ತಂತಾನೆ ಉರಿದು ||

ಅದೋ ಮೂಲೆಯದಲ್ಲಿ ಕಾದು ನಿಂತವನು
ಕಾರ್ತಿಕದಲದುರುತ್ತ ಹೊದಿಕೆಯನರಸಿ ನಿಂತ
ಸಾಲದೊಂದು ಹಣತೆ ತನ್ನಿ ಸಾಲಂಕೃತವೆಂದ
ಲಕ್ಷದೀಪದ ಲಕ್ಷ್ಯ ಜಗಮಗಿಸಿ ಬೆಳಗಿರೆಂದಾಣತಿ ||

ಓಡಿಸಿದಂಧಕಾರವದೆ ಬೆಳಗುತಲೆ ಜ್ಯೋತಿ
ಇಣುಕಿಸುತಲ್ಲೆ ತುಣುಕು ಬೆಚ್ಚಗಿನ ಅಪ್ಪುಗೆ
ಹಣತೆ ನೂರಾರಾಗಿ ನುಂಗುತೆಲ್ಲ ಚಳಿಗಾಳಿ
ಸಮಷ್ಟಿಯಲಿಟ್ಟ ಬೆಳಕಿನ ಜತೆ ಶಾಖದ ಚಾಳಿ ||

ನರಕಾಸುರನೊ ಬಲಿಯೊ ಧನಲಕ್ಷ್ಮಿಯೊ ಸರಿ
ನೀರು ತುಂಬಿ ಮಜ್ಜನ ಅಬ್ಬರಿಸೊ ಸದ್ದು ಗದ್ದಲ
ಸಂಭ್ರಮದಾಚರಣೆಯೊ, ಎಚ್ಚರಿಸೊ ಹುನ್ನಾರವೊ ?
ತುಪ್ಪದ ಹೋಳಿಗೆ ಹಬ್ಬದೂಟದ ನಡುವೆ ಸೊಬಗೊ ||

ಅಂತಿರ್ಪ ದೀಪಾವಳಿ ಮನೆಗಲ್ಲ ಮನದ ಬೆಳಕು
ತೊಲಗಿಸೆ ಒಳಗಿನ ಕತ್ತಲ ಬದುಕಿಗದೆ ಹೊಸತು
ಬೆಳಗಲಿಲ್ಲೆಂದೇಕೆ ಕೊರಗು ? ಬರುವುದಲ್ಲ ಪ್ರತಿ ವರ್ಷ
ತೊಳೆಯದೆ ಬಿಟ್ಟೀತೆ ಬದುಕಲೊಮ್ಮೆ ಪರುಷ ಸ್ಪರ್ಶ || 
 

Comments

Submitted by santhosha shastry Sun, 11/15/2015 - 00:30

ದೀಪಾವಳಿಯ ಅನಾವರಣ ಚೆನ್ನಾಗಿದೆ. ತಮಗೂ ಮತ್ತೆಲ್ಲ ಸಂಪದಿಗರಿಗೂ ದೀಪಾವಳಿಯ ಶುಭಾಶಯಗಳು. (ಸರ, ಈ ಪುಣ್ಯಾತ್ಮ late ಆಗಿ ಹೇಳಿದ ಅಂತ ಯಾಕೆ ಯೋಚಿಸ್ತೀರಿ, ಮುಂದಿನ ವರ್ಷದ advance wishes ಅಂತ ಯಾಕೆ ತೊಗೋಬಾರ್ದು?!!!)

Submitted by nageshamysore Sun, 11/15/2015 - 17:04

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮಗೂ ದೀಪಾವಳಿಯ ಶುಭಾಶಯಗಳು ಹಳೆ ಬಾಕಿ ಮತ್ತು ಅಡ್ವಾನ್ಸ್ ಎರಡೂ ಸೇರಿ. ದೀಪಾವಳಿಗೆ ಹಚ್ಚಿದ ದೀಪ ಕಾರ್ತಿಕದ ಕೊನೆ ತನಕ ಉರಿಯುತ್ತಲೆ ಇರುತ್ತಂತೆ. ಹೀಗಾಗಿ ತಡವೇನು ಲೆಕ್ಕವಿಲ್ಲ ಬಿಡಿ. ನಮಗೇನು ಒಂದರ ಹಿಂದೆ ಒಂದು ಹಬ್ಬ ಬರುತ್ತಲೆ ಇರುತ್ತೆ - ಯಾವುದಕ್ಕೆ ಬೇಕೊ ಅದಕ್ಕೆ ಅನ್ವಯಿಸಿಕೊಂಡರೂ ಆಯ್ತು :-)

Submitted by kavinagaraj Sun, 01/17/2016 - 11:28

ದೀಪಾವಳಿ ಮುಗಿದು ಸಂಕ್ರಾಂತಿಯ ವೇಳೆಗೆ ಬಂದಿರುವೆ. ತಡವಾಗಿಯಾದರೂ ಶುಭ ಕೋರುವೆ. ನಿಮ್ಮ ಹರಕೆ, ಹಾರೈಕೆಗಳು ಅರ್ಥವತ್ತಾಗಿವೆ. ಅಭಿನಂದನೆಗಳು.
ಒಡಲಗುಡಿಯ ರಜ-ತಮಗಳ ಗುಡಿಸಿ
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ|
ಮನದ ಕತ್ತಲ ಕಳೆದು ತಿಳಿವಿನ ಬೆಳಕ
ಪಸರಿಪುದೆ ದೀಪಾವಳಿ ತಿಳಿ ಮೂಢ||

Submitted by nageshamysore Tue, 01/19/2016 - 09:00

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು.. ಬಾಹ್ಯದ ದೀಪಾವಳಿಗೆ ನಿಗದಿತ ದಿನವಿದ್ದರು ಕವಿಮನದ ದೀಪಾವಳಿಗ್ಯಾವ ಗಡುವು ತಾನೆ ಲೆಕ್ಕ ? ಸ್ಪೂರ್ತಿ ಉಕ್ಕೆದ್ದು ಕಾವ್ಯಧಾರೆ ಹರಿದಾಗೆಲ್ಲ ದೀಪಾವಳಿಯೆ. ಆ ಲೆಕ್ಕದಲ್ಲಿ ಯಾವಾಗ ಬೇಕಾದರು ಶುಭಾಶಯ ಹೇಳಬಹುದು ಬಿಡಿ :-)